ಈರುಳ್ಳಿ ಬೆಲೆಗಾಗಿ ಮುಂಬೈಯತ್ತ ಬೃಹತ್ ಮೆರವಣಿಗೆ ಹೊರಟಿದ್ದ ಮಹಾರಾಷ್ಟ್ರ ರೈತರ ಪ್ರತಿಭಟನೆ ರದ್ದು

ಗಣಪತಿ ಶರ್ಮ

|

Updated on: Mar 18, 2023 | 4:33 PM

ಈರುಳ್ಳಿ ಬೆಲೆ ವಿಚಾರಕ್ಕೆ ಸಂಬಂಧಿಸಿ ಮುಂಬೈಯತ್ತ ಬೃಹತ್ ಮೆರವಣಿ ಹೊರಟಿದ್ದ ಮಹಾರಾಷ್ಟ್ರ ರೈತರು ತಮ್ಮ ಪ್ರತಿಭಟನೆಯನ್ನು ರದ್ದುಗೊಳಿಸಿದ್ದಾರೆ. ಬೇಡಿಕೆಗಳ ಬಗ್ಗೆ ರೈತರ ನಿಯೋಗದ ಜತೆ ಮಾತುಕತೆ ನಡೆಸಿರುವುದಾಗಿ ಮುಖ್ಯಮಂತ್ರಿ ಏಕನಾಥ ಶಿಂದೆ ರಾಜ್ಯ ವಿಧಾನಸಭೆಗೆ ಮಾಹಿತಿ ನೀಡಿದ ಬೆನ್ನಲ್ಲೇ ಪ್ರತಿಭಟನೆಯನ್ನು ರದ್ದುಗೊಳಿಸಲಾಗಿದೆ.

ಈರುಳ್ಳಿ ಬೆಲೆಗಾಗಿ ಮುಂಬೈಯತ್ತ ಬೃಹತ್ ಮೆರವಣಿಗೆ ಹೊರಟಿದ್ದ ಮಹಾರಾಷ್ಟ್ರ ರೈತರ ಪ್ರತಿಭಟನೆ ರದ್ದು
ಮಹಾರಾಷ್ಟ್ರ ರೈತರ ಬೃಹತ್ ಮೆರವಣಿ

ಮುಂಬೈ: ಈರುಳ್ಳಿ ಬೆಲೆ (Onion Price) ವಿಚಾರಕ್ಕೆ ಸಂಬಂಧಿಸಿ ಮುಂಬೈಯತ್ತ ಬೃಹತ್ ಮೆರವಣಿ ಹೊರಟಿದ್ದ ಮಹಾರಾಷ್ಟ್ರ (Maharashtra) ರೈತರು ತಮ್ಮ ಪ್ರತಿಭಟನೆಯನ್ನು ರದ್ದುಗೊಳಿಸಿದ್ದಾರೆ. ಬೇಡಿಕೆಗಳ ಬಗ್ಗೆ ರೈತರ ನಿಯೋಗದ ಜತೆ ಮಾತುಕತೆ ನಡೆಸಿರುವುದಾಗಿ ಮುಖ್ಯಮಂತ್ರಿ ಏಕನಾಥ ಶಿಂದೆ ರಾಜ್ಯ ವಿಧಾನಸಭೆಗೆ ಮಾಹಿತಿ ನೀಡಿದ ಬೆನ್ನಲ್ಲೇ ಪ್ರತಿಭಟನೆಯನ್ನು ರದ್ದುಗೊಳಿಸಲಾಗಿದೆ. ಸಾವಿರಾರು ರೈತರ ನಾಶಿಕ್​ನಿಂದ ಮುಂಬೈಗೆ ಮೆರವಣಿಗೆ ಹೊರಟಿದ್ದರು. 200 ಕಿಲೋಮೀಟರ್ ದೂರದ ಮೆರವಣಿಗೆಯ ನೇತೃತ್ವವನ್ನು ಸಿಪಿಐ ನಾಯಕ, ಮಾಜಿ ಶಾಸಕ ಜೀವ ಪಾಂಡು ಗವಿತ್ ವಹಿಸಿದ್ದರು. ಅವರೇ ಇದೀಗ ಪ್ರತಿಭಟನೆ ರದ್ದುಗೊಳಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಭರವಸೆಗಳನ್ನು ಈಡೇರಿಸುವುದಕ್ಕಾಗಿ ರಾಜ್ಯ ಸರ್ಕಾರ ತಕ್ಷಣವೇ ಕ್ರಮ ಕೈಗೊಂಡಿದೆ. ಜಿಲ್ಲಾಧಿಕಾರಿಗಳು ನಾಶಿಕ್ ಹಾಗೂ ಇತರ ಕೆಲವು ಕಡೆಗಳಿಗೆ ಭೇಟಿ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಸರ್ಕಾರ ಕೇವಲ ಆಶ್ವಾಸನೆಗಳನ್ನು ನೀಡುತ್ತದೆಯೇ ಹೊರತು ಆ ನಿಟ್ಟಿನಲ್ಲಿ ಕ್ರಮಕೈಗೊಳ್ಳುವುದಿಲ್ಲ ಎಂದು ನಾವು ಭಾವಿಸಿದ್ದೆವು. ಆದರೆ, ಈಗ ಅವರು ಸೂಕ್ತ ಕ್ರಮ ಕೈಗೊಳ್ಳಲು ಆರಂಭಿಸಿದ್ದು, ನಮ್ಮ ಪ್ರತಿಭಟನೆಯನ್ನು ಹಿಂಪಡೆಯಲು ನಿರ್ಧರಿಸಿದ್ದೇವೆ. ರೈತರೆಲ್ಲರೂ ಮನೆಗೆ ಮರಳುತ್ತಿದ್ದಾರೆ ಎಂದು ಗವಿತ್ ತಿಳಿಸಿದ್ದಾರೆ.

ಅರಣ್ಯ ಹಕ್ಕುಗಳು, ಅರಣ್ಯ ಪ್ರದೇಶ ಒತ್ತುವರಿ, ದೇಗುಲ ಟ್ರಸ್ಟ್​​ಗಳಿಗೆ ನೀಡಿರುವ ಭೂಮಿಯ ವರ್ಗಾವಣೆ, ಬೇಸಾಯಕ್ಕಾಗಿ ಕೃಷಿಕರಿಗೆ ಹುಲ್ಲುಗಾವಲು ನೀಡುವುದು ಸೇರಿದಂತೆ 14 ವಿಚಾರಗಳ ಬಗ್ಗೆ ರೈತರ ನಿಯೋಗದ ಜತೆ ಶಿಂದೆ ಮಾತುಕತೆ ನಡೆಸಿದ್ದರು. ಬೃಹತ್ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ ರೈತರಿಗೆ ಮನವಿ ಮಾಡಿದ್ದ ಅವರು, ಸಭೆಯಲ್ಲಿ ಕೈಗೊಂಡ ನಿರ್ಧಾರಗಳನ್ನು ತಕ್ಷಣವೇ ಜಾರಿಗೆ ತರಲಾಗುವುದು ಎಂದು ಹೇಳಿದ್ದರು.

ಇದನ್ನೂ ಓದಿ: Onion Price: ಗ್ರಾಹಕರಿಗೆ ಗುಡ್ ನ್ಯೂಸ್; ಇನ್ನು ಗಗನಕ್ಕೇರಲ್ಲ ಈರುಳ್ಳಿ ಬೆಲೆ, ಸರ್ಕಾರದ ಹೊಸ ಪ್ಲಾನ್

ಕಡಿಮೆ ಬೆಲೆ ಹಾಗೂ ಅಕಾಲಿಕ ಮಳೆಯಿಂದ ಬೆಳೆ ಹಾನಿ ಅನುಭವಿಸುತ್ತಿರುವ ಈರುಳ್ಳಿ ಬೆಳೆಗಾರರಿಗೆ ಆರ್ಥಿಕ ಪರಿಹಾರವಾಗಿ ಕ್ವಿಂಟಲ್‌ಗೆ 350 ರೂ. ನೀಡಲಾಗುವುದು ಎಂದು ಸಿಎಂ ಘೋಷಿಸಿದ್ದರು.

ರೈತರಿಗೆ ಪ್ರತಿ ಕ್ವಿಂಟಾಲ್‌ ಈರುಳ್ಳಿಗೆ 600 ರೂ. ಪರಿಹಾರ, ರೈತರಿಗೆ 12 ಗಂಟೆಗಳ ನಿರಂತರ ವಿದ್ಯುತ್ ಸರಬರಾಜು ಮತ್ತು ಕೃಷಿ ಸಾಲ ಮನ್ನಾ ಮಾಡಬೇಕು ಎಂದು ರೈತರು ಬೇಡಿಕೆ ಇಟ್ಟಿದ್ದರು. ಬೆಲೆ ಕುಸಿತದಿಂದ ಮಹಾರಾಷ್ಟ್ರದ ಈರುಳ್ಳಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರಕ್ಕೆ ಬೇಡಿಕೆಗಳನ್ನು ಸಲ್ಲಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada