ವಿಡಿಯೋ ಶೂಟ್ ಮಾಡಿ, ಅಪ್‌ಲೋಡ್ ಮಾಡಿ; ಕೇಂದ್ರ ಸರ್ಕಾರದಿಂದ ‘ಜೆಮ್ಸ್ ಆಫ್ ಇಂಡಿಯಾ’ ಚಾಲೆಂಜ್​ಗೆ ಚಾಲನೆ

ಭಾರತ ದೇಶದ ಜಿಲ್ಲೆಗಳ ನೈಜ ಕಥೆಗಳು, ಸಂಸ್ಕೃತಿ ಮತ್ತು ಇತಿಹಾಸವನ್ನು ಡಿಜಿಟಲ್ ರೂಪದಲ್ಲಿ ಜಗತ್ತಿಗೆ ತಲುಪಿಸುವ ಉದ್ದೇಶದಿಂದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು 'ಜೆಮ್ಸ್ ಆಫ್ ಇಂಡಿಯಾ' ಚಾಲೆಂಜ್‌ನ ಪೈಲಟ್ ಹಂತಕ್ಕೆ ಅಧಿಕೃತ ಚಾಲನೆ ನೀಡಿದೆ. ತಳಮಟ್ಟದ ಹಾಗೂ ಗ್ರಾಮೀಣ ಭಾಗದ ಉದಯೋನ್ಮುಖ ಡಿಜಿಟಲ್ ಕಂಟೆಂಟ್ ಕ್ರಿಯೇಟರ್‌ಗಳನ್ನು ಗುರುತಿಸಿ, ಅವರಿಗೆ ಅಗತ್ಯವಾದ ಪ್ರೋತ್ಸಾಹ ನೀಡಲು ಈ ರಾಷ್ಟ್ರವ್ಯಾಪಿ ಅಭಿಯಾನವನ್ನು ರೂಪಿಸಲಾಗಿದೆ. ಈ ಸ್ಪರ್ಧೆಯನ್ನು ಕೇಂದ್ರ ಸರ್ಕಾರದ WAVES OTT ಅಡಿಯಲ್ಲಿ ಬರುವ MyWAVES ಪ್ಲಾಟ್‌ಫಾರ್ಮ್‌ನಲ್ಲಿ ಆಯೋಜಿಸಲಾಗುತ್ತಿದೆ.

ವಿಡಿಯೋ ಶೂಟ್ ಮಾಡಿ, ಅಪ್‌ಲೋಡ್ ಮಾಡಿ; ಕೇಂದ್ರ ಸರ್ಕಾರದಿಂದ ಜೆಮ್ಸ್ ಆಫ್ ಇಂಡಿಯಾ ಚಾಲೆಂಜ್​ಗೆ ಚಾಲನೆ
Gems Of India
Image Credit source: x

Updated on: Jul 21, 2026 | 4:39 PM

ಮುಖ್ಯಾಂಶಗಳು

  • ಗ್ರಾಮೀಣ ಭಾಗದ ಉದಯೋನ್ಮುಖ ಡಿಜಿಟಲ್ ಕಂಟೆಂಟ್ ಕ್ರಿಯೇಟರ್‌ಗಳನ್ನು ಗುರುತಿಸಲು ವಿಶೇಷ ಸ್ಪರ್ಧೆ
  • ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ಜೆಮ್ಸ್ ಆಫ್ ಇಂಡಿಯಾ ಚಾಲೆಂಜ್​ಗೆ ಚಾಲನೆ
  • ಏನಿದರ ನಿಯಮ? ಸ್ಪರ್ಧೆಗೆ ಅರ್ಹತೆಗಳೇನು?

ನವದೆಹಲಿ, ಜುಲೈ 21: ಭಾರತದ ತಳಮಟ್ಟದ ಹಾಗೂ ಪ್ರಾದೇಶಿಕ ಡಿಜಿಟಲ್ ಕಂಟೆಂಟ್ ಕ್ರಿಯೇಟರ್‌ಗಳು, ಯೂಟ್ಯೂಬರ್‌ಗಳು ಮತ್ತು ವ್ಲಾಗರ್‌ಗಳ ಪ್ರತಿಭೆಯನ್ನು ದೇಶದಾದ್ಯಂತ ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ‘ಜೆಮ್ಸ್ ಆಫ್ ಇಂಡಿಯಾ’ (Gems of India) ಚಾಲೆಂಜ್‌ಗೆ ಚಾಲನೆ ನೀಡಿದೆ. ದೇಶದ ಸಾಮಾನ್ಯ ಜನರ ಅಪೂರ್ವ ಕಥೆಗಳು, ಸ್ಥಳೀಯ ಸಂಸ್ಕೃತಿ, ಕಲೆ ಮತ್ತು ಸೃಜನಶೀಲತೆಯನ್ನು ಡಿಜಿಟಲ್ ವೇದಿಕೆಯ ಮೂಲಕ ಜಗತ್ತಿಗೆ ಪರಿಚಯಿಸಲು ಈ ಅಭಿಯಾನವನ್ನು ರೂಪಿಸಲಾಗಿದೆ.

ಈ ಸ್ಪರ್ಧೆಯು ಕೇಂದ್ರ ಸರ್ಕಾರದ ಅಧಿಕೃತ ಡಿಜಿಟಲ್ ವೇದಿಕೆಯಾದ ‘MyWAVES’ ಆಪ್‌ನಲ್ಲಿ ನಡೆಯಲಿದೆ. ದೇಶದ ಮೂಲೆ ಮೂಲೆಯಲ್ಲಿರುವ ಉದಯೋನ್ಮುಖ ಕಂಟೆಂಟ್ ಕ್ರಿಯೇಟರ್‌ಗಳು ತಮ್ಮ ಮೊಬೈಲ್‌ಗಳಲ್ಲಿ ವಿಡಿಯೋಗಳನ್ನು ಚಿತ್ರೀಕರಿಸಿ, ಈ ಪ್ಲಾಟ್‌ಫಾರ್ಮ್‌ನಲ್ಲಿ ಅಪ್‌ಲೋಡ್ ಮಾಡುವ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಈ ಸ್ಪರ್ಧೆಯ ಉದ್ದೇಶವೇನು?:

“ಶೂಟ್ ಮಾಡಿ, ಅಪ್‌ಲೋಡ್ ಮಾಡಿ, ಮಿಂಚಿರಿ” (Shoot, Upload, Shine) ಎಂಬ ಶೀರ್ಷಿಕೆಯಡಿ ಆರಂಭವಾಗಿರುವ ಈ ಚಾಲೆಂಜ್ ಯುವಜನರು ಹಾಗೂ ಗ್ರಾಮೀಣ ಭಾಗದ ಪ್ರತಿಭಾವಂತರಿಗೆ ತಮ್ಮ ಕಲಾತ್ಮಕ ಸೃಜನಶೀಲತೆಯನ್ನು ಪ್ರದರ್ಶಿಸಲು ಮತ್ತು ರಾಷ್ಟ್ರೀಯ ಮಟ್ಟದ ಗುರುತಿಸುವಿಕೆ ಪಡೆಯಲು ಉತ್ತಮ ಅವಕಾಶ ಕಲ್ಪಿಸಿದೆ.

ಆಗಸ್ಟ್ 1ರಿಂದ ಉಚಿತ ಪ್ರವೇಶ ಆರಂಭ:

ಅರ್ಜಿ ಸಲ್ಲಿಕೆ ದಿನಾಂಕ: ಈ ‘ಜೆಮ್ಸ್ ಆಫ್ ಇಂಡಿಯಾ’ ಚಾಲೆಂಜ್‌ನಲ್ಲಿ ಭಾಗವಹಿಸಲು ಆಗಸ್ಟ್ 1ರಿಂದ MyWAVES ಪ್ಲಾಟ್‌ಫಾರ್ಮ್‌ನಲ್ಲಿ ಪ್ರವೇಶ ಪಡೆಯಬಹುದು. ಕಿರುಚಿತ್ರ ತಯಾರಕರು, ವ್ಲಾಗರ್‌ಗಳು, ಸಾಂಸ್ಕೃತಿಕ ತಜ್ಞರು, ತಂತ್ರಜ್ಞಾನ ಮತ್ತು ಸಾಮಾಜಿಕ ವಿಚಾರಗಳ ಕುರಿತು ಕಂಟೆಂಟ್ ಮಾಡುವ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಈ ಸ್ಪರ್ಧೆ ಮುಕ್ತವಾಗಿದೆ.

ಇದನ್ನೂ ಓದಿ: ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ ವಿರುದ್ಧ ರಾಜ್ಯಪಾಲರಿಗೆ ದೂರು, ಏನಿದು ನೀತಿ ?

ಈ ಸ್ಪರ್ಧೆಯ ಥೀಮ್ ಏನು?:

ಈ ಚಾಲೆಂಜ್‌ನಲ್ಲಿ ಪ್ರಾದೇಶಿಕ ವೈವಿಧ್ಯತೆ, ಭಾರತೀಯ ಸಂಸ್ಕೃತಿ, ನಾವೀನ್ಯತೆ, ಸ್ಥಳೀಯ ಪ್ರವಾಸೋದ್ಯಮ ಮತ್ತು ಸಾಮಾಜಿಕ ಸುಧಾರಣೆಗಳಂತಹ ವಿವಿಧ ವಿಷಯಗಳ ಮೇಲೆ ನಿರ್ಮಿಸಲಾದ ಸ್ವತಂತ್ರ ಕಂಟೆಂಟ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಕಂಟೆಂಟ್ ಕ್ರಿಯೇಟರ್‌ಗಳು ತಮ್ಮ ಜಿಲ್ಲೆಗಳ ಸಂಸ್ಕೃತಿ, ಪರಂಪರೆ, ಪ್ರವಾಸೋದ್ಯಮ, ಸಂಪ್ರದಾಯಗಳು, ಇತಿಹಾಸ ಮತ್ತು ವಿಶಿಷ್ಟ ಸಾಧನೆಗಳನ್ನು ಬಿಂಬಿಸುವ 1ರಿಂದ 3 ನಿಮಿಷಗಳ ಕಿರು ವೀಡಿಯೊಗಳನ್ನು ಸಿದ್ಧಪಡಿಸಬೇಕಾಗುತ್ತದೆ.


ಆಯ್ಕೆಯಾಗುವ ಅತ್ಯುತ್ತಮ ಡಿಜಿಟಲ್ ಕ್ರಿಯೇಟರ್‌ಗಳಿಗೆ ಕೇಂದ್ರ ಸರ್ಕಾರದಿಂದ ಪುರಸ್ಕಾರ, ಪ್ರಮಾಣಪತ್ರ ಹಾಗೂ ರಾಷ್ಟ್ರೀಯ ಮಟ್ಟದ ದೊಡ್ಡ ವೇದಿಕೆಗಳಲ್ಲಿ ತಮ್ಮ ಕಂಟೆಂಟ್ ಅನ್ನು ಪ್ರದರ್ಶಿಸುವ ಅಪರೂಪದ ಅವಕಾಶ ಸಿಗಲಿದೆ. ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗಲಿದ್ದು, ಕನ್ನಡ ಸೇರಿದಂತೆ ವಿವಿಧ ಭಾರತೀಯ ಭಾಷೆಗಳ ಕ್ರಿಯೇಟರ್‌ಗಳು ಇದರಲ್ಲಿ ಪಾಲ್ಗೊಳ್ಳಬಹುದು.

ಈ ಯೋಜನೆಯನ್ನು ದೇಶಾದ್ಯಂತ ಜಾರಿಗೆ ತರುವ ಮುನ್ನ, ಪೈಲಟ್ ಹಂತವಾಗಿ ಮೊದಲು ಈ ಕೆಳಗಿನ 6 ಪ್ರದೇಶಗಳಲ್ಲಿ ಪ್ರಾರಂಭಿಸಲಾಗುತ್ತಿದೆ. ಅವುಗಳೆಂದರೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅರುಣಾಚಲ ಪ್ರದೇಶ, ಚಂಡೀಗಢ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ಡಿಯು, ಗೋವಾ, ಲಡಾಖ್.

ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ವೀಕ್ಷಿಸಲಾದ ಯೂಟ್ಯೂಬ್ ವಿಡಿಯೋ ಯಾವುದು ಗೊತ್ತೆ?

ಈ ಪೈಲಟ್ ಕಾರ್ಯಕ್ರಮವನ್ನು ಪ್ರಸಾರ ಭಾರತಿ ‘ಮೈ ಭಾರತ್’ ಹಾಗೂ ಆಯಾ ರಾಜ್ಯ ಸರ್ಕಾರಗಳು ಮತ್ತು ಜಿಲ್ಲಾಡಳಿತಗಳ ಸಹಯೋಗದೊಂದಿಗೆ ಜಾರಿಗೊಳಿಸಲಾಗುತ್ತಿದೆ. ಸ್ಥಳೀಯ ಸಾಂಸ್ಕೃತಿಕ ಮತ್ತು ಶಿಕ್ಷಣ ಸಂಸ್ಥೆಗಳು ಕಂಟೆಂಟ್ ಅಭಿವೃದ್ಧಿಗೆ ಸಹಾಯ ಮಾಡಲಿವೆ. ವಿಶೇಷವೆಂದರೆ, ಯೂಟ್ಯೂಬ್ ಮತ್ತು ಮೆಟಾ ಕೂಡ ಈ ಅಭಿಯಾನದೊಂದಿಗೆ ಕೈಜೋಡಿಸಿದ್ದು, ತಮ್ಮ ಡಿಜಿಟಲ್ ನೆಟ್‌ವರ್ಕ್‌ಗಳ ಮೂಲಕ ಈ ಸ್ಪರ್ಧೆಗೆ ವ್ಯಾಪಕ ಪ್ರಚಾರ ನೀಡಲಿವೆ.

ನಗದು ಬಹುಮಾನ ಎಷ್ಟು?:

ಸ್ಪರ್ಧಾಳುಗಳನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರವು ಭಾರಿ ನಗದು ಬಹುಮಾನಗಳನ್ನು ಘೋಷಿಸಿದೆ.

ಜಿಲ್ಲಾ ಹಂತ: ಪ್ರತಿ ಜಿಲ್ಲೆಯಲ್ಲಿ ಗರಿಷ್ಠ 20 ವಿಜೇತರಿಗೆ ತಲಾ 50,000 ರೂ. ನಗದು ಬಹುಮಾನ ನೀಡಲಾಗುವುದು.

ರಾಜ್ಯ ಹಂತ: ಭಾಗವಹಿಸುವ ಪ್ರತಿ ಜಿಲ್ಲೆಯಿಂದ ಒಬ್ಬ ಅತ್ಯುತ್ತಮ ಕ್ರಿಯೇಟರ್‌ಗೆ 2 ಲಕ್ಷ ರೂ. ಬಹುಮಾನ ನೀಡಲಾಗುವುದು.

ರಾಷ್ಟ್ರೀಯ ಹಂತ: ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವವರಿಗೆ 5 ಲಕ್ಷ ರೂ. ನಗದು ಬಹುಮಾನ ನೀಡಲಾಗುವುದು.

ಸಂಸ್ಕೃತಿ, ಪರಂಪರೆ, ಪ್ರವಾಸೋದ್ಯಮ, ಮಾಧ್ಯಮ ಮತ್ತು ಶಿಕ್ಷಣ ಕ್ಷೇತ್ರದ ತಜ್ಞರನ್ನು ಒಳಗೊಂಡ ಜಿಲ್ಲಾ ಮತ್ತು ರಾಜ್ಯ ಮಟ್ಟದ ತೀರ್ಪುಗಾರರ ಸಮಿತಿಗಳು ಈ ವೀಡಿಯೊಗಳನ್ನು ಮೌಲ್ಯಮಾಪನ ಮಾಡಲಿವೆ. ಪೈಲಟ್ ಹಂತದ ಯಶಸ್ಸಿನ ನಂತರ ಈ ಯೋಜನೆಯನ್ನು ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:37 pm, Tue, 21 July 26

Loading...
Unable to load recommendations.
Follow Us