Modi 3.0: ಸಚಿವ ಸ್ಥಾನಕ್ಕೆ ಮಿತ್ರಪಕ್ಷಗಳ ಬೇಡಿಕೆಯೇನು, ಮಂತ್ರಿಗಿರಿ ನೀಡಲು ಬಿಜೆಪಿ ಸೂತ್ರವೇನು? ಇಲ್ಲಿದೆ ವಿವರ

| Updated By: Ganapathi Sharma

Updated on: Jun 07, 2024 | 7:34 AM

ಈ ಹಿಂದಿನ 10 ವರ್ಷಗಳ ಅಧಿಕಾರಾವಧಿಯಲ್ಲಿ ಇಲ್ಲದ ಸವಾಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಗೆ ಈಗ ಎದುರಾಗಿದೆ. ಸಚಿವ ಸ್ಥಾನ ಹಂಚಿಕೆಯಲ್ಲಿ ಮಿತ್ರಕ್ಷಗಳ ಬೇಡಿಕೆ ಈಡೇರಿಸಬೇಕಾಗಿದೆ. ಹಾಗಾದರೆ, ಮಿತ್ರಪಕ್ಷಗಳ ಬೇಡಿಕೆ ಏನು? ಅದಕ್ಕೆ ಬಿಜೆಪಿಯ ಭರವಸೆ ಏನು? ಸಚಿವ ಸ್ಥಾನ ಹಂಚಿಕೆಗೆ ಬಿಜೆಪಿ ಹೆಣೆದಿರುವ ಸೂತ್ರವೇನು? ಎಲ್ಲ ವಿವರ ಇಲ್ಲಿದೆ.

Modi 3.0: ಸಚಿವ ಸ್ಥಾನಕ್ಕೆ ಮಿತ್ರಪಕ್ಷಗಳ ಬೇಡಿಕೆಯೇನು, ಮಂತ್ರಿಗಿರಿ ನೀಡಲು ಬಿಜೆಪಿ ಸೂತ್ರವೇನು? ಇಲ್ಲಿದೆ ವಿವರ
ಸಚಿವ ಸ್ಥಾನಕ್ಕೆ ಮಿತ್ರಪಕ್ಷಗಳ ಬೇಡಿಕೆಯೇನು, ಮಂತ್ರಿಗಿರಿ ನೀಡಲು ಬಿಜೆಪಿ ಸೂತ್ರವೇನು?
Follow us on

ನವದೆಹಲಿ, ಜೂನ್ 7: ಕೇಂದ್ರದಲ್ಲಿ ನರೇಂದ್ರ ದಾಮೋದರ್ ದಾಸ್ ಮೋದಿ (Narendra Modi) ಯುಗ ಮತ್ತೆ ಶುರುವಾಗುತ್ತಿದೆ. ಮೋದಿ ಹ್ಯಾಟ್ರಿಕ್ ಆಡಳಿತಕ್ಕೆ ಕ್ಷಣಗಣನೆ ಶುರುವಾಗಿದೆ. ಇದಕ್ಕಾಗಿ ಸಮಯ ನಿಗದಿಯಾಗಿದ್ದು, ಜೂನ್ 9ರ ಸಂಜೆ 6 ಗಂಟೆಗೆ ಮೋದಿ ಪದಗ್ರಹಣ ನಡೆಯಲಿದೆ. ಮೋದಿ ಪ್ರಮಾಣವಚನಕ್ಕೆ ರಾಷ್ಟ್ರಪತಿ ಭವನದಲ್ಲಿ ಅಂತಿಮ ಸಿದ್ಧತೆಗಳು ನಡೆದಿವೆ. ದೆಹಲಿಯಲ್ಲಿ ಇಂದು ಎನ್‌ಡಿಎ (NDA) ಮಿತ್ರಪಕ್ಷಗಳ ಸಂಸದೀಯ ಸಭೆ ನಡೆಯದೆ. ಈ ಸಭೆಯಲ್ಲಿ ಎಲ್ಲವೂ ಅಂತಿಮಗೊಳ್ಳುವ ಸಾಧ್ಯತೆ ಇದೆ. ಸಭೆಯ ಬಳಿಕ ಎನ್‌ಡಿಎ ನಾಯಕರ ನಿಯೋಗ ರಾಷ್ಟ್ರಪತಿ ಭವನಕ್ಕೆ ತೆರಳಲಿದ್ದು, ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದೆ.

ಮೋದಿ ಮುಂದಿದೆ ಬೆಟ್ಟದಷ್ಟು ಸವಾಲು

ಕಳೆದ 10 ವರ್ಷ ಇಲ್ಲದ ಸವಾಲು ನರೇಂದ್ರ ಮೋದಿಗೆ ಈಗ ಎದುರಾಗಿದೆ. ಇಷ್ಟು ವರ್ಷ ಬಿಜೆಪಿಗೆ ಬಹುಮತವಿದ್ದ ಕಾರಣ, ನಿರ್ಧಾರಗಳನ್ನ ತೆಗೆದುಕೊಳ್ಳಲು ಯಾರನ್ನೂ ಕೇಳಬೇಕೆಂದಿರಲಿಲ್ಲ. ಆದರೆ ಈಗ ಮೈತ್ರಿ ಸರ್ಕಾರವಾದ ಕಾರಣ, ಮಿತ್ರಪಕ್ಷಗಳ ಮರ್ಜಿಗೆ ಬೀಳುವಂತಾಗಿದೆ. ಅದರಲ್ಲೂ ಸಚಿವ ಸ್ಥಾನ ಹಂಚಿಕೆಗೆ ಪ್ರಧಾನಿ ಮೋದಿಗೆ ದೊಡ್ಡ ಸವಾಲಾಗಿದೆ. ಟಿಡಿಪಿ, ಜೆಡಿಯು ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನದ ಜತೆಗೆ ಪ್ರಮುಖ ಖಾತೆಗಳಿಗೆ ಬೇಡಿಕೆ ಇಟ್ಟಿವೆ. ಎನ್‌ಡಿಎ ಮಿತ್ರಕೂಟದ ಸಣ್ಣಪುಟ್ಟ ಪಕ್ಷಗಳು ಡಿಮ್ಯಾಂಡ್ ಇಟ್ಟಿವೆ. ಇದೆಲ್ಲವನ್ನು ಸರಿದೂಗಿಸಲು ಬಿಜೆಪಿ 4:1 ಸೂತ್ರ ಹೆಣೆದಿದೆ.

ಏನಿದು ಬಿಜೆಪಿ 4:1 ಸೂತ್ರ?

ಎನ್‌ಡಿಎ ಮಿತ್ರ ಪಕ್ಷಗಳ ಸಚಿವ ಸ್ಥಾನದ ಬೇಡಿಕೆಗೆ ಬಿಜೆಪಿ ಸೂತ್ರ ಹೆಣೆದಿದೆ. ಪ್ರತಿ ನಾಲ್ಕು ಸಂಸದರಿಗೆ ಒಂದು ಸಚಿವ ಸ್ಥಾನ ನೀಡುವ ಭರವಸೆ ನೀಡಿದೆಯಂತೆ. ಈ ಪ್ರಕಾರ, 16 ಸಂಸದರನ್ನ ಹೊಂದಿರುವ ಟಿಡಿಪಿಗೆ 4 ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. 12 ಸಂಸದರನ್ನ ಹೊಂದಿರುವ ಜೆಡಿಯುಗೆ 3 ಸಚಿವ ಸ್ಥಾನ ಸಿಗಬಹುದು. ಟಿಡಿಪಿಗೆ ಸ್ಪೀಕರ್ ಸ್ಥಾನ ಕೊಡದಿರಲು ಬಿಜೆಪಿ ನಿರ್ಧಾರ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಹಾಗಾದ್ರೆ ಮಿತ್ರಪಕ್ಷಗಳು ಕೇಳ್ತಿರೋದೇನು? ಬಿಜೆಪಿ ಕೊಟ್ಟಿರೋ ಭರವಸೆ ಏನು ಎಂಬ ಮಾಹಿತಿ ಇಲ್ಲಿದೆ.

ಟಿಡಿಪಿ ಬೇಡಿಕೆಗಳೇನು? ಬಿಜೆಪಿ ಭರವಸೆಯೇನು?

ಚಂದ್ರಬಾಬು ನಾಯ್ಡು ಸ್ಪೀಕರ್ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದರೆ, ಸ್ಪೀಕರ್ ಸ್ಥಾನ ಬಿಟ್ಟುಕೊಡಲು ಒಪ್ಪದ ಬಿಜೆಪಿ, ಡೆಪ್ಯೂಟಿ ಸ್ಪೀಕರ್ ಸ್ಥಾನ ನೀಡೋದಾಗಿ ಭರವಸೆ ನೀಡಿದೆಯಂತೆ. ಹಾಗೆಯೇ ಮೂರು ಕ್ಯಾಬಿನೆಟ್ ದರ್ಜೆ ಮತ್ತು 2 ರಾಜ್ಯ ಖಾತೆಗೆ ನಾಯ್ಡು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಆದ್ರೆ, ಫಾರ್ಮುಲಾದಂತೆ 4 ಸ್ಥಚಿವ ಸ್ಥಾನ ನೀಡಲು ಬಿಜೆಪಿ ನಿರ್ಧಾರ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಟಿಡಿಪಿ, ಗ್ರಾಮೀಣಾಭಿವೃದ್ಧಿ ವಸತಿ ಖಾತೆ ಬೇಡಿಕೆ ಇಟ್ಟಿದ್ದರೆ, ಇದರ ಬದಲು ನಾಗರಿಕ ವಿಮಾನಯಾನ ಖಾತೆ ನೀಡೋದಾಗಿ ಬಿಜೆಪಿ ಹೇಳಿದೆಯಂತೆ. ಬಂದರು ಮತ್ತು ಹಡಗು ಖಾತೆ ಬೇಡಿಕೆ ಬದಲು, ಉಕ್ಕು ಖಾತೆ ನೀಡಲು ಬಿಜೆಪಿ ತಿಳಿಸಿದೆಯಂತೆ. ರಸ್ತೆ ಸಾರಿಗೆ, ಹೆದ್ದಾರಿ ಖಾತೆ ಬೇಡಿಕೆಯನ್ನೂ ಒಪ್ಪದ ಬಿಜೆಪಿ, ಇದರ ಬದಲು ಬೇರೆ ಎರಡು ಖಾತೆ ನೀಡುವ ಸಾಧ್ಯತೆ ಇದೆ.

ಜೆಡಿಯು ಬೇಡಿಕೆಗಳೇನು? ಬಿಜೆಪಿ ಭರವಸೆಯೇನು?

ಹಾಗೆಯೇ ನಿತೀಶ್ ಕುಮಾರ್‌ ನೇತೃತ್ವದ ಜೆಡಿಯು ಸಹ ಮೂರು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದೆ. ಅದರಂತೆ ಮೂರು ಸಚಿವ ಸ್ಥಾನ ಜೆಡಿಯುಗೆ ಸಿಗಬಹುದು. ಆದರೆ, ನಿತೀಶ್ ರೈಲ್ವೆ ಖಾತೆಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಬಿಜೆಪಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ನೀಡುವ ಸಾಧ್ಯತೆ ಇದೆ. ಇನ್ನೂ ಬಿಹಾರಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆ ಬಗ್ಗೆ ನಿರ್ಧಾರ ಏನು ಅನ್ನೋದು ಗೊತ್ತಾಗಿಲ್ಲ.

ಶಿವಸೇನೆ ಶಿಂಧೆ ಬೇಡಿಕೆ, ಬಿಜೆಪಿ ಭರವಸೆ?

ಏಕನಾಥ್ ಶಿಂಧೆ ಬಣದ ಶಿವಸೇನೆ 1 ಕ್ಯಾಬಿನೆಟ್ ಮತ್ತು 2 ರಾಜ್ಯಖಾತೆಗೆ ಬೇಡಿಕೆ ಇಟ್ಟಿದ್ದರೂ ಬೃಹತ್ ಕೈಗಾರಿಕೆ ಖಾತೆಯನ್ನು ಶಿವಸೇನೆಗೆ ನೀಡಲು ಬಿಜೆಪಿ ಭರವಸೆ ನೀಡಿದೆ ಎನ್ನಲಾಗುತ್ತಿದೆ.

ಇತರ ಮಿತ್ರಪಕ್ಷಗಳ ಬೇಡಿಕೆ

ಉಳಿದಂತೆ ಇತರ ಮಿತ್ರಪಕ್ಷಗಳ ನಾಯಕರಾದ ಚಿರಾಗ್ ಪಸ್ವಾನ್ ಒಂದು ಕ್ಯಾಬಿನೆಟ್ ಮತ್ತು ಒಂದು ರಾಜ್ಯಖಾತೆ, ಜೀತನ್ ರಾಮ್ ಮಾಂಝಿ ಕ್ಯಾಬಿನೆಟ್ ದರ್ಜೆ ಖಾತೆಗೆ ಡಿಮ್ಯಾಂಡ್ ಇಟ್ಟಿದ್ದಾರೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಜೂ.9ಕ್ಕೆ ಪ್ರಮಾಣ ವಚನ ಸ್ವೀಕಾರ

ಎನ್​ಡಿಎ ಮಿತ್ರರೆಲ್ಲಾ ಬಿಜೆಪಿ ಫಾರ್ಮುಲಾಕ್ಕೆ ಒಪ್ಪಿಕೊಳ್ಳುತ್ತಾರಾ? ಇಲ್ಲ ಪ್ರಬಲ ಖಾತೆಗೆ ಪಟ್ಟು ಹಿಡಿಯುತ್ತಾರಾ ಎಂಬುದು ಕುತೂಹಲ ಮೂಡಿಸಿದೆ. ಆದರೆ, ಬಿಜೆಪಿ ಮಾತ್ರ ಪ್ರಮುಖ ಖಾತೆ ಬಿಟ್ಟುಕೊಡದಿರಲು ನಿರ್ಧಾರ ಮಾಡಿದೆ ಎನ್ನಲಾಗಿದೆ.

ಪ್ರಮುಖ ಖಾತೆ ಬಿಡಲ್ವಾ ಬಿಜೆಪಿ?

ಪ್ರಮುಖ ಖಾತೆಗಳನ್ನ ತನ್ನಲ್ಲೇ ಉಳಿಸಿಕೊಳ್ಳಲು ಬಿಜೆಪಿ ಚಿಂತನೆ ನಡೆಸಿದೆ. ಹಣಕಾಸು, ಗೃಹ, ವಿದೇಶಾಂಗ, ರಕ್ಷಣಾ ಖಾತೆ ಬಿಟ್ಟುಕೊಡದಿರುವ ಬಿಜೆಪಿ ನಿರ್ಧಾರ ಮಾಡಿದೆ ಎನ್ನಲಾಗುತ್ತಿದೆ. ಹಾಗೆಯೇ ರೈಲ್ವೆ, ಸಾರಿಗೆ ಮೂಲಸೌಕರ್ಯ, ಸಮಾಜ ಕಲ್ಯಾಣ ಮತ್ತು ಕೃಷಿ ಖಾತೆಯೂ ಬಿಜೆಪಿಯೇ ಉಳಿಸಿಕೊಳ್ಳುವ ಸಾಧ್ಯತೆ ಇದೆ.

ಕೇಂದ್ರ ಸಂಪುಟದಲ್ಲಿ ಕರ್ನಾಟಕಕ್ಕೆ 2-3 ಸ್ಥಾನ ಸಾಧ್ಯತೆ

ಇದೆಲ್ಲದರ ಮಧ್ಯೆ ರಾಜ್ಯಕ್ಕೆ ಎರಡರಿಂದ ಮೂರು ಸ್ಥಾನ ಸಿಗುವ ಸಾಧ್ಯತೆ ಇದೆ. ಕುಮಾರಸ್ವಾಮಿಗೆ ಮಂತ್ರಿ ಸ್ಥಾನ ಸಿಗುವುದು ಬಹುತೇಕ ಪಕ್ಕಾ ಆಗಿದೆ. ಪ್ರಲ್ಹಾದ್ ಜೋಶಿ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಮುಂದುವರಿಯುವ ಸಾಧ್ಯತೆಯಿದೆ. ಉಳಿದಂತೆ ಬಿಜೆಪಿಯಲ್ಲಿ ಯಾರಿಗೆ ಮಂತ್ರಿ ಸ್ಥಾನ ನೀಡಲಾಗುತ್ತದೆ ಎಂಬುದೇ ಕುತೂಹಲದ ವಿಷಯವಾಗಿದೆ. ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಗದ್ದಿಗೌಡರ್, ಗೋವಿಂದ ಕಾರಜೋಳ, ಪಿ.ಮೋಹನ್, ಶೋಭಾ ಕರಂದ್ಲಾಜೆ, ಡಾ.ಸಿಎನ್.ಮಂಜುನಾಥ್ ಹೆಸರು ಕೂಡ ರೇಸ್‌ನಲ್ಲಿವೆ. ಹೀಗಾಗಿ ಬಿಜೆಪಿ ಹೈಕಮಾಂಡ್ ಯಾರಿಗೆ ಮಂತ್ರಿಗಿರಿ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ