ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಟಿಡಿಪಿ ಸ್ಪರ್ಧೆ ಇಲ್ಲ; ಬಿಜೆಪಿಗೆ ಇದು ಹಿನ್ನಡೆಯಾ?
TDP not to contest in Telangana Lok Sabha Polls: ತೆಲುಗು ದೇಶಂ ಪಕ್ಷ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣ ರಾಜ್ಯದಲ್ಲಿ ಕಣಕ್ಕಿಳಿಯುತ್ತಿಲ್ಲ. ಪಕ್ಷದ ಈ ನಿರ್ಧಾರವನ್ನು ಟಿಡಿಪಿ ವಕ್ತಾರರು ಬಹಿರಂಗಪಡಿಸಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ತೆಲಂಗಾಣದಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ತಮ್ಮ ಪಕ್ಷ ಸ್ಪರ್ಧಿಸುತ್ತದೆ ಎಂದು ಟಿಡಿಪಿ ಹೇಳಿದೆ. ತೆಲಂಗಾಣದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಸಾಧನೆ ತೋರುವ ಹುಮ್ಮಸ್ಸಿನಲ್ಲಿದ್ದ ಬಿಜೆಪಿಗೆ ಈ ಟಿಡಿಪಿಯ ನಡೆ ಹಿನ್ನಡೆ ತರುವ ಸಾಧ್ಯತೆ ಇದೆ.
ಹೈದರಾಬಾದ್, ಏಪ್ರಿಲ್ 11: ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ (TDP) ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha Polls 2024) ತೆಲಂಗಾಣ ರಾಜ್ಯದಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದೆ. ಟಿಡಿಪಿಯ ಈ ನಡೆಯು ಎನ್ಡಿಎ ಮೈತ್ರಿಕೂಟಕ್ಕೆ ಹಿನ್ನಡೆ ತರುವ ಸಾಧ್ಯತೆ ಇದೆ. ಚಂದ್ರಬಾಬು ನಾಯ್ಡು ನಾಯಕತ್ವದ ಈ ಪಕ್ಷವು ಎನ್ಡಿಎ ಮೈತ್ರಿಕೂಟದಲ್ಲಿದೆ. ಆದರೆ, ಚುನಾವಣೆಯಲ್ಲಿ ತೆಲಂಗಾಣದಲ್ಲಿ ಟಿಡಿಪಿ ಯಾವ ಪಕ್ಷಕ್ಕೆ ಬೆಂಬಲ ನೀಡುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ಪಕ್ಷದ ನಾಯಕರಿಂದ ಅಧಿಕೃತ ಹೇಳಿಕೆ ಬಂದಿಲ್ಲ.
‘ನಾವು ಎನ್ಡಿಎ ಮೈತ್ರಿಕೂಟದ ಭಾಗವಾಗಿದ್ದೇವಾದರೂ ತೆಲಂಗಾಣದಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ತೆಲಂಗಾಣದಲ್ಲಿ ಯಾರಿಗೆ ಬೆಂಬಲ ನೀಡಬೇಕು ಎಂಬ ನಿರ್ಧಾರವನ್ನು ಪಕ್ಷದ ಹಿರಿಯ ನಾಯಕತ್ವದಿಂದ ತೆಗೆದುಕೊಳ್ಳಲಾಗುತ್ತದೆ. ಈ ಬಗ್ಗೆ ನಮಗೆ ಯಾವ ಸೂಚನೆಯೂ ಬಂದಿಲ್ಲ,’ ಎಂದು ಟಿಡಿಪಿ ವಕ್ತಾರೆ ಜೋತ್ಸ್ನಾ ತಿರುನಗರಿ ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿಯ ಧ್ವಜಕ್ಕೆ ದುಷ್ಟಶಕ್ತಿಗಳನ್ನು ಓಡಿಸುವ ಶಕ್ತಿ ಇದೆ: ಹರ್ಯಾಣ ಸಚಿವ
ಲೋಕಸಭಾ ಚುನಾವಣೆಯಲ್ಲಿ ಟಿಡಿಪಿ ಸ್ಪರ್ಧಿಸದೇ ಇರುವುದು ತೆಲಂಗಾಣದಲ್ಲಿ ಮಾತ್ರ. ಆಂಧ್ರದಲ್ಲಿ ಅದು ಕಣದಲ್ಲಿರಲಿದೆ. ತೆಲಂಗಾಣದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯದೇ ಹೋದರೂ ಜೂನ್ ಅಥವಾ ಜುಲೈನಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಟಿಡಿಪಿ ಸ್ಪರ್ಧಿಸಲಿದೆ. ಈ ವಿಚಾರವನ್ನು ಟಿಡಿಪಿ ವಕ್ತಾರರು ದೃಢಪಡಿಸಿದ್ದಾರೆ.
ತೆಲಂಗಾಣದಲ್ಲಿ ಕಳೆದ ವರ್ಷದ ನವೆಂಬರ್ನಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲೂ ಟಿಡಿಪಿ ಸ್ಪರ್ಧಿಸಿರಲಿಲ್ಲ. ಚಂದ್ರಬಾಬು ನಾಯ್ಡು ಅವರನ್ನು ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಬಂಧಿಸಿದ್ದರಿಂದ ಟಿಡಿಪಿ ಕಳೆದ ವರ್ಷ ಚುನಾವಣೆಯಲ್ಲಿ ಭಾಗವಹಿಸಿರಲಿಲ್ಲ. ಆಗ ಟಿಡಿಪಿಯ ತೆಲಂಗಾಣ ಘಟಕದ ಅಧ್ಯಕ್ಷರು ಅಂದಿನ ಆಡಳಿತಾರೂಢ ಬಿಆರ್ಎಸ್ ಪಕ್ಷವನ್ನು ಸೇರಿದ್ದರು.
ಇದನ್ನೂ ಓದಿ: ಕಳೆದ ವರ್ಷ ಬಿಜೆಪಿ ಜತೆ ಕೈಜೋಡಿಸಲು ಶರದ್ ಪವಾರ್ ಸಿದ್ಧರಾಗಿದ್ದರು: ಪ್ರಫುಲ್ ಪಟೇಲ್
ಆಂಧ್ರಪ್ರದೇಶದಲ್ಲಿ ಟಿಡಿಪಿ ಪ್ರಬಲವಾಗಿದೆಯಾದರೂ ತೆಲಂಗಾಣದಲ್ಲಿ ಅದರ ಉಪಸ್ಥಿತಿ ಗಮನಾರ್ಹ ಮಟ್ಟದಲ್ಲಿ ಇಲ್ಲ. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಿಪಿಐ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡರೂ ಗಳಿಸಿದ ಸ್ಥಾನ ಕೇವಲ 2 ಮಾತ್ರ. ಆದರೆ, ಈ ಬಾರಿ ಎನ್ಡಿಎ ಮೈತ್ರಿಕೂಟದ ಭಾಗವಾಗಿರುವ ಟಿಡಿಪಿ ತೆಲಂಗಾಣದಲ್ಲಿ ಉತ್ತಮ ಸಾಧನೆ ತೋರುವ ನಿರೀಕ್ಷೆ ಇತ್ತು. ಈಗ ಅದು ಸ್ಪರ್ಧಿಸದೇ ಇರುವುದು ಬಿಜೆಪಿಗೆ ಹಿನ್ನಡೆ ತರಬಹುದು ಎನ್ನುವ ಅನಿಸಿಕೆಗಳಿವೆ.
ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಬಿಜೆಪಿ ಅತಿಹೆಚ್ಚು ಸ್ಥಾನ ಗೆಲ್ಲಬಹುದು ಅಥವಾ ಎರಡನೇ ಸ್ಥಾನವಾದರೂ ಪಡೆಯಬಹುದು ಎಂದು ಅಂದಾಜು ಮಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:24 am, Thu, 11 April 24