ಕ್ಷೇತ್ರ ಮರುವಿಂಗಡಣೆ ಮಸೂದೆ: ನಮ್ಮ ಬೆಂಬಲ NDAಗೆ ಎಂದ ಸ್ಟಾಲಿನ್; ಇಂಡಿಯಾ ಮಿತ್ರಪಕ್ಷಗಳ ಮನವೊಲಿಕೆ ವಿಫಲ

ಇಂಡಿಯಾ ಒಕ್ಕೂಟದ ನಾಯಕರು ಚೆನ್ನೈನಲ್ಲಿ ಎಂಕೆ ಸ್ಟಾಲಿನ್​ರನ್ನು ಭೇಟಿಯಾಗಿ, ಕ್ಷೇತ್ರ ಪುನರ್ ವಿಂಗಡಣೆ ಮಸೂದೆ ಕುರಿತು ಮನವೊಲಿಸಲು ಪ್ರಯತ್ನಿಸಿದರು. ಆದರೆ, ತಮಿಳುನಾಡಿನ ಹಿತಾಸಕ್ತಿಗಳನ್ನು ಮುಂದಿಟ್ಟುಕೊಂಡು ಸ್ಟಾಲಿನ್ ಎನ್‌ಡಿಎಗೆ ಬೆಂಬಲ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಇಂಡಿಯಾ ಒಕ್ಕೂಟಕ್ಕೆ ಬಿಗ್​ ಶಾಕ್​ ಕೊಟ್ಟಿದ್ದಾರೆ.

ಕ್ಷೇತ್ರ ಮರುವಿಂಗಡಣೆ ಮಸೂದೆ: ನಮ್ಮ ಬೆಂಬಲ NDAಗೆ ಎಂದ ಸ್ಟಾಲಿನ್; ಇಂಡಿಯಾ ಮಿತ್ರಪಕ್ಷಗಳ ಮನವೊಲಿಕೆ ವಿಫಲ
Stalin

Updated on: Nov 29, 2026 | 8:48 PM

ಮುಖ್ಯಾಂಶಗಳು

  • ಇಂಡಿಯಾ ಒಕ್ಕೂಟಕ್ಕೆ ಬಿಗ್​ ಶಾಕ್​ ಕೊಟ್ಟ ಎಂ.ಕೆ.ಸ್ಟಾಲಿನ್
  • ರಾಹುಲ್​ ಗಾಂಧಿ ಮನವೊಲಿಕೆಗೆ ಸೊಪ್ಪು ಹಾಕದ ಸ್ಟಾಲಿನ್
  • ನಮ್ಮ 22 ಸಂಸದರ ಬೆಂಬಲ NDAಗೆ ಎಂದ ಎಂ.ಕೆ.ಸ್ಟಾಲಿನ್

ಚೆನ್ನೈ, ನವೆಂಬರ್ 29: ಲೋಕಸಭೆ ಕ್ಷೇತ್ರಗಳ ಮರುವಿಂಗಡಣೆ ವಿಧೇಯಕ ವಿಚಾರ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರವಾಗಿ ಡಿಎಂಕೆ ಪಕ್ಷದ ಬೆಂಬಲ ಪಡೆಯಲು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್​​ರನ್ನ ಮನವೊಲಿಸಲು ಚೆನ್ನೈಗೆ ತೆರಳಿದ್ದ ಕಾಂಗ್ರೆಸ್ ಸೇರಿದಂತೆ ಇಂಡಿಯಾ ಒಕ್ಕೂಟದ ನಾಯಕರ ಪ್ರಯತ್ನ ವಿಫಲವಾಗಿದೆ. ನಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ, ನಮ್ಮ 22 ಸಂಸದರ ಬೆಂಬಲ NDAಗೆ ಎಂದು ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಇಂಡಿಯಾ ಒಕ್ಕೂಟಕ್ಕೆ ಎಂಕೆ ಸ್ಟಾಲಿನ್ ಬಿಗ್​ ಶಾಕ್​ ನೀಡಿದ್ದಾರೆ.

ಈ ಹಿಂದೆ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಕಟುವಾಗಿ ವಿರೋಧಿಸಿ, ಪ್ರತಿಗಳನ್ನು ಸುಟ್ಟುಹಾಕಿದ್ದ ಡಿಎಂಕೆ ಪಕ್ಷ ಈ ಬಾರಿ ಮಸೂದೆಯ ಪರ ನಿಂತಿರುವುದು ಇಂಡಿಯಾ ಮಿತ್ರಪಕ್ಷಗಳಿಗೆ ನಡುಕ ಹುಟ್ಟಿಸಿದೆ. ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್​​​ರ ಮನವೊಲಿಸಲು ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್ ಹಾಗೂ ಮಮತಾ ಬ್ಯಾನರ್ಜಿ ಸೇರಿದಂತೆ ಘಟಾನುಘಟಿ ನಾಯಕರು ಭಾನುವಾರ ಚೆನ್ನೈಗೆ ಆಗಮಿಸಿ ಸ್ಟಾಲಿನ್ ಅವರೊಂದಿಗೆ ಗಂಭೀರ ಚರ್ಚೆ ನಡೆಸಿದರು. ಕ್ಷೇತ್ರ ಪುನರ್‌ವಿಂಗಡಣೆ ವಿಧೇಯಕಕ್ಕೆ ಎನ್‌ಡಿಎಗೆ ನೀಡುತ್ತಿರುವ ಬೆಂಬಲವನ್ನು ಹಿಂಪಡೆಯುವಂತೆ ಮನವಿ ಮಾಡಲಾಗಿದ್ದು, ಆದರೆ ಎಂಕೆ ಸ್ಟಾಲಿನ್ ಮಾತ್ರ ತಮ್ಮ ಪಟ್ಟು ಸಡಿಸಲಿಲ್ಲ.

Loading...

ತಮ್ಮ ನಿರ್ಧಾರಕ್ಕೆ ಡಿಎಂಕೆ ನಾಯಕರ ಸಮರ್ಥನೆ

ತಮಿಳುನಾಡಿನ ಹಿತಾಸಕ್ತಿಯನ್ನು ಆಧಾರವಾಗಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ಟಾಲಿನ್ ಸಭೆಯಲ್ಲಿ ತಿಳಿಸಿದ್ದಾರೆ. ಇತ್ತ ಡಿಎಂಕೆ ಪ್ರಮುಖ ನಾಯಕರಾದ ದಯಾನಿಧಿ ಮಾರನ್ ಹಾಗೂ ಉದಯನಿಧಿ ಸ್ಟಾಲಿನ್ ಕೂಡ ಪಕ್ಷದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಈ ಹಿಂದೆ ಕಾಂಗ್ರೆಸ್ ಪಕ್ಷವು ಮೈತ್ರಿ ಧರ್ಮಕ್ಕೆ ಬೆಲೆ ಕೊಡದೆ ಏಕಾಏಕಿ ವಿಜಯ್ ಅವರ ಟಿವಿಕೆ ಪಕ್ಷದೊಂದಿಗೆ ಸೇರಿ ಸರ್ಕಾರ ರಚಿಸುವ ಎಡವಟ್ಟು ಮಾಡಿತ್ತು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕ್ಷೇತ್ರ ಮರುವಿಂಗಡಣೆ ವಿಚಾರ: ಸ್ಟಾಲಿನ್ ನಿವಾಸಕ್ಕೆ ಮುಗಿಬಿದ್ದ ಕಾಂಗ್ರೆಸ್ ದಿಗ್ಗರು; ಸೋನಿಯಾ ಗಾಂಧಿ ಕೂಡ ಹಾಜರ್

ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ನಡೆದರೆ ತಮಿಳುನಾಡಿಗೆ ನಷ್ಟವಾಗುತ್ತಿತ್ತು, ಆದರೆ ಈಗ ದೇಶಾದ್ಯಂತ ಶೇಕಡಾ 50ರಷ್ಟು ಸ್ಥಾನಗಳನ್ನು ಹೆಚ್ಚಿಸುತ್ತಿರುವುದರಿಂದ ತಮಿಳುನಾಡಿಗೆ ಒಟ್ಟಾರೆ ಲೋಕಸಭಾ ಕ್ಷೇತ್ರಗಳಲ್ಲಿ ಶೇಕಡಾ 7.18ರಷ್ಟು ಸ್ಥಾನಗಳು ಮೀಸಲಾಗಲಿದ್ದು, ರಾಜ್ಯದ ಸ್ಥಾನಮಾನ ಹಾಗೆಯೇ ಉಳಿಯಲಿದೆ. ಜೊತೆಗೆ, ಮಹಿಳಾ ಮೀಸಲಾತಿ ವಿಧೇಯಕದಲ್ಲಿ ಶೇಕಡಾ 50ರಷ್ಟು ಮೀಸಲಾತಿ ನೀಡಬೇಕೆಂಬ ಡಿಎಂಕೆಯ ಮೊದಲಿನ ವಾದಕ್ಕೆ ಈಗ ಮನ್ನಣೆ ಸಿಕ್ಕಿರುವುದರಿಂದ ತಮಿಳುನಾಡಿನ ಹಿತದೃಷ್ಟಿಯಿಂದ ಎನ್‌ಡಿಎ ಮಸೂದೆಗೆ ಬೆಂಬಲ ನೀಡುತ್ತಿರುವುದಾಗಿ ಡಿಎಂಕೆ ನಾಯಕರು ಸ್ಪಷ್ಟಪಡಿಸಿದ್ದಾರೆ.

ಎಂಕೆ ಸ್ಟಾಲಿನ್​​ರೊಂದಿಗಿನ ಸಭೆ ಬಳಿಕ ರಾಹುಲ್​ ಗಾಂಧಿ ಹೇಳಿದ್ದಿಷ್ಟು 

ಇನ್ನು ಎಂಕೆ ಸ್ಟಾಲಿನ್​​ರೊಂದಿಗಿನ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್​ ಗಾಂಧಿ, ‘ಕ್ಷೇತ್ರ ಮರು ವಿಂಗಡಣೆ ಬಿಲ್​ ಬಗ್ಗೆ ಎಂಕೆ ಸ್ಟಾಲಿನ್ ಅವರಿಗೆ ನಮ್ಮ ಅಭಿಪ್ರಾಯ ವಿವರಿಸಿದ್ದೇವೆ. ಈ ಬಿಲ್​ ತಮಿಳು ಸಂಸ್ಕೃತಿಗೆ, ತಮಿಳು ಭಾಷೆಗೆ, ತಮಿಳರಿಗೆ, ಭಾರತೀಯ ಒಕ್ಕೂಟ, ಭಾರತಕ್ಕೆ ಬೆದರಿಕೆ ಎಂದು ತಿಳಿಸಿದ್ದೇವೆ. ಎಲ್ಲ ದೇಶಭಕ್ತರಂತೆ ಸ್ಟಾಲಿನ್ ಸಹ ಈ ಬೆದರಿಕೆ ವಿರುದ್ಧ ನಿಲ್ಲಬೇಕು. ನಾವು ಕ್ಷೇತ್ರ ಮರು ವಿಂಗಡಣೆ ವಿಧೇಯಕ ವಿರೋಧಿಸುತ್ತೇವೆ. ಬಿಜೆಪಿಯ ಉದ್ದೇಶಗಳು ಒಳ್ಳೆಯದಲ್ಲ. ಕ್ಷೇತ್ರ ಮರು ವಿಂಗಡಣೆ ದಕ್ಷಿಣ ಭಾರತಕ್ಕೂ ಹಾನಿ ಮಾಡುತ್ತದೆ’ ಎಂದಿದ್ದಾರೆ.

INDIA Alliance Leaders Meet MK Stalin In Chennai: ಕಾಂಗ್ರೆಸ್ ಮನವೊಲಿಕೆಗೆ ಸೊಪ್ಪು ಹಾಕದ ಸ್ಟಾಲಿನ್

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Loading...
Unable to load recommendations.
Follow Us