Priyanka Gandhi: ಪ್ರಿಯಾಂಕಾ ಗಾಂಧಿ ಏಕೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ?
Lok Sabha Elections 2024: ಈ ಮೊದಲು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ರಾಹುಲ್ ಗಾಂಧಿ ರಾಯ್ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿದರೆ ಪ್ರಿಯಾಂಕಾ ಗಾಂಧಿ ಅಮೇಥಿಯ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಕ್ಷೇತ್ರದಿಂದ ಸ್ಪರ್ಧೆಗಿಳಿದಿಲ್ಲ. ಇದಕ್ಕೆ ಕಾರಣವೇನು? ಎಂಬುದರ ಬಗ್ಗೆ ಸ್ವತಃ ಪ್ರಿಯಾಂಕಾ ಗಾಂಧಿ ವಾದ್ರಾ ಅವರೇ ಸಂದರ್ಶನವೊಂದರಲ್ಲಿ ಉತ್ತರಿಸಿದ್ದಾರೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಯಾಕೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ ಎಂಬುದರ ಬಗ್ಗೆ ಹಲವು ರೀತಿಯ ಚರ್ಚೆಗಳು, ವದಂತಿಗಳು ಎದ್ದಿವೆ. ಇದಕ್ಕೆ ಸಂದರ್ಶನವೊಂದರಲ್ಲಿ ಉತ್ತರಿಸಿರುವ ಪ್ರಿಯಾಂಕಾ ಗಾಂಧಿ, ದೇಶಾದ್ಯಂತ ಕಾಂಗ್ರೆಸ್ ಪಕ್ಷದ ಪ್ರಚಾರದತ್ತ ಗಮನ ಹರಿಸಲು ಬಯಸಿದ್ದರಿಂದ ಲೋಕಸಭೆ ಚುನಾವಣೆಯಲ್ಲಿ (Lok Sabha Elections 2024) ಸ್ಪರ್ಧಿಸುತ್ತಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಇಂಡಿಯಾ ಟುಡೇಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಪ್ರಿಯಾಂಕಾ ಗಾಂಧಿ, ನಾನು ಮತ್ತು ರಾಹುಲ್ ಗಾಂಧಿ ಇಬ್ಬರೂ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಅದು ಬಿಜೆಪಿಗೆ ಲಾಭದಾಯಕವಾಗಲಿದೆ. ಹೀಗಾಗಿ, ನಾನು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
“ನಾನು ಕಳೆದ 15 ದಿನಗಳಿಂದ ರಾಯ್ಬರೇಲಿಯಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದೇನೆ. ಗಾಂಧಿ ಕುಟುಂಬಕ್ಕೂ ರಾಯ್‌ಬರೇಲಿಗೂ ಹಳೆಯ ಸಂಬಂಧವಿದೆ. ಹಾಗಾಗಿ, ನಾವು ಇಲ್ಲಿಗೆ ಬಂದು ಇಲ್ಲಿನ ಜನರನ್ನು ಭೇಟಿ ಮಾಡಿ ಅವರೊಂದಿಗೆ ಸಂವಹನ ನಡೆಸುತ್ತೇವೆ ಎಂದು ಜನರು ನಿರೀಕ್ಷಿಸುತ್ತಾರೆ. ನಾವು ದೆಹಲಿಯಲ್ಲಿ ಕುಳಿತು ರಿಮೋಟ್ ಕಂಟ್ರೋಲ್ ಮೂಲಕ ಇಲ್ಲಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ.” ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಇದನ್ನೂ ಓದಿ: Rahul Gandhi: ಮದುವೆ ಯಾವಾಗ?; ರಾಯ್ಬರೇಲಿ ಜನರಿಗೆ ನಗುತ್ತಲೇ ಉತ್ತರ ಕೊಟ್ಟ ರಾಹುಲ್ ಗಾಂಧಿ
ಕೇರಳದ ವಯನಾಡ್ ಜೊತೆಗೆ ರಾಹುಲ್ ಗಾಂಧಿ ತಮ್ಮ ಕುಟುಂಬದ ಭದ್ರಕೋಟೆಯಾದ ರಾಯ್ಬರೇಲಿಯಿಂದ ಕೂಡ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರವನ್ನು ರಾಹುಲ್ ಗಾಂಧಿ ಅವರ ತಾಯಿ ಸೋನಿಯಾ ಗಾಂಧಿ ಪ್ರತಿನಿಧಿಸಿದ್ದರು. ಅವರು ಈ ವರ್ಷದ ಆರಂಭದಲ್ಲಿ ರಾಜ್ಯಸಭೆಗೆ ತೆರಳಿದರು.
ಸೋನಿಯಾ ಗಾಂಧಿಯ ಮಕ್ಕಳಾದ ನಾನು ಮತ್ತು ರಾಹುಲ್ ಇಬ್ಬರೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರೆ ನಾವು ನಮ್ಮ ಕ್ಷೇತ್ರಗಳಿಗೆ ಕನಿಷ್ಠ 15 ದಿನಗಳನ್ನು ಮೀಸಲಿಡಬೇಕಾಗಿತ್ತು. ನಾವಿಬ್ಬರೂ ಸ್ಪರ್ಧಿಸಿದ್ದರೆ 15 ದಿನಗಳ ಕಾಲ ನಮ್ಮ ಸ್ವಂತ ಕ್ಷೇತ್ರದಲ್ಲಿಯೇ ಇರಬೇಕಿತ್ತು. ಹಾಗಾಗಿ, ಇಡೀ ದೇಶದಾದ್ಯಂತ ಚುನಾವಣಾ ಪ್ರಚಾರ ನಡೆಸುವುದು ಸೂಕ್ತ ಎಂದು ಈ ನಿರ್ಧಾರ ಮಾಡಿದೆವು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಮುಂದಿನ ಚುನಾವಣೆಯಲ್ಲಿ ನೀವು ಸ್ಪರ್ಧಿಸುತ್ತೀರಾ? ಎಂಬ ಪ್ರಶ್ನೆಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹಾರಿಕೆಯ ಉತ್ತರ ನೀಡಿದ್ದಾರೆ. “ನಾನು ಎಂದಿಗೂ ಸಂಸದೆಯಾಗುವ ಅಥವಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಲೋಚನೆ ಮಾಡಿಲ್ಲ. ಅವರು ನನಗೆ ನೀಡುವ ಯಾವುದೇ ಜವಾಬ್ದಾರಿಯನ್ನು ವಹಿಸಿಕೊಂಡು ನಾನು ಪಕ್ಷಕ್ಕಾಗಿ ಕೆಲಸ ಮಾಡಲು ಬಯಸುತ್ತೇನೆ. ನಾನು ಚುನಾವಣೆಯಲ್ಲಿ ಹೋರಾಡಬೇಕು ಎಂದು ಜನರು ಭಾವಿಸಿದರೆ, ನಾನು ಸ್ಪರ್ಧಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ ಅವರು ಸೋಲುವ ಭಯದಿಂದ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, “ನಾವಿಬ್ಬರೂ ಸ್ಪರ್ಧಿಸಿದರೆ ಅದು ಬಿಜೆಪಿಗೆ ಲಾಭದಾಯಕವಾಗಿರುತ್ತದೆ ಮತ್ತು ಪ್ರಚಾರ ಮಾಡಲು ನಾವಿಬ್ಬರೂ ಲಭ್ಯವಿರುವುದಿಲ್ಲ ಎಂಬ ಕಾರಣಕ್ಕೆ ನಾನು ಹಿಂದೆ ಸರಿದಿದ್ದೇನೆ” ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಕೂಡ ರಾಹುಲ್ ಗಾಂಧಿ ಅವರ ಹಿಂದಿನ ಕ್ಷೇತ್ರವಾದ ಅಮೇಥಿಯಿಂದ ಓಡಿಹೋಗಿದ್ದಕ್ಕಾಗಿ ವಾಗ್ದಾಳಿ ನಡೆಸಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಅವರು ಮೂರು ಬಾರಿ ಸಂಸದರಾಗಿದ್ದ ರಾಹುಲ್ ಗಾಂಧಿಯನ್ನು 55,000 ಮತಗಳಿಂದ ಸೋಲಿಸಿದ್ದರು.
ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಪಕ್ಷವು ಅಮೇಥಿ ಮತ್ತು ರಾಯ್ಬರೇಲಿಯನ್ನು ಎಂದಿಗೂ ಬಿಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹಾಗೇ, ಗುಜರಾತ್‌ನ ವಡೋದರಾದಲ್ಲಿ ಪ್ರಧಾನಿ ಮೋದಿ ಏಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ? ಎಂದು ಅವರು ಪ್ರಶ್ನಿಸಿದ್ದಾರೆ. “ಪ್ರಧಾನಿ ಮೋದಿಗೆ ಭಯವಾಗಿದೆಯೇ? ಅವರು 2014ರ ನಂತರ ವಡೋದರಾದಲ್ಲಿ ಏಕೆ ಚುನಾವಣೆಗೆ ಸ್ಪರ್ಧಿಸಲಿಲ್ಲ? ಅವರು ಗುಜರಾತ್‌ನಿಂದ ಓಡಿಹೋಗಿದ್ದಾರೆಯೇ?” ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಕೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:13 pm, Sat, 18 May 24