ಯೂನಸ್ ಸರ್ಕಾರಕ್ಕೆ ಮೋದಿ ಶಾಕ್; ಬಾಂಗ್ಲಾದೇಶದ ಟ್ರಾನ್ಸ್‌ಶಿಪ್‌ಮೆಂಟ್ ಸೌಲಭ್ಯ ರದ್ದುಗೊಳಿಸಿದ ಭಾರತ
ಇತ್ತೀಚೆಗೆ ಚೀನಾಕ್ಕೆ ಭೇಟಿ ನೀಡಿದ್ದ ಬಾಂಗ್ಲಾದೇಶ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್, ಚೀನಾ ದೇಶವನ್ನು ಓಲೈಸುವ ಸಲುವಾಗಿ ಭಾರತದ ಹೆಸರನ್ನು ಪ್ರಸ್ತಾಪಿಸಿದ್ದರು. ಈಶಾನ್ಯ ಭಾರತವು ಭೂಪ್ರದೇಶದಿಂದ ಆವೃತವಾಗಿರುವುದರಿಂದ ಬಾಂಗ್ಲಾದೇಶವೇ ಈ ಎಲ್ಲಾ ಪ್ರದೇಶಗಳಿಗೆ ಸಾಗರದ ಏಕೈಕ ರಕ್ಷಕ. ಭಾರತದ ಈಶಾನ್ಯ ಭಾಗದ ರಾಜ್ಯಗಳು ಬಾಂಗ್ಲಾದೇಶದಿಂದ ಸುತ್ತುವರೆದಿದೆ. ಈ ಭಾಗದಲ್ಲಿ ಚೀನಾ ತನ್ನ ಪ್ರಭಾವ ವಿಸ್ತರಿಸಬೇಕು ಎಂದು ಹೇಳಿದ್ದರು. ಇದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಇದೀಗ ತನ್ನ ರಾಜ್ಯದ ಭೂಪ್ರದೇಶದ ಬಗ್ಗೆ ಮಾತನಾಡಿದ್ದ ಬಾಂಗ್ಲಾದೇಶ ಸರ್ಕಾರಕ್ಕೆ ತಿರುಗೇಟು ನೀಡಿರುವ ಭಾರತ ನಮ್ಮ ದೇಶದ ಭೂಪ್ರದೇಶದ ಮೂಲಕ ಬಾಂಗ್ಲಾದೇಶದ ರಫ್ತು ಸರಕುಗಳಿಗೆ ಅವಕಾಶ ನೀಡಲಾಗಿದ್ದ ಟ್ರಾನ್ಸ್‌ಶಿಪ್‌ಮೆಂಟ್ ಸೌಲಭ್ಯವನ್ನು ರದ್ದುಗೊಳಿಸಿದೆ.

ನವದೆಹಲಿ, ಏಪ್ರಿಲ್ 9: ಬಾಂಗ್ಲಾದೇಶದ ಉಚ್ಛಾಟಿತ ಮಾಜಿ ಪ್ರಧಾನಿ ಶೇಖ್ ಹಸೀನಾ ಬಾಂಗ್ಲಾದಿಂದ ಪಲಾಯನಗೊಂಡು ದೆಹಲಿಯಲ್ಲಿ ಆಶ್ರಯ ಪಡೆದ ನಂತರ ಬಾಂಗ್ಲಾದೇಶ (Bangladesh) ಮತ್ತು ಭಾರತದ ಸಂಬಂಧ ಮತ್ತಷ್ಟು ಹಳಸಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆಗಿನಿಂದ ಬಾಂಗ್ಲಾದೇಶ ಭಾರತದ ವಿರುದ್ಧ ಒಂದಿಲ್ಲೊಂದು ಕಾರಣಕ್ಕೆ ಕತ್ತಿ ಮಸೆಯುತ್ತಲೇ ಇದೆ. ಮಾರ್ಚ್ ಅಂತ್ಯದಲ್ಲಿ ಚೀನಾ ಪ್ರವಾಸ ಕೈಗೊಂಡಿದ್ದ ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮಹಮ್ಮದ್ ಯೂನಸ್ (Muhammad Yunus) ವಿನಾಕಾರಣ ಭಾರತದ ವಿರುದ್ಧ ಹೇಳಿಕೆ ನೀಡಿದ್ದರು. ಭಾರತದ ಈಶಾನ್ಯ ಭಾಗದಲ್ಲಿರುವ 7 ರಾಜ್ಯಗಳು ಬಾಂಗ್ಲಾದೇಶದಿಂದಲೇ ಸುತ್ತುವರೆದಿವೆ. ಆ ಭಾಗದಲ್ಲಿ ಚೀನಾ ತನ್ನ ಪ್ರಭಾವ ವಿಸ್ತರಿಸಬೇಕೆಂಬುದು ನಮ್ಮ ಬಯಕೆ ಎಂದು ಅವರು ಹೇಳಿಕೆ ನೀಡಿ ಚೀನಾದ ಓಲೈಕೆಗೆ ಯತ್ನಿಸಿದ್ದರು. ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದ ಭಾರತ ಇದೀಗ ಬಾಂಗ್ಲಾದೇಶಕ್ಕೆ ತಕ್ಕ ಉತ್ತರ ನೀಡಿದೆ. ಬಾಂಗ್ಲಾದೇಶದಿಂದ ರಫ್ತು ಸರಕುಗಳಿಗೆ ಟ್ರಾನ್ಸ್‌ಶಿಪ್‌ಮೆಂಟ್ ಸೌಲಭ್ಯಗಳನ್ನು ಭಾರತ ರದ್ದುಗೊಳಿಸಿದೆ.
ಬಾಂಗ್ಲಾದೇಶದ ಮಧ್ಯಂತರ ನಾಯಕ ಮುಹಮ್ಮದ್ ಯೂನಸ್ ಭಾರತದ ಈಶಾನ್ಯ ರಾಜ್ಯಗಳಿಗೆ ಚೀನಾದ ಆರ್ಥಿಕ ಪ್ರವೇಶವನ್ನು ಪ್ರತಿಪಾದಿಸಿದ ಕೆಲವು ದಿನಗಳ ನಂತರ, ಭಾರತವು ತನ್ನ ಪ್ರದೇಶದ ಮೂಲಕ ಬಾಂಗ್ಲಾದೇಶದ ರಫ್ತಿಗೆ ಪ್ರಮುಖ ಸಾರಿಗೆ ಸೌಲಭ್ಯವನ್ನು ರದ್ದುಗೊಳಿಸಿದೆ. ಬಾಂಗ್ಲಾದೇಶಕ್ಕೆ ನೀಡಲಾದ ನಿರ್ಣಾಯಕ ಟ್ರಾನ್ಸ್‌ಶಿಪ್‌ಮೆಂಟ್ ಸೌಲಭ್ಯವನ್ನು ಸರ್ಕಾರ ರದ್ದುಗೊಳಿಸಿದೆ. ಭಾರತ ಬಾಂಗ್ಲಾದೇಶದ ರಫ್ತು ಸರಕುಗಳನ್ನು ಭಾರತೀಯ ಭೂ ಕಸ್ಟಮ್ಸ್ ಸ್ಟೇಷನ್‌ಗಳು (LCS ಗಳು), ಬಂದರುಗಳು ಮತ್ತು ವಿಮಾನ ನಿಲ್ದಾಣಗಳ ಮೂಲಕ ಮೂರನೇ ದೇಶಗಳಿಗೆ ಸಾಗಿಸಲು ಅವಕಾಶ ಮಾಡಿಕೊಟ್ಟಿತ್ತು. ಇದೀಗ ಭಾರತ ಆ ಸೌಲಭ್ಯವನ್ನು ರದ್ದುಪಡಿಸುವ ಮೂಲಕ ಬಾಂಗ್ಲಾದೇಶ ಸರ್ಕಾರಕ್ಕೆ ದೊಡ್ಡ ಶಾಕ್ ನೀಡಿದೆ.
ಇದನ್ನೂ ಓದಿ: ಚೀನಾ ಸೆಳೆಯುವ ಪ್ರಯತ್ನದಲ್ಲಿ ಭಾರತದ ವೈರತ್ವ ಕಟ್ಟಿಕೊಂಡ್ರಾ ಯೂನಸ್?
ಜೂನ್ 2020ರಲ್ಲಿ ಪರಿಚಯಿಸಲಾದ ಈ ಸೌಲಭ್ಯವು ನೇಪಾಳ, ಭೂತಾನ್ ಮತ್ತು ಮ್ಯಾನ್ಮಾರ್‌ನಂತಹ ರಾಷ್ಟ್ರಗಳಿಗೆ ಭಾರತದ ಮೂಲಕ ಬಾಂಗ್ಲಾದೇಶದ ಸರಕುಗಳ ರಫ್ತಿಗೆ ಸುಗಮ ಮಾರ್ಗವನ್ನು ಒದಗಿಸಿತ್ತು. ಇದೀಗ ಏಪ್ರಿಲ್ 8ರಂದು ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (CBIC) ಹೊರಡಿಸಿದ ಸುತ್ತೋಲೆಯ ಮೂಲಕ ಈ ನಿರ್ಧಾರವನ್ನು ಅಧಿಕೃತಗೊಳಿಸಲಾಗಿದೆ.
“ಬಾಂಗ್ಲಾದೇಶದಿಂದ ಮೂರನೇ ದೇಶಗಳಿಗೆ ರಫ್ತು ಸರಕುಗಳನ್ನು ಭೂ ಕಸ್ಟಮ್ಸ್ ಸ್ಟೇಷನ್‌ಗಳು (LCS ಗಳು) ಮೂಲಕ ಬಂದರುಗಳು ಅಥವಾ ವಿಮಾನ ನಿಲ್ದಾಣಗಳಿಗೆ ಕಂಟೇನರ್‌ಗಳು ಅಥವಾ ಮುಚ್ಚಿದ ಟ್ರಕ್‌ಗಳಲ್ಲಿ ಸಾಗಿಸುವುದನ್ನು ರದ್ದುಗೊಳಿಸಲಾಗಿದೆ” ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಹೀಗಾಗಿ, ಇನ್ನುಮುಂದೆ ಬಾಂಗ್ಲಾದೇಶದ ಸರಕುಗಳು ಭಾರತದ ಭೂಪ್ರದೇಶ ಅಥವಾ ಸಮುದ್ರಮಾರ್ಗವಾಗಿ ಬೇರೆ ದೇಶಗಳಿಗೆ ರಫ್ತಾಗುವಂತಿಲ್ಲ.
ಇದನ್ನೂ ಓದಿ: ಭಾರತಕ್ಕೆ ಇನ್ನುಮುಂದೆ ಬಾಂಗ್ಲಾದವರು ಅಕ್ರಮವಾಗಿ ನುಸುಳಿದ್ರೆ ಏನಾಗುತ್ತೆ?
ವ್ಯಾಪಾರ ತಜ್ಞರ ಪ್ರಕಾರ, ಬಾಂಗ್ಲಾದೇಶಕ್ಕೆ ನೀಡಲಾಗಿದ್ದ ಈ ಸೌಲಭ್ಯವನ್ನು ರದ್ದುಗೊಳಿಸುವುದರಿಂದ ಜವಳಿ, ಪಾದರಕ್ಷೆಗಳು ಮತ್ತು ರತ್ನಗಳು ಮತ್ತು ಆಭರಣಗಳು ಸೇರಿದಂತೆ ಹಲವಾರು ಭಾರತೀಯ ರಫ್ತು ವಲಯಗಳಿಗೆ ಪ್ರಯೋಜನವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ವಲಯಗಳಲ್ಲಿ ಬಾಂಗ್ಲಾದೇಶವು ಭಾರತಕ್ಕೆ ಪ್ರತಿಸ್ಪರ್ಧಿಯಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ