ಬಂಗಾಳ ಸಮೀಕ್ಷೆಯಿಂದ ಆಕ್ಸಿಸ್ ಮೈ ಇಂಡಿಯಾ ದಿಢೀರ್ ಔಟ್, ಪ್ರದೀಪ್ ಗುಪ್ತಾ ನಿರ್ಧಾರದ ಹಿಂದೆ ಅಡಗಿದೆಯೇ ಸ್ಫೋಟಕ ಸತ್ಯ?

ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಸಮೀಕ್ಷೆಯಿಂದ ಆಕ್ಸಿಸ್‌ ಮೈ ಇಂಡಿಯಾ ಹಿಂದೆ ಸರಿದಿದೆ. ಸಮೀಕ್ಷಕರ ಬಂಧನ ಹಾಗೂ ರಾಜಕೀಯ ಹಿಂಸಾಚಾರದಿಂದ ಶೇ. 70ರಷ್ಟು ಜನ ತಮ್ಮ ಅಭಿಪ್ರಾಯ ಹೇಳಲು ಹೆದರುತ್ತಿದ್ದರು ಎಂದು ಮುಖ್ಯಸ್ಥ ಪ್ರದೀಪ್‌ ಗುಪ್ತಾ ತಿಳಿಸಿದ್ದಾರೆ. ಈ ಬೆಳವಣಿಗೆ ಮಮತಾ ಬ್ಯಾನರ್ಜಿ ಸರ್ಕಾರದ ಮೇಲೆ ಪ್ರಶ್ನೆಗಳನ್ನೆತ್ತಿದ್ದು, ಜನರ ವಾಕ್‌ ಸ್ವಾತಂತ್ರ್ಯ ಹಾಗೂ ಇತರೆ ಸಮೀಕ್ಷೆಗಳ ನಿಖರತೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

ಬಂಗಾಳ ಸಮೀಕ್ಷೆಯಿಂದ ಆಕ್ಸಿಸ್ ಮೈ ಇಂಡಿಯಾ ದಿಢೀರ್ ಔಟ್, ಪ್ರದೀಪ್ ಗುಪ್ತಾ ನಿರ್ಧಾರದ ಹಿಂದೆ ಅಡಗಿದೆಯೇ ಸ್ಫೋಟಕ ಸತ್ಯ?
ಮಮತಾ ಪ್ರಧಾನಿ ಮೋದಿ
Image Credit source: Awaz The Voice

Updated on: May 01, 2026 | 12:08 PM

ಕೋಲ್ಕತ್ತಾ, ಮೇ 1: ಅಚ್ಚರಿಯ ಬೆಳವಣಿಗೆಯಲ್ಲಿ ಪಶ್ಚಿಮ ಬಂಗಾಳ(West Bengal)ದ ಚುನಾವಣೋತ್ತರ ಸಮೀಕ್ಷೆಯಿಂದ ಆಕ್ಸಿಸ್ ಮೈ ಇಂಡಿಯಾ ಸಂಸ್ಥೆಯು ಹಿಂದೆ ಸರಿದಿದೆ. ತಮಿಳುನಾಡು, ಆಸ್ಸಾಂ, ಪುದುಚೇರಿ ಹಾಗೂ ಕೇರಳ ವಿಧಾನಸಭೆ ಚುನಾವಣೆಗೆ ಸಂಬಂಧಿಸಿ ಇದೇ ಸಂಸ್ಥೆಯು ತನ್ನ ಸಮೀಕ್ಷಾ ವರದಿಯನ್ನು ನೀಡಿದೆ. ಆದರೆ ಪಶ್ಚಿಮ ಬಂಗಾಳಕ್ಕೆ ಸಂಬಂಧಿಸಿ ತೆಗೆದುಕೊಂಡ ತೀರ್ಮಾನವು ಹಲವು ಪ್ರಶ್ನೆಗಳು ಮೂಡುವಂತೆ ಮಾಡಿದೆ.

ಆಕ್ಸಿಸ್‌ ಮೈ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಪ್ರದೀಪ್‌ ಗುಪ್ತಾ ಅವರು ತಮ್ಮ ಸಮೀಕ್ಷಾ ವರದಿಯನ್ನು ತಡೆಹಿಡಿಯುವ ನಿರ್ಧಾರ ಮಾಡುವ ಮುನ್ನ ಎರಡು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಇದು ಹಲವು ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಚುನಾವಣೆ ನಡೆಯುವ ನಾಲ್ಕು ತಿಂಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ರಾಜಕಿಯೇತರ ಸಮೀಕ್ಷೆಯೊಂದನ್ನು ಮಾಡುವಾಗ ತನ್ನ ಸಿಬ್ಬಂದಿಯನ್ನು ಜೈಲಿಗೆ ಹಾಕಲಾಗಿತ್ತು. ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ಮಾಡಿ, ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿಸಿಕೊಳ್ಳಬೇಕಾಯಿತು ಎಂದು ಪ್ರದೀಪ್‌ ಗುಪ್ತಾ ತಿಳಿಸಿದ್ದಾರೆ. ಇದಲ್ಲದೇ ಪಶ್ಚಿಮ ಬಂಗಾಳದಲ್ಲಿ ಹಿಂಸಾತ್ಮಕ ರಾಜಕIೈ ಮನಸ್ಥಿತಿ ಬಗ್ಗೆ ಇನ್ನೊಂದು ಅಂಶ ತಿಳಿಸಿದ್ದಾರೆ.

ಮತ್ತಷ್ಟು ಓದಿ: ಮತ ಎಣಿಕೆಗೂ ಮುನ್ನ ಇವಿಎಂ ತೆರೆದ ಆರೋಪ; ಕೊಲ್ಕತ್ತಾದಲ್ಲಿ ಬಿಜೆಪಿ ವಿರುದ್ಧ ಟಿಎಂಸಿ ಪ್ರತಿಭಟನೆ

ಸಮೀಕ್ಷೆಗೆ ಜನರನ್ನು ಭೇಟಿಯಾದಾಗ ಶೇ.70ಕ್ಕೂ ಅಧಿಕ ಜನರು ತಮ್ಮ ಅಭಿಪ್ರಾಯವನ್ನು ಹೇಳಲು ಹೆದರುತ್ತಿದ್ದರು ಅಥವಾ ಬಾಯಿ ಬಿಡುತ್ತಿರಲಿಲ್ಲ. ಹೌದು ಅಥವಾ ಇಲ್ಲ ಎನ್ನುವ ಪ್ರಶ್ನೆಗೂ ಉತ್ತರಿಸಲು ನಿರಾಕರಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ನಾನು ಹೇಗೆ ವೈಜ್ಞಾನಿಕವಾದ ಸಮೀಕ್ಷೆಯನ್ನು ಸಿದ್ಧಪಡಿಸಲಿ ಎಂದು ಪ್ರದೀಪ್‌ ಗುಪ್ತಾ ಪ್ರಶ್ನಿಸಿದ್ದಾರೆ. ಇದೇ ಕಾರಣದಿಂದ ಅವರು ಪಶ್ಚಿಮ ಬಂಗಾಳದ ಚುನಾವಣೋತ್ತರ ಸಮೀಕ್ಷಾ ವರದಿಯನ್ನು ತಡೆಹಿಡಿದಿದ್ದಾರೆ ಎಂದು ವರದಿಯಾಗಿದೆ.

ಹೀಗಿರುವಾಗ ಚುನಾವಣೋತ್ತರ ಸಮೀಕ್ಷೆ ಹಾಗೂ ಪಶ್ಚಿಮ ಬಂಗಾಳದ ಬಗ್ಗೆ ಎರಡು ರೀತಿಯ ಪ್ರಶ್ನೆಗಳನ್ನು ಜನರು ಸಾಮಾಜಿಕ ಜಾಲತಾಣದಲ್ಲಿ ಎತ್ತುತ್ತಿದ್ದಾರೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನ ರಕ್ಷಣೆ ಎಂದು ಭಾಷಣ ಮಾಡುವ ಮಮತಾ ಬ್ಯಾನರ್ಜಿ ಹಾಗೂ ಅವರ ಸಹೋದ್ಯೋಗಿ ರಾಜಕೀಯ ಪಕ್ಷಗಳು ತಮ್ಮದೇ ರಾಜ್ಯದಲ್ಲಿ ಇಂತಹ ಭಯಭೀತ ವಾತಾವರಣವನ್ನು ಹೊಂದಿದ್ದರೂ ಮೌನವಾಗಿರುವುದೇಕೆ? ಜನರ ವಾಕ್‌ ಸ್ವಾತಂತ್ರ್ಯಕ್ಕೂ ಬೆಲೆಯಿಲ್ಲದ ರೀತಿ ಆಡಳಿತ ನಡೆಸಲಾಗುತ್ತಿದೆ ಎಂದು ಟೀಕಿಸುತ್ತಿದ್ದಾರೆ.

ಇನ್ನೊಂದೆಡೆ ಆಕ್ಸಿಸ್‌ ಮೈ ಇಂಡಿಯಾ ಸಂಸ್ಥೆಗೆ ಶೇ.70ರಷ್ಟು ಜನರು ಅಭಿಪ್ರಾಯ ನೀಡಲು ಹಿಂದೇಟು ಹಾಕಿದ್ದಾರೆ ಎನ್ನುವುದಾದರೆ, ಉಳಿದ ಸಂಸ್ಥೆಗಳು ಹೇಗೆ ಚುನಾವಣೋತ್ತರ ಸಮೀಕ್ಷೆ ನಡೆಸಿದವು ಹಾಗೂ ಅದರ ನಿಖರತೆ ಏನು ಎಂದು ಪ್ರಶ್ನಿಸುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us