ಮೋದಿ ಸರ್ಕಾರದ 9ನೇ ವರ್ಷಾಚರಣೆ: ರಾಷ್ಟ್ರವ್ಯಾಪಿ ಸಂಪರ್ಕ ಅಭಿಯಾನ ಆಯೋಜಿಸಲಿದೆ ಬಿಜೆಪಿ
ಮೋದಿ ಸರ್ಕಾರ 9 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಕಾರ್ಯಗಳ ಪ್ರಚಾರಕ್ಕೆ ಬಿಜೆಪಿ ಮೆಗಾ ಪ್ಲಾನ್ ಸಿದ್ಧಪಡಿಸಿದ್ದು, ಮೇ 31ರಂದು ಪ್ರಧಾನಿ ನರೇಂದ್ರ ಮೋದಿಯವರ ಬೃಹತ್ ಸಮಾವೇಶದೊಂದಿಗೆ ಇದು ಆರಂಭಗೊಳ್ಳಲಿದೆ.
ದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರವು ತನ್ನ ಸತತ ಎರಡು ಅವಧಿಯ ಒಂಬತ್ತು ವರ್ಷಗಳನ್ನು ಪೂರ್ಣಗೊಳಿಸಲಿರುವ ಹಿನ್ನೆಲೆಯಲ್ಲಿ ಬಿಜೆಪಿ (BJP) ಸಾಮೂಹಿಕ ಸಂಪರ್ಕ ಅಭಿಯಾನ ಪ್ರಾರಂಭಿಸಲು ನಿರ್ಧರಿಸಿದೆ. ಮೇ 30ರಿಂದ ಒಂದು ತಿಂಗಳ ಕಾಲ ದೇಶಾದ್ಯಂತ ಕಾರ್ಯಕ್ರಮ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಮೇ 30 ಮತ್ತು ಜೂನ್ 30 ರ ನಡುವೆ ದೇಶಾದ್ಯಂತ ಸುಮಾರು 50 ರ್ಯಾಲಿಗಳನ್ನು ನಡೆಸಲು ಬಿಜೆಪಿ ಯೋಜಿಸುತ್ತಿದ್ದು ಪ್ರಧಾನಿ ನರೇಂದ್ರ ಮೋದಿ 6 ರ್ಯಾಲಿಗಳಿಗೆ ನೇತೃತ್ವ ವಹಿಸಲಿದ್ದಾರೆ. ಮೂಲಗಳ ಪ್ರಕಾರ, ಸುಮಾರು ಒಂದು ವರ್ಷ ಬಾಕಿಯಿರುವ ಲೋಕಸಭೆ ಚುನಾವಣೆಗೆ (Lok sabha Election) ಬಿಜೆಪಿಯ ಸಿದ್ಧತೆಗಳಿಗೆ ಈ ಪ್ರಚಾರವು ಚಾಲನೆ ನೀಡಲಿದೆ.
ಮೇ 31 ರಂದು ರಾಜಸ್ಥಾನದ ಅಜ್ಮೀರ್‌ನಲ್ಲಿ ಪ್ರಧಾನಿ ಮೋದಿಯವರಿಂದ ಮೆಗಾ ರ್ಯಾಲಿ ಮೂಲಕ ಈ ಅಭಿಯಾನವನ್ನು ಉದ್ಘಾಟಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಇತರರು ಸಾಮೂಹಿಕ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೋದಿ ಸರ್ಕಾರ 9 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಕಾರ್ಯಗಳ ಪ್ರಚಾರಕ್ಕೆ ಬಿಜೆಪಿ ಮೆಗಾ ಪ್ಲಾನ್ ಸಿದ್ಧಪಡಿಸಿದ್ದು, ಮೇ 31ರಂದು ಪ್ರಧಾನಿ ನರೇಂದ್ರ ಮೋದಿಯವರ ಬೃಹತ್ ಸಮಾವೇಶದೊಂದಿಗೆ ಇದು ಆರಂಭಗೊಳ್ಳಲಿದೆ. ಅದೇ ವೇಳೆ “ಸಂಪರ್ಕ್ ಸೆ ಸಮರ್ಥನ್” ಕಾರ್ಯಕ್ರಮವೂ ಪ್ರಾರಂಭವಾಗುತ್ತದೆ. ಮೇ 30 ರಿಂದ ಜೂನ್ 30 ರವರೆಗೆ ನಡೆಯುವ ಈ ವಿಶೇಷ ಅಭಿಯಾನದಲ್ಲಿ ಪಕ್ಷದ ವತಿಯಿಂದ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಅದಕ್ಕೂ ಮುನ್ನ ಬಿಜೆಪಿ, ರಾಷ್ಟ್ರೀಯ ಮಾಧ್ಯಮ ಮತ್ತು ರಾಜ್ಯ ಮಾಧ್ಯಮ ಮುಖ್ಯಸ್ಥರ ಸಭೆಯನ್ನು ಮೇ 25 ಮತ್ತು 26 ರಂದು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ, ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ಇತರ ಹಿರಿಯ ಕೇಂದ್ರ ಸಚಿವರು ಮತ್ತು ಪಕ್ಷದ ನಾಯಕರೊಂದಿಗೆ ಆಯೋಜಿಸಿದೆ. ಮೇ 27ರಂದು ಜೆಪಿ ನಡ್ಡಾ ಕೂಡ ಮೋದಿ ಸರಕಾರದ ಸಾಧನೆಗಳ ಕುರಿತು ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಇದನ್ನೂ ಓದಿ: ಮಾರ್ನಿಂಗ್ ಕನ್ಸಲ್ಟ್ ಸಮೀಕ್ಷೆಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯ ನಾಯಕ
ಸಂಪೂರ್ಣ ಅಭಿಯಾನದ ಸಮಯದಲ್ಲಿ, ದೇಶಾದ್ಯಂತ 45-55 ದೊಡ್ಡ ರ್ಯಾಲಿಗಳನ್ನು ಆಯೋಜಿಸಲಾಗುವುದು.ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅರ್ಧ ಡಜನ್‌ಗೂ ಹೆಚ್ಚು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ನರೇಂದ್ರ ಮೋದಿ ಅವರು ಮೇ 26, 2014 ರಂದು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಮೇ 30, 2019 ರಂದು ಎರಡನೇ ಅವಧಿಗೆ ಅಧಿಕಾರ ಸ್ವೀಕರಿಸಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ