ಏಳು ವರ್ಷ ಬಳಿಕ ಚೀನಾಗೆ ಮೋದಿ ಭೇಟಿ; ಟಿಯಾಂಜಿನ್ನಲ್ಲಿ ತ್ರಿಶಕ್ತಿಗಳ ಸಮಾಗಮ; ಟ್ರಂಪ್ ಕೆಂಗಣ್ಣು ಹೆಚ್ಚುತ್ತಾ?
Narendra Modi to visit China after 7 years: ಆಗಸ್ಟ್ 29ರಿಂದ ಎರಡು ದಿನಗಳ ಕಾಲ ಚೀನಾದ ಟಿಯಾಂಜಿನ್ನಲ್ಲಿ ಎಸ್ಸಿಒ ಸಮಿಟ್ ನಡೆಯಲಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಈ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾರೆ. ಏಳು ವರ್ಷಗಳ ಬಳಿಕ ನರೇಂದ್ರ ಮೋದಿ ಅವರು ಚೀನಾಗೆ ಹೋಗುತ್ತಿರುವುದು ಗಮನಾರ್ಹ. ಟ್ರಂಪ್ ದೆಸೆಯಿಂದ ಭಾರತ, ಚೀನಾ ಮತ್ತು ರಷ್ಯಾ ದೇಶಗಳು ಒಗ್ಗೂಡಿದಂತೆ ಕಾಣುತ್ತಿದೆ.

ನವದೆಹಲಿ, ಆಗಸ್ಟ್ 27: ಚೀನಾದ ಟಿಯಾಂಜಿನ್ನಲ್ಲಿ ಶಾಂಘೈ ಸಹಕಾರ ಸಂಘಟನೆಯ (SCO- Shanghai Cooperation Organization) ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಪಾಲ್ಗೊಳ್ಳಲಿದ್ದಾರೆ. ಮುಂದಿನ ವಾರ ನಡೆಯುವ ಈ ಸಮಿಟ್ನಲ್ಲಿ 20ಕ್ಕೂ ಹೆಚ್ಚು ದೇಶಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ. ನರೇಂದ್ರ ಮೋದಿ ಅವರು ಇದರಲ್ಲಿ ಪಾಲ್ಗೊಳ್ಳಲಿರುವುದು ಈಗ ಗಮನಾರ್ಹ ಸಂಗತಿ ಎನಿಸಿದೆ. ಏಳು ವರ್ಷದ ಬಳಿಕ ನರೇಂದ್ರ ಮೋದಿ ಅವರು ಚೀನಾಗೆ (China) ಮೊದಲ ಬಾರಿ ಕಾಲಿಡುತ್ತಿದ್ದಾರೆ. ಹೀಗಾಗಿ, ಸಾಕಷ್ಟು ಕುತೂಹಲಗಳು ಹುಟ್ಟಿಕೊಂಡಿವೆ.
ಆಗಸ್ಟ್ 31ರಿಂದ ಸೆಪ್ಟೆಂಬರ್ 1ರವರೆಗೆ ಎರಡು ದಿನಗಳ ಕಾಲ ನಡೆಯುವ ಈ ಬಾರಿಯ ಎಸ್ಸಿಒ ಸಮಿಟ್ ಜಗತ್ತಿಗೆ ಕೆಲ ಪ್ರಮುಖ ಸಂದೇಶಗಳನ್ನು ನೀಡುತ್ತಿದೆ. ಭಾರತದ ನೀತಿ ಮತ್ತು ಧೋರಣೆಯಲ್ಲಿ ಬದಲಾವಣೆ ಆಗುತ್ತಿರುವ ಸಂದೇಶ ರವಾನೆಯಾಗುತ್ತಿದೆ. ರಷ್ಯಾ, ಚೀನಾ ಮತ್ತು ಭಾರತ ಈ ಮೂರು ದೈತ್ಯ ಶಕ್ತಿಗಳು ಒಗ್ಗೂಡುತ್ತಿರುವ ಕುರುಹನ್ನು ಇದು ನೀಡಿದೆ. ಡೊನಾಲ್ಡ್ ಟ್ರಂಪ್ ಅವರ ಟ್ಯಾರಿಫ್ ಅಟ್ಟಹಾಸಕ್ಕೆ ಅಭಿವೃದ್ಧಿಶೀಲ ದೇಶಗಳು ತೋರಿರುವ ಪ್ರತಿರೋಧದ ಸಂಕೇತ ಇದೆಂದು ಹಲವರು ಪರಿಭಾವಿಸಿದ್ದಾರೆ.
ಇದನ್ನೂ ಓದಿ: ‘ಮ್ಯಾಗ್ನೆಟ್ ನೀಡದಿದ್ದರೆ ಚೀನಾವನ್ನು ನಾಶ ಮಾಡುತ್ತೇವೆ’: ಮತ್ತೆ ಆರ್ಭಟಿಸಿದ ಡೊನಾಲ್ಡ್ ಟ್ರಂಪ್
‘ಹೊಸ ಅಂತಾರಾಷ್ಟ್ರೀಯ ಶ್ರೇಣಿ ಹೇಗೆ ಕಾಣುತ್ತದೆ ಎಂಬುದನ್ನು ಜಗತ್ತಿಗೆ ತೋರ್ಪಡಿಸಲು ಈ ಶೃಂಗಸಭೆ ಅವಕಾಶ ಕೊಟ್ಟಿದೆ. ಹಾಗೆಯೇ, ಚೀನಾ, ಇರಾನ್, ರಷ್ಯಾ ಮತ್ತು ಭಾರತವನ್ನು ಹತ್ತಿಕ್ಕಲು ಅಮೆರಿಕ ಮಾಡಿದ ಪ್ರಯತ್ನ ವಿಫಲವಾಗಿರುವುದನ್ನು ತೋರಿಸಲು ಚೀನಾ ಈ ವೇದಿಕೆಯನ್ನು ಬಳಸಬಹುದು’ ಎಂದು ದಿ ಚೀನಾ ಗ್ಲೋಬಲ್ ಸೌತ್ ಪ್ರಾಜೆಕ್ಟ್ ಪತ್ರಿಕೆಯ ಮುಖ್ಯ ಸಂಪಾದಕ ಎರಿಕ್ ಒಲಾಂಡರ್ ಅಭಿಪ್ರಾಯಪಟ್ಟಿದ್ದಾರೆ.
ಎಸ್ಸಿಒ ಸಂಘಟನೆಯ ಸದಸ್ಯ ರಾಷ್ಟ್ರಗಳಿವು
2001ರಲ್ಲಿ ಚೀನಾ ನೇತೃತ್ವದಲ್ಲಿ ಸ್ಥಾಪನೆಯಾದ ಸಂಘಟನೆ ಇದು. ಚೀನಾ, ಕಜಕಸ್ತಾನ್, ಕಿರ್ಗಿಸ್ತಾನ್, ರಷ್ಯಾ, ತಜಿಕಿಸ್ತಾನ್ ಮತ್ತು ಉಜ್ಬೆಕಿಸ್ತಾನ್ ದೇಶಗಳಿಂದ ಮೊದಲು ಇದರ ಸ್ಥಾಪನೆಯಾಗಿದ್ದು. 2017ರಲ್ಲಿ ಭಾರತ ಮತ್ತು ಪಾಕಿಸ್ತಾನ ದೇಶಗಳು ಇದರಲ್ಲಿ ಸೇರ್ಪಡೆಯಾದವು. 2023ರ ನಂತರ ಇನ್ನೂ ಕೆಲ ದೇಶಗಳು ಸೇರಿದವು. ಇನ್ನೂ ಹಲವು ದೇಶಗಳು ಈ ಸಂಘಟನೆಯಲ್ಲಿ ಸಂವಾದ ಸಹಭಾಗಿಗಳಾಗಿವೆ. ಈ ಎಸ್ಸಿಒದ ಸದಸ್ಯ ದೇಶಗಳ ಪಟ್ಟಿ ಈ ಕೆಳಕಂಡಂತಿದೆ:
ಚೀನಾ, ರಷ್ಯಾ, ಭಾರತ, ಪಾಕಿಸ್ತಾನ, ಕಜಕಸ್ತಾನ, ಕಿರ್ಗಿಸ್ತಾನ್, ತಜಿಕಿಸ್ತಾನ್, ಉಜ್ಬೆಕಿಸ್ತಾನ್, ಇರಾನ್, ಆರ್ಮೇನಿಯಾ, ಬೆಲಾರಸ್, ಶ್ರೀಲಂಕಾ, ಅಜರ್ಬೈಜಾನ್, ನೇಪಾಳ
ಇದನ್ನೂ ಓದಿ: ಅಮೆರಿಕವೇ ಗತಿ ಅಲ್ಲ… ಮೀನು ರಫ್ತಿಗೆ ಜಪಾನ್, ಚೀನಾ, ಬ್ರಿಟನ್ ಮಾರುಕಟ್ಟೆಗಳತ್ತ ಭಾರತ
ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಕೈಜೋಡಿಸುತ್ತವಾ ಭಾರತ ಚೀನಾ?
ಭಾರತದ ಗಡಿಭಾಗವನ್ನು ಚೀನಾ ಅತಿಕ್ರಮಿಸಲು 2020ರಲ್ಲಿ ಪ್ರಯತ್ನಿಸಿತ್ತು. ಗಾಲ್ವನ್ ಕಣಿವೆಯಲ್ಲಿ ಭಾರತೀಯ ಸೈನಿಕರ ಮೇಲೆ ಮಾರಕ ಹಲ್ಲೆಗೆ ಯತ್ನಿಸಿತ್ತು. ಇದಾದ ಬಳಿಕ ಚೀನಾದೊಂದಿಗೆ ಬಹುತೇಕ ಎಲ್ಲಾ ರೀತಿಯ ಸಂಬಂಧವನ್ನು ಭಾರತ ಕಡಿದುಕೊಂಡಿತು. ಆದರೆ, ಈಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತವನ್ನು ಗುರಿ ಮಾಡಿ ತೊಂದರೆ ನೀಡಲು ಆರಂಭಿಸಿದ್ದಾರೆ. ಇದು ಭಾರತ ಹಾಗೂ ಚೀನಾ ದೇಶಗಳನ್ನು ಹತ್ತಿರಗೊಳಿಸಲು ಕಾರಣವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




