
ನವದೆಹಲಿ, ಆಗಸ್ಟ್ 12: ನವದೆಹಲಿ: ವಿರೋಧ ಪಕ್ಷಗಳ ತೀವ್ರ ಪ್ರತಿಭಟನೆಯ ನಡುವೆಯೇ ಕೇಂದ್ರ ಸರ್ಕಾರವು ವಿವಾದಾತ್ಮಕ ‘ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ವಿಧೇಯಕ, 2026’ (FCRA) ಅನ್ನು ಜಂಟಿ ಸಂಸದೀಯ ಸಮಿತಿಗೆ (JPC) ರವಾನಿಸಿದೆ. ವಿಪಕ್ಷಗಳ ಗದ್ದಲದ ಮಧ್ಯೆಯೇ ಕೇಂದ್ರ ಗೃಹ ರಾಜ್ಯ ಸಚಿವ ನಿತ್ಯಾನಂದ್ ರೈ ಇಂದು (ಬುಧವಾರ) ಈ ಮಸೂದೆಯನ್ನು ಜೆಪಿಸಿಗೆ ಒಪ್ಪಿಸುವ ಪ್ರಸ್ತಾವನೆಯನ್ನು ಮಂಡಿಸಿದರು. ಲೋಕಸಭೆಯ ಪೂರಕ ಕಾರ್ಯಸೂಚಿಯಲ್ಲಿ ಎಫ್‌ಸಿಆರ್‌ಎ ಮಸೂದೆಯನ್ನು ಜೆಪಿಸಿಗೆ ರವಾನಿಸುವ ಪ್ರಸ್ತಾವನೆಯು ಗೃಹ ಸಚಿವ ಅಮಿತ್ ಶಾ ಅವರ ಹೆಸರಿನಲ್ಲಿ ಪಟ್ಟಿಯಾಗಿದ್ದರಿಂದ, ಸದನದಲ್ಲಿ ಅವರ ಗೈರುಹಾಜರಿಯನ್ನು ವಿರೋಧ ಪಕ್ಷಗಳು ಪ್ರಶ್ನಿಸಿದವು.
“ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ವಿಧೇಯಕ, 2026 ಅನ್ನು ಲೋಕಸಭೆಯ ಗೌರವಾನ್ವಿತ ಸ್ಪೀಕರ್ ಅವರಿಂದ ನಾಮನಿರ್ದೇಶನಗೊಳ್ಳುವ 21 ಸದಸ್ಯರು ಮತ್ತು ರಾಜ್ಯಸಭೆಯ ಸಭಾಪತಿಗಳಿಂದ ನಾಮನಿರ್ದೇಶನಗೊಳ್ಳುವ 10 ಸದಸ್ಯರನ್ನು ಒಳಗೊಂಡ ಉಭಯ ಸದನಗಳ ಜಂಟಿ ಸಮಿತಿಗೆ (JPC) ರವಾನಿಸಬೇಕು” ಎಂದು ಕಾರ್ಯಸೂಚಿಯ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.
VIDEO | Delhi: FCRA Bill sent to JPC amid Opposition protests.
(Source: Sansad TV)#Delhi #ParliamentSession pic.twitter.com/2eeFnpDq18
— Press Trust of India (@PTI_News) August 12, 2026
ಈ ಮಸೂದೆಯು ಎನ್‌ಜಿಒಗಳು ಮತ್ತು ಅಲ್ಪಸಂಖ್ಯಾತ ಸಂಸ್ಥೆಗಳನ್ನು ಗುರಿಯಾಗಿಸಿಕೊಳ್ಳುತ್ತದೆ ಎಂದು ಆರೋಪಿಸಿ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಕೇಂದ್ರ ಸರ್ಕಾರವು ಈ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ.
ಏನಿದು ಎಫ್‌ಸಿಆರ್‌ಎ (FCRA) ವಿಧೇಯಕ?:
ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ವಿಧೇಯಕ, 2026ರ ಪ್ರಕಾರ, ಯಾವುದೇ ಸಂಸ್ಥೆಯ ಎಫ್‌ಸಿಆರ್‌ಎ ನೋಂದಣಿ ರದ್ದಾದರೆ, ಹಿಂಪಡೆಯಲ್ಪಟ್ಟರೆ ಅಥವಾ ನವೀಕರಣಗೊಳ್ಳದೆ ಅವಧಿ ಮುಗಿದರೆ, ಆ ಸಂಸ್ಥೆಯು ವಿದೇಶಿ ಕೊಡುಗೆಯಿಂದ ಪಡೆದ ಧನಸಹಾಯ ಮತ್ತು ಆಸ್ತಿಗಳನ್ನು ವಶಕ್ಕೆ ಪಡೆಯಲು ಸರ್ಕಾರಕ್ಕೆ ಅಧಿಕಾರ ಸಿಗಲಿದೆ. ವಶಪಡಿಸಿಕೊಂಡ ಆಸ್ತಿಯು ಪ್ರಾರ್ಥನಾ ಮಂದಿರ ಅಥವಾ ಧಾರ್ಮಿಕ ಸ್ಥಳವಾಗಿದ್ದರೆ, ಆ ಸ್ಥಳದ ಧಾರ್ಮಿಕ ಸ್ವರೂಪಕ್ಕೆ ಧಕ್ಕೆಯಾಗದಂತೆ ಪ್ರಾಧಿಕಾರ ನೋಡಿಕೊಳ್ಳಬೇಕು ಎಂದು ವಿಧೇಯಕದಲ್ಲಿ ಹೇಳಲಾಗಿದೆ.
ಇದರೊಂದಿಗೆ, ಕಾಯ್ದೆ ಉಲ್ಲಂಘನೆಗೆ ವಿಧಿಸಲಾಗುತ್ತಿದ್ದ ಗರಿಷ್ಠ ಶಿಕ್ಷೆಯನ್ನು 5 ವರ್ಷಗಳ ಜೈಲು ಶಿಕ್ಷೆಯಿಂದ 1 ವರ್ಷಕ್ಕೆ ಕಡಿತಗೊಳಿಸಲು ಪ್ರಸ್ತಾವಿಸಲಾಗಿದೆ. ಅಧಿಕೃತ ಪೋರ್ಟಲ್ ಪ್ರಕಾರ, ಜುಲೈ 15, 2026ರ ವೇಳೆಗೆ ದೇಶದಲ್ಲಿ 14,449 ಸಕ್ರಿಯ ಎಫ್‌ಸಿಆರ್‌ಎ ಪ್ರಮಾಣಪತ್ರಗಳಿದ್ದು, 22,498 ರದ್ದುಗೊಂಡಿವೆ ಮತ್ತು 15,212 ಅವಧಿ ಮುಗಿದ ಸ್ಥಿತಿಯಲ್ಲಿವೆ.
ಇದನ್ನೂ ಓದಿ: ಎಫ್‌ಸಿಆರ್‌ಎ ತಿದ್ದುಪಡಿ ಮಸೂದೆ, ಸದ್ಯ ಭಾರತಕ್ಕೆ ಯಾಕೆ ಮುಖ್ಯ ಗೊತ್ತಾ? ಇಲ್ಲಿದೆ ವಿವಿಧ ಕಾರಣಗಳು
ಅಖಿಲೇಶ್ ಯಾದವ್ ಆಕ್ಷೇಪ:
“ಎಲ್ಲ ವಿರೋಧ ಪಕ್ಷಗಳು ಸರ್ಕಾರ ತರುತ್ತಿರುವ ಈ ಎಫ್‌ಸಿಆರ್‌ಎ ಮಸೂದೆಯನ್ನು ವಿರೋಧಿಸುತ್ತಿದೆ. ಸಚಿವರು ಈ ಮಸೂದೆ ಅಲ್ಪಸಂಖ್ಯಾತರ ವಿರುದ್ಧವಿಲ್ಲ ಎಂದು ಹೇಳುತ್ತಿದ್ದಾರೆ. ಇಲ್ಲಿಯವರೆಗೆ ಈ ಸರ್ಕಾರ ತಂದಿರುವ ಯಾವ ಮಸೂದೆಯು ಅಲ್ಪಸಂಖ್ಯಾತರ ವಿರುದ್ಧವಾಗಿರಲಿಲ್ಲ? ಎಂದು ನಾನು ಸಚಿವರನ್ನು ಕೇಳಲು ಬಯಸುತ್ತೇನೆ” ಎಂದು ಅಖಿಲೇಶ್ ಯಾದವ್ ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಕಿರಣ್ ರಿಜಿಜು ತಿರುಗೇಟು:
“ಅಲ್ಪಸಂಖ್ಯಾತರ ವಿರುದ್ಧವಾಗಿರುವ ಒಂದೇ ಒಂದು ಅಂಶವನ್ನು ಬೆಟ್ಟು ಮಾಡಿ ತೋರಿಸುವಂತೆ ನಾನು ಅಖಿಲೇಶ್ ಯಾದವ್ ಅವರಿಗೆ ಸವಾಲು ಹಾಕುತ್ತೇನೆ. ನೀವು ಕೇವಲ ಸದನದ ದಾರಿ ತಪ್ಪಿಸಲು ಯತ್ನಿಸುತ್ತಿದ್ದೀರಿ” ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ತಿರುಗೇಟು ನೀಡಿದರು. ಯಾವುದೇ ಕಾರಣಕ್ಕೂ ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ಪ್ರಶ್ನೆಯೇ ಇಲ್ಲ, ಮತ್ತು ದೇಶದಲ್ಲಿ ಯಾವುದೇ ಕಾನೂನು ಚೌಕಟ್ಟಿಲ್ಲದೆ ವಿದೇಶಿ ಹಣ ಹರಿದುಬರಲು ಬಿಡಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ, ಬೆಳಿಗ್ಗೆ ಕಲಾಪ ಮುಂದೂಡಿಕೆಯಾದ ನಂತರ ಲೋಕಸಭೆ ಮತ್ತೆ ಸಮಾವೇಶಗೊಂಡಾಗ ಕೇಂದ್ರ ಗೃಹ ರಾಜ್ಯ ಸಚಿವ ನಿತ್ಯಾನಂದ್ ರೈ ಅವರು ಎಫ್‌ಸಿಆರ್‌ಎ ಮಸೂದೆಯನ್ನು ಜೆಪಿಸಿಗೆ ಒಪ್ಪಿಸುವ ಪ್ರಸ್ತಾವನೆಯನ್ನು ಮಂಡಿಸಿದರು.
31 ಸದಸ್ಯರ ಜಂಟಿ ಸಂಸದೀಯ ಸಮಿತಿ:
ಪ್ರಸ್ತಾವಿತ ಜಂಟಿ ಸಂಸದೀಯ ಸಮಿತಿಯು ಒಟ್ಟು 31 ಸದಸ್ಯರನ್ನು ಒಳಗೊಂಡಿರಲಿದೆ (ಲೋಕಸಭೆಯಿಂದ 21 ಹಾಗೂ ರಾಜ್ಯಸಭೆಯಿಂದ 10 ಸದಸ್ಯರು). ಲೋಕಸಭಾ ಸದಸ್ಯರನ್ನು ಸ್ಪೀಕರ್ ಹಾಗೂ ರಾಜ್ಯಸಭಾ ಸದಸ್ಯರನ್ನು ಸಭಾಪತಿಗಳು ನಾಮನಿರ್ದೇಶನ ಮಾಡಲಿದ್ದಾರೆ. ಈ ಸಮಿತಿಯು ಕಾಯ್ದೆಯ ನಿಯಮಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿ, 2026ರ ಚಳಿಗಾಲದ ಅಧಿವೇಶನದ ಮೊದಲ ವಾರದ ಕೊನೆಯ ದಿನದೊಳಗೆ ಸಂಸತ್ತಿಗೆ ವರದಿ ಸಲ್ಲಿಸಲಿದೆ. ಸಭೆಯ ಶಾಸನಬದ್ಧ ಹಾಜರಾತಿ (ಕೋರಂ) ಒಟ್ಟು ಸದಸ್ಯ ಬಲದ ಮೂರನೇ ಒಂದರಷ್ಟಿರಲಿದೆ.
ಇದನ್ನೂ ಓದಿ: ‘ನಾಳೆ ಮಧ್ಯಾಹ್ನ 3 ಗಂಟೆಯವರೆಗೂ ಚರ್ಚೆಗೆ ಸಿದ್ಧ’; ವಿಪಕ್ಷಗಳಿಗೆ ಗೃಹ ಸಚಿವ ಅಮಿತ್ ಶಾ ತಿರುಗೇಟು
ಕ್ರಿಶ್ಚಿಯನ್ ಸಂಸ್ಥೆಗಳು ಈ ವಿಧೇಯಕವನ್ನು ವಿರೋಧಿಸುತ್ತಿರುವುದೇಕೆ?:
ಭಾರತದಲ್ಲಿರುವ ಚರ್ಚ್‌ಗಳು ಮತ್ತು ಕ್ರಿಶ್ಚಿಯನ್ ಸಂಸ್ಥೆಗಳು ಎಫ್‌ಸಿಆರ್‌ಎ ತಿದ್ದುಪಡಿ ವಿಧೇಯಕವನ್ನು ತೀವ್ರವಾಗಿ ವಿರೋಧಿಸುತ್ತಿದ್ದು, ಈ ಮಸೂದೆಯು ತಮ್ಮ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ನಾಗರಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದು ಆತಂಕ ವ್ಯಕ್ತಪಡಿಸಿವೆ. ಕೇರಳ ಲ್ಯಾಟಿನ್ ಕ್ಯಾಥೋಲಿಕ್ ಅಸೋಸಿಯೇಷನ್ (KLCA) ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಈ ಕಾಯ್ದೆಯಿಂದ ನೇರವಾಗಿ ಪ್ರಭಾವಿತರಾಗುವ ನಾಗರಿಕರು ಹಾಗೂ ಸಂಸ್ಥೆಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ ತಿದ್ದುಪಡಿ ತರಲಾಗಿದೆ, ಇದರಿಂದ ಶಾಂತಿಯುತವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳಲ್ಲಿ ಅನಿಶ್ಚಿತತೆ ಮೂಡಲಿದೆ ಎಂದು ಹೇಳಿದೆ.
ಕ್ರಿಶ್ಚಿಯನ್ ಸಮುದಾಯದ ಪ್ರಮುಖರು ಗೃಹ ಸಚಿವರನ್ನು ಭೇಟಿಯಾಗಿ ಮಸೂದೆಯನ್ನು ವಾಪಾಸ್ ಪಡೆಯಬೇಕು ಅಥವಾ ಜೆಪಿಸಿ (JPC) ತನಿಖೆಗೆ ಒಪ್ಪಿಸಬೇಕೆಂದು ಮನವಿ ಮಾಡಿದ್ದರು. ಅವರ ಮನವಿಯನ್ನು ಆಲಿಸಿದ ಅಮಿತ್ ಶಾ, ಈ ವಿಚಾರವನ್ನು ಕೂಲಂಕಷವಾಗಿ ಪರಿಶೀಲಿಸಿ ಸರ್ಕಾರದ ಇತರ ಸದಸ್ಯರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:28 pm, Wed, 12 August 26