ನನ್ನನ್ನು ಗುಂಡಿಕ್ಕಿ ಕೊಂದರೂ ಏಕತೆಯಿಂದ ಬೇರ್ಪಡಿಸಲು ಸಾಧ್ಯವಿಲ್ಲ; ಬಂಗಾಳದಲ್ಲಿ ವಕ್ಫ್ ಕಾಯ್ದೆ ಕುರಿತು ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ರಾಜ್ಯದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ವ್ಯಾಪಕ ಪ್ರತಿಭಟನೆಗಳ ನಡುವೆಯೂ ಅಲ್ಪಸಂಖ್ಯಾತ ಸಮುದಾಯ ಒಗ್ಗಟ್ಟಿನಿಂದ ಇರಬೇಕೆಂದು ಅವರು ವಿನಂತಿಸಿದ್ದಾರೆ. ವಕ್ಫ್ ತಿದ್ದುಪಡಿ ಮಸೂದೆಯನ್ನು ಕಳೆದ ಗುರುವಾರ ಲೋಕಸಭೆ ಮತ್ತು ಶುಕ್ರವಾರ ಮುಂಜಾನೆ ರಾಜ್ಯಸಭೆ ಅಂಗೀಕರಿಸಿದ್ದು, ಸಂಸತ್ತಿನ ಎರಡೂ ಸದನಗಳಲ್ಲಿ ನಡೆದ ಮ್ಯಾರಥಾನ್ ಚರ್ಚೆಗಳ ನಂತರ ಅಂಗೀಕರಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಶನಿವಾರ ವಕ್ಫ್ ಮಸೂದೆಗೆ ತಮ್ಮ ಒಪ್ಪಿಗೆ ನೀಡಿದ್ದಾರೆ.

ನವದೆಹಲಿ, ಏಪ್ರಿಲ್ 9: ಸಂಸತ್ತಿನ ಎರಡೂ ಸದನಗಳು ವಕ್ಫ್ ತಿದ್ದುಪಡಿ ಕಾಯ್ದೆಯನ್ನು (Waqf Amendment Bill) ಅಂಗೀಕರಿಸಿದ ಕೆಲವು ದಿನಗಳ ನಂತರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ಯಾವುದೇ ಕಾರಣಕ್ಕೆ ಬಂಗಾಳದಲ್ಲಿ ಜಾರಿಗೆ ತರುವುದಿಲ್ಲ ಎಂದು ಘೋಷಿಸಿದ್ದಾರೆ. ಇಂದು ಕೊಲ್ಕತ್ತಾದಲ್ಲಿ ಜೈನ ಸಮುದಾಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರು ಮತ್ತು ಅವರ ಆಸ್ತಿಯನ್ನು ರಕ್ಷಿಸುವ ತಮ್ಮ ಬದ್ಧತೆಯನ್ನು ಪ್ರತಿಪಾದಿಸಿದ್ದಾರೆ. ಯಾವುದೇ ಕಾರಣಕ್ಕೂ ಬಂಗಾಳದಲ್ಲಿ ವಕ್ಫ್ ಕಾಯ್ದೆಯನ್ನು ಜಾರಿಗೊಳಿಸಲು ಬಿಡುವುದಿಲ್ಲ ಎಂದಿದ್ದಾರೆ.
“ನನ್ನ ಆಸ್ತಿಯನ್ನು ತೆಗೆದುಕೊಳ್ಳುವ ಹಕ್ಕು ಯಾರಿಗೂ ಇಲ್ಲದಿದ್ದರೆ, ಬೇರೆಯವರ ಆಸ್ತಿಯನ್ನು ಕಸಿದುಕೊಳ್ಳಲು ನಾನು ಬಿಡಲು ಸಾಧ್ಯವಿಲ್ಲ. ನಾವು 30% ಮುಸ್ಲಿಮರನ್ನು ಕರೆದುಕೊಂಡು ಹೋಗಬೇಕು. ಆದರೆ, ದೀದಿ ನಿಮ್ಮ ಆಸ್ತಿಯನ್ನು ರಕ್ಷಿಸುತ್ತಾರೆ” ಎಂದು ಮಮತಾ ಬ್ಯಾನರ್ಜಿ ಬಂಗಾಳದ ಜನರಿಗೆ ಭರವಸೆ ನೀಡಿದ್ದಾರೆ. ಸಂಸತ್ತಿನ ಎರಡೂ ಸದನಗಳಲ್ಲಿ ಮ್ಯಾರಥಾನ್ ಚರ್ಚೆಗಳ ನಂತರ ಗುರುವಾರ ಲೋಕಸಭೆ ಮತ್ತು ಶುಕ್ರವಾರದ ಮುಂಜಾನೆ ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಶನಿವಾರ ಮಸೂದೆಗೆ ತಮ್ಮ ಒಪ್ಪಿಗೆ ನೀಡಿದರು.
ಇದನ್ನೂ ಓದಿ: ಮುಖೇಶ್ ಅಂಬಾನಿಯ 15,000 ಕೋಟಿ ಮೌಲ್ಯದ ವಿಶ್ವದ ಐಷಾರಾಮಿ ಬಂಗಲೆಗೆ ವಕ್ಫ್ ಕಂಟಕ?
“ನಾನು ಎಲ್ಲಾ ಧರ್ಮಗಳ ಸ್ಥಳಗಳಿಗೆ ಏಕೆ ಭೇಟಿ ನೀಡುತ್ತೇನೆ ಎಂದು ಕೆಲವರು ಕೇಳುತ್ತಾರೆ. ನನ್ನ ಜೀವನದುದ್ದಕ್ಕೂ ನಾನು ಅದನ್ನು ಮುಂದುವರಿಸುತ್ತೇನೆ ಎಂದು ನಾನು ಹೇಳುತ್ತೇನೆ. ನೀವು ನನ್ನನ್ನು ಗುಂಡಿಕ್ಕಿ ಕೊಂದರೂ, ನೀವು ನನ್ನನ್ನು ಏಕತೆಯಿಂದ ಬೇರ್ಪಡಿಸಲು ಸಾಧ್ಯವಾಗುವುದಿಲ್ಲ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
“ವಕ್ಫ್ ಕಾಯ್ದೆ ಜಾರಿಗೆ ಬಂದಿರುವುದರಿಂದ ನೀವು ನೊಂದಿದ್ದೀರಿ ಎಂದು ನನಗೆ ತಿಳಿದಿದೆ. ನನ್ನ ಮೇಲೆ ನಂಬಿಕೆಯಿಡಿ, ಬಂಗಾಳದಲ್ಲಿ ಒಡೆದು ಆಳುವಂತಹ ಏನೂ ಆಗುವುದಿಲ್ಲ. ಎಲ್ಲರೂ ಒಟ್ಟಿಗೆ ಇರಬೇಕು ಎಂಬ ಸಂದೇಶವನ್ನು ನೀವು ರವಾನಿಸುತ್ತೀರಿ” ಎಂದು ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇದನ್ನೂ ಓದಿ: ಬಂಗಾಳದ ಮುರ್ಷಿದಾಬಾದ್‌ನಲ್ಲಿ ವಕ್ಫ್ ಮಸೂದೆ ಹಿಂಪಡೆಯಲು ಒತ್ತಾಯಿಸಿ ಭುಗಿಲೆದ್ದ ಹಿಂಸಾಚಾರ
“ಯಾರಾದರೂ ನಿಮ್ಮನ್ನು ರಾಜಕೀಯವಾಗಿ ಸಭೆ ಸೇರುವಂತೆ ಪ್ರಚೋದಿಸಿದರೆ, ದಯವಿಟ್ಟು ಹಾಗೆ ಮಾಡಬೇಡಿ. ನಾವು ಒಟ್ಟಿಗೆ ಇದ್ದರೆ ಜಗತ್ತನ್ನೇ ಗೆಲ್ಲಬಹುದು. ಬಾಂಗ್ಲಾದೇಶದ ಗಡಿ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ನೋಡಿ. ಈ ಸಮಯದಲ್ಲಿ ಈ ಮಸೂದೆಯನ್ನು ಅಂಗೀಕರಿಸಬಾರದಿತ್ತು. ಬಂಗಾಳದಲ್ಲಿ ಶೇ. 33ರಷ್ಟು ಅಲ್ಪಸಂಖ್ಯಾತರಿದ್ದಾರೆ. ಅವರಿಗೆ ನಾನು ಏನು ಮಾಡಬೇಕು?” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ