‘ಅಧಿಕಾರ ಉಳಿಸಿಕೊಳ್ಳುವ ಹುನ್ನಾರ’; ಕ್ಷೇತ್ರ ಪುನರ್​ವಿಂಗಡಣೆ ಮಸೂದೆಗೆ ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ

ನವೆಂಬರ್ 30ರಂದು ಲೋಕಸಭಾ ಅಧಿವೇಶನದಲ್ಲಿ ಮತ್ತೆ ಚರ್ಚೆಯಾಗಲಿರುವ ಕ್ಷೇತ್ರ ಪುನರ್​ವಿಂಗಡಣೆ ವಿಧೇಯಕದ ವಿಚಾರವಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಲೋಕಸಭೆಯ ಬೃಹತ್ ವಿಸ್ತರಣೆಯ ಮೂಲಕ ರಾಜಕೀಯ ಅಧಿಕಾರವನ್ನು ಕೇಂದ್ರೀಕರಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಕ್ಷೇತ್ರ ಪುನರ್​ವಿಂಗಡಣೆಗೆ ಬೆಂಬಲ ಘೋಷಿಸಿದ ಡಿಎಂಕೆ ವಿರುದ್ಧವೂ ಅವರು ಕಿಡಿಕಾರಿದ್ದಾರೆ.

‘ಅಧಿಕಾರ ಉಳಿಸಿಕೊಳ್ಳುವ ಹುನ್ನಾರ’; ಕ್ಷೇತ್ರ ಪುನರ್​ವಿಂಗಡಣೆ ಮಸೂದೆಗೆ ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ
ಮಲ್ಲಿಕಾರ್ಜುನ ಖರ್ಗೆ- ರಾಹುಲ್ ಗಾಂಧಿ
Image Credit source: PTI

Updated on: Nov 28, 2026 | 3:18 PM

ನವದೆಹಲಿ, ನವೆಂಬರ್ 28: ಮುಂದಿನ ವಾರ ಸಂಸತ್ತಿನಲ್ಲಿ ಮಂಡನೆಯಾಗಲಿರುವ ಕ್ಷೇತ್ರ ಪುನರ್​ವಿಂಗಡಣೆ ವಿಧೇಯಕವನ್ನು ವಿರೋಧಿಸುವುದಾಗಿ ಒಡಕು ಮೂಡಿರುವ ಇಂಡಿಯ ಮೈತ್ರಿಕೂಟ ಘೋಷಿಸಿದೆ. ಬಿಜೆಪಿಯು ಶಾಶ್ವತವಾಗಿ ಅಧಿಕಾರವನ್ನು ತನ್ನಲ್ಲೇ ಉಳಿಸಿಕೊಳ್ಳಲು ಈ ಮಸೂದೆಯನ್ನು ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಶರದ್ ಪವಾರ್ ಅವರ ಎನ್‌ಸಿಪಿ ಬಣವು ಗೈರಾಗಿದ್ದ ಇಂಡಿಯ ಬಣದ ಸಭೆಯ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಸಂವಿಧಾನದ (132ನೇ ತಿದ್ದುಪಡಿ) ವಿಧೇಯಕವು ಪರಿಶಿಷ್ಟ ಜಾತಿ (ಎಸ್​ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್​ಟಿ) ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಒತ್ತಿಹೇಳಿದರು.

“ಮೋದಿ ಸರ್ಕಾರ ತರುತ್ತಿರುವ ಸಂವಿಧಾನ ತಿದ್ದುಪಡಿ ವಿಧೇಯಕವು ಪ್ರಜಾಪ್ರಭುತ್ವಕ್ಕೆ ದೊಡ್ಡ ಬೆದರಿಕೆಯನ್ನು ಒಡ್ಡಿದೆ ಎಂದು ಎಲ್ಲಾ ನಾಯಕರು ಸಾಮೂಹಿಕವಾಗಿ ನಿರ್ಧರಿಸಿದ್ದಾರೆ. ಅವರು ಪ್ರಜಾಪ್ರಭುತ್ವವನ್ನು ನಾಶಮಾಡಲು ಮತ್ತು ಅಧಿಕಾರದ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಳ್ಳಲು ಬಯಸುತ್ತಿದ್ದಾರೆ” ಎಂದು ಆರ್‌ಜೆಡಿ, ಮಮತಾ ಬ್ಯಾನರ್ಜಿ ಅವರ ಟಿಎಂಸಿ ಮತ್ತು ಇತರ ಪಕ್ಷಗಳ ಸಂಸದರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ ಹೇಳಿದರು.

Loading...

ಇದನ್ನೂ ಓದಿ: ‘ದಕ್ಷಿಣ ಭಾರತಕ್ಕೆ ಅನುಕೂಲ’; ಮಹಿಳಾ ಮೀಸಲಾತಿ, ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಬೆಂಬಲ

ಲೋಕಸಭೆಯ ಬಲವನ್ನು 850 ಸ್ಥಾನಗಳಿಗೆ ಹೆಚ್ಚಿಸುವ ಎನ್​ಡಿಎ ಸರ್ಕಾರದ ಯೋಜನೆಯು ನ್ಯಾಯಯುತ ಪ್ರಾತಿನಿಧ್ಯದ ಅಗತ್ಯಕ್ಕಿಂತ ಹೆಚ್ಚಾಗಿ ರಾಜಕೀಯ ಮಹತ್ವಾಕಾಂಕ್ಷೆಗಳಿಂದ ಪ್ರೇರಿತವಾಗಿದೆ ಎಂದು ಖರ್ಗೆ ಟೀಕಿಸಿದ್ದಾರೆ. ಬಿಜೆಪಿಯ ಈ ಹಿಂದಿನ ‘400 ಪಾರ್’ ಚುನಾವಣಾ ಘೋಷಣೆಯನ್ನು ಟೀಕಿಸಿದ ಖರ್ಗೆ, ಆಡಳಿತ ಪಕ್ಷವು ದೀರ್ಘಕಾಲದವರೆಗೆ ಅಧಿಕಾರವನ್ನು ಭದ್ರಪಡಿಸಿಕೊಳ್ಳಲು ಈಗ ‘800 ಪಾರ್’ ಗುರಿಯನ್ನು ಹೊಂದಿದೆ. ನರೇಂದ್ರ ಮೋದಿ ಅಧಿಕಾರದ ಸಂಪೂರ್ಣ ನಿಯಂತ್ರಣವನ್ನು ಬಯಸುತ್ತಿದ್ದಾರೆ ಎಂದು ಆರೋಪಿಸಿದರು.


ಕ್ಷೇತ್ರ ಪುನರ್​ವಿಂಗಡಣೆ ಪ್ರಕ್ರಿಯೆಯ ಮೂಲಕ ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಜಾರಿಗೆ ತರುವ ವಿಧೇಯಕಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ ಒಂದು ದಿನದ ನಂತರ ಇಂಡಿಯಾ ಬಣದ ಈ ಸಭೆ ನಡೆದಿದೆ. ಈ ವಿಧೇಯಕವು ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಶೇ. 50ರಷ್ಟು ಹೆಚ್ಚಿಸಲು ಪ್ರಸ್ತಾಪಿಸುತ್ತದೆ. ಈ ಕ್ರಮವು ದಕ್ಷಿಣ ಭಾರತದ ರಾಜ್ಯಗಳ ಪ್ರಮುಖ ಬೇಡಿಕೆಗೆ ಪೂರಕವಾಗಿದೆ.


ಕ್ಷೇತ್ರ ಪುನರ್​ವಿಂಗಡಣೆ ವಿಧೇಯಕದಲ್ಲಿ ಎಸ್‌ಸಿ-ಎಸ್‌ಟಿ ಹಿತಾಸಕ್ತಿಗಳನ್ನು ಕಡೆಗಣಿಸಲಾಗಿದೆ ಎಂದು ಖರ್ಗೆ ಆರೋಪ ಮಾಡಿದ್ದಾರೆ. ಪರಿಶಿಷ್ಟ ಜಾತಿ (ಎಸ್​ಸಿ) ಮತ್ತು ಪರಿಶಿಷ್ಟ ಪಂಗಡಗಳಿಗೆ (ಎಸ್​ಟಿ) ಸಂಬಂಧಿಸಿದ ನಿಬಂಧನೆಗಳ ಕುರಿತಾಗಿಯೂ ಕಾಂಗ್ರೆಸ್ ಮುಖ್ಯಸ್ಥರು ಪ್ರಸ್ತಾವಿತ ಕ್ಷೇತ್ರ ಪುನರ್​ವಿಂಗಡಣೆಯ ಚೌಕಟ್ಟನ್ನು ಪ್ರಶ್ನಿಸಿದ್ದಾರೆ. ಈ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಲೋಕಸಭಾ ಸ್ಥಾನಗಳಲ್ಲಿ ಹೆಚ್ಚಳವನ್ನು ಖಚಿತಪಡಿಸುವಲ್ಲಿ ಸಂವಿಧಾನ ತಿದ್ದುಪಡಿ ವಿಫಲವಾಗಿದೆ ಎಂದು ಅವರು ಆರೋಪಿಸಿದರು.

ಇದನ್ನೂ ಓದಿ: ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಡಿಎಂಕೆ ಬೆಂಬಲ: ಮೋದಿ ಸರ್ಕಾರದ ಬಲ ಹೆಚ್ಚಿಸಿದ ಸ್ಟಾಲಿನ್ ಪಕ್ಷದ ನಿರ್ಧಾರ

ಪ್ರತಿ ರಾಜ್ಯದಲ್ಲಿ ಎಸ್‌ಸಿ ಮತ್ತು ಎಸ್‌ಟಿಗಳಿಗೆ ಮೀಸಲಾದ ಸ್ಥಾನಗಳ ಸಂಖ್ಯೆಯು ಆಯಾ ಜನಸಂಖ್ಯೆಯ ಪಾಲನ್ನು ಪ್ರತಿಬಿಂಬಿಸಬೇಕು ಎಂದು ಖರ್ಗೆ ವಾದಿಸಿದರು. ಲೋಕಸಭೆಯ ವಿಸ್ತರಣೆಯು ಮೀಸಲು ಕ್ಷೇತ್ರಗಳ ಹೆಚ್ಚಳಕ್ಕೂ ಕಾರಣವಾಗಬೇಕು ಎಂದು ಪ್ರತಿಪಾದಿಸಿದ ಅವರು, ಸರ್ಕಾರದ ಪ್ರಸ್ತಾವನೆಯಲ್ಲಿ ಅಂತಹ ಯಾವುದೇ ಅವಕಾಶವಿಲ್ಲ ಎಂದು ದೂರಿದರು.


ಕ್ಷೇತ್ರ ಪುನರ್​ವಿಂಗಡಣೆ ಪ್ರಕ್ರಿಯೆಗೆ ಸಂಬಂಧಿಸಿದ ಜವಾಬ್ದಾರಿಗಳನ್ನು ಚುನಾವಣಾ ಆಯೋಗಕ್ಕೆ ವಹಿಸುತ್ತಿರುವುದಕ್ಕೂ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ ಅವರು, ಮತದಾರರ ಪಟ್ಟಿಯಿಂದ 10 ಕೋಟಿಗೂ ಹೆಚ್ಚು ಹೆಸರುಗಳನ್ನು ತೆಗೆದುಹಾಕಿದ ವಿಚಾರದಲ್ಲಿ ಚುನಾವಣಾ ಆಯೋಗ ಈಗಾಗಲೇ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ ಎಂದು ಆರೋಪಿಸಿದರು. ಈ ವ್ಯವಸ್ಥೆಯು ಸ್ವೀಕಾರಾರ್ಹವಲ್ಲ ಎಂದ ಕಾಂಗ್ರೆಸ್ ಅಧ್ಯಕ್ಷರು, ಪ್ರಸ್ತುತ ಚುನಾವಣಾ ಆಯೋಗದ ನಾಯಕತ್ವದಲ್ಲಿ ಕ್ಷೇತ್ರ ಪುನರ್ವಿಂಗಡಣೆ ನಡೆಸುವುದರಿಂದ ಕ್ಷೇತ್ರಗಳ ಗಡಿಗಳು ಮತ್ತು ಮೀಸಲಾತಿ ವರ್ಗಗಳ ತಿರುಚುವಿಕೆಗೆ ಕಾರಣವಾಗಬಹುದು ಎಂದು ಆರೋಪಿಸಿದರು.

ಚುನಾವಣಾ ಅಕ್ರಮಗಳ ಕುರಿತ ಕಾಂಗ್ರೆಸ್ ಆರೋಪಗಳನ್ನು ಪುನರುಚ್ಚರಿಸಿದ ಖರ್ಗೆ, ಮತ ಕಳ್ಳತನಕ್ಕೆ ಅನುವು ಮಾಡಿಕೊಡಲು ಮುಖ್ಯ ಚುನಾವಣಾ ಆಯುಕ್ತರ ಕಚೇರಿಯಿಂದಲೇ ಸೂಚನೆಗಳನ್ನು ನೀಡಲು ಸಾಧ್ಯವಾದರೆ, ಕ್ಷೇತ್ರ ಪುನರ್​ವಿಂಗಡಣೆ ಪ್ರಕ್ರಿಯೆಯನ್ನೂ ದುರುಪಯೋಗಪಡಿಸಿಕೊಳ್ಳಬಹುದು ಎಂದು ಆರೋಪಿಸಿದರು.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

 

 

Published On - 3:15 pm, Sat, 28 November 26

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us