Narendra Modi: ಭಾರತ ಮೂಲದ ಟೀಚರ್ ಸ್ಮರಿಸಿದ ಆಸ್ಟ್ರೇಲಿಯಾ ಸಚಿವ; ಭಾವುಕರಾದ ನರೇಂದ್ರ ಮೋದಿ; ಖುಷಿ ವ್ಯಕ್ತಪಡಿಸಿ ಟ್ವೀಟ್
Mrs Ebert Impact On Australian Minister: ಮಿಸಸ್ ಎಬರ್ಟ್ ಎಂಬ ಭಾರತ ಮೂಲದ ಶಿಕ್ಷಕಿಯ ಪ್ರಭಾವ ತಮಗೆಷ್ಟಾಯಿತು ಎಂದು ಆಸ್ಟ್ರೇಲಿಯಾ ಸಚಿವ ಡಾನ್ ಫರೆಲ್ ತಮ್ಮ ಮೋದಿ ಭೇಟಿ ವೇಳೆ ಹೇಳಿಕೊಂಡರಂತೆ. ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಖುದ್ದಾಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನವದೆಹಲಿ: ಶಾಲಾ ಕಾಲೇಜುಗಳಲ್ಲಿ ನಮಗೆ ಪಾಠ ಮಾಡಿದ ಮೇಷ್ಟ್ರುಗಳನ್ನು (Impactful Teachers) ಮರೆತವರು ಬಹಳ ಮಂದಿ ಇಲ್ಲ. ಪ್ರತಿಯೊಬ್ಬರಿಗೂ ಒಬ್ಬರಲ್ಲಾ ಒಬ್ಬರು ಟೀಚರ್ ಸದಾ ಚಿರಸ್ಮರಣೀಯರಾಗಿ ಉಳಿದಿರುತ್ತಾರೆ. ಆಸ್ಟ್ರೇಲಿಯಾದ ವ್ಯಾಪಾರ ಮತ್ತು ಪ್ರವಾಸೋದ್ಯಮ ಸಚಿವ ಡಾನ್ ಫರೆಲ್ (Australian minister Don Farrel) ಅವರಿಗೆ ಈ ರೀತಿ ಬಹಳ ಪ್ರಭಾವ ಬೀರಿದ ಶಿಕ್ಷಕಿಯೊಬ್ಬರಿದ್ದಾರೆ. ವಿಶೇಷ ಎಂದರೆ ಆ ಶಿಕ್ಷಕಿ ಭಾರತ ಮೂಲದವರು ಎಂಬುದು. ಐವತ್ತರ ದಶಕದಲ್ಲಿ ಗೋವಾದಿಂದ ಆಸ್ಟ್ರೇಲಿಯಾದ ಅಡಿಲೇಡ್ಗೆ ವಲಸೆ ಹೋಗಿದ್ದ ಮಿಸಸ್ ಎಬರ್ಟ್ (Mrs Ebert) ಎಂಬುವವರನ್ನು ಡಾನ್ ಫರೆಲ್ ಸ್ಮರಿಸಿಕೊಂಡಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ಮಿಸಸ್ ಎಬರ್ಟ್ ಎಂಬ ಭಾರತ ಮೂಲದ ಶಿಕ್ಷಕಿಯ ಪ್ರಭಾವ ತಮಗೆಷ್ಟಾಯಿತು ಎಂದು ಡಾನ್ ಹೇಳಿಕೊಂಡರಂತೆ. ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಖುದ್ದಾಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಆಸ್ಟ್ರೇಲಿಯಾ ಪ್ರಧಾನಿ ಆಂಥೋಣಿ ಆಲ್ಬನೀಸ್ ಜೊತೆ ಭೋಜನ ಮಾಡುವ ವೇಳೆ ಆಸ್ಟ್ರೇಲಿಯಾದ ವ್ಯಾಪಾರ ಮತ್ತು ಪ್ರವಾಸ ಸಚಿವ ಡಾನ್ ಫಾರೆಲ್ ಅವರು ಕುತೂಹಲ ಮೂಡಿಸುವ ಒಂದು ವಿಷಯ ಹಂಚಿಕೊಂಡರು. ಶಾಲೆಯಲ್ಲಿ ಗ್ರೇಡ್ 1ರಲ್ಲಿ ಅವರು ಓದುವಾಗ ಮಿಸಸ್ ಎಬರ್ಟ್ ಎಂಬುವವರು ಪಾಠ ಮಾಡಿದ್ದು, ತಮ್ಮ ಜೀವನದಲ್ಲಿ ಬಹಳ ಗಾಢವಾದ ಪ್ರಭಾವ ಬೀರಿದ್ದನ್ನು ಹೇಳಿಕೊಂಡರು ಎಂದು ನರೇಂದ್ರ ಮೋದಿ ಸರಣಿ ಟ್ವೀಟ್ಗಳಲ್ಲಿ ತಿಳಿಸಿದ್ದಾರೆ.
During the lunch in honour of my friend PM @AlboMP, the Australian Trade and Tourism Minister Don Farrell shared something interesting…he was taught by one Mrs. Ebert in Grade 1 who left a deep impact on his life and credits her for his educational grounding. pic.twitter.com/l0dKJbFCbZ
— Narendra Modi (@narendramodi) March 12, 2023
ಶಿಕ್ಷಕರ ಬಗ್ಗೆ ಒಳ್ಳೆ ಮಾತು: ಪ್ರಧಾನಿ ಖುಷಿ
ಆಸ್ಟ್ರೇಲಿಯಾದ ಸಚಿವರೊಬ್ಬರು ಭಾರತ ಮೂಲದ ಶಿಕ್ಷಕಿಯಿಂದ ತಮ್ಮ ಮೇಲೆ ಪ್ರಭಾವ ಬೀರಿದ್ದನ್ನು ಹೇಳಿಕೊಂಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂತಸ ತಂದಿದೆ. ಈ ಬಗ್ಗೆ ಟ್ವೀಟ್ನಲ್ಲಿ ಪ್ರಸ್ತಾಪಿಸಿರುವ ಅವರು, ಭಾರತ ಹಾಗೂ ಆಸ್ಟ್ರೇಲಿಯಾ ಮಧ್ಯೆ ಇರುವ ಉತ್ಕೃಷ್ಟ ಸಾಂಸ್ಕೃತಿಕ ಬೆಸುಗೆಯನ್ನು ತೋರಿಸುತ್ತದೆ ಎಂದಿದ್ದಾರೆ.
ಅಲ್ಲದೇ, ಯಾರಾದರೂ ವ್ಯಕ್ತಿ ತನ್ನ ಶಿಕ್ಷಕರನ್ನು ಸ್ಮರಿಸಿಕೊಳ್ಳುವುದನ್ನು ಕೇಳಿದಾಗಲೂ ಅಷ್ಟೇ ಖುಷಿಯಾಗುತ್ತದೆ ಎಂದೂ ಪ್ರಧಾನಿಗಳು ಟ್ವೀಟ್ನಲ್ಲಿ ಬರೆದಿದ್ದಾರೆ.
I was happy to hear this anecdote, which underlines the rich cultural connect between India and Australia. It is equally heartening to hear when someone refers to his or her teacher fondly.
— Narendra Modi (@narendramodi) March 12, 2023
ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವೀಟ್ನಲ್ಲಿ ಮಿಸಸ್ ಎಬರ್ಟ್ ಮೂಲದ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವನ್ನೂ ಮಾಡಿದ್ದಾರೆ. ಮಿಸಸ್ ಎಬರ್ಟ್ ತಮ್ಮ ಪತಿ ಹಾಗೂ ಮಗಳು ಲಿಯೋನೀ ಜೊತೆ 1950ರ ದಶಕದಲ್ಲಿ ಗೋವಾದಿಂದ ಅಡಿಲೇಡ್ಗೆ ವಲಸೆ ಹೋದರು. ಅಲ್ಲಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಶುರು ಮಾಡಿದರು. ಅವರ ಮಗಳು ಲಿಯೋನೀ ಮುಂದೆ ಸೌತ್ ಆಸ್ಟ್ರೇಲಿಯನ್ ಇನ್ಸ್ಟಿಟ್ಯೂಟ್ ಆಫ್ ಟೀಚರ್ಸ್ ಸಂಘಟನೆಯ ಅಧ್ಯಕ್ಷೆ ಕೂಡ ಆದರು ಎಂದು ಪ್ರಧಾನಿ ಮೋದಿ ವಿವರಿಸಿದ್ದಾರೆ.
Mrs. Ebert, her husband and her daughter Leonie, migrated from Goa in India to Adelaide in the 1950’s and started teaching at a school in Adelaide, Australia. Her daughter Leonie went on to be the President of the South Australian Institute of Teachers.
— Narendra Modi (@narendramodi) March 12, 2023
ಭಾರತ ಆಸ್ಟ್ರೇಲಿಯಾ ಮೊದಲ ವಾರ್ಷಿಕ ಶೃಂಗಸಭೆ
ಮಾರ್ಚ್ 10ರಂದು ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ಮೊದಲ ವಾರ್ಷಿಕ ಶೃಂಗಸಭೆ ನಡೆಯಿತು. ಈ ವೇಳೆ ಆಸ್ಟ್ರೇಲಿಯಾದ ಪ್ರಧಾನಿ ಮತ್ತು ಸಚಿವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಜಾಗತಿಕವಾಗಿ ತಲೆನೋವಾಗಿರುವ ಭಯೋತ್ಪಾದನೆ ಸಂಘಟನೆಗಳ ವಿರುದ್ಧ ಹೋರಾಡಲು ಎರಡೂ ದೇಶಗಳು ಆಸಕ್ತಿ ತೋರಿದ್ದು ಬೇರೆ ದೇಶಗಳಿಗೆ ಈ ನಿಟ್ಟಿನಲ್ಲಿ ಕೈಜೋಡಿಸುವಂತೆ ಕರೆ ನೀಡಿವೆ.
ಅದೇ ವೇಳೆ, ನರೇಂದ್ರ ಮೋದಿ, ಆಸ್ಟ್ರೇಲಿಯಾದಲ್ಲಿ ಹಿಂದೂ ಧಾರ್ಮಿಕ ಸ್ಥಳಗಳ ಮೇಲೆ ನಡೆದ ದಾಳಿಗಳ ಬಗ್ಗೆ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಆಲ್ಬನೀಸ್ ಜೊತೆ ಆತಂಕ ವ್ಯಕ್ತಪಡಿಸಿದರು. ಈ ವಿಚಾರವನ್ನು ಶನಿವಾರ ಉಲ್ಲೇಖಿಸಿದ ಆಲ್ಬನೀಸ್, ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ಘಟನೆಗಳನ್ನು ಸಹಿಸುವುದಿಲ್ಲ. ಅಂಥ ವಿದ್ವಂಸಕ ಕೃತ್ಯಗಳಿಗೆ ಕಾರಣರಾದವರನ್ನು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದೆಂದು ತಾನು ಭಾರತದ ಪ್ರಧಾನಿಗಳಿಗೆ ಭರವಸೆ ನೀಡಿದ್ದಾಗಿ ಹೇಳಿಕೊಂಡಿದ್ದಾರೆ.