ಮಣಿಪುರ: ವ್ಯಕ್ತಿಯ ಶಿರಚ್ಛೇದ, ಹಲವು ಮನೆಗಳಿಗೆ ಬೆಂಕಿ ಹಚ್ಚಿದ ಗುಂಪು
ಮಣಿಪುರದ ಜಿರಿಬಾಮ್‌ನಲ್ಲಿ ಅಪರಿಚಿತ ದುಷ್ಕರ್ಮಿಗಳು ವ್ಯಕ್ತಿಯ ಶಿರಚ್ಛೇದ ಮಾಡಿದ್ದು ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಹೊಲದಿಂದ ಮನೆಗೆ ಬರುವಾಗ ದುಷ್ಕರ್ಮಿಗಳು ವ್ಯಕ್ತಿಯನ್ನು ಹಿಡಿದು ಥಳಿಸಿ, ಶಿರಚ್ಛೇದ ಮಾಡಿದ್ದಾರೆ, ದುಷ್ಕರ್ಮಿಗಳು ಯೆರಂಬುದು ಇನ್ನೂ ತಿಳಿದುಬಂದಿಲ್ಲ.
ಮಣಿಪುರದಲ್ಲಿ ದುಷ್ಕರ್ಮಿಗಳ ಅಟ್ಟಹಾಸ ಹೆಚ್ಚಿದೆ, ವ್ಯಕ್ತಿಯೊಬ್ಬರ ಶಿರಚ್ಛೇದ ಮಾಡಿರುವ ಘಟನೆ ವರದಿಯಾಗಿದೆ. ಬಲಿಯಾದವರನ್ನು ಸೋಬಾಮ್ ಶರತ್‌ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ. ಶರತ್‌ಕುಮಾರ್ ಅವರು ಲೀಶಾಬಿಥೋಲ್‌ನಲ್ಲಿರುವ ತಮ್ಮ ಮಗನ ಜಮೀನಿನಿಂದ ಹಿಂತಿರುಗುತ್ತಿದ್ದಾಗ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ.
ಪೊಲೀಸರ ಪ್ರಕಾರ, ಶರತ್‌ಕುಮಾರ್ ಮನೆಗೆ ಹೋಗುತ್ತಿದ್ದಾಗ ಖಾಸಿಯಾ ಪುಂಜಿ ಬಳಿ ಅಪರಿಚಿತ ದುಷ್ಕರ್ಮಿಗಳು ಅವರನ್ನು ಕಟ್ಟಿಹಾಕಿದ್ದಾರೆ. ಅವರ ಕುಟುಂಬ ಸದಸ್ಯರು ಜಿರಿಬಾಮ್ ಜಿಲ್ಲಾ ಪೊಲೀಸರಿಗೆ ತಕ್ಷಣ ಘಟನೆ ಕುರಿತು ಮಾಹಿತಿ ನೀಡಿದ್ದಾರೆ, ಪ್ರದೇಶದಲ್ಲಿ ಜಂಟಿ ಶೋಧ ಕಾರ್ಯಾಚರಣೆಯನ್ನು ನಡೆಸಲಾಯಿತು.
ಜಿರಿಬಾಮ್ ಪೊಲೀಸ್ ಠಾಣೆಯಿಂದ ಉತ್ತರಕ್ಕೆ ಸುಮಾರು 12 ಕಿಲೋಮೀಟರ್ ದೂರದಲ್ಲಿರುವ ಮುಲರ್ಗೋನ್ ಬಳಿ ಶರತ್‌ಕುಮಾರ್ ದೇಹವು ಪತ್ತೆಯಾಗಿತ್ತು.
ಮತ್ತಷ್ಟು ಓದಿ: ಮಣಿಪುರದಲ್ಲಿ ಮತ್ತೆ ಹಿಂಸಾಚಾರ, 3 ಜನ ಸಾವು
ಹತ್ಯೆಯ ಹಿಂದಿನ ಉದ್ದೇಶ ಮತ್ತು ದಾಳಿಕೋರರ ಗುರುತು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮೃತರ ಪತ್ನಿ ಸೋಬಾಮ್ ರೊಮೊಲಾ ಅವರು, ತಾನು ಮತ್ತು ತನ್ನ ಮಗ ತನ್ನ ಪತಿಗಿಂತ ಮುಂಚಿತವಾಗಿ ಜಮೀನಿನಿಂದ ಹಿಂತಿರುಗುತ್ತಿದ್ದಾಗ ಕುಕಿ ಸಮುದಾಯದ ಕೆಲವರು ಬಂದಿದ್ದರು ಎಂದು ಹೇಳಿದ್ದಾರೆ.
ಶರತ್‌ಕುಮಾರ್ ಅವರ ಫೋನ್ ಸ್ವಿಚ್ ಆಫ್ ಆಗಿರುವುದು ಕಂಡುಬಂದಿತ್ತು, ಬಳಿಕ ಮಗ ಹುಡುಕಾಟ ನಡೆಸಿದಾಗ ತಂದೆಯ ಬೈಕ್ ಹಾಗೂ ಚಪ್ಪಲಿಗಳು ಸಿಕ್ಕಿದ್ದವು ಎಂದು ಹೇಳಿದ್ದಾರೆ. ಕೋಪಗೊಂಡ ಗುಂಪೊಂದು ಸಮೀಪದ ಪ್ರದೇಶದಲ್ಲಿ ಕುಕಿ ಸಮುದಾಯಕ್ಕೆ ಸೇರಿದ ಮನೆಗಳಿಗೆ ಬೆಂಕಿ ಹಚ್ಚಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ