‘ಆನ್ಲೈನ್ ವಾದ ಮಂಡಿಸುವಾಗಲೂ ಡ್ರೆಸ್ಕೋಡ್ ಪಾಲಿಸಿ: ವಕೀಲರಿಗೆ ಅಲಹಾಬಾದ್ ಹೈಕೋರ್ಟ್ ಸೂಚನೆ
ವರ್ಚುವಲ್ ಮಾರ್ಗದಲ್ಲಿ ನ್ಯಾಯಾಲಯದ ಮುಂದೆ ಬರುವ ವಕೀಲರು ಬೇಕಾಬಿಟ್ಟಿಯಾಗಿ ವರ್ತಿಸಬಾರದು. ಇದು ನ್ಯಾಯದಾನ ಪ್ರಕ್ರಿಯೆಯ ತೊಡಕು ಹೆಚ್ಚಿಸುತ್ತದೆ ಎಂದು ವಕೀಲರ ಸಂಘಕ್ಕೆ ಈಚೆಗಷ್ಟೇ ನ್ಯಾಯಾಲಯವು ಕಿವಿಮಾತು ಹೇಳಿತು.
ಅಲಹಾಬಾದ್: ಕಾರಿನಲ್ಲಿ ಕುಳಿತುಕೊಂಡೇ ವಾದ ಮಂಡಿಸಲು ಮುಂದಾದ ವಕೀಲರೊಬ್ಬರಿಗೆ ಎಚ್ಚರಿಕೆ ನೀಡಿದ ಅಲಹಾಬಾದ್ ಹೈಕೋರ್ಟ್, ವಕೀಲರು ವಾದ ಮಂಡಿಸುವಾಗ ಪಾಲಿಸಬೇಕಾದ ನಿಯಮಗಳನ್ನು ರೂಪಿಸಬೇಕೆಂದು ರಿಜಿಸ್ಟ್ರಾರ್ ಜನರಲ್ ಅವರಿಗೆ ಸೂಚಿಸಿತು. ನ್ಯಾಯಮೂರ್ತಿ ರಾಹುಲ್ ಚತುರ್ವೇದಿ ಅವರಿದ್ದ ನ್ಯಾಯಪೀಠವು ಈ ಆದೇಶ ನೀಡಿತು. ವರ್ಚುವಲ್ ಮಾರ್ಗದಲ್ಲಿ ನ್ಯಾಯಾಲಯದ ಮುಂದೆ ಬರುವ ವಕೀಲರು ಬೇಕಾಬಿಟ್ಟಿಯಾಗಿ ವರ್ತಿಸಬಾರದು. ಇದು ನ್ಯಾಯದಾನ ಪ್ರಕ್ರಿಯೆಯ ತೊಡಕು ಹೆಚ್ಚಿಸುತ್ತದೆ ಎಂದು ವಕೀಲರ ಸಂಘಕ್ಕೆ ಈಚೆಗಷ್ಟೇ ನ್ಯಾಯಾಲಯವು ಕಿವಿಮಾತು ಹೇಳಿತು.
‘ವಾದ ಮಂಡಿಸುವಾಗ ವಕೀಲರು ತಾವು ನ್ಯಾಯಾಲಯದ ಕಲಾಪಗಳಲ್ಲಿ ಭಾಗಿಯಾಗುತ್ತಿದ್ದೇವೆಂಬ ಎಚ್ಚರಿಕೆ ಇರಿಸಿಕೊಳ್ಳಬೇಕು. ತಮ್ಮ ಮನೆಯ ಹಾಲ್ಗಳಲ್ಲಿ ಕುಳಿತು ವಿರಾಮದ ಸಮಯ ಕಳೆಯುತ್ತಿರುವ ಧೋರಣೆ ಇಟ್ಟುಕೊಳ್ಳಬಾರದು’ ಎಂದು ನ್ಯಾಯಪೀಠವು ಖಾರವಾಗಿ ನುಡಿಯಿತು. ದೇಶದ ವಿವಿಧ ನ್ಯಾಯಾಲಯಗಳು ಈ ಕುರಿತು ಹಲವು ತೀರ್ಪುಗಳನ್ನು ನೀಡಿವೆ. ಆದರೂ ಕೆಲ ವಕೀಲರು ತಮ್ಮ ವರ್ತನೆಯ ಬಗ್ಗೆ ಗಮನ ಕೊಡುತ್ತಿಲ್ಲ ಎಂದು ವಿಷಾದಿಸಿತು. ವಕೀಲರು ಗಂಭೀರವಾಗಿ ವರ್ತಿಸಬೇಕು. ಇಂಥ ಬೇಕಾಬಿಟ್ಟಿ ನಡವಳಿಕೆಯನ್ನು ಒಪ್ಪಲು ಆಗುವುದಿಲ್ಲ ಎಂದು ಹೇಳಿದ ಹೈಕೋರ್ಟ್ ಕೊರೊನಾ ಹಿನ್ನೆಲೆಯಲ್ಲಿ ನ್ಯಾಯಾಲಯವು ನೀಡಿರುವ ವಿನಾಯ್ತಿಗಳ ದುರುಪಯೋಗವಾಗಬಾರದು ಎಂದು ಎಚ್ಚರಿಸಿತು.
‘ವಕೀಲರಿಗೆ ಕಲಾಪಗಳಲ್ಲಿ ನೇರವಾಗಿ ಹಾಜರಾಗುವುದರಿಂದ ವಿನಾಯ್ತಿ ನೀಡಲಾಗಿದೆ. ಅವರು ವರ್ಚುವಲ್ ವಿಧಾನದಲ್ಲಿ ಎಲ್ಲಿಂದ ಕಲಾಪದಲ್ಲಿ ಪಾಲ್ಗೊಂಡರೂ ನ್ಯಾಯಾಲಯದ ಕಲಾಪದಲ್ಲಿ ಭಾಗಿಯಾದಂತೆ ಆಗುತ್ತದೆ. ಹೀಗಾಗಿಯೇ ಕೆಲವೊಂದಿಷ್ಟು ನಿಯಮಗಳು, ಪ್ರಕ್ರಿಯೆಗಳು ಮತ್ತು ಡ್ರೆಸ್ಕೋಡ್ ಶಿಫಾರಸು ಮಾಡಲಾಗಿದೆ’ ಎಂದು ನ್ಯಾಯಾಲಯವು ಹೇಳಿತು.
ನ್ಯಾಯಾಲಯ ಕಲಾಪಗಳಲ್ಲಿ ಪಾಲ್ಗೊಳ್ಳುವ ವಕೀಲರು ಪಾಲಿಸಬೇಕಾದ ನಿಯಮಗಳನ್ನು ಇನ್ನು 48 ಗಂಟೆಗಳ ಒಳಗೆ ರಿಜಿಸ್ಟ್ರಾರ್ ಜನರಲ್ ರೂಪಿಸಬೇಕು. ಇದರಲ್ಲಿ ಡ್ರೆಸ್ಕೋಡ್ ಮತ್ತು ಅವರು ನ್ಯಾಯಾಲಯ ಕಲಾಪಗಳಲ್ಲಿ ಹೇಗೆ ಪಾಲ್ಗೊಳ್ಳಬೇಕು ಎಂಬ ನಿಯಮಗಳು ಇರಬೇಕು. ಇದನ್ನು ಸರಿಯಾದ ಕ್ರಮದಲ್ಲಿ ಎಲ್ಲರ ಗಮನಕ್ಕೆ ತರಬೇಕು ಎಂದು ನ್ಯಾಯಾಲಯ ಸೂಚಿಸಿತು. ಈ ನಿಯಮಗಳನ್ನು ಎಲ್ಲ ವಕೀಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ನಿಯಮಗಳ ಉಲ್ಲಂಘನೆಯು ಶಿಸ್ತುಕ್ರಮಕ್ಕೆ ಕಾರಣವಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿತು.
(Lawyers Has to Follow Dress Code While Arguing Online Directs Allahabad High Court)