AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾವ ಮಗುವೂ ಜೈಲಿನಲ್ಲಿ ಹುಟ್ಟಬಾರದು, ನಾಸಿಕ್ ಮತಾಂತರ ಪ್ರಕರಣದ ಆರೋಪಿ ನಿದಾ ಖಾನ್​​ಗೆ ಜಾಮೀನು

ನಾಸಿಕ್ ಮತಾಂತರ ಪ್ರಕರಣದಲ್ಲಿ ಆರೋಪಿ ಐದು ತಿಂಗಳ ಗರ್ಭಿಣಿ ನಿದಾ ಖಾನ್‌ಗೆ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ. ಜೈಲಿನಲ್ಲಿ ಮಗು ಹುಟ್ಟಬಾರದು ಎಂಬ ಮಾನವೀಯ ದೃಷ್ಟಿಯಿಂದ, ಶ್ರೀಕೃಷ್ಣನ ಜನನ ಕಥೆಯನ್ನು ಉಲ್ಲೇಖಿಸಿ ನ್ಯಾಯಾಲಯ ಈ ಮಹತ್ವದ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳಂತೆ ಗರ್ಭಿಣಿ ಕೈದಿಗಳ ಹಕ್ಕುಗಳನ್ನು ಎತ್ತಿಹಿಡಿಯಲಾಗಿದೆ, ಹುಟ್ಟಲಿರುವ ಮಗುವಿನ ಭವಿಷ್ಯಕ್ಕೆ ಆದ್ಯತೆ ನೀಡಲಾಗಿದೆ.

ಯಾವ ಮಗುವೂ ಜೈಲಿನಲ್ಲಿ ಹುಟ್ಟಬಾರದು, ನಾಸಿಕ್ ಮತಾಂತರ ಪ್ರಕರಣದ ಆರೋಪಿ ನಿದಾ ಖಾನ್​​ಗೆ ಜಾಮೀನು
ನಿದಾ ಖಾನ್
ನಯನಾ ರಾಜೀವ್
|

Updated on: Jul 10, 2026 | 11:33 AM

Share

ನಾಸಿಕ್, ಜುಲೈ 10: ಐಟಿ ಕಂಪನಿಯಲ್ಲಿ  ಧಾರ್ಮಿಕ ಮತಾಂತರಕ್ಕೆ ಯತ್ನಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಐದು ತಿಂಗಳ ಗರ್ಭಿಣಿ ನಿದಾ ಖಾನ್​​ಗೆ ನಾಸಿಕ್‌ನ ವಿಶೇಷ ನ್ಯಾಯಾಲಯವು ಜಾಮೀನು(Bail) ಮಂಜೂರು ಮಾಡಿದೆ. ಆದರೆ, ಈ ಜಾಮೀನು ನೀಡುವಾಗ ನ್ಯಾಯಮೂರ್ತಿಗಳು ನೀಡಿರುವ ತಾರ್ಕಿಕ ವಿವರಣೆ ಮತ್ತು ಉಲ್ಲೇಖಿಸಿರುವ ಶ್ರೀಕೃಷ್ಣನ ಜನ್ಮ ವೃತ್ತಾಂತವು ಈಗ ಇಡೀ ದೇಶದ ಗಮನ ಸೆಳೆದಿದೆ.

ನಾಸಿಕ್‌ನ ಐಟಿ ಕಂಪನಿಯೊಂದರಲ್ಲಿ ತನ್ನ ಸಹೋದ್ಯೋಗಿ ಯುವತಿಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ ಮತ್ತು ಹಿಂದೂ ದೇವತೆಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ನಿದಾ ಖಾನ್ ಎಂಬಾಕೆಯನ್ನು ಎರಡು ತಿಂಗಳ ಹಿಂದೆ ಪೊಲೀಸರು ಬಂಧಿಸಿದ್ದರು.

ನ್ಯಾಯಾಲಯ ಶ್ರೀಕೃಷ್ಣನ ಕಥೆ ಉಲ್ಲೇಖಿಸಿದ್ದು ಏಕೆ?

ಆರೋಪಿ ನಿದಾ ಖಾನ್ ತನಗೆ ಜಾಮೀನು ನೀಡುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಆಕೆ ಐದು ತಿಂಗಳ ಗರ್ಭಿಣಿ ಎಂಬ ಅಂಶವನ್ನು ಪರಿಗಣಿಸಿದ ವಿಶೇಷ ನ್ಯಾಯಾಧೀಶರಾದ ಕೆ.ಜಿ. ಜೋಶಿ ಅವರು, ಜೈಲಿನಲ್ಲೇ ಹುಟ್ಟಿದ ಭಗವಾನ್ ಶ್ರೀಕೃಷ್ಣನ ಇತಿಹಾಸವನ್ನು ನೆನಪಿಸಿಕೊಂಡು ಅತ್ಯಂತ ಭಾವುಕ ಮತ್ತು ಮಾನವೀಯ ಆದೇಶ ನೀಡಿದ್ದಾರೆ.

ನಿದಾ ಐದು ತಿಂಗಳ ಗರ್ಭಿಣಿ ಎಂಬುದು ಸ್ಪಷ್ಟವಾಗಿದೆ. ಇತಿಹಾಸದಲ್ಲಿ ಶ್ರೀಕೃಷ್ಣ ಜೈಲಿನಲ್ಲೇ ಜನಿಸಿದರೂ, ಇಂದಿನ ಆಧುನಿಕ ಸಮಾಜದಲ್ಲಿ ಹುಟ್ಟಲಿರುವ ಯಾವುದೇ ಮುಗ್ಧ ಮಗುವೂ ಜೈಲಿನ ಕತ್ತಲ ಕೋಣೆಯಲ್ಲಿ ಜನಿಸುವ ಆಘಾತವನ್ನು ಅಥವಾ ಸಮಾಜದ ಕಳಂಕವನ್ನು ಎದುರಿಸಬಾರದು. ನವಜಾತ ಶಿಶುವಿನ ಒಟ್ಟಾರೆ ಕಲ್ಯಾಣ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಮಾನವೀಯತೆಯ ಆಧಾರದ ಮೇಲೆ ಆರೋಪಿಗೆ ನ್ಯಾಯಾಂಗ ವಿವೇಚನೆಯನ್ನು ಬಳಸಿ ಜಾಮೀನು ನೀಡುವುದು ಸೂಕ್ತವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮತ್ತಷ್ಟು ಓದಿ: ಮೇಘಾಲಯ ಹನಿಮೂನ್ ಕೊಲೆ ಪ್ರಕರಣ; ಸೋನಂ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ ಮೊರೆಹೋದ ಮೃತನ ಕುಟುಂಬಸ್ಥರು!

ಆರೋಪಿ ನಿದಾ ಖಾನ್ ವಿರುದ್ಧ ಹಿಂದೂ ದೇವತೆಗಳ ಹಾಗೂ ಸ್ವತಃ ಶ್ರೀಕೃಷ್ಣನ ವಿರುದ್ಧವೇ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪವಿತ್ತು. ಆದರೂ ಅದೇ ಶ್ರೀಕೃಷ್ಣನ ಜನ್ಮ ಕಥೆಯನ್ನು ಉಲ್ಲೇಖಿಸಿ ನ್ಯಾಯಾಲಯ ಆಕೆಯ ಕರಾರಿಗೆ ಜಾಮೀನು ನೀಡಿರುವುದು ಈ ತೀರ್ಪಿನ ವಿಶೇಷತೆಯಾಗಿದೆ.

ಏನಿದು ಪ್ರಕರಣ?

ಬೆಳಕಿಗೆ ಬಂದಿರುವ ತನಿಖಾ ವರದಿಯ ಪ್ರಕಾರ, ನಿದಾ ಖಾನ್ ತನ್ನ ಸಹೋದ್ಯೋಗಿಗಳಿಗೆ ಬುರ್ಖಾ ಧರಿಸುವಂತೆ ಪ್ರೇರೇಪಿಸುವುದು, ಧಾರ್ಮಿಕ ಪುಸ್ತಕಗಳನ್ನು ಹಂಚುವುದು ಮತ್ತು ಅವರ ಮೊಬೈಲ್ ಫೋನ್‌ಗಳಲ್ಲಿ ಇಸ್ಲಾಮಿಕ್ ಆಪ್‌ಗಳನ್ನು ಇನ್‌ಸ್ಟಾಲ್ ಮಾಡುತ್ತಿದ್ದಳು ಎಂದು ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ.

ಈ ಪ್ರಕರಣದಲ್ಲಿ ನಿದಾ ಖಾನ್ ಜೊತೆಗೆ ಇತರ ಏಳು ಮಂದಿ ಆರೋಪಿಗಳೂ ಭಾಗಿಯಾಗಿದ್ದು, ಅವರ ವಿರುದ್ಧ ಒಟ್ಟು 9 ಎಫ್‌ಐಆರ್‌ಗಳು ದಾಖಲಾಗಿವೆ. ಸದ್ಯ ನಿದಾ ಖಾನ್ ಪ್ರಕರಣದ ತನಿಖೆ ಮುಗಿದು ಚಾರ್ಜ್‌ಶೀಟ್ ಸಲ್ಲಿಕೆಯಾಗಿರುವುದರಿಂದ ಆಕೆಯನ್ನು ಜೈಲಿನಲ್ಲಿಡುವ ಅಗತ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

ಕಾನೂನಿನ ಚೌಕಟ್ಟಿನಲ್ಲಿ ಜಾಮೀನು ನೀಡುವುದು ಎಂದರೆ ಆರೋಪಿ ನಿರ್ದೋಷಿ ಎಂದರ್ಥವಲ್ಲ. ಹುಟ್ಟಲಿರುವ ಮಗುವಿನ ಮಾನವ ಹಕ್ಕುಗಳನ್ನು ಎತ್ತಿಹಿಡಿಯಲು ನ್ಯಾಯಾಲಯ ಈ ನಿರ್ಧಾರ ತಳೆದಿದೆ. ಪ್ರಕರಣದ ಮುಂದಿನ ವಿಚಾರಣೆಗಳು ಎಂದಿನಂತೆ ಮುಂದುವರಿಯಲಿದ್ದು, ಸಾಕ್ಷ್ಯಾಧಾರಗಳ ಮೇಲೆಯೇ ಅಂತಿಮ ತೀರ್ಪು ಹೊರಬರಲಿದೆ.

ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಗರ್ಭಿಣಿ ಕೈದಿಗಳ ಹಕ್ಕುಗಳಿಗೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ. ಜೈಲಿನ ವಾತಾವರಣವು ಗರ್ಭಿಣಿಯ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದರಿಂದ, ದೇಶದ ಸುಪ್ರೀಂ ಕೋರ್ಟ್ ಕೂಡ ಹಿಂದೆ ಇಂತಹ ಹಲವು ಪ್ರಕರಣಗಳಲ್ಲಿ ಗರ್ಭಿಣಿ ಮಹಿಳೆಯರಿಗೆ ಮಾನವೀಯತೆಯ ಆಧಾರದ ಮೇಲೆ ತಕ್ಷಣದ ಜಾಮೀನು ನೀಡುವಂತೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಅದನ್ನು ನಾಸಿಕ್ ನ್ಯಾಯಾಲಯ ಈಗ ಎತ್ತಿ ಹಿಡಿದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us