
ಮೀರತ್, ಅ.14: ದೇಶದಲ್ಲಿ ಭಾರೀ ಸದ್ದು ಮಾಡಿದ್ದ ಲಂಡನ್ನಿಂದ ವಾಪಸಾಗಿದ್ದ ತನ್ನ ಪತಿ ಸೌರಬ್ ರಜ್ಪೂತ್ ಅವರನ್ನು ಹತ್ಯೆ ಮಾಡಿ, ದೇಹದ ತುಂಡುಗಳನ್ನು ಪ್ಲಾಸ್ಟಿಕ್ ಡ್ರಮ್ನಲ್ಲಿ ಸಿಮೆಂಟ್ ಹಾಕಿ ಮುಚ್ಚಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೀರತ್ ಜಿಲ್ಲಾ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ. ಅಪರಾಧಿಗಳಾದ ಮುಸ್ಕಾನ್ ರಸ್ತೋಗಿ ಹಾಗೂ ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ದೋಷಿಗಳು ಎಂದು ಸೆಪ್ಟೆಂಬರ್ 30, 2026 ರಂದೇ ನ್ಯಾಯಾಲಯವು ತೀರ್ಪು ನೀಡಿತ್ತು. ಇದೀಗ ಬುಧವಾರ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ಅರವಿಂದ್ ಕುಮಾರ್ ಮಿಶ್ರಾ ಅವರು ಇಬ್ಬರಿಗೂ ಮರಣದಂಡನೆ ಹಾಗೂ ತಲಾ 20,000 ರೂಪಾಯಿ ದಂಡ ವಿಧಿಸಿ ಆದೇಶಿಸಿದ್ದಾರೆ.
ಸೌರಬ್ ರಜ್ಪೂತ್ ಅವರು ಲಂಡನ್ನಲ್ಲಿದ್ದ ತಮ್ಮ ಉದ್ಯೋಗವನ್ನು ತೊರೆದು ಫೆಬ್ರವರಿ 24, 2025 ರಂದು ಮೀರತ್ಗೆ ವಾಪಸಾಗಿದ್ದರು. ಮಾರ್ಚ್ 3 ರ ರಾತ್ರಿ ಸೌರಬ್ ತಮ್ಮ ತಾಯಿ ರೇಣು ದೇವಿ ಅವರ ಮನೆಯಿಂದ ಕೋಫ್ತಾ ಕರ್ರಿ ತಂದಿದ್ದರು. ಈ ವೇಳೆ ಊಟದಲ್ಲಿ ಮುಸ್ಕಾನ್ ನಿದ್ರೆ ಮಾತ್ರೆ ಬೆರೆಸಿದ್ದು, ಇದರಿಂದ ಸೌರಬ್ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣವೇ ಸಾಹಿಲ್ನನ್ನು ಮನೆಗೆ ಕರೆಸಿಕೊಂಡ ಮುಸ್ಕಾನ್ ಒಟ್ಟಾಗಿ ಈ ಕೃತ್ಯ ಎಸೆಗಿದ್ದಾರೆ. ಕೊಲೆಯ ಬಳಿಕ ಇಬ್ಬರೂ ಸೇರಿ ಬಾತ್ರೂಮ್ನಲ್ಲಿ ಶವವನ್ನು ತುಂಡರಿಸಿದ್ದಾರೆ. ಮೊದಲು ಬ್ರೀಫ್ಕೇಸ್ನಲ್ಲಿ ಶವ ತುಂಬಲು ಯತ್ನಿಸಿದರೂ ಹುಕ್ ಮುರಿದ ಕಾರಣ ಆ ಯೋಜನೆಯನ್ನು ಕೈಬಿಟ್ಟು, ನೀಲಿ ಬಣ್ಣದ ಪ್ಲಾಸ್ಟಿಕ್ ಡ್ರಮ್ನಲ್ಲಿ ಶವದ ತುಂಡುಗಳನ್ನು ಹಾಕಿ ಸಿಮೆಂಟ್ ತುಂಬಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದರು.
ಸೌರಬ್ ಅವರ ಸಹೋದರ ಬಬ್ಲು ಅವರು ಮಾರ್ಚ್ 18, 2025 ರಂದು ಬ್ರಹ್ಮಪುರಿ ಪೊಲೀಸ್ ಠಾಣೆಯಲ್ಲಿ ಮುಸ್ಕಾನ್ ಹಾಗೂ ಸಾಹಿಲ್ ಮೇಲೆ ಸಂಶಯ ವ್ಯಕ್ತಪಡಿಸಿ ನಾಪತ್ತೆ ದೂರು ದಾಖಲಿಸಿದ್ದರು. ತನಿಖೆಯ ವೇಳೆ ಮುಸ್ಕಾನ್ ನೀಡಿದ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ಮಾರ್ಚ್ 19 ರಂದು ಮನೆಯನ್ನು ಪರಿಶೋಧಿಸಿ, ನೀಲಿ ಡ್ರಮ್ ಅನ್ನು ಕತ್ತರಿಸಿ ಶವದಾವಶೇಷಗಳನ್ನು ವಶಪಡಿಸಿಕೊಂಡು ಇಬ್ಬರನ್ನೂ ಬಂಧಿಸಿದ್ದರು. ಪೊಲೀಸರು ಮೇ 12, 2025 ರಂದು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು.
ಇದನ್ನೂ ಓದಿ: ‘ಮೋದಿ ವಿರುದ್ಧ CJPಯ ಪ್ರತಿಭಟನೆಗೆ ಅಮೆರಿಕಾದ ದಾನಿಗಳಿಂದ ಹಣಕಾಸಿನ ನೆರವು’: ಗಾಯಕಿ ಮೇರಿ ಮಿಲ್ಬೆನ್ ಗಂಭೀರ ಆರೋಪ
ಶಿಕ್ಷೆ ಪ್ರಕಟಿಸುವ ಮುನ್ನ ನ್ಯಾಯಾಲಯವು ಇಬ್ಬರೂ ಅಪರಾಧಿಗಳಿಗೆ ಮಾತನಾಡಲು ಅವಕಾಶ ನೀಡಿತ್ತು. ಮುಸ್ಕಾನ್ ತನ್ನ ಇಬ್ಬರು ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ಕಣ್ಣೀರಿಟ್ಟರೆ, ಸಾಹಿಲ್ ಮೌನ ವಹಿಸಿದ್ದರು. ಮುಸ್ಕಾನ್ ಪೋಷಕರು ಕೂಡ ಪೊಲೀಸ್ ಮೂಲಕ ನ್ಯಾಯಾಲಯಕ್ಕೆ ಪತ್ರ ಬರೆದು, ತಾವು ತಮ್ಮ ಮಗಳೊಂದಿಗೆ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿರುವುದಾಗಿ ತಿಳಿಸಿ ಅತ್ಯಂತ ಕಠಿಣ ಶಿಕ್ಷೆ ವಿಧಿಸುವಂತೆ ಕೋರಿದ್ದರು. ಪ್ರತ್ಯಕ್ಷದರ್ಶಿಗಳಿಲ್ಲದ ಕಾರಣ, ಸರ್ಕಾರಿ ವಕೀಲ ಕೃಷ್ಣ ಕುಮಾರ್ ಚೌಬೆ ಅವರು ಅಪರಾಧಿಗಳ ವಿರುದ್ಧ ಸಿಕ್ಕ ಸಾಕ್ಷ್ಯಗಳು, ರಕ್ತದ ಕಲೆ ಇರುವ ಚಾಕುಗಳು, ಸಿಡಿಆರ್ ದಾಖಲೆಗಳು, ಮೊಬೈಲ್ ಟವರ್ ಲೊಕೇಶನ್ ಹಾಗೂ 22 ಸಾಕ್ಷಿಗಳ ಮಹತ್ವದ ಹೇಳಿಕೆಗಳನ್ನು ನ್ಯಾಯಾಲಯಕ್ಕೆ ಒದಗಿಸಿ ಪ್ರಬಲ ವಾದ ಮಂಡಿಸಿದ್ದರು.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:23 pm, Wed, 14 October 26