ರಾಜ್ಯಸಭೆಯಲ್ಲಿ ಇಂದು ಬೆಲೆಯೇರಿಕೆ ಬಗ್ಗೆ ನಿರ್ಮಲಾ ಸೀತಾರಾಮನ್ ಭಾಷಣ; ಅಗ್ನಿಪಥ್ ಕುರಿತ ಚರ್ಚೆಗೆ ಒತ್ತಾಯಿಸಲು ಆಪ್ ಸಜ್ಜು
ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಸಭೆಯಲ್ಲಿ ಬೆಲೆ ಏರಿಕೆ ವಿಷಯದ ಬಗ್ಗೆ ಮಾತನಾಡಲಿದ್ದಾರೆ.

ನವದೆಹಲಿ: ಸೋಮವಾರ ಲೋಕಸಭೆಯಲ್ಲಿ ಕಾವೇರಿದ್ದ ಬೆಲೆ ಏರಿಕೆಯ ಬಿಸಿ ಇಂದು ರಾಜ್ಯಸಭೆಯಲ್ಲೂ (Rajya Sabha) ಮುಂದುವರೆಯುವ ಸಾಧ್ಯತೆಯಿದೆ. ನಿನ್ನೆ ಬೆಲೆ ಏರಿಕೆಯನ್ನು ಖಂಡಿಸಿ ಪ್ರತಿಪಕ್ಷಗಳ ಸಂಸದರು ಸದನದಿಂದ ಹೊರನಡೆದಿದ್ದರು. ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ರಾಜ್ಯಸಭೆಯಲ್ಲಿ ಬೆಲೆ ಏರಿಕೆ ವಿಷಯದ ಬಗ್ಗೆ ಮಾತನಾಡಲಿದ್ದಾರೆ. ಉಭಯ ಸದನಗಳಲ್ಲಿ ಬೆಲೆ ಏರಿಕೆಯ ಚರ್ಚೆಯನ್ನು ಕೈಗೆತ್ತಿಕೊಂಡ ನಂತರ ಪ್ರತಿಪಕ್ಷಗಳು ಅಗ್ನಿಪಥ್ (Agnipath) ರಕ್ಷಣಾ ನೇಮಕಾತಿ ಯೋಜನೆಯ ಬಗ್ಗೆ ಚರ್ಚೆಗೆ ಒತ್ತಾಯಿಸುವ ಸಾಧ್ಯತೆಯಿದೆ.
ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳನ್ನು ಹುಟ್ಟುಹಾಕಿದ ಅಗ್ನಿಪಥ್ ಯೋಜನೆ ಕುರಿತು ಚರ್ಚೆಯ ಅಗತ್ಯವಿದೆ ಎಂದು ವಿರೋಧ ಪಕ್ಷದ ನಾಯಕರು ಹೇಳಿದ್ದಾರೆ. “ನಾವು ಖಂಡಿತವಾಗಿಯೂ ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತೇವೆ. ಆದರೆ, ಅಧಿವೇಶನವು ಆಗಸ್ಟ್ 12ರಂದು ಕೊನೆಗೊಳ್ಳುವುದರಿಂದ ಹಾಗೂ ಅದರ ನಡುವೆ ವಾರಾಂತ್ಯ, ಉಪರಾಷ್ಟ್ರಪತಿ ಚುನಾವಣೆ ಮತ್ತು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ವಿದಾಯ ಕಾರ್ಯಕ್ರಮವೂ ಇರುವುದರಿಂದ ಅದರ ಮೇಲೆ ಚರ್ಚೆಗೆ ಒತ್ತಾಯಿಸಲು ಬಹಳ ಕಡಿಮೆ ಸಮಯವಿದೆ’ ಎಂದು ವಿರೋಧ ಪಕ್ಷದ ನಾಯಕರೊಬ್ಬರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ: ಅಕ್ಕಿ, ಬೇಳೆ, ಮೊಸರು ಸೇರಿದಂತೆ 14 ವಸ್ತುಗಳಿಗೆ ಜಿಎಸ್‌ಟಿ ಅನ್ವಯವಾಗಲ್ಲ, ಷರತ್ತುಗಳು ಅನ್ವಯ: ನಿರ್ಮಲಾ ಸೀತಾರಾಮನ್
ಲೋಕಸಭಾ ಅಧಿವೇಶನದಲ್ಲಿ ಬೆಲೆ ಏರಿಕೆಯ ಕುರಿತ ಚರ್ಚೆಗೆ ತನ್ನ ಎರಡು ಗಂಟೆಗಳ ಸುದೀರ್ಘ ಉತ್ತರದಲ್ಲಿ ನಿರ್ಮಲಾ ಸೀತಾರಾಮನ್, ಭಾರತವು ಆರ್ಥಿಕ ಹಿಂಜರಿತ ಅಥವಾ ನಿಶ್ಚಲತೆಯ ಅಪಾಯವನ್ನು ಎದುರಿಸುವುದಿಲ್ಲ. ಭಾರತವು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು ಹೊಂದಿದೆ ಎಂದು ಹೇಳಿದರು. ಆದರೆ, ಆ ಉತ್ತರದಿಂದ ತೃಪ್ತರಾಗದ ಪ್ರತಿಪಕ್ಷಗಳು ಕಾಂಗ್ರೆಸ್ ನೇತೃತ್ವದಲ್ಲಿ ಸಭಾತ್ಯಾಗ ನಡೆಸಿತು.
ದೇಶವು ಹಣದುಬ್ಬರದ ಒತ್ತಡವನ್ನು ಎದುರಿಸುತ್ತಿದೆ ಎಂದು ಒಪ್ಪಿಕೊಂಡ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೊವಿಡ್ ಮತ್ತು ಒಮಿಕ್ರಾನ್‌ನಂತಹ ಸಮಸ್ಯೆಗಳ ಹೊರತಾಗಿಯೂ ಸರ್ಕಾರವು ಹಣದುಬ್ಬರವನ್ನು ಶೇ.7ಕ್ಕಿಂತ ಕಡಿಮೆ ಮಾಡುವ ಪ್ರಯತ್ನದಲ್ಲಿದೆ ಎಂದು ಹೇಳಿದರು.
ಇದನ್ನೂ ಓದಿ: Breaking ಭಾರತದ ಆರ್ಥಿಕತೆಯು ಹೆಚ್ಚು ಸದೃಢವಾಗುತ್ತಿದೆ: ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್
ಮೋದಿ ಸರ್ಕಾರವು ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿಯನ್ನು ಹೆಚ್ಚಿಸಿದೆ ಎಂಬ ಪ್ರತಿಪಕ್ಷಗಳ ಪುನರಾವರ್ತಿತ ಟೀಕೆಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, ಇದು ರಾಜ್ಯ ಹಣಕಾಸು ಸಚಿವರು ಮತ್ತು ಕೇಂದ್ರ ಹಣಕಾಸು ಸಚಿವರನ್ನು ಒಳಗೊಂಡ ಜಿಎಸ್‌ಟಿ ಕೌನ್ಸಿಲ್‌ನ ಸರ್ವಾನುಮತದ ನಿರ್ಧಾರ ಎಂದು ಹೇಳಿದರು.
ಜುಲೈ 18ರಿಂದ ಜಾರಿಗೆ ಬರುವಂತೆ ಪ್ಯಾಕ್ ಮಾಡಲಾದ ಮೊಸರು, ಪನೀರ್, ಜೇನುತುಪ್ಪ, ಗೋಧಿ ಬೆಲ್ಲ, ಪಫ್ಡ್ ರೈಸ್ ಸೇರಿದಂತೆ ಅಗತ್ಯ ಆಹಾರ ಪದಾರ್ಥಗಳ ಮೇಲೆ 5 ಪ್ರತಿಶತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಲಾಗಿದೆ.