ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಅಮೇಥಿ ಬದಲಿಗೆ ಉತ್ತರ ಪ್ರದೇಶದ ರಾಯ್ಬರೇಲಿ(Raebareli) ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗೆಯೇ ಅಮೇಥಿಯಿಂದ ಕಿಶೋರಿ ಲಾಲ್ ಶರ್ಮಾರ ಹೆಸರು ಕೇಳಿಬಂದಿದೆ. ರಾಹುಲ್ ಗಾಂಧಿ ರಾಯ್ಬರೇಲಿ ಹೊರತಾಗಿ ಕೇರಳದ ವಯನಾಡಿನಿಂದಲೂ ಸ್ಪರ್ಧಿಸಿದ್ದು ಅಲ್ಲಿ ಚುನಾವಣೆ ಮುಗಿದಿದೆ. ರಾಯ್ ಬರೇಲಿಯಲ್ಲಿ ಮೇ 20ರಂದು ಮತದಾನ ನಡೆಯಲಿದೆ. ವಯನಾಡಿನಲ್ಲಿ ಏಪ್ರಿಲ್ 26ರಂದು ಚುನಾವಣೆ ನಡೆದಿತ್ತು. ಇಷ್ಟು ದಿನಗಳ ಕಾಲ ಇದ್ದ ಸಸ್ಪೆನ್ಸ್ ಇಂದು ಕೊನೆಗೊಂಡಿದೆ ಪ್ರಿಯಾಂಕಾ ಗಾಂಧಿ ಎಲ್ಲೂ ಸ್ಪರ್ಧಿಸುತ್ತಿಲ್ಲ ಎಂಬುದೂ ತಿಳಿದುಬಂದಿದೆ.
ಬಿಜೆಪಿಯು ದಿನೇಶ್ ಪ್ರತಾಪ್ ಸಿಂಗ್ ಅವರನ್ನು ರಾಯ್ಬರೇಲಿಯಿಂದ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಸಿಂಗ್ ಸೋನಿಯಾ ವಿರುದ್ಧ ಸೋತಿದ್ದರು. ಉತ್ತರ ಪ್ರದೇಶದ ಅಮೇಥಿ ಹಾಗೂ ರಾಯ್ಬರೇಲಿ ಕಾಂಗ್ರೆಸ್ನ ಭದ್ರಕೋಟೆಗಳಾಗಿದ್ದವು.
ರಾಹುಲ್ ಗಾಂಧಿ 2004ರಿಂದ 2019ರವರೆಗೆ ಸತತ ಮೂರು ಅವಧಿಗೆ ಅಮೇಥಿಯನ್ನು ಪ್ರತಿನಿಧಿಸಿದ್ದರು. ಅವರು ಬಿಜೆಪಿ ನಾಯಕಿ ಸ್ಮೃತಿ ಇರಾನಿ ವಿರುದ್ಧ ಕೊನೆಗೆ ಸೋಲು ಅನುಭವಿಸಿದರು.
ಮತ್ತಷ್ಟು ಓದಿ: Rahul Gandhi: ರಾಹುಲ್ ಗಾಂಧಿ ಹೇಳಿದ 10 ಸುಳ್ಳುಗಳು
ರಾಹುಲ್ ಗಾಂಧಿಗಿಂತ ಮೊದಲು ಅವರು ತಾಯಿ ಸೋನಿಯಾ ಗಾಂಧಿ 1999-2004ರವರೆಗೆ ಅಮೇಥಿಯನ್ನು ಪ್ರತಿನಿಧಿಸಿದ್ದರು. ಸೋನಿಯಾಗಿಂತ ಮೊದಲು ಸಂಜಯ್ ಗಾಂಧಿ ಹಾಗೂ ರಾಜೀವ್ ಗಾಂಧಿ ಪ್ರತಿನಿಧಿಸಿದ್ದರು.
ಮತ್ತೊಂದೆಡೆ ರಾಯ್ ಬರೇಲಿಯನ್ನು 2004 ರಿಂದ 2024ರವರೆಗೆ ಸುಮಾರು ಎರಡು ದಶಕಗಳ ಕಾಲ ಸೋನಿಯಾ ಗಾಂಧಿ ಪ್ರತಿನಿಧಿಸಿದ್ದರು. ಈ ವರ್ಷದ ಆರಂಭದಲ್ಲಿ ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿ ಅನಾರೋಗ್ಯದ ನೆಪವೊಡ್ಡಿ ರಾಜ್ಯಸಭೆಗೆ ತೆರಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:03 am, Fri, 3 May 24