ಅಕ್ಕಿ, ಬೇಳೆ, ಮೊಸರು ಸೇರಿದಂತೆ 14 ವಸ್ತುಗಳಿಗೆ ಜಿಎಸ್​​ಟಿ ಅನ್ವಯವಾಗಲ್ಲ, ಷರತ್ತುಗಳು ಅನ್ವಯ: ನಿರ್ಮಲಾ ಸೀತಾರಾಮನ್

14 ಟ್ವೀಟ್​​ಗಳ ಸರಣಿ ಟ್ವೀಟ್ ಮಾಡಿದ ನಿರ್ಮಲಾ ಸೀತಾರಾಮನ್, ಪ್ರೀ ಪ್ಯಾಕ್ಡ್ ಮತ್ತು ಮೊದಲೇ ಲೇಬಲ್ ಮಾಡಿದ ವಸ್ತುಗಳ ಮೇಲೆ ತೆರಿಗೆ ವಿಧಿಸುವ ನಿರ್ಧಾರವನ್ನು ಜಿಎಸ್​​ಟಿ ಕೌನ್ಸಿಲ್ ಒಟ್ಟಾರೆಯಾಗಿ ತೆಗೆದುಕೊಂಡಿದೆ, ಇದು ಒಬ್ಬ ಸದಸ್ಯರ ನಿರ್ಧಾರವಲ್ಲ ಎಂದು ಹೇಳಿದ್ದಾ

ಅಕ್ಕಿ, ಬೇಳೆ, ಮೊಸರು ಸೇರಿದಂತೆ 14 ವಸ್ತುಗಳಿಗೆ ಜಿಎಸ್​​ಟಿ ಅನ್ವಯವಾಗಲ್ಲ, ಷರತ್ತುಗಳು ಅನ್ವಯ: ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 19, 2022 | 5:21 PM

ಪ್ಯಾಕ್ ಆದ ಆಹಾರ ಪದಾರ್ಥಗಳು ಮತ್ತು ಲೇಬಲ್ ಮಾಡಿದ ವಸ್ತುಗಳ ಮೇಲೆ ಜುಲೈ 18ರಿಂದ ಜಾರಿಯಾಗಿರುವ ಶೇ 5ರ ಸರಕು ಮತ್ತು ಸೇವಾ ಸುಂಕಕ್ಕೆ (Goods and Service Tax – GST) ರಾಷ್ಟ್ರವ್ಯಾಪಿ ವರ್ತಕರು ಮತ್ತು ಗ್ರಾಹಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಈ ವಸ್ತುಗಳನ್ನು ಬಿಡಿಬಿಡಿಯಾಗಿ ಮಾರಾಟಮಾಡಿದರೆ ಅಂಥವುಗಳಿಗೆ ಜಿಎಸ್​​ಟಿ ಅನ್ವಯವಾಗುವುದಿಲ್ಲ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮಂಗಳವಾರ ಹೇಳಿದ್ದಾರೆ. ದಿನನಿತ್ಯ ಬಳಕೆಯ ವಸ್ತುಗಳಾದ ಅಕ್ಕಿ, ಹಾಲು, ಧಾನ್ಯ ಮೊದಲಾದವುಗಳು ಸದ್ಯ ಜಿಎಸ್​​ಟಿ ವ್ಯಾಪ್ತಿಗೆ ಬರುತ್ತಿವೆ. 14 ಟ್ವೀಟ್​​ಗಳ ಸರಣಿ ಟ್ವೀಟ್ ಮಾಡಿದ ನಿರ್ಮಲಾ ಸೀತಾರಾಮನ್, ಪ್ರೀ ಪ್ಯಾಕ್ಡ್ ಮತ್ತು ಮೊದಲೇ ಲೇಬಲ್ ಮಾಡಿದ ವಸ್ತುಗಳ ಮೇಲೆ ತೆರಿಗೆ ವಿಧಿಸುವ ನಿರ್ಧಾರವನ್ನು ಜಿಎಸ್​​ಟಿ ಕೌನ್ಸಿಲ್ ಒಟ್ಟಾರೆಯಾಗಿ ತೆಗೆದುಕೊಂಡಿದೆ, ಇದು ಒಬ್ಬ ಸದಸ್ಯರ ನಿರ್ಧಾರವಲ್ಲ ಎಂದು ಹೇಳಿದ್ದಾರೆ. ಜಿಎಸ್​​ಟಿ ಕೌನ್ಸಿಲ್, ಜಿಎಸ್​​ಟಿ ವಿನಾಯಿತಿ ನೀಡಿರುವ ವಸ್ತುಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ. ಈ ವಸ್ತುಗಳನ್ನು ಬಿಡಿಬಿಡಿಯಾಗಿ, ಮೊದಲೇ ಪ್ಯಾಕ್ ಮಾಡದೇ, ಮೊದಲೇ ಲೇಬಲ್ ಮಾಡಿಲ್ಲದಿದ್ದರೆ ಅವುಗಳಿಗೆ ಜಿಎಸ್​​ಟಿ ಅನ್ವಯವಾಗುವುದಿಲ್ಲ. ಇದು ಒಟ್ಟಾರೆ ಜಿಎಸ್​​ಟಿ ಕೌನ್ಸಿಲ್​​ವ ನಿರ್ಧಾರವೇ ಹೊರತು ಒಬ್ಬ ಸದಸ್ಯರ ನಿರ್ಧಾರವಲ್ಲ. ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ ಬಗ್ಗೆ ಕೆಳಗಿನ 14 ಟ್ವೀಟ್ ಗಳಲ್ಲಿ ವಿವರಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಇತ್ತೀಚೆಗೆ ಜಿಎಸ್​​ಟಿ ಕೌನ್ಸಿಲ್ ನ 47 ನೇ ಸಭೆಯು ನಿರ್ದಿಷ್ಟ ಆಹಾರ ಪದಾರ್ಥಗಳಾದ ಕಾಳುಗಳು, ಧಾನ್ಯಗಳು, ಹಿಟ್ಟು ಮೊದಲಾದ ನಿರ್ದಿಷ್ಟ ವಸ್ತುಗಳ ಮೇಲೆ ಜಿಎಸ್​​ಟಿ ಹೇರಿಕೆಯನ್ನು ಮರು ಪರಿಶೀಲಿಸಬೇಕು ಎಂದು ಶಿಫಾರಸು ಮಾಡಿತ್ತು. ಈ ಬಗ್ಗೆ ಹಲವಾರು ತಪ್ಪುಕಲ್ಪನೆಗಳಿದ್ದು ಅವುಗಳನ್ನು ಪ್ರಚಾರ ಮಾಡಲಾಗಿದೆ ಎಂದ ನಿರ್ಮಲಾ, ಇಲ್ಲಿದೆ ಸತ್ಯಾಂಶ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.

ಆಹಾರ ವಸ್ತುಗಳ ಮೇಲೆ ತೆರಿಗೆ ವಿಧಿಸುತ್ತಿರುವುದು ಇದೇ ಮೊದಲಾ? ಅಲ್ಲ. ಜಿಎಸ್​​ಟಿ ಬರುವುದಕ್ಕಿಂತ ಮುನ್ನವೇ ರಾಜ್ಯಗಳು ಆಹಾರ ಧಾನ್ಯಗಳಿಂದ ಇಂತಿಷ್ಟು ಆದಾಯವನ್ನು ಸಂಗ್ರಹಿಸುತ್ತಿತ್ತು. ಖರೀದಿ ತೆರಿಗೆ ಮೂಲಕ ಪಂಜಾಬ್ ಆಹಾರ ಧಾನ್ಯಗಳಿಂದ 2,000 ಕೋಟಿ ಸಂಗ್ರಹಿಸಿತ್ತು. ಉತ್ತರ ಪ್ರದೇಶ 700 ಕೋಟಿ ಸಂಗ್ರಹಿಸಿತ್ತು ಎಂದಿದ್ದಾರೆ ನಿರ್ಮಲಾ.

ಜಿಎಸ್​​ಟಿ ಜಾರಿಗೆ ಬಂದಾಗ ಶೇ 5ರಷ್ಟು ಜಿಎಸ್​​ಟಿ ಬ್ರಾಂಡೆಡ್ ಕಾಳು, ಧಾನ್ಯ ಮತ್ತು ಹಿಟ್ಟಿನ ಮೇಲೆ ಅನ್ವಯಿಸಲಾಯಿತು. ಆಮೇಲೆ ಇದನ್ನು ತಿದ್ದುಪಡಿ ಮಾಡಿದ್ದು, ನೋಂದಣಿ ಮಾಡಿದ ಬ್ರಾಂಡ್ ಅಡಿಯಲ್ಲಿ ಅಥವಾ ಸರಬರಾಜುದಾರರಿಂದ ಜಾರಿಗೊಳಿಸಬಹುದಾದ ಹಕ್ಕನ್ನು ಬಿಟ್ಟುಕೊಡದ ಬ್ರ್ಯಾಂಡ್​​ಗಳ ಅಡಿಯಲ್ಲಿ ಮಾರಾಟವಾಗುವ ವಸ್ತುಗಳಿಗೆ ಮಾತ್ರ ತೆರಿಗೆ ಅನ್ವಯಿಸಲಾಯಿತು. ಆದಾಗ್ಯೂ, ಇದರ ದುರ್ಬಳಕೆಯಾಗುತ್ತಿದೆ ಎಂದು ಪ್ರಖ್ಯಾತ ಉತ್ಪಾದಕರು ಮತ್ತು ಬ್ರಾಂಡ್ ಮಾಲೀಕರು ಗಮನಿಸಿದ್ದು, ಕ್ರಮೇಣ ಈ ವಸ್ತುಗಳಿಂದ ಬರುವ ಜಿಎಸ್​​ಟಿ ಆದಾಯ ಕುಸಿಯಿತು.

ಬ್ರಾಂಡೆಂಡ್ ಸರಕುಗಳ ಮೇಲೆ ತೆರಿಗೆ ಪಾವತಿ ಮಾಡುತ್ತಿರುವ ಸರಬರಾಜುದಾರರು ಮತ್ತು ಇಂಡಸ್ಟ್ರಿ ಅಸೋಸಿಯೇಷನ್ ಇದನ್ನು ಮತ್ತೆ ಕಳುಹಿಸಿತು. ಈ ರೀತಿಯ ದುರ್ಬಳಕೆ ತಡೆಯುವುದಕ್ಕಾಗಿ ಎಲ್ಲ ಪ್ಯಾಕೇಜ್ಡ್ ವಸ್ತುಗಳ ಮೇಲೆ ಜಿಎಸ್​​ಟಿ ವಿಧಿಸಬೇಕು ಎಂದು ಅವರು ಸರ್ಕಾರಕ್ಕೆ ಪತ್ರ ಬರೆದರು. ಈ ರೀತಿ ತೆರಿಗೆ ವಂಚನೆ ರಾಜ್ಯಗಳ ಗಮನಕ್ಕೂ ಬಂದಿತ್ತು. ರಾಜಸ್ಥಾನ, ಪಶ್ಚಿಮ ಬಂಗಾಳ, ತಮಿಳುನಾಡು, ಬಿಹಾರ, ಉತ್ತರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಹರ್ಯಾಣ ಮತ್ತು ಗುಜರಾತಿನ ಅಧಿಕಾರಿಗಳು ಇರುವ ಫಿಟ್​​ಮೆಂಟ್ ಸಮಿತಿಯು ಹಲವಾರು ಸಭೆ ನಡೆಸಿ ಈ ಸಮಸ್ಯೆಯನ್ನು ಪರಿಶೀಲಿಸಿದ್ದು, ದುರ್ಬಳಕೆ ತಡೆಯುವುದಕ್ಕಾಗಿ ವಿಧಾನಗಳನ್ನು ಬದಲಿಸಬೇಕೆಂದು ಶಿಫಾರಸು ಮಾಡಿತು.

ಪ್ಯಾಕ್ ಮಾಡಲಾದ ಮತ್ತು ಲೇಬಲ್ ಮಾಡಲಾದ ಸರಕುಗಳನ್ನ ಸರಬರಾಜು ಮಾಡಿದಾಗ ಜಿಎಸ್​​ಟಿ ಅನ್ವಯವಾಗುತ್ತದೆ.

ಈ ಕೆಳಗೆ ನೀಡಲಾದ ಪಟ್ಟಿಯಲ್ಲಿರುವ ನಿರ್ದಿಷ್ಟ ವಸ್ತುಗಳನ್ನು ಬಿಡಿಯಾಗಿ ಮಾರಿದಾಗ, ಮೊದಲೇ ಪ್ಯಾಕ್ ಮಾಡಿಲ್ಲದೆ ಅಥವಾ ಮೊದಲೇ ಲೇಬಲ್ ಮಾಡದೇ ಇದ್ದರೆ ಅದಕ್ಕೆ ಜಿಎಸ್​​ಟಿ ಅನ್ವಯವಾಗುವುದಿಲ್ಲ ಎಂದು ವಿತ್ತ ಸಚಿವೆ ಹೇಳಿದ್ದಾರೆ

ಬಿಡಿಯಾಗಿ ಮಾರಿದಾಗ ಜಿಎಸ್​​ಟಿ ಅನ್ವಯವಾಗದೇ ಇರುವ ವಸ್ತುಗಳ ಪಟ್ಟಿ

ದ್ವಿದಳ ಧಾನ್ಯ/ ಬೇಳೆ

ಗೋಧಿ

ಸಣ್ಣ ಗೋಧಿ

ಓಟ್ಸ್

ಮೈದಾ

ಅಕ್ಕಿ

ಗೋಧಿ ಹಿಟ್ಟು

ಸೂಜಿ/ ರವಾ

ಕಡಲೆ ಹಿಟ್ಟು

ಮಂಡಕ್ಕಿ

ಮೊಸರು/ ಲಸ್ಸಿ

ಜಿಎಸ್‌ಟಿ ಕೌನ್ಸಿಲ್‌ನಿಂದ ಸರ್ವಾನುಮತದ ನಿರ್ಧಾರವಾಗಿತ್ತು ಇದು

ದಿನಬಳಕೆಯ ವಸ್ತುಗಳ ಮೇಲೆ ಶೇ 5ರಷ್ಟು ಜಿಎಸ್​​ಟಿ ವಿಧಿಸುವುದು ಜಿಎಸ್‌ಟಿ ಕೌನ್ಸಿಲ್‌ನಿಂದ ಸರ್ವಾನುಮತದ ನಿರ್ಧಾರವಾಗಿತ್ತು ಎಂದು ವಿತ್ತಸಚಿವೆ ಒತ್ತಿ ಹೇಳಿದ್ದಾರೆ. ಎಲ್ಲ ರಾಜ್ಯಗಳು, ಬಿಜೆಪಿ ಸರ್ಕಾರವಿಲ್ಲದೇ ಇರುವ ರಾಜ್ಯಗಳು (ಪಂಜಾಬ್, ರಾಜಸ್ಥಾನ್, ಛತ್ತೀಸಗಡ, ತಮಿಳುನಾಡು, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ) ಈ ನಿರ್ಧಾರಕ್ಕೆ ಸಹಮತ ಸೂಚಿಸಿದ್ದವು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Published On - 5:20 pm, Tue, 19 July 22