ಸೌರವ್ ದಾಸ್​ಗೆ ಮಾತ್ರವಲ್ಲದೆ ಸಿಜೆಪಿಯ ಅಭಿಜೀತ್ ದಿಪ್ಕೆ, ಅಶುತೋಷ್ ರಾಂಕಾ ವಿರುದ್ಧವೂ ಲುಕ್‌ಔಟ್ ನೋಟಿಸ್ ಜಾರಿ

ಯುನೈಟೆಡ್ ಕಿಂಗ್‌ಡಮ್‌ಗೆ (ಇಂಗ್ಲೆಂಡ್​) ಪ್ರಯಾಣಿಸುವುದನ್ನು ತಡೆಹಿಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಇಂದು ದೆಹಲಿ ಹೈಕೋರ್ಟ್ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಸಹ ಸಂಚಾಲಕ ಸೌರವ್ ದಾಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. ವಿಚಾರಣೆಯ ಸಂದರ್ಭದಲ್ಲಿ, ನವೆಂಬರ್ 23ರಂದು ಮುಂಬೈ ಪೊಲೀಸರು ಸೌರವ್ ದಾಸ್ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದರು ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಸೌರವ್ ದಾಸ್ ವಿರುದ್ಧ ಮಾತ್ರವಲ್ಲದೆ ಇತರೆ ಸಿಜೆಪಿ ನಾಯಕರಾದ ಅಭಿಜೀತ್ ದಿಪ್ಕೆ ಮತ್ತು ಅಶುತೋಶ್ ರಾಂಕಾ ವಿರುದ್ಧವೂ ಲುಕ್​ಔಟ್ ನೋಟಿಸ್ ಜಾರಿಗೊಳಿಸಲಾಗಿದೆ.

ಸೌರವ್ ದಾಸ್​ಗೆ ಮಾತ್ರವಲ್ಲದೆ ಸಿಜೆಪಿಯ ಅಭಿಜೀತ್ ದಿಪ್ಕೆ, ಅಶುತೋಷ್ ರಾಂಕಾ ವಿರುದ್ಧವೂ ಲುಕ್‌ಔಟ್ ನೋಟಿಸ್ ಜಾರಿ
ಸೌರವ್ ದಾಸ್
Image Credit source: PTI

Updated on: Nov 26, 2026 | 4:33 PM

ನವದೆಹಲಿ, ನವೆಂಬರ್ 26: ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಸಹ-ಸಂಚಾಲಕ ಸೌರವ್ ದಾಸ್ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಲಂಡನ್ ಪ್ರಯಾಣದಿಂದ ತಡೆಹಿಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ಹೊರಬಿದ್ದಿದೆ. ಸೌರವ್ ದಾಸ್ ಮಾತ್ರವಲ್ಲದೆ, ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಮತ್ತು ಮತ್ತೊಬ್ಬ ನಾಯಕ ಆಶುತೋಶ್ ರಾಂಕಾ ವಿರುದ್ಧವೂ ಮುಂಬೈ ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ.

ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್ ಆಧಾರದ ಮೇಲೆ ಮುಂಬೈ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಈ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸೌರವ್ ದಾಸ್, ಅಭಿಜೀತ್ ದಿಪ್ಕೆ ಮತ್ತು ಆಶುತೋಷ್ ರಾಂಕಾ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಲಾಗಿದೆ.

Loading...

ಇದನ್ನೂ ಓದಿ: 7 ದಿನದ ಜೈಲುವಾಸಕ್ಕೆ ಮುಕ್ತಿ; ಸಿಜೆಪಿಯ ಸೌರವ್ ದಾಸ್, ಅಶುತೋಷ್ ರಾಂಕಾಗೆ ಜಾಮೀನು ಮಂಜೂರು

ನವೆಂಬರ್ 23ರ ರಾತ್ರಿ ಲಂಡನ್‌ಗೆ ತೆರಳಲು ದೆಹಲಿ ವಿಮಾನ ನಿಲ್ದಾಣದ ಇಮಿಗ್ರೇಷನ್ ಕೌಂಟರ್‌ಗೆ ಬಂದಿದ್ದ ಸೌರವ್ ದಾಸ್ ಅವರನ್ನು ಅಧಿಕಾರಿಗಳು ತಡೆದಿದ್ದರು. ಇದನ್ನು ಪ್ರಶ್ನಿಸಿ ಸೌರವ್ ದಾಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಇಂದು ನಡೆಸಿದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಅಮಿತ್ ಮಹಾಜನ್ ಅವರ ಪೀಠಕ್ಕೆ ಕೇಂದ್ರ ಸರ್ಕಾರ ಈ ಮಾಹಿತಿ ನೀಡಿದೆ. ಮಹಾರಾಷ್ಟ್ರ ಪೊಲೀಸರ ಮನವಿಯ ಮೇರೆಗೆ ನವೆಂಬರ್ 22-23ರ ಮಧ್ಯರಾತ್ರಿ ಲುಕ್‌ಔಟ್ ನೋಟಿಸ್ ಜಾರಿಗೊಳಿಸಲಾಗಿತ್ತು ಎಂದು ಕೇಂದ್ರದ ಪರ ವಕೀಲರು ತಿಳಿಸಿದ್ದಾರೆ. ಅಲ್ಲದೆ, ಪಾಸ್‌ಪೋರ್ಟ್‌ನಲ್ಲಿ ಜನ್ಮಸ್ಥಳದ ಮಾಹಿತಿಯಲ್ಲಿನ ವ್ಯತ್ಯಾಸದ ಕುರಿತು ವಿದೇಶಾಂಗ ಸಚಿವಾಲಯ ಸೌರವ್ ದಾಸ್ ಅವರಿಗೆ ಶೋಕಾಸ್ ನೋಟಿಸ್ ಕೂಡ ನೀಡಿದೆ. ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಡಿಸೆಂಬರ್ 9ಕ್ಕೆ ಮುಂದೂಡಿದೆ.


ದೆಹಲಿ ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ಹೇಳಿದ್ದೇನು?:

ವಿಚಾರಣೆಯ ವೇಳೆ ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ, ನವೆಂಬರ್ 23ರಂದು ಮುಂಬೈ ಪೊಲೀಸರು ಸೌರವ್ ದಾಸ್ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ್ದರು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಅಲ್ಲದೆ, ಈ ಸುತ್ತೋಲೆಯ ಪ್ರತಿಯನ್ನು ಅರ್ಜಿದಾರರಿಗೆ ನೀಡಲು ಸಾಧ್ಯವಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಸೌರವ್ ದಾಸ್ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಅಖಿಲ್ ಸಿಬಲ್, ತಮ್ಮ ಕಕ್ಷಿದಾರರಿಗೆ ಯಾವುದೇ ಲುಕ್‌ಔಟ್ ನೋಟಿಸ್ ಬಗ್ಗೆ, ಅದನ್ನು ಜಾರಿಗೊಳಿಸಲು ಇರುವ ಕಾರಣ ಮತ್ತು ಅದರ ಉದ್ದೇಶದ ಬಗ್ಗೆ ಮಾಹಿತಿ ನೀಡಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.


ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ‘ಕಾಕ್ರೋಚ್ ಚಳವಳಿ’ ಕುರಿತು ಭಾಷಣ ಮಾಡಲು ಯುಕೆಗೆ ತೆರಳುತ್ತಿದ್ದ ಸೌರವ್ ದಾಸ್ ಅವರ ಪ್ರಯಾಣವನ್ನು ತಡೆಹಿಡಿಯಲಾಗಿತ್ತು. ನವೆಂಬರ್ 23ರ ರಾತ್ರಿ ಲಂಡನ್ ವಿಮಾನ ಏರುವ ಮೊದಲು ದೆಹಲಿ ವಿಮಾನ ನಿಲ್ದಾಣದ ಇಮಿಗ್ರೇಷನ್ ಕೌಂಟರ್‌ನಲ್ಲಿ ತಮ್ಮನ್ನು ತಡೆಯಲಾಯಿತು ಎಂದು ಸೌರವ್ ದಾಸ್ ಆರೋಪಿಸಿದ್ದಾರೆ.

ಸೌರವ್ ದಾಸ್ ಮಾಡಿರುವ ಆರೋಪವೇನು?:

ಸಾಮಾಜಿಕ ಜಾಲತಾಣ ಎಕ್ಸ್​​ನಲ್ಲಿ ಮಾಡಿರುವ ಪೋಸ್ಟ್‌ಗಳಲ್ಲಿ ಸೌರವ್ ದಾಸ್, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಎಡಿನ್‌ಬರ್ಗ್ ವಿಶ್ವವಿದ್ಯಾಲಯಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ‘ಕಾಕ್ರೋಚ್ ಚಳವಳಿ’ ಕುರಿತು ಮಾತನಾಡುವುದನ್ನು ತಡೆಯುವ ಉದ್ದೇಶದಿಂದಲೇ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಹುಟ್ಟುಹಬ್ಬದಂದೇ ಜೈಲು ಸೇರಿದ ಸಿಜೆಪಿ ನಾಯಕ ಅಶುತೋಷ್ ರಂಕಾ, ಸೌರವ್ ದಾಸ್​ಗೆ ಐದು ದಿನಗಳ ನ್ಯಾಯಾಂಗ ಬಂಧನ

ನವೆಂಬರ್ 24ರ (ಮಂಗಳವಾರ) ಬೆಳಗಿನ ಜಾವ 1 ಗಂಟೆಗೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ ವಿಮಾನದ ಮೂಲಕ ಲಂಡನ್‌ಗೆ ಪ್ರಯಾಣಿಸಬೇಕಿತ್ತು. ಆದರೆ, ಸೋಮವಾರ ರಾತ್ರಿ 11 ಗಂಟೆಯ ಸುಮಾರಿಗೆ ಇಮಿಗ್ರೇಷನ್ ಅಧಿಕಾರಿಗಳು ತಮ್ಮನ್ನು ವಿಮಾನ ಏರದಂತೆ ತಡೆದರು ಎಂದು ಅವರು ಆರೋಪಿಸಿದ್ದಾರೆ.

ಮಧ್ಯರಾತ್ರಿ ಜಾರಿಯಾದ ಲುಕ್‌ಔಟ್ ನೋಟಿಸ್:

ಲಂಡನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಲು ಸೌರವ್ ದಾಸ್ ಹೊರಟಿದ್ದರು. ಆದರೆ, ಅವರು ವಿಮಾನ ಏರುವ ಕೆಲವೇ ಗಂಟೆಗಳ ಮೊದಲು ಅಂದರೆ ನವೆಂಬರ್ 22-23ರ ಮಧ್ಯರಾತ್ರಿ ಮಹಾರಾಷ್ಟ್ರ ಪೊಲೀಸರು (ಮುಂಬೈ ಪೊಲೀಸರು) ಅವರ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ಎಎಸ್‌ಜಿ ನ್ಯಾಯಾಲಯಕ್ಕೆ ತಿಳಿಸಿದರು. ಇಮಿಗ್ರೇಷನ್ ಬ್ಯೂರೋ ಕೇವಲ ಆದೇಶ ಪಾಲಿಸುವ ಸಂಸ್ಥೆಯಷ್ಟೇ, ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us