Maharashtra: ರಾಯಗಢದಲ್ಲಿ ಭೂಕುಸಿತ, 16 ಸಾವು, ಹಲವು ಮಂದಿಗೆ ಗಾಯ
ಇಂದು ಮುಂಜಾನೆ ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದ್ದು, 16 ಜನ ಸಾವನ್ನಪ್ಪಿದ್ದಾರೆ, ಇನ್ನೂ ಅನೇಕರು ಅವಶೇಷಗಳೊಳಗೆ ಸಿಲುಕಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಈಗಾಗಲೇ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ.
ಮುಂಬೈ, ಜು.20: ಇಂದು ಮುಂಜಾನೆ ಮಹಾರಾಷ್ಟ್ರದ (Maharashtra) ರಾಯಗಡ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದ್ದು, ಸುಮಾರು 48 ಕುಟುಂಬಗಳು ಇದರ ಪರಿಣಾಮವನ್ನು ಎದುರಿಸುತ್ತಿದೆ. ಈ ಘಟನೆಯಿಂದ 16 ಜನ ಸಾವನ್ನಪ್ಪಿದ್ದು, ಅನೇಕರು ಅವಶೇಷಗಳೊಳಗೆ ಸಿಲುಕಿಕೊಂಡಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಿಳಿಸಿದೆ. ಇದೀಗ ಎನ್‌ಡಿಆರ್‌ಎಫ್‌ನ ಎರಡು ತಂಡಗಳು ಸ್ಥಳಕ್ಕೆ ಧಾವಿಸಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ. ರಾಯಗಢದ ಖಲಾಪುರ್ ತಹಸಿಲ್‌ನ ಇರ್ಶಲವಾಡಿ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದುವರೆಗೆ 21 ಜನರನ್ನು ರಕ್ಷಿಸಿದ್ದು, ಇನ್ನೂ ಹಲವರು ಮಂದಿ ಅವಶೇಷಗಳೊಳಗೆ ಸಿಕ್ಕಿಬಿದ್ದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇನ್ನೂ ಘಟನಾ ಸ್ಥಳದಲ್ಲಿ ಪೊಲೀಸ್ ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಾವು ಎನ್‌ಡಿಆರ್‌ಎಫ್, ಸ್ಥಳೀಯರು ಮತ್ತು ಕೆಲವು ಎನ್‌ಜಿಒಗಳ ಸಹಾಯ ಪಡೆಯುತ್ತಿದ್ದೇವೆ ಎಂದು ರಾಯಗಢ ಪೊಲೀಸರು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಲು ಮುಖ್ಯಮಂತ್ರಿ ಏಕನಾಥ್ ಶಿಂಧೆ ಸ್ಥಳಕ್ಕೆ ಆಗಮಿಸಿದ್ದು. ಇದರ ಜತೆಗೆ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಕೂಡ ರಾಯಗಢದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಥಾಣೆಯಲ್ಲಿ ಎದುರಿನಿಂದ ಬಂದ ಟ್ರಕ್‌ಗೆ ಜೀಪ್ ಡಿಕ್ಕಿ, 6 ಮಂದಿ ಸಾವು, ಮೂವರಿಗೆ ಗಾಯ
ಇನ್ನೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಭೂಕುಸಿತದಿಂದ ಸಾವನ್ನಪ್ಪಿರುವವರಿಗೆ ಸಂತಾಪ ಸೂಚಿಸಿದ್ದು, ಈ ಘಟನೆ ಬಗ್ಗೆ ನಿನ್ನೆ ರಾತ್ರಿಯಿಂದ ಸ್ಥಳೀಯ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದು, ಎಲ್ಲ ಮಾಹಿತಿಗಳನ್ನು ಪಡೆಯುತ್ತಿದ್ದೇನೆ, ಎನ್‌ಡಿಆರ್‌ಎಫ್‌ನ ಎರಡು ತಂಡಗಳು ಈಗಾಗಲೇ ಸ್ಥಳಕ್ಕೆ ಧಾವಿಸಿದೆ, ಆದರೆ ನೆನ್ನೆ ರಾತ್ರಿ ಭಾರೀ ಮಳೆಯಿಂದಾಗಿ ಕಾರ್ಯಚರಣೆಗೆ ಸ್ವಲ್ಪ ಕಷ್ಟವಾಗಿತ್ತು, ಇದೀಗ ಕಾರ್ಯಚರಣೆಗೆ ವೇಗ ಸಿಕ್ಕಿದೆ ಎಂದು ಹೇಳಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಒಟ್ಟು 48 ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದು, ಇಲ್ಲಿಯವರೆಗೆ ಸುಮಾರು 75 ಜನರನ್ನು ಸ್ಥಳಾಂತರಿಸಲಾಗಿದೆ. ಇದರಲ್ಲಿ 5 ಮಂದಿ ಸಾವನ್ನಪ್ಪಿದ್ದಾರೆ. ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಈ ಕುಟುಂಬಗಳಿಗೆ ರಾಜ್ಯ ಸರಕಾರ ಎಲ್ಲ ರೀತಿಯ ನೆರವು ನೀಡಲಿದೆ. ಮೃತರ ಮತ್ತು ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:58 am, Thu, 20 July 23