‘ಸೋನಿಯಾ ಗಾಂಧಿ ಆತ್ಮಕತೆಯನ್ನು ನಾವು ಪ್ರಕಟಿಸುವುದಿಲ್ಲ’; ಪೆಂಗ್ವಿನ್ ಇಂಡಿಯಾ ಸ್ಪಷ್ಟನೆ

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಕತೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಪುಸ್ತಕವನ್ನು ಪೆಂಗ್ವಿನ್ ಇಂಡಿಯಾ ಪ್ರಕಾಶನ ಪ್ರಕಟಿಸುವುದಾಗಿ ಘೋಷಿಸಿತ್ತು. ಆದರೆ, ಈಗ ಆ ಕುರಿತು ಅಧಿಕೃತ ಸ್ಪಷ್ಟನೆ ನೀಡಿರುವ ಪೆಂಗ್ವಿನ್ ಇಂಡಿಯಾ ತಾವು ಸೋನಿಯಾ ಗಾಂಧಿಯವರ ಆತ್ಮಕಥನವನ್ನು ಪ್ರಕಟಿಸುವುದಿಲ್ಲ ಎಂದು ಪ್ರಕಟಣೆ ಹೊರಡಿಸಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜನ್ಮ ದಿನೋತ್ಸವದ ವೇಳೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ತಮ್ಮ ತಾಯಿ ಸೋನಿಯಾ ಗಾಂಧಿಯವರ ಈ ಆತ್ಮಕತೆಯ ಬಗ್ಗೆ ಮಾಹಿತಿ ನೀಡಿದ್ದರು.

ಸೋನಿಯಾ ಗಾಂಧಿ ಆತ್ಮಕತೆಯನ್ನು ನಾವು ಪ್ರಕಟಿಸುವುದಿಲ್ಲ; ಪೆಂಗ್ವಿನ್ ಇಂಡಿಯಾ ಸ್ಪಷ್ಟನೆ
Sonia Gandhi's Book
Image Credit source: TV9

Updated on: Aug 28, 2026 | 4:22 PM

ನವದೆಹಲಿ, ಆಗಸ್ಟ್ 28: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ (Sonia Gandhi’s Memoir) ಬಾಲ್ಯ, ಕಾಲೇಜು ದಿನಗಳು, ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜೊತೆಗಿನ ಪ್ರೀತಿ, ಮದುವೆ, ರಾಜೀವ್ ಗಾಂಧಿಯವರ ಹತ್ಯೆಯ ನಂತರ ದಿನಗಳ ಬಗ್ಗೆ ಹಲವು ಕುತೂಹಲಕಾರಿ ಮಾಹಿತಿಯಿದ್ದ ಆತ್ಮಕತೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ (Belonging: A Journey of Love) ಬಿಡುಗಡೆಗೆ ಸಜ್ಜಾಗಿತ್ತು. ಪ್ರಸಿದ್ಧ ಪ್ರಕಾಶನ ಸಂಸ್ಥೆಯಾದ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಭಾರತದಲ್ಲಿ ಈ ಪುಸ್ತಕವನ್ನು ಪ್ರಕಟಿಸಬೇಕಾಗಿತ್ತು. ಆದರೆ, ಆ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ಪೆಂಗ್ವಿನ್ ಘೋಷಿಸಿದೆ. ಹೀಗಾಗಿ, ಈ ಆತ್ಮಕತೆಯ ಪ್ರಕಾಶಕರು ಬೇರೆ ಯಾರಾಗಲಿದ್ದಾರೆ ಎಂಬುದಕ್ಕೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ.

ಪೆಂಗ್ವಿನ್ ಹಿಂದೆ ಸರಿದಿದ್ದೇಕೆ?:

ಸೋನಿಯಾ ಗಾಂಧಿಯವರ ಆತ್ಮಕತೆ ಬಿಡುಗಡೆ ಮಾಡಲು ಪೆಂಗ್ವಿನ್ ಇಂಡಿಯಾ ಆಸಕ್ತಿ ತೋರಿದ್ದು ನಿಜ. ಆದರೆ, ಸೋನಿಯಾ ಗಾಂಧಿಯವರ ಬಳಿ ಕೆಲವು ಅಂಶಗಳನ್ನು ಡಿಲೀಟ್ ಮಾಡಲು ಮತ್ತು ತಿದ್ದುಪಡಿ ಮಾಡಲು ಸೂಚಿಸಲಾಗಿತ್ತು. ಅದಕ್ಕೆ ಲೇಖಕಿಯಾದ ಸೋನಿಯಾ ಗಾಂಧಿ ಒಪ್ಪದ ಕಾರಣದಿಂದ ಪೆಂಗ್ವಿನ್ ಈ ನಿರ್ಧಾರ ತೆಗೆದುಕೊಂಡಿದೆ.

ಇದನ್ನೂ ಓದಿ: ‘ಅಪ್ಪನ ಸಾವಿನ ಬಳಿಕ ಅಮ್ಮ ಪಟ್ಟ ಕಷ್ಟ ನಮಗಷ್ಟೇ ಗೊತ್ತು’; ಸೋನಿಯಾ ಗಾಂಧಿ ಬಗ್ಗೆ ರಾಹುಲ್ ಗಾಂಧಿ ಭಾವನಾತ್ಮಕ ಬರಹ

“ಪ್ರಕಾಶಕರಾಗಿ ವಿಷಯಗಳ ನೈಜತೆಯನ್ನು ಪರಿಶೀಲಿಸುವುದು ಮತ್ತು ಲೇಖಕರಿಗೆ ಅವರ ಪುಸ್ತಕದ ಹಿತದೃಷ್ಟಿಯಿಂದ ಅಗತ್ಯ ಸಲಹೆಗಳನ್ನು ನೀಡುವುದು ನಮ್ಮ ಹಕ್ಕು ಹಾಗೂ ಜವಾಬ್ದಾರಿಯಾಗಿದೆ. ಇದು ಪ್ರಕಾಶನ ಕ್ಷೇತ್ರದ ಸಾಮಾನ್ಯ ಪ್ರಕ್ರಿಯೆಯಷ್ಟೇ. ಈ ಕುರಿತು ನಡೆದ ಎಲ್ಲಾ ಚರ್ಚೆಗಳ ಉದ್ದಕ್ಕೂ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಈ ಪುಸ್ತಕವನ್ನು ಪ್ರಕಟಿಸಲು ಸಿದ್ಧವಾಗಿತ್ತು ಮತ್ತು ತೀವ್ರ ಆಸಕ್ತಿಯನ್ನು ಹೊಂದಿತ್ತು. ಪುಸ್ತಕದ ಕೆಲವು ಭಾಗಗಳಲ್ಲಿ ತಿದ್ದುಪಡಿ ಹಾಗೂ ಕೆಲವು ವಿಷಯಗಳನ್ನು ಕೈಬಿಡುವಂತೆ ಪ್ರಕಾಶನ ಸಂಸ್ಥೆ ಕೋರಿತ್ತು. ಆದರೆ ಸೋನಿಯಾ ಗಾಂಧಿ ಇದನ್ನು ನಿರಾಕರಿಸಿದ್ದರಿಂದ ಪೆಂಗ್ವಿನ್ ಸಂಸ್ಥೆಯು ಪುಸ್ತಕ ಪ್ರಕಟಿಸದಿರಲು ನಿರ್ಧರಿಸಿದೆ” ಎಂದು ಪೆಂಗ್ವಿನ್ ಇಂಡಿಯಾ ಸ್ಪಷ್ಟನೆ ನೀಡಿದೆ.


ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆ ವೇಳೆ ‘ವಂದೇ ಮಾತರಂ’ ಗೀತೆಗೆ ಅವಮಾನಿಸಿದರೇ ಸೋನಿಯಾ ಗಾಂಧಿ?

ನ. 10ರಂದು ಬಿಡುಗಡೆಯಾಗಬೇಕಿತ್ತು ಸೋನಿಯಾ ಗಾಂಧಿ ಆತ್ಮಕತೆ:

ನವೆಂಬರ್ 10ರಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಪುಸ್ತಕ ಬಿಡುಗಡೆಯಾಗಲು ವೇಳಾಪಟ್ಟಿ ನಿಗದಿಯಾಗಿತ್ತು. ಮೊದಲ ಹಂತದಲ್ಲೇ 1 ಲಕ್ಷ ಪ್ರತಿಗಳನ್ನು ಮುದ್ರಿಸಲು ಯೋಜನೆ ರೂಪಿಸಲಾಗಿತ್ತು. ಈ ಕೃತಿಯು ಸೋನಿಯಾ ಗಾಂಧಿ ಅವರ ಇಟಲಿಯ ಬಾಲ್ಯದ ದಿನಗಳು, ಭಾರತಕ್ಕೆ ಅವರ ಆಗಮನ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರೊಂದಿಗಿನ ವಿವಾಹ ಹಾಗೂ ಅವರ ಜೀವನದಲ್ಲಿ ಸಂಭವಿಸಿದ ಪ್ರಮುಖ ದುರಂತಗಳಾದ ಸಂಜಯ್ ಗಾಂಧಿ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ನಿಧನದ ದಿನಗಳ ಕುರಿತು ಬೆಳಕು ಚೆಲ್ಲುತ್ತದೆ. ಸೋನಿಯಾ ಗಾಂಧಿ ಅವರು ಈ ಪುಸ್ತಕವನ್ನು ಬೇರೆ ಪ್ರಕಾಶನ ಸಂಸ್ಥೆಯ ಮೂಲಕ ಹೊರತರುತ್ತಾರೆಯೇ ಅಥವಾ ಸ್ವತಂತ್ರವಾಗಿ ಪ್ರಕಟಿಸುತ್ತಾರೆಯೇ ಎಂಬ ಕುರಿತು ಕಾಂಗ್ರೆಸ್ ಅಥವಾ ಅವರ ಕಚೇರಿಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us