ಸಿರಿಂಜ್ನಲ್ಲಿ ಲಸಿಕೆ ತುಂಬಿಸಿಕೊಳ್ಳದೆ ವ್ಯಕ್ತಿಯ ಭುಜಕ್ಕೆ ಚುಚ್ಚಿದ ನರ್ಸ್, ವಿಡಿಯೋ ನೋಡಿದ ನಂತರವೇ ಮೋಸ ಗೊತ್ತಾಗಿದ್ದು!
ನರ್ಸ್ಳಂತೆ ಕಾಣುವ ಮಹಿಳೆಯೊಬ್ಬಳು ಅಷ್ಟೇನೂ ಅಮಾಯಕನಲ್ಲದ ವ್ಯಕ್ತಿಗೆ ಕೋವಿಡ್ ಲಸಿಕೆ ನೊಡುವ ನೆಪದಲ್ಲಿ ಖಾಲಿ ಸಿರಿಂಜ್ ಭುಜಕ್ಕೆ ಚುಚ್ಚಿದ್ದಾಳೆ. ತಾನು ಮಾಡುತ್ತಿರುವುದು ಬಹು ದೊಡ್ಡ ಪ್ರಮಾದ ಎನ್ನುವ ಅರಿವು ಸಹ ಆಕೆಗಿಲ್ಲ
ಪಾಟ್ನಾ: ಕೋವಿಡ್ ಲಸಿಕೆ ನೀಡುವಂಥ ಅತ್ಯಂತ ಸೂಕ್ಷ್ಮ ವಿಷಯದಲ್ಲೂ ಮೋಸದಾಟಗಳು ಆರಂಭವಾಗಿವೆ. ಸೋಂಕಿನಿಂದ ಬಚಾವಾಗುವ ಉದ್ದೇಶದಿಂದ ಲಸಿಕೆ ಪಡೆಯಲು ಲಸಿಕಾ ಕೇಂದ್ರಗಳಿಗೆ ಬರುವ ಅಮಾಯಕ ಜನರಿಗೆ ಖಾಲಿ ಸಿರಿಂಜ್ ಚುಚ್ಚಿ ಕಳಿಸಿರುವ ಘಟನೆಯೊಂದು ಬಿಹಾರ ರಾಜ್ಯದಲ್ಲಿ ಬೆಳಕಿಗೆ ಬಂದಿದೆ. ಸದರಿ ಘಟನೆಯು ರಾಜ್ಯದ ಛಾಪ್ರಾ ಎಂಬಲ್ಲಿ ನಡೆದಿದ್ದು ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಭಾರತದಲ್ಲಿ ಬೆಳಕಿಗೆ ಬಂದಿರುವ ಮೊದಲ ಘಟನೆ ಇದಾಗಿದೆಯಾದರೂ ಇಂಥ ವಂಚನೆಗಳು ಬೇರೆ ಕಡೆ ನಡೆದಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ನಗರ ಪ್ರದೇಶಗಳಲ್ಲಿ ಜನರನ್ನು ಯಾಮಾರಿಸುವುದು ಭ್ರಷ್ಟ ಮತ್ತು ಮಾನವೀಯತೆ ಕಳೆದುಕೊಂಡಿರುವ ಆರೋಗ್ಯ ಕಾರ್ಯಕರ್ತರಿಗೆ (ಅದು ವೈದ್ಯನಾಗಿರಬಹುದು ಇಲ್ಲವೇ ನರ್ಸ್ ಅಥವಾ ಪ್ಯಾರಾ ಮೆಡಿಕಲ್ ವರ್ಕರ್) ಕಷ್ಟವಾಗಬಹುದು, ಆದರೆ, ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಓದಿರದ ಅಥವಾ ಅನಕ್ಷರಸ್ಥ ಜನ ಸುಲಭವಾಗಿ ಮೋಸ ಹೋಗಿಬಿಡುತ್ತಾರೆ.
ಇಲ್ಲಿರುವ ಚಿತ್ರವನ್ನೇ ನೋಡಿ. ನರ್ಸ್ಳಂತೆ ಕಾಣುವ ಮಹಿಳೆಯೊಬ್ಬಳು ಅಷ್ಟೇನೂ ಅಮಾಯಕನಲ್ಲದ ವ್ಯಕ್ತಿಗೆ ಕೋವಿಡ್ ಲಸಿಕೆ ನೊಡುವ ನೆಪದಲ್ಲಿ ಖಾಲಿ ಸಿರಿಂಜ್ ಭುಜಕ್ಕೆ ಚುಚ್ಚಿದ್ದಾಳೆ. ತಾನು ಮಾಡುತ್ತಿರುವುದು ಬಹು ದೊಡ್ಡ ಪ್ರಮಾದ ಎನ್ನುವ ಅರಿವು ಸಹ ಆಕೆಗಿಲ್ಲ. ಅದರರ್ಥ ಈ ಮೋಸದ ಕಸುಬಿನಲ್ಲಿ ಆಕೆ ನಿಷ್ಣಾತಳು, ಹಿಂದೆಯೂ ಆಕೆ ಅದೆಷ್ಟು ಜನರಿಗೆ ಹೀಗೆ ಖಾಲಿ ಸಿರಂಜ್ ಚುಚ್ಚಿ ಕಳಿಸಿದ್ದಾಳೋ? ಮೂಲಗಳ ಪ್ರಕಾರ ಆಕೆಯನ್ನು ಕರ್ತವ್ಯದಿಂದ ವಜಾ ಮಾಡಲಾಗಿದೆ.
ಮೊಬೈಲ್ ಫೋನ್ ಒಂದರ ಮೂಲಕ ಶೂಟ್ ಮಾಡಿರುವ ಈ ವಿಡಿಯೋನಲ್ಲಿ, ಈ ನರ್ಸ್ ಪ್ಯಾಕೆಟ್ನಿಂದ ಹೊಸ ಸಿರಿಂಜೊಂದನ್ನು ತೆಗೆದು ಲಸಿಕೆ ಇರುವ ವಾಯಲ್ನಿಂದ ದ್ರಾವಣ ತುಂಬಿಸಿಕೊಳ್ಳದೆ ನೇರವಾಗಿ ವ್ಯಕ್ತಿಯ ಭುಜಕ್ಕೆ ಚುಚ್ಚುತ್ತಾಳೆ.
ಸೋಜಿಗದ ಸಂಗತಿಯೆಂದರೆ ಲಸಿಕೆ ಹಾಕಿಸಿಕೊಂಡವನಿಗೆ ಅದರ ಪರಿವೆಯೇ ಇಲ್ಲ. ಅದನ್ನು ಹಾಕಿಸಿಕೊಂಡ ಸ್ನೇಹಿತ ಅವನ ಗಮನಕ್ಕೆ ವಿಷಯವನ್ನು ತಂದ ನಂತರವೇ ಅದು ಗೊತ್ತಾಗಿದ್ದು.
ಸುದ್ದಿ ಸಂಸ್ಥೆಯೊಂದರ ಜತೆ ಮಾತಾಡಿರುವ ಅವನು ಸ್ನೇಹಿತ ತಿಳಿಸಿ ನಂತರವೇ ನರ್ಸ್ ಮೋಸ ಮಾಡಿದ್ದು ಗೊತ್ತಾಗಿದೆ ಎಂದು ಹೇಳಿದ್ದಾನೆ.
‘ನರ್ಸ್ ಮಾಡಿದ ಪ್ರಮಾದ ಸ್ನೇಹಿತ ತಿಳಿಸಿದ ನಂತರವೇ ಗೊತ್ತಾಗಿದ್ದು, ಆ ವಿಡಿಯೋವನನ್ನು ನೋಡಿದ ನಂತರ ನಾನು ಗಾಬರಿಗೊಳಗಾದೆ,’ ಎಂದು ಅವನು ಹೇಳಿದ್ದಾನೆ.
ಅದಾದ ಮೇಲೆ ಆತ ಮತ್ತೊಮ್ಮೆ ಲಸಿಕೆ ಹಾಕಿಸಿಕೊಂಡನೇ ಎಂದು ಕೇಳಿದ ಪ್ರಶ್ನೆಗೆ ಇಲ್ಲವೆಂದು ಉತ್ತರಿಸಿರುವ ಅವನು, ಖಾಲಿ ಸಿರಿಂಜ್ ಚುಚ್ಚಿಸಿಕೊಂಡ ನಂತರ ತನಗೆ ತಲೆನೋವು ಬರಲಾರಂಭಿಸಿತ್ತು ಎಂದು ಹೇಳಿದ್ದಾನೆ. ವಿಡಿಯೋ ಶೂಟ್ ಮಾಡಿದ ಸ್ನೇಹಿತ ಸಹ ಆ ಮಾಧ್ಯಮದವರೊಂದಿಗೆ ಮಾತಾಡಿದ್ದು, ಲಸಿಕೆ ತೆಗೆದುಕೊಳ್ಳುವಾಗ ಅವನ ಮುಖಭಾವ ಹೇಗಿರುತ್ತದೆ ಅಂತ ನೋಡುವುದಕ್ಕೋಸ್ಕರ ಶೂಟ್ ಮಾಡಿದ್ದು ಎಂದಿದ್ದಾನೆ.
‘ಕೇವಲ ತಮಾಷೆಗೋಸ್ಕರ ನಾನು ಈ ವಿಡಿಯೋ ಶೂಟ್ ಮಾಡಿದೆ. ನನಗೆ ಮತ್ತು ಇತರ ಸ್ನೇಹಿತರಿಗೆ ಲಸಿಕೆ ತೆಗೆದುಕೊಳ್ಳುವಾಗ ಅವನ ಮುಖಭಾವ ಹೇಗಿರುತ್ತದೆ ಅಂತ ನೋಡುವ ತವಕವಿತ್ತು. ವಿಡಿಯೋವನ್ನು ಸಾಯಂಕಾಲ ನೋಡುವಾಗ ಆ ನರ್ಸ್ ಪ್ಲಾಸ್ಟಿಕ್ ಕವರ್ನಿಂದ ಸಿರಿಂಜ್ ತೆಗೆದು ಅದರಲ್ಲಿ ಲಸಿಕೆ ತುಂಬಿಸಿಕೊಳ್ಳದೆ ಅವನಿಗೆ ಚುಚ್ಚಿದ್ದು ನಮ್ಮ ಗಮನಕ್ಕೆ ಬಂತು,’ ಎಂದು ಅವನು ಹೇಳಿದ್ದಾನೆ.
ಲಸಿಕಾ ಕೇಂದ್ರದಲ್ಲಿದ್ದ ಇತರ ಅಧಿಕಾರಿಗಳಿಗೆ ವಿಷಯ ತಿಳಿಸಲಾಗಿದೆ ಮತ್ತು ಅವರು ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆಂದು ಅವನು ಹೇಳಿದ್ದಾನೆ.
ಬಿಹಾರದ ಆರೋಗ್ಯ ಸಚಿವಾಲಯದ ಮೂಲಗಳ ಪ್ರಕಾರ 18-44 ವಯೋಮಾನದವರಲ್ಲಿ 10 ಲಕ್ಷ ಜನಕ್ಕೆ ಇದುವರೆಗೆ ಲಸಿಕೆ ನೀಡಲಾಗಿದೆ.