ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ ಅರಿತೆವೇನು ನಾವು ನಮ್ಮ ಅಂತರಾಳವ.. ಎಂಬ ಹೆಚ್.ಎಸ್.ವೆಂಕಟೇಶಮೂರ್ತಿಯವರ ಭಾವಗೀತೆಯ ಸಾಲನ್ನು ಕೊರೊನಾ ವೈರಾಣುವಿನೊಂದಿಗೆ ತಳುಕು ಹಾಕಿ.. ಬದುಕನ್ನು ಹಾಸುಹೊಕ್ಕಿರುವ ಕೊವಿಡ್ ಬಗ್ಗೆ ನಾವು ತಿಳಿದುಕೊಂಡಿದ್ದೆಷ್ಟು? ತಿಳಿಯಲು ಇನ್ನೂ ಬಾಕಿ ಇರುವುದೆಷ್ಟು? ಎಂದು 2020ಕ್ಕೆ ಬೆನ್ನು ಹಾಕುವ ಮುನ್ನ ಒಮ್ಮೆ ಅವಲೋಕಿಸಬೇಕಿದೆ.
ಕೊವಿಡ್-19 ಮತ್ತು ಈ ಜಗತ್ತಿನ ಸಾಂಗತ್ಯಕ್ಕೆ ಒಂದು ವರ್ಷ ತುಂಬುತ್ತಿದೆ. 2020 ಎಂಬ ಒಂದಿಡೀ ವರ್ಷವನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡ ಕೊರೊನಾ ವೈರಾಣು ಈಗ ಇಡೀ ಜಗತ್ತಿಗೆ ಚಿರಪರಿಚಿತ. 2019ರ ಡಿಸೆಂಬರ್ 31ರಂದು ಚೀನಾ ದೇಶ ಕೊರೊನಾ ವೈರಸ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಗೆ ಮೊದಲ ಬಾರಿಗೆ ವರದಿ ಸಲ್ಲಿಸಿತ್ತು. ಆಗಿನ್ನೂ ಕಂಡುಬಂದ ವೈರಾಣುವಿಗೆ ನಿರ್ದಿಷ್ಟ ಹೆಸರು ಕೂಡಾ ಇರಲಿಲ್ಲ. ಅದು ನ್ಯುಮೋನಿಯಾ ಮಾದರಿಯ ವೈರಾಣು ಎಂದು ಅಂದಾಜಿಸಲಾಗಿತ್ತು.
ಕೊರೊನಾ ವೈರಸ್ ಕಂಡುಬಂದ 2 ವಾರದಲ್ಲಿ ಅದರ ಜೆನೆಟಿಕ್ ಕೋಡ್ಗಳ ಮೂಲ ಹಿಡಿದು ಅದಕ್ಕೊಂದು ಗುರುತು ನೀಡಲಾಯಿತು. 3ನೇ ವಾರದಲ್ಲಿ ಪರೀಕ್ಷೆ ನಡೆಸುವ ಟೆಸ್ಟ್ ಕಿಟ್ಸ್ ತಯಾರಾಯಿತು. 11 ತಿಂಗಳೊಳಗೆ ಕೊರೊನಾ ವೈರಾಣುವನ್ನು ತಡೆಯಬಲ್ಲ ಲಸಿಕೆ ತಯಾರಿಸಲಾಗಿ ಈಗ ಕೆಲವೆಡೆ ವಿತರಣೆಯೂ ಆಗುತ್ತಿದೆ.
ಒಂದು ವರ್ಷದ ಅವಧಿಯಲ್ಲಿ ಜಗತ್ತಿನ 81 ಕೋಟಿಗೂ ಅಧಿಕ ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. 10 ಲಕ್ಷಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಏತನ್ಮಧ್ಯೆ ಕೊರೊನಾ ಸೋಂಕಿನ ಕುರಿತಾಗಿ ಎಷ್ಟೇ ಅಧ್ಯಯನ ನಡೆದರೂ ಕೊವಿಡ್19 ಹೇಗೆ ಶುರುವಾಯಿತು ಎಂಬಲ್ಲಿಂದ ಹೇಗೆ ಮುಗಿಯಬಹುದು ಎನ್ನುವ ತನಕ ತಿಳಿಯದೇ ಉಳಿದಿರುವ ಸಂಗತಿಗಳು, ಬಗೆಹರಿಯದೇ ಇರುವ ಗೊಂದಲಗಳು ಬಹಳಷ್ಟಿವೆ.
‘‘ಕೊವಿಡ್ 19 ಕುರಿತಾಗಿ ನಾವು ಅನೇಕ ವಿಚಾರಗಳನ್ನು ಕಲಿತುಕೊಂಡಿದ್ದೇವೆ. ಆದರೆ, ಅದನ್ನು ವಿವರವಾಗಿ, ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳುವ ವಿಚಾರದಲ್ಲಿ ನಾವಿನ್ನೂ ಮೈಲುಗಟ್ಟಲೆ ಸಾಗಬೇಕಿದೆ. ಇದು ವೈರಾಣು ಶಾಸ್ತ್ರಜ್ಞರು ಮತ್ತು ಆರೋಗ್ಯ ಇಲಾಖೆಯವರನ್ನು ದಶಕಗಳ ಕಾಲ ಹಿಡಿದಿಟ್ಟುಕೊಳ್ಳಲಿದೆ’’ ಎಂದು ನ್ಯೂಯಾರ್ಕ್ನ ರಾಚ್ಸ್ಟರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಜೀವಶಾಸ್ತ್ರ ವಿಷಯದ ಸಹ ಪ್ರಾಧ್ಯಾಪಕ ಮೌರೀನ್ ಫೆರಽನ್ ಅಭಿಪ್ರಾಯಪಟ್ಟಿದ್ದಾರೆ.
ಕೊರೊನಾ ವೈರಸ್ ಹುಟ್ಟಿದ್ದೆಲ್ಲಿ?
ಪ್ರಸ್ತುತ ಕೊರೊನಾ ವೈರಾಣು ಇಡೀ ಜಗತ್ತನ್ನು ಆವರಿಸಿಕೊಂಡಿದೆ. ಆದರೆ, ಹೀಗೆ ಜಗತ್ತನ್ನೇ ಕಾಡುತ್ತಿರುವ ವೈರಸ್ ಉಗಮವಾಗಿದ್ದು ಎಲ್ಲಿ ಎಂಬ ಪ್ರಶ್ನೆಗೆ ಮಾತ್ರ ನಿಖರ ಉತ್ತರ ಇನ್ನೂ ಲಭ್ಯವಾಗಿಲ್ಲ. ಜೀವಂತ ಪ್ರಾಣಿಗಳನ್ನು ಮಾರುವ ಚೀನಾದ ವುಹಾನ್ ಮಾರುಕಟ್ಟೆಯಲ್ಲಿ ಕೊರೊನಾ ಅವತರಿಸಿತು ಎಂಬ ವಾದ ಜಗತ್ತಿನ ಹಲವೆಡೆ ಇದೆ. ಅದು ಮೇಲ್ನೋಟಕ್ಕೆ ಸತ್ಯವೆಂಬಂತೆ ಕಾಣುತ್ತಿದೆಯಾದರೂ ನಿಖರ ಪುರಾವೆಗಳಿಲ್ಲದ ಕಾರಣ ಅದನ್ನು ಧೃಡಪಡಿಸಲಾಗಿಲ್ಲ. ಇನ್ನೊಂದೆಡೆ ಈ ವರ್ಷದ ಆರಂಭದಲ್ಲಿ ಲ್ಯಾನ್ಸೆಟ್ ಪ್ರಕಟಿಸಿದ ವರದಿ ಜನವರಿ ವೇಳೆಗೆ ಕೊರೊನಾ ವೈರಾಣುವಿಗೆ ತುತ್ತಾದ ಸೋಂಕಿತರಲ್ಲಿ ಮೂರನೇ ಒಂದು ಭಾಗದ ಜನರು ವುಹಾನ್ ಮಾರುಕಟ್ಟೆಯೊಂದಿಗೆ ನೇರ ಸಂಪರ್ಕವನ್ನೇ ಹೊಂದಿರಲಿಲ್ಲ ಎನ್ನಲಾಗಿದೆ.
ಕೊರೊನಾ ವೈರಾಣು ವುಹಾನ್ ಪ್ರಯೋಗಾಲಯದಲ್ಲಿ ತಯಾರಾಯಿತೇ? ಅಥವಾ ತನ್ನಷ್ಟಕ್ಕೆ ಅಭಿವೃದ್ಧಿ ಹೊಂದಿತೇ? ಎಂಬ ಪ್ರಶ್ನೆ ವಿಶ್ವ ಮಟ್ಟದಲ್ಲಿ ಹಲವು ಬಾರಿ ಕೇಳಿ ಬಂದಿದೆ. ಕೆಲ ವಿಜ್ಞಾನಿಗಳು ಕೊವಿಡ್ 19ಕಾಯಿಲೆಗೆ ಕಾರಣವಾದ ವೈರಾಣು ಕಾಡಿನಿಂದ ಬಂದಿದೆ. ಮೂಲ ಕೊರೊನಾ ವೈರಾಣುವಿಗೂ ಕೊವಿಡ್ 19 ಉಲ್ಬಣಕ್ಕೆ ಕಾರಣಕರ್ತವಾಗಿರುವ ವೈರಾಣುವಿನ ತಳಿಗೂ ಹಲವು ವ್ಯತ್ಯಾಸಗಳಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ನಡುವೆ, ಅಮೆರಿಕಾ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಕೊವಿಡ್ 19 ಮೊದಲ ಪ್ರಕರಣ ಕಾಣಿಸಿಕೊಳ್ಳುವುದಕ್ಕಿಂತ 1 ತಿಂಗಳು ಮೊದಲೇ ಅಂದರೆ 2019ರ ಡಿಸೆಂಬರ್ ತಿಂಗಳಲ್ಲೇ ಕೊರೊನಾ ವೈರಸ್ ಹರಡಿಕೊಂಡಿತ್ತು ಎಂದು ಕೆಲ ಅಧ್ಯಯನಗಳು ತಿಳಿಸಿವೆ. ಆದ್ದರಿಂದ ಕೊರೊನಾ ಚೀನಾದ್ದಲ್ಲ ಎಂದು ಅಲ್ಲಿನ ಮಾಧ್ಯಮಗಳು ಸಾಬೀತುಪಡಿಸಲು ಪ್ರಯತ್ನಿಸುತ್ತಿವೆ.
ಆದರೆ, ಚೀನಾ ಮಾಧ್ಯಮಗಳ ವಾದವನ್ನು ಆಸ್ಟ್ರೇಲಿಯನ್ ನ್ಯಾಶನಲ್ ಯುನಿವರ್ಸಿಟಿಯ ಸೂಕ್ಷ್ಮ ಜೀವಶಾಸ್ತ್ರದ ಪ್ರಾಧ್ಯಾಪಕ ಪೀಟರ್ ಕಾಲಿಗ್ನಾನ್ ಅಲ್ಲಗಳೆದಿದ್ದಾರೆ. ಕೊವಿಡ್ 19 ಮೊದಲ ಪ್ರಕರಣ ಕಾಣಿಸಿಕೊಳ್ಳುವುದಕ್ಕೂ ಮುನ್ನ ಅಮೆರಿಕಾ ಮತ್ತು ಯುರೋಪ್ನಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿತ್ತು ಎಂಬ ಮಾತ್ರಕ್ಕೆ ಅದು ಚೀನಾ ದೇಶದ್ದಲ್ಲ ಎನ್ನಲಾಗುವುದಿಲ್ಲ. ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ತನಿಖೆಯಲ್ಲಿ ಮಾಹಿತಿ ಸಿಗಲಿದೆ ಎಂದು ತಿಳಿಸಿದ್ದಾರೆ.
ಈ ಎಲ್ಲಾ ಗೊಂದಲಗಳ ಹೊರತಾಗಿಯೂ ಕೊವಿಡ್ 19 ಒಂದು ಬಗೆಯ ಕೊರೊನಾ ವೈರಾಣುವಾಗಿದ್ದು, ಶೀತ, ನೆಗಡಿ ಮತ್ತು ಉಸಿರಾಟದ ಸಮಸ್ಯೆಗೆ ಕಾರಣವಾಗುತ್ತದೆ ಎನ್ನುವುದನ್ನು ಬಹುಪಾಲು ವಿಜ್ಞಾನಿಗಳು ಒಪ್ಪಿಕೊಂಡಿದ್ದಾರೆ. ಅಂತೆಯೇ, ಕೊವಿಡ್ 19ಗೆ ಕಾರಣವಾದ ವೈರಾಣು ಪ್ರಾಣಿಗಳಿಂದ ಬಂದಿರುವುದು. ಬಾವಲಿಗಳು ಇದನ್ನು ಹಬ್ಬಿಸುವಲ್ಲಿ ಪ್ರಮುಖ ಪಾತ್ರ ವಹಿಸಿರಬಹುದು ಎಂದು ಪ್ರತಿಪಾದಿಸುತ್ತಿದ್ದಾರೆ. ಹೀಗೆ ಹೇಳುವವರಲ್ಲಿ ಬಹುಪಾಲು ಮಂದಿ ಪುನಃ ಚೀನಾದೆಡೆಗೆ ಬೊಟ್ಟು ಮಾಡುತ್ತಿದ್ದಾರೆ ಎನ್ನುವುದು ಗಮನಾರ್ಹ ಸಂಗತಿ.
ಅದೇನೇ ಆದರೂ ಮನುಷ್ಯನಿಗೆ ಕೊರೊನಾ ದಾಟಿದ್ದು ಹೇಗೆ ಎನ್ನುವುದು ಮಾತ್ರ ಇನ್ನೂ ತಿಳಿದಿಲ್ಲ. ಒಂದು ವೇಳೆ ಮನುಷ್ಯರಿಗೆ ಸೋಂಕು ತಗುಲುವ ಮುನ್ನ ಪ್ಯಾಂಗೋಲಿನ್ ಅಥವಾ ಸಿವೆಟ್ ಬೆಕ್ಕುಗಳಿಗೆ ಕೊರೊನಾ ವೈರಾಣು ತಗುಲಿತ್ತು ಎಂದಾದಲ್ಲಿ ಅದರ ಮೂಲ ಯಾವುದು ಎನ್ನುವುದು ಕೇವಲ ಪ್ರಶ್ನೆಯಾಗಿಯೇ ಉಳಿಯಬಹುದು. ಎಬೊಲಾ ಕಾಯಿಲೆ ಕಾಣಿಸಿಕೊಂಡು 40 ವರ್ಷಗಳಾದರೂ ಅದು ಹೇಗೆ ಉಗಮವಾಯಿತು ಎನ್ನುವುದು ವಿಜ್ಞಾನಿಗಳ ಪಾಲಿಗೆ ಈಗಲೂ ಒಗಟಾಗಿಯೇ ಉಳಿದಿದೆ. ಅದೇ ಪರಿಸ್ಥಿತಿ ಕೊವಿಡ್ 19 ವಿಚಾರದಲ್ಲಿ ಮರುಕಳಿಸಿದರೂ ಅಚ್ಚರಿಯಿಲ್ಲ ಎನ್ನುವುದು ಮೌರೀನ್ ಫೆರಽನ್ ಅವರ ಅಭಿಪ್ರಾಯ.
ಕೆಲವು ಮಂದಿಯನ್ನು ಮಾತ್ರ ಕಾಡುವುದೇಕೆ ಕೊರೊನಾ?
ಕೊವಿಡ್ 19 ಕಾಣಿಸಿಕೊಂಡಾಗ ಅದು ಉಸಿರಾಟದ ಸಮಸ್ಯೆ ಉಂಟುಮಾಡುವ ಕಾಯಿಲೆ ಎಂದು ಪರಿಗಣಿಸಲಾಗಿತ್ತು. ದಿನ ಕಳೆದಂತೆ ಕೊವಿಡ್ 19ರ ಲಕ್ಷಣಗಳು ಮತ್ತು ಅದು ತಂದೊಡ್ಡುವ ಸಮಸ್ಯೆಗಳ ಭೀಕರತೆ ಬೆಳಕಿಗೆ ಬಂದಂತೆ ಕೊವಿಡ್ 19 ಕುರಿತಾದ ಆಯಾಮಗಳು ಬದಲಾದವು. ಕೆಲವರು ರುಚಿ, ವಾಸನೆ ಕಳೆದುಕೊಂಡರು, ಕೆಲವರಿಗೆ ವಾಂತಿ, ಬೇಧಿ ಶುರುವಾಯಿತು, ಕೆಲವರಲ್ಲಿ ಕೈ, ಕಾಲು ಬೆರಳುಗಳು ಬಿಳಚಿಕೊಂಡವು, ಕೆಲ ಸೋಂಕಿತರಿಗೆ ಮರೆವಿನ ಜೊತೆಗೆ ಮೆದುಳು ಸಮಸ್ಯೆಯೂ ತಲೆದೋರಿತು. ಹೀಗೆ ಕೊವಿಡ್ನ ಒಂದೊಂದೇ ಲಕ್ಷಣಗಳು ಕಂಡುಬಂದಂತೆ ಅದರ ಗಂಭೀರತೆ ಅರಿವಾಗತೊಡಗಿತು.
ಕೊರೊನಾ ಸೋಂಕಿತರಲ್ಲಿ ಹಲವರು ಗುಣಮುಖರಾದರೂ ಅವರಲ್ಲಿ ದೀರ್ಘಕಾಲಿಕ ಸಮಸ್ಯೆಗಳು ಉಳಿದುಕೊಳ್ಳಲಿವೆ. ಕೆಲವರಲ್ಲಿ 12 ವಾರಕ್ಕೂ ಹೆಚ್ಚು ಅವಧಿಯ ತನಕ ಕೊವಿಡ್ನ ಸಮಸ್ಯೆ ಭಾದಿಸಲಿದೆ ಎಂದು ಬ್ರಿಟಿಶ್ ಮೆಡಿಕಲ್ ಜರ್ನಲ್ ಆಗಸ್ಟ್ ತಿಂಗಳಲ್ಲಿ ವರದಿ ಮಾಡಿದೆ. ಆದರೆ, ಸಾಮಾನ್ಯವಾಗಿ ಕೊವಿಡ್ ಪರಿಣಾಮ ಎಷ್ಟು ಸಮಯದ ತನಕ ದೇಹದಲ್ಲಿ ಉಳಿಯಲಿದೆ ಮತ್ತು ಒಬ್ಬರಿಂದ ಒಬ್ಬರಿಗೆ ಅದರ ಗಂಭೀರತೆ ಬದಲಾಗಲು ನಿರ್ದಿಷ್ಟ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.
ಇದನ್ನು ಅವಲೋಕಿಸಿರುವ ಪೀಟರ್ ಕಾಲಿಗ್ನಾನ್ ಪ್ರತಿಯೊಬ್ಬರಲ್ಲೂ ವಿಶಿಷ್ಟವಾದ ಅನುವಂಶಿಕಗಳಿರುತ್ತವೆ. ಆದರೆ, ಕೊವಿಡ್ ಪರಿಣಾಮಗಳು ಒಬ್ಬರಿಂದ ಒಬ್ಬರಿಗೆ ಬದಲಾಗುವುದಕ್ಕೆ ನಿರ್ದಿಷ್ಟ ಕಾರಣಗಳೇನು ಎನ್ನುವುದು ಅರ್ಥವಾಗುತ್ತಿಲ್ಲ. ಮಕ್ಕಳು ಕೊರೊನಾ ವೈರಾಣುವನ್ನು ಸಶಕ್ತವಾಗಿ ಎದುರಿಸುತ್ತಿದ್ದಾರೆ. ವೃದ್ಧರಲ್ಲಿ ಮರಣ ಪ್ರಮಾಣ ಜಾಸ್ತಿ ಇದೆ. ಈ ಕುರಿತು ದಾಖಲೆಗಳಿವೆ ಆದರೆ ಉತ್ತರಗಳಿಲ್ಲ ಎಂದು ಹೇಳಿದ್ದಾರೆ.
ಕೊರೊನಾ ವೈರಾಣು ಹಬ್ಬುವುದೇಕೆ?
ಕೊರೊನಾ ವೈರಾಣು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ ಎಂದು ಚೀನಾ ಜನವರಿಯಲ್ಲೇ ಹೇಳಿದೆ. ಆದರೂ ಈ ವಿಚಾರದ ಕುರಿತಾಗಿ ಇನ್ನೂ ಸಂಪೂರ್ಣ ಸಹಮತವಿಲ್ಲ. ಹಲವರು ಕೊರೊನಾ ಹರಡುವುದು ಹೇಗೆ ಎಂಬ ಬಗ್ಗೆ ವಾದ ಮಾಡುತ್ತಲೇ ಇದ್ದಾರೆ.
ಕೊರೊನಾ ವೈರಾಣುಗಳು ಸೀನುವಾಗ, ಕೆಮ್ಮುವಾಗ ಬಾಯಿ ಮತ್ತು ಮೂಗಿನಿಂದ ಹೊರಬೀಳುವ ಚಿಕ್ಕ ಕಣಗಳ ಮೂಲಕ ಇನ್ನೊಬ್ಬರ ದೇಹವನ್ನು ಪ್ರವೇಶಿಸುತ್ತವೆ. ಅವು ನೆಲಕ್ಕೆ ಬೀಳುವ ಮುನ್ನ ಇನ್ನೊಬ್ಬರನ್ನು ಪ್ರವೇಶಿಸದಂತೆ ತಡೆಗಟ್ಟಲು ಮಾಸ್ಕ್ ಸಹಕಾರಿ ಎಂದು ಕೆಲ ತಜ್ಞರು ತಿಳಿಸಿದ್ದಾರೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸಿರುವ ಒಂದಷ್ಟು ತಜ್ಞರು ಕೆಮ್ಮು ಅಥವಾ ಸೀನಿನಿಂದ ಹೊರಹೊಮ್ಮುವ ಚಿಕ್ಕ ಕಣಗಳು ಗಾಳಿಯಲ್ಲಿ ತುಂಬಾ ಹೊತ್ತು ಇರಬಲ್ಲವು. ಜೊತೆಗೆ, ದೂರಕ್ಕೆ ಸಾಗಬಲ್ಲವು. ಆದ್ದರಿಂದ ಬಟ್ಟೆಯ ಮಾಸ್ಕ್ ಇದನ್ನು ತಡೆಯುವುದು ಅಸಾಧ್ಯ ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವ ಮೌರೀನ್ ಫೆರಽನ್, ಒಂದು ವೇಳೆ ಕೊರೊನಾ ವೈರಾಣು ಒಬ್ಬರಿಂದ ಒಬ್ಬರಿಗೆ ದಾಟುವುದೇ ಹೌದಾದರೂ ಒಬ್ಬ ವ್ಯಕ್ತಿ ಸೋಂಕಿತನಾಗಲು ಯಾವ ಪ್ರಮಾಣದಲ್ಲಿ ವೈರಾಣು ದೇಹವನ್ನು ಪ್ರವೇಶಿಸಬೇಕು ಎಂದು ಕೇಳಿದ್ದಾರೆ. ಈ ವಿಚಾರಗಳ ಕುರಿತು ನಿಖರತೆಯೇ ಇಲ್ಲ. ಮಕ್ಕಳಲ್ಲಿ ಕೊರೊನಾ ಲಕ್ಷಣಗಳು ಗೋಚರಿಸುವುದು ಕಡಿಮೆ. ಮಕ್ಕಳಿಂದ ಕೊರೊನಾ ಹೆಚ್ಚಾಗಿ ಹರಡುತ್ತದೆ ಎಂಬುದು ಸಾಬೀತಾದರೆ ಶಾಲಾ, ಕಾಲೇಜು ಮುಚ್ಚಿದ್ದಕ್ಕೆ ಅರ್ಥವಿದೆ. ಒಂದುವೇಳೆ ಮಕ್ಕಳಿಂದ ಹರಡುವುದಿಲ್ಲ ಎಂದಾದಲ್ಲಿ ಶಾಲೆ ಮುಚ್ಚಿರುವುದು ಮೂರ್ಖ ಯೋಜನೆ ಆಗಲಿದೆ ಎಂದು ತಿಳಿಸಿದ್ದಾರೆ.
ಎಲ್ಲಿಯ ತನಕ ಇರಲಿದೆ ರೋಗ ನಿರೋಧಕ ಶಕ್ತಿ?
ಆಗಸ್ಟ್ ತಿಂಗಳಲ್ಲಿ ಹಾಂಗ್ಕಾಂಗ್ ವಿಶ್ವವಿದ್ಯಾಲಯವು 33 ವರ್ಷದ ವ್ಯಕ್ತಿಯೊಬ್ಬ ಕೊರೊನಾ ಸೋಂಕಿಗೆ ಒಳಗಾದ ನಾಲ್ಕೂವರೆ ತಿಂಗಳಲ್ಲಿ ಮರುಸೋಂಕಿಗೆ ತುತ್ತಾಗಿರುವ ಕುರಿತು ಮಾಹಿತಿ ನೀಡಿದೆ. ಆ ಮೂಲಕ ವ್ಯಕ್ತಿಯೊಬ್ಬ 2 ಬಾರಿ ಸೋಂಕಿಗೆ ಸಿಲುಕಬಲ್ಲ ಎಂಬುದು ಸಾಬೀತಾಗಿದೆ. ಆದರೆ, ಪೀಟರ್ ಕಾಲಿಗ್ನಾನ್ ಪ್ರಕಾರ ಕೆಲವರು ಎರಡೆರಡು ಬಾರಿ ಸೋಂಕಿಗೆ ತುತ್ತಾಗಿದ್ದರೂ ಸೋಂಕಿತರಲ್ಲಿ ಶೇ.99ರಷ್ಟು ಮಂದಿ ಕನಿಷ್ಠ 6 ತಿಂಗಳ ಅವಧಿಯಲ್ಲಿ ಮರುಸೋಂಕಿಗೆ ಒಳಗಾಗಿಲ್ಲ ಎನ್ನುವುದು ಆಶಾದಾಯಕ ಸುದ್ದಿ ಎಂದು ಹೇಳಿದ್ದಾರೆ.
ಕೊವಿಡ್ 19 ಆರಂಭಕ್ಕೂ ಮುನ್ನವೇ ಕೆಲವು ಔಷಧ ತಯಾರಿಕಾ ಕಂಪೆನಿಗಳು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಲ್ಲ ಲಸಿಕೆಗಳನ್ನು ತಯಾರಿಸಲು ಮುನ್ನಚ್ಚರಿಕೆ ವಹಿಸಿದ್ದರಿಂದ ಕೊವಿಡ್ಗೆ ಚಿಕಿತ್ಸೆ ನೀಡುವುದು ಕೊಂಚ ಮಟ್ಟಿಗೆ ಅನುಕೂಲವಾಯಿತು. ಒಂದುವೇಳೆ ಈ ಲಸಿಕೆಗಳು ಲಭಿಸದೇ ಇದ್ದಲ್ಲಿ ಪರಿಸ್ಥಿತಿ ಹೇಗಿರುತ್ತಿತ್ತು ಎಂಬುದನ್ನು ಊಹಿಸಿಕೊಳ್ಳುವುದೂ ಕಷ್ಟ.
ಇಷ್ಟೆಲ್ಲಾ ಬೆಳವಣಿಗೆಗಳ ನಂತರ ಈಗ ಎದುರಾಗಿರುವ ದೊಡ್ಡ ಪ್ರಶ್ನೆ ಎಂದರೆ ಮನುಷ್ಯನಲ್ಲಿ ಸ್ವಾಭಾವಿಕವಾಗಿ ಅಭಿವೃದ್ಧಿ ಹೊಂದುವ ರೋಗ ನಿರೋಧಕ ಶಕ್ತಿ ಎಷ್ಟು ಕಾಲದ ತನಕ ಕೊರೊನಾ ವೈರಾಣುವನ್ನು ತಡೆಗಟ್ಟಬಲ್ಲದು ಎಂದು. ಸದ್ಯಕ್ಕೆ ಕೊವಿಡ್ 19 ಆರಂಭವಾಗಿ ಕೇವಲ 1 ವರ್ಷವಾಗಿರುವುದರಿಂದ ವಿಜ್ಞಾನಿಗಳು ಈ ಪ್ರಶ್ನೆಗೆ ಉತ್ತರಿಸುವುದು ಸಾಧ್ಯವಿಲ್ಲ ಎನ್ನುತ್ತಾರೆ. ಹೀಗಾಗಿ ಇದೇ ತರ್ಕವನ್ನು ಕೊರೊನಾ ಲಸಿಕೆಗೂ ಅನ್ವಯ ಮಾಡಬಹುದಾಗಿದ್ದು, ಸಂಪೂರ್ಣ ನಿರ್ಧಾರ ತಳೆಯುವುದಕ್ಕೆ ಕೆಲ ಅವಧಿಯವರೆಗೆ ಕಾಯಲೇಬೇಕಿದೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಕೊರೊನಾ ಲಸಿಕೆಯು ವಿಜ್ಞಾನಿಗಳಲ್ಲಿ ಉತ್ತಮ ಭರವಸೆ ಮೂಡಿಸಿದೆ. ಆದರೆ, ಲಸಿಕೆಯ ಅಡ್ಡಪರಿಣಾಮಗಳ ಕುರಿತು ಕೆಲ ಗೊಂದಲಗಳು ಇನ್ನೂ ಜೀವಂತ ಇವೆ. ಅಷ್ಟಿದ್ದರೂ ಲಂಡನ್ನ ಫ್ರಾನ್ಸಿಸ್ ಕ್ರಿಕ್ ಸಂಸ್ಥೆಯ ಜೋನಾಥನ್ ಸ್ಟೋಯ್ ಹೇಳುವಂತೆ ಲಸಿಕೆಯ ಅಡ್ಡಪರಿಣಾಮಕ್ಕಿಂತಲೂ ಕೊರೊನಾ ವೈರಾಣುವಿನ ಪರಿಣಾಮವೇ ಅಧಿಕ ಇರುವುದರಿಂದ ಕೆಲವೊಂದು ಸಮಸ್ಯೆಗಳನ್ನು ನಾವು ಎದುರಿಸಲೇಬೇಕಿದೆ.
ಸಾಂಕ್ರಾಮಿಕ ರೋಗಕ್ಕೆ ಅಂತ್ಯವಿಲ್ಲವೇ.. ಜೊತೆಯಾಗಿ ಬದುಕುವುದು ಅನಿವಾರ್ಯವೇ?
ಕೊರೊನಾ ಲಸಿಕೆಗೆ ಹಲವು ರಾಷ್ಟ್ರಗಳು ಇನ್ನಿಲ್ಲದಂತೆ ಪ್ರಯತ್ನಿಸುತ್ತಿವೆ. ಕೊವಿಡ್ ತಡೆಗಟ್ಟಲು ಲಸಿಕೆ ಸಿಗಲಿದೆ ಎಂಬ ಭರವಸೆ ಮೂಡುತ್ತಿರುವಂತೆಯೇ ಜನರು ಕೊರೊನಾದಿಂದ ಮುಕ್ತಿ ಸಿಕ್ಕೇಬಿಟ್ಟಿತು ಎನ್ನುವಷ್ಟು ಖುಷಿಯಾಗಿದ್ದಾರೆ. ಆದರೆ, ವಿಜ್ಞಾನಿಗಳು ಹೇಳುವ ಕಟುಸತ್ಯದ ಪ್ರಕಾರ ಕೊರೊನಾವನ್ನು ನಿರ್ಮೂಲನೆ ಮಾಡುವುದೇ ಅಸಾಧ್ಯವಂತೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೀಟರ್ ಕಾಲಿಗ್ನಾನ್, ಯಾವ ಲಸಿಕೆಯೂ ನೂರಕ್ಕೆ ನೂರರಷ್ಟು ರಕ್ಷಣೆ ನೀಡಲಾರದು. ಒಂದುವೇಳೆ ಜಗತ್ತಿನ ಅಷ್ಟೂ ಜನರಿಗೆ ಒಮ್ಮೆಲೆ ಲಸಿಕೆ ನೀಡಿದರೂ ಕೊರೊನಾ ತೊಲಗುತ್ತದೆ ಎಂದು ಹೇಳಲಾಗದು. ಇನ್ನೇನಿದ್ದರೂ ನಾವು ಈ ರೋಗದ ಜೊತೆ ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳುವುದು ಅನಿವಾರ್ಯ ಎಂದು ತಿಳಿಸಿದ್ದಾರೆ.
ಹಾಗೆ ನೋಡಿದರೆ ಕೊರೊನಾ ವೈರಸ್ನೊಂದಿಗೆ ಒಂದು ವರ್ಷ ಕಳೆಯುವಷ್ಟರಲ್ಲಿ ಮಾಸ್ಕ್, ಸ್ಯಾನಿಟೈಸರ್ ನಮ್ಮ ಬದುಕಿನ ಭಾಗವೇ ಆಗಿಬಿಟ್ಟಿವೆ. ಇನ್ನೇನಿದ್ದರೂ ಅವುಗಳೊಂದಿಗೆ ಹೀಗೇ ಸಾಮರಸ್ಯದ ಜೀವನ ಮಾಡಬೇಕಷ್ಟೇ. ಇಷ್ಟು ಕಾಲ ಕೊರೊನಾದೊಟ್ಟಿಗಿದ್ದು ಎಷ್ಟು ಅರಿತೆವು.. ಎಂಬುದಕ್ಕಿಂತ ಇನ್ನೆಂದೆಂದಿಗೂ ಜೊತೆಯಾಗಿ ಬದುಕುವ ಸವಾಲನ್ನು ಸ್ವೀಕರಿಸಬೇಕು ಎನ್ನುವ ಸತ್ಯವನ್ನು ಅರಿತುಕೊಳ್ಳುವುದು ಮುಖ್ಯ.
(ಸಿಎನ್ಎನ್ ಪ್ರಕಟಿಸಿದ ಲೇಖನದ ಭಾಷಾಂತರ)
ಕೊರೊನಾ ನಂತರ ನೀವು ಶಾಪಿಂಗ್ ಹೋಗೋದು ನಿಲ್ಲಿಸಿದ್ದೀರಾ? ಹಾಗಿದ್ರೆ ಈ ಸ್ಟೋರಿ ಓದಿ
Published On - 5:34 pm, Tue, 29 December 20