ಭಾರತಕ್ಕೆ ಶೀಘ್ರ ಮತ್ತೊಂದು ಲಸಿಕೆ: ಕೊವಾವ್ಯಾಕ್ಸ್ ಲಸಿಕೆ ಉತ್ಪಾದನೆ ಆರಂಭಿಸಿದ ಪುಣೆಯ ಸೆರಮ್ ಇನ್ಸ್ಟಿಟ್ಯೂಟ್
ಈ ಲಸಿಕೆಯು 18 ವರ್ಷಕ್ಕಿಂತ ಕಡಿಮೆ ವಯೋಮಾನದ ನಮ್ಮ ಭವಿಷ್ಯದ ತಲೆಮಾರನ್ನು ಕಾಪಾಡುವ ದೊಡ್ಡ ಸಾಮರ್ಥ್ಯ ಹೊಂದಿದೆ ಎಂದು ಪೂನಾವಾಲ ಟ್ವೀಟ್ ಮಾಡಿದ್ದಾರೆ.
ಕೊವಿಡ್ ಸೋಂಕಿನ ವಿರುದ್ಧ ನೀಡುವ ಲಸಿಕೆ ಕೊವಿಶೀಲ್ಡ್ ಉತ್ಪಾದಿಸುತ್ತಿರುವ ಪುಣೆಯ ಸೇರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (Serum Institute of India – SII) ಶುಕ್ರವಾರ ಇದೇ ಮೊದಲ ಬಾರಿಗೆ ಕೊವಾವ್ಯಾಕ್ಸ್ ಲಸಿಕೆ ಉತ್ಪಾದಿಸಿದೆ ಎಂದು ಕಂಪನಿಯ ಮುಖ್ಯಸ್ಥ ಅದಾರ್ ಪೂನಾವಾಲ ಶುಕ್ರವಾರ ಹೇಳಿದ್ದಾರೆ. ಕೊವಾವ್ಯಾಕ್ಸ್ನ ಮೊದಲ ಬ್ಯಾಚ್ ಲಸಿಕೆಗಳನ್ನು ಉತ್ಪಾದಿಸಿದ ತಮ್ಮ ಸಹೋದ್ಯೋಗಿಗಳನ್ನು ಅವರು ಅಭಿನಂದಿಸಿದ್ದಾರೆ. ನೊವಾವ್ಯಾಕ್ಸ್ ಅಭಿವೃದ್ಧಿಪಡಿಸಿರುವ ಕೊವಾವ್ಯಾಕ್ಸ್ ಲಸಿಕೆಗಳ ಮೊದಲ ವ್ಯಾಚ್ ಉತ್ಪಾದನೆಯಾಗುತ್ತಿರುವುದು ಖುಷಿಯ ವಿಚಾರ. ಈ ಲಸಿಕೆಯು 18 ವರ್ಷಕ್ಕಿಂತ ಕಡಿಮೆ ವಯೋಮಾನದ ನಮ್ಮ ಭವಿಷ್ಯದ ತಲೆಮಾರನ್ನು ಕಾಪಾಡುವ ದೊಡ್ಡ ಸಾಮರ್ಥ್ಯ ಹೊಂದಿದೆ ಎಂದು ಪೂನಾವಾಲ ಟ್ವೀಟ್ ಮಾಡಿದ್ದಾರೆ.
ಮುಂದಿನ ಸೆಪ್ಟೆಂಬರ್ ಹೊತ್ತಿಗೆ ಭಾರತದಲ್ಲಿ ಕೊವಾವ್ಯಾಕ್ಸ್ ಬಿಡುಗಡೆ ಮಾಡುವುದಾಗಿ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಘೋಷಿಸಿದೆ. ಈ ಲಸಿಕೆಯು ಅಮೆರಿಕದ ನೊವಾವ್ಯಾಕ್ಸ್ ಸಂಸ್ಥೆಯ ಅಭಿವೃದ್ಧಿಪಡಿಸಿರುವ ಕೊವಿಡ್-19 ಲಸಿಕೆಯ ತಂತ್ರಜ್ಞಾನವನ್ನು ಆಧರಿಸಿದೆ. ಮಕ್ಕಳಿಗೆ ಲಸಿಕೆ ನೀಡಿ, ಸಂಶೋಧನೆ ನಡೆಸುವ ಪ್ರಕ್ರಿಯೆ ಮುಂದಿನ ತಿಂಗಳಿನಿಂದ ಆರಂಭವಾಗಲಿದೆ ಎಂದು ಸೆರಮ್ ಇನ್ಸ್ಟಿಟ್ಯೂಟ್ ಹೇಳಿದೆ.
ಈಚಿನ ದಿನಗಳಲ್ಲಿ ಕಂಡುಬರುತ್ತಿರುವ ಕೊರೊನಾ ವೈರಾಣುಗಳ ಹೊಸಹೊಸ ಪ್ರಭೇದಗಳ ವಿರುದ್ಧ ನೊವಾವ್ಯಾಕ್ಸ್ ಪ್ರಬಲ ಪ್ರತಿರೋಧ ಶಕ್ತಿಯನ್ನು ಹೊಂದಿದೆ. ಈ ವಿಚಾರವನ್ನು ನೊವಾವ್ಯಾಕ್ಸ್ ಸ್ವತಃ ಘೋಷಿಸಿದೆ. ದೊಡ್ಡಮಟ್ಟದ ಟ್ರಯಲ್ನಲ್ಲಿ ಈ ವಿಚಾರ ಸಾಬೀತಾಗಿದೆ ಎಂದು ಜೂನ್ 14ರಂದು ಪ್ರಕಟವಾದ ವರದಿಯಲ್ಲಿ ಕಂಪನಿಯು ಹೇಳಿದೆ.
ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಅಮೆರಿಕ 4ನೇ ಲಸಿಕೆಯಾಗಿ ನೊವಾವ್ಯಾಕ್ಸ್ ಲಸಿಕೆಯನ್ನು ಬಳಕೆಗೆ ಅಂಗೀಕರಿಸಿತ್ತು. ಹೊಸಹೊಸ ರೂಪಾಂತರಗಳ ವಿರುದ್ಧ ನೊವಾವ್ಯಾಕ್ಸ್ ಶೇ 93ರಷ್ಟು ಪರಿಣಾಮಕಾರಿ ಎಂದು ಸಂಶೋಧನಾ ವರದಿಗಳು ಹೇಳಿದ್ದವು. ನೊವಾವ್ಯಾಕ್ಸ್ ಅಭಿವೃದ್ಧಿಪಡಿಸಿರುವ ಲಸಿಕೆಯು ಕಾರ್ಯಕ್ಷಮತೆಯು ಫಿಝರ್ ಮತ್ತು ಸ್ಪುಟ್ನಿಕ್ ಲಸಿಕೆಗಳಿಗೆ ಸಮಾನವಾಗಿದೆ. ವೈರಲ್ ವೆಕ್ಟಾರ್ ತಂತ್ರಜ್ಞಾನ ಬಳಸಿ ಈ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಭಾರತದ ಆರೋಗ್ಯ ಸಚಿವಾಲಯವು ಸಹ ನೊವಾವ್ಯಾಕ್ಸ್ ಲಸಿಕೆಯ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದೆ. ನೊವಾವ್ಯಾಕ್ಸ್ ಲಸಿಕೆ ವಿತರಣೆಯನ್ನೂ ಭಾರತವು ತನ್ನ ಲಸಿಕಾಕರಣ ಯೋಜನೆಯ ಭಾಗವಾಗಿಸಿಕೊಳ್ಳಲಿದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ಜೂನ್ 17ರಂದು ಹೇಳಿದ್ದರು.
(SII manufactures first batch of Covavax vaccine; Poonawalla congratulates team)
ಇದನ್ನೂ ಓದಿ: Delta Plus Variant: ಡೆಲ್ಟಾ ಪ್ಲಸ್ ವಿರುದ್ಧ ಯಾವ ಕಂಪೆನಿಯ ಕೊರೊನಾ ಲಸಿಕೆ ಹೆಚ್ಚು ಪರಿಣಾಮಕಾರಿ?
ಇದನ್ನೂ ಓದಿ: ಡೆಲ್ಟಾ ಪ್ಲಸ್ ವೈರಸ್ ವಿರುದ್ಧ ಕೊವಿಶೀಲ್ಡ್ ಲಸಿಕೆ ಹೆಚ್ಚು ಪರಿಣಾಮಕಾರಿಯಲ್ಲ: ಲ್ಯಾನ್ಸೆಟ್ ವರದಿ