ಮಲಯಾಳಂ ಸುದ್ದಿ ವಾಹಿನಿ ಮೀಡಿಯಾ ಒನ್ ಪ್ರಸಾರ ನಿರ್ಬಂಧಿಸಿದ ಕೇಂದ್ರ
MediaOne ಸುರಕ್ಷತಾ ಕಾರಣಗಳಿಂದಾಗಿ ನಿಷೇಧ ಹೇರಲಾಗಿದೆ ಎಂದು ಸಚಿವಾಲಯ ಹೇಳಿದೆ. ಆದರೆ ಚಾನೆಲ್ ಅದರ ವಿವರಗಳನ್ನು ಇನ್ನೂ ಪಡೆದಿಲ್ಲ. ಈ ನಿಷೇಧದ ಬಗ್ಗೆ ಕೇಂದ್ರ ಸರ್ಕಾರವು ಮೀಡಿಯಾ ಒನ್ ಟಿವಿಗೆ ವಿವರಗಳನ್ನು ನೀಡಿಲ್ಲ.
ತಿರುವನಂತಪುರಂ: ಜಮಾತ್-ಎ-ಇಸ್ಲಾಮಿಯ ಬೆಂಬಲವನ್ನು ಹೊಂದಿರುವ ಪ್ರಮುಖ ಮಲಯಾಳಂ ಸುದ್ದಿ ಚಾನೆಲ್ ಮೀಡಿಯಾಒನ್ ಟಿವಿ (Mediaone) ಪ್ರಸಾರವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು (Union Information and Broadcasting Ministry) “ಭದ್ರತಾ ಕಾರಣಗಳನ್ನು ಉಲ್ಲೇಖಿಸಿ” ನಿರ್ಬಂಧಿಸಿದೆ. ಸೋಮವಾರ ಮಧ್ಯಾಹ್ನ ಚಾನೆಲ್ ಪ್ರಸಾರವನ್ನು ನಿಲ್ಲಿಸಿತು. ಮೀಡಿಯಾಒನ್ ಟಿವಿ ಸಂಪಾದಕ ಪ್ರಮೋದ್ ರಾಮನ್ ಅವರು, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಚಾನೆಲ್ ಮೇಲೆ ಪ್ರಸಾರ ನಿಷೇಧವನ್ನು ವಿಧಿಸಿದೆ. “ಸುರಕ್ಷತಾ ಕಾರಣಗಳಿಂದಾಗಿ ನಿಷೇಧ ಹೇರಲಾಗಿದೆ ಎಂದು ಸಚಿವಾಲಯ ಹೇಳಿದೆ. ಆದರೆ ಚಾನೆಲ್ ಅದರ ವಿವರಗಳನ್ನು ಇನ್ನೂ ಪಡೆದಿಲ್ಲ. ಈ ನಿಷೇಧದ ಬಗ್ಗೆ ಕೇಂದ್ರ ಸರ್ಕಾರವು ಮೀಡಿಯಾಒನ್ ಟಿವಿಗೆ ವಿವರಗಳನ್ನು ನೀಡಿಲ್ಲ. ನಿಷೇಧದ ವಿರುದ್ಧ ಕಾನೂನು ಕ್ರಮ ಆರಂಭಿಸಿದ್ದೇವೆ. ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಚಾನೆಲ್ ಪ್ರಸಾರ ಮುಂದುವರಿಯುತ್ತದೆ. ಕೊನೆಗೂ ನ್ಯಾಯ ಸಿಗುತ್ತದೆ ಎಂಬ ಭರವಸೆಯೊಂದಿಗೆ ಪ್ರಸಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದ್ದೇವೆ’’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಟಿವಿ ಚಾನೆಲ್‌ನ ಪರವಾನಗಿ ಅವಧಿ ಮುಗಿದಿಲ್ಲ. ಆದರೆ ನಿಷೇಧ ಮಾಡುವ ಹೊತ್ತಲ್ಲಿ ಚಾನೆಲ್‌ನ ಪರವಾನಗಿ ನವೀಕರಣ ಪ್ರಕ್ರಿಯೆಯು ನಡೆಯುತ್ತಿತ್ತು ಎಂದು ಚಾನೆಲ್ ಮೂಲಗಳು ತಿಳಿಸಿವೆ.
മീഡിയവണിന്റെ സംപ്രേഷണം കേന്ദ്ര സർക്കാർ വീണ്ടും തടഞ്ഞു pic.twitter.com/92XbeRBa1a
— MediaOne TV (@MediaOneTVLive) January 31, 2022
ಇತ್ತೀಚಿನ ವರ್ಷಗಳಲ್ಲಿ ಇದು ಎರಡನೇ ಬಾರಿಗೆ ಮೀಡಿಯಾ ಒನ್ ಟಿವಿ ಪ್ರಸಾರದಿಂದ ನಿರ್ಬಂಧಿಸಲಾಗಿದೆ. ಮಾರ್ಚ್ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿನ ಗಲಭೆಗಳ ಕುರಿತು ವರದಿ ಮಾಡುವಾಗ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ (ನಿಯಂತ್ರಣ) ಕಾಯಿದೆ, 1998 ರ ನಿಬಂಧನೆಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಕೇಂದ್ರವು 48 ಗಂಟೆಗಳ ಕಾಲ ಚಾನೆಲ್ ಮೇಲೆ ನಿಷೇಧ ಹೇರಿತ್ತು.
ಮೀಡಿಯಾ ಒನ್ ಕೇರಳದ ಜನಪ್ರಿಯ ಸುದ್ದಿ ವಾಹಿನಿಯಾಗಿದೆ. ಇಲ್ಲಿ ಪ್ರಸಾರವಾಗುವ ಟಾಕ್ ಶೋಗಳು ಪತ್ರಿಕೋದ್ಯಮದಲ್ಲಿ ಹೆಸರುವಾಸಿಯಾಗಿದೆ. ವಾಹಿನಿಯು ಮಾಧ್ಯಮಮ್ ಬ್ರಾಡ್‌ಕಾಸ್ಟಿಂಗ್ ಲಿಮಿಟೆಡ್‌ನ ಒಡೆತನದಲ್ಲಿದೆ ಎಂದು ವರದಿಯಾಗಿದೆ. ಅನೇಕ ಹೂಡಿಕೆದಾರರು ಜಮಾತ್-ಎ-ಇಸ್ಲಾಮಿಯ ಕೇರಳ ವಿಭಾಗದ ಸದಸ್ಯರಾಗಿದ್ದಾರೆ. ಭದ್ರತಾ ಕಾರಣಗಳಿಗಾಗಿ ಅವರ ವಿರುದ್ಧ ದೂರುಗಳಿವೆ ಮತ್ತು ಅವರ ಪರವಾನಗಿಯನ್ನು ಏಕೆ ರದ್ದುಗೊಳಿಸಬಾರದು ಎಂಬುದಕ್ಕೆ ಪ್ರತಿಕ್ರಿಯಿಸುವಂತೆ ಕೇಳಲಾಗಿದೆ ಎಂದು ಮೀಡಿಯಾ ಒನ್ ಟಿವಿ ಮೂಲವೊಂದು ತಿಳಿಸಿದೆ. ಸೋಮವಾರ ಕೆಲವು ಸಂವಹನ ನಡೆದಿದ್ದು ಆಮೇಲೆ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸುವ ಸೂಚನೆ ಬಂದಿದೆ. ಜನವರಿ 31ರ ಸೋಮವಾರ ಮಧ್ಯಾಹ್ನ 12.30ರಿಂದ ಚಾನೆಲ್ ಪ್ರಸಾರ ಸ್ಥಗಿತಗೊಂಡಿದೆ.
ಸಚಿವಾಲಯವು ನಮ್ಮ ಪರವಾನಗಿಯನ್ನು ರದ್ದುಗೊಳಿಸಲು ನಮಗೆ ಕಾರಣವೂ ತಿಳಿದಿಲ್ಲ. ನಮ್ಮ ಹಿಂದಿನ ಸಂವಹನಗಳಲ್ಲಿ ರದ್ದುಗೊಳಿಸುವಿಕೆಗೆ ನಮ್ಮಲ್ಲಿ ಪ್ರಸಾರವಾದ ಸುದ್ದಿ, ನಮ್ಮ ನಿರ್ದೇಶಕರು ಅಥವಾ ಮಾಲೀಕತ್ವದ ಮಾದರಿಯ ಕಾರಣವೇ ಎಂಬುದನ್ನು ಅವರು ಉಲ್ಲೇಖಿಸಿಲ್ಲ. ನಮಗೆ ಏನನ್ನೂ ಬಹಿರಂಗಪಡಿಸಲಾಗಿಲ್ಲ ಎಂದು ಮೀಡಿಯಾಒನ್ ಮೂಲಗಳು ಹೇಳಿವೆ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಸುದ್ದಿಯ ಅಪ್ಡೇಟ್
ಕೇರಳ ಹೈಕೋರ್ಟ್ ಸೋಮವಾರ (ಜನವರಿ 31) ಮಲಯಾಳಂ ಸುದ್ದಿ ಚಾನೆಲ್ ಮೀಡಿಯಾ ಒನ್ ಟಿವಿಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಪ್ರಸಾರದ ಪರವಾನಗಿಯನ್ನು ರದ್ದುಗೊಳಿಸಿದ ಆದೇಶವನ್ನು ಮುಂದಿನ ವಿಚಾರಣೆಯ ದಿನಾಂಕದವರೆಗೆ ಮುಂದೂಡಿದೆ ಎಂದು ಲೈವ್ ಲಾ ವರದಿ ಮಾಡಿದೆ. ಎರಡು ದಿನಗಳ ನಂತರ ಅಂದರೆ ಬುಧವಾರ ಈ ಪ್ರಕರಣದ ವಿಚಾರಣೆ ನಡೆಯಲಿದೆ.
Published On - 3:49 pm, Mon, 31 January 22