ಅಧಿಕಾರಕ್ಕೆ ಬಂದರೆ ಶೇ.50ರ ಮೀಸಲಾತಿ ಮಿತಿ ರದ್ದು; ಅಹಮದಾಬಾದ್‌ನ ಕಾಂಗ್ರೆಸ್ ಸಮಾವೇಶದಲ್ಲಿ ರಾಹುಲ್ ಗಾಂಧಿ
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ಜಾತಿ ಆಧಾರಿತ ಜನಗಣತಿಗೆ ತಮ್ಮ ನಿರ್ಧಾರವನ್ನು ಪುನರುಚ್ಚರಿಸಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಶೇ. 50ರಷ್ಟು ಮೀಸಲಾತಿ ಮಿತಿಯ ಗೋಡೆಯನ್ನು ಮುರಿಯುತ್ತದೆ ಎಂದು ಘೋಷಿಸಿದರು. ಅಹಮದಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಮಹಾತ್ಮ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾದರು. 150 ವರ್ಷಗಳ ಹಿಂದೆ ಸರ್ದಾರ್ ವಲ್ಲಭಭಾಯಿ ಪಟೇಲ್ ಜನಿಸಿದರು. ಈ ಇಬ್ಬರು ಮಹಾನ್ ನಾಯಕರು ಕಾಂಗ್ರೆಸ್ ಪಕ್ಷದ ಅಡಿಪಾಯ ಎಂದು ಹೇಳಿದ್ದಾರೆ.

ಅಹಮದಾಬಾದ್, ಏಪ್ರಿಲ್ 9: ನಾವು ಅಧಿಕಾರಕ್ಕೆ ಬಂದರೆ ಶೇ.50ರ ಮೀಸಲಾತಿ ಮಿತಿಯನ್ನು ರದ್ದುಗೊಳಿಸುತ್ತೇವೆ. ನಾವು ಅಧಿಕಾರಕ್ಕೆ ಬಂದ್ರೆ ಜಾತಿ ಜನಗಣತಿ ಬಗ್ಗೆ ಹೊಸ ಕಾನೂನು ತರುತ್ತೇವೆ. ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ (BJP) ಹೇಗೆ ಗೆದ್ದಿದೆ ಎಂಬುದು ಯಾರಿಗೂ ಗೊತ್ತಿಲ್ಲ. ನಾವು ಮತದಾರರ ಪಟ್ಟಿ ಕೇಳಿದರೆ ಚುನಾವಣಾ ಆಯೋಗದವರು (Election Commission) ಕೊಟ್ಟಿಲ್ಲ. ಮುಂಬರುವ ಬಿಹಾರ ಚುನಾವಣೆಯುಲ್ಲಿ ನಾವು ಏನೆಂದು ತೋರಿಸುತ್ತೇವೆ ಎಂದು ಅಹಮದಾಬಾದ್‌ನ ಎಐಸಿಸಿ ಅಧಿವೇಶನದಲ್ಲಿ ರಾಹುಲ್ ಗಾಂಧಿ (Rahul Gandhi) ಹೇಳಿಕೆ ನೀಡಿದ್ದಾರೆ.
ವಕ್ಫ್ ಬಿಲ್ ಸಂವಿಧಾನಕ್ಕೆ ವಿರುದ್ಧವಾಗಿದೆ. ವಕ್ಫ್ ಮಸೂದೆ ಇದು ಸಂವಿಧಾನದ ಮೇಲಿನ ದಾಳಿಯಾಗಿದೆ. ಕಾಂಗ್ರೆಸ್ ಖಂಡಿತವಾಗಿಯೂ ಆರ್‌ಎಸ್‌ಎಸ್, ಬಿಜೆಪಿಯನ್ನು ಸೋಲಿಸಲಿದೆ. ಗಾಂಧೀಜಿ ಹಾಗೂ ಆರ್‌ಎಸ್‌ಎಸ್ ವಿಚಾರಧಾರೆಯಲ್ಲಿ ವ್ಯತ್ಯಾಸ ಇದೆ. ಭಾರತ ದೇಶದ ಎಲ್ಲ ಸಂಸ್ಥೆಗಳ ಮೇಲೆ ಬಿಜೆಪಿ ಆಕ್ರಮಣ ಮಾಡುತ್ತಿದೆ. ಅಗ್ನಿವೀರ್ ಯೋಧರಿಗೆ ಪಿಂಚಣಿ ವ್ಯವಸ್ಥೆ ಇಲ್ಲ. ನಾವು ಅಧಿಕಾರಕ್ಕೆ ಬಂದರೆ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೊಳಿಸುತ್ತೇವೆ.ಉದ್ಯಮಿಗಳಾದ ಅಂಬಾನಿ, ಅದಾನಿಗೆ ಎಲ್ಲ ಅನುಕೂಲ ಕಲ್ಪಿಸಿ ಕೊಡ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ನೂತನ ಮುಖ್ಯ ಚುನಾವಣಾ ಆಯುಕ್ತರ ಆಯ್ಕೆಯ ಮಧ್ಯರಾತ್ರಿ ನಿರ್ಧಾರ ಅಸಭ್ಯವಾದುದು; ರಾಹುಲ್ ಗಾಂಧಿ ಆಕ್ಷೇಪ
ಜಾತಿಗಣತಿ ಮಾಡಬೇಕು, ಆಗ ಯಾರು ಎಷ್ಟಿದ್ದಾರೆಂದು ತಿಳಿಯುತ್ತದೆ. ಜಾತಿಗಣತಿಯಿಂದ ಸಮುದಾಯದ ಜನಸಂಖ್ಯೆ ಎಷ್ಟಿದೆ ಗೊತ್ತಾಗಲಿದೆ. ಆದಿವಾಸಿಗಳು, ಅಲ್ಪಸಂಖ್ಯಾತರು ಎಷ್ಟಿದ್ದಾರೆಂದು ತಿಳಿಯಬೇಕಿದೆ. ಇಡೀ ದೇಶದಲ್ಲಿ ಜಾತಿಗಣತಿ ನಡೆಸಬೇಕಿದೆ ಎಂದ ರಾಹುಲ್ ಗಾಂಧಿ ಮಹಾರಾಷ್ಟ್ರದಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸಂವಿಧಾನವೇ ನಮ್ಮ ವಿಚಾರಧಾರೆ ಆಗಿದೆ. ಸಂವಿಧಾನದಲ್ಲಿ ಅಂಬೇಡ್ಕರ್, ಗಾಂಧೀಜಿ, ಕಬೀರ್ ವಿಚಾರಧಾರೆ ಇದೆ. ಆರ್ಎಸ್ಎಸ್ನವರು ಸಂವಿಧಾನದ ಪುಸ್ತಕವನ್ನೇ ಸುಟ್ಟು ಹಾಕಿದ್ದರು. ದೆಹಲಿಯಲ್ಲಿ ಸಂವಿಧಾನದ ಪುಸ್ತಕ ಸುಟ್ಟು ಹಾಕಿದ್ದರು ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
LIVE: Nyaypath – AICC Session | Ahmedabad, Gujarat https://t.co/8snXJNmtEM
— Rahul Gandhi (@RahulGandhi) April 9, 2025
ಇದನ್ನೂ ಓದಿ: ಚೀನಾ ವಶಪಡಿಸಿಕೊಂಡ ಭಾರತದ ಭೂಮಿಯ ಬಗ್ಗೆ ಮೌನವೇಕೆ?; ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಅವರನ್ನು ಟೀಕಿಸಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಮತ್ತು ಆರ್‌ಎಸ್‌ಎಸ್ ಜಾತಿ ಜನಗಣತಿಯನ್ನು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದು ಹೇಳಿದರು. “ಅವರು ವಾಸ್ತವವನ್ನು ಮರೆಮಾಡಲು ಬಯಸುತ್ತಾರೆ. ಆದರೆ ನೀವು ಅದನ್ನು ಎಷ್ಟೇ ಮರೆಮಾಡಿದರೂ, ನಾವು ಜಾತಿ ಜನಗಣತಿ ನಿರ್ಣಯವನ್ನು ಅಂಗೀಕರಿಸುತ್ತೇವೆ. ನಾವು ಅದನ್ನು ತೆಲಂಗಾಣದಲ್ಲಿ ಮಾಡಿದ್ದೇವೆ, ಈಗ ನಾವು ಅದನ್ನು ದೆಹಲಿ ಮತ್ತು ದೇಶಾದ್ಯಂತ ಮಾಡುತ್ತೇವೆ” ಎಂದು ರಾಹುಲ್ ಗಾಂಧಿ ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ