ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ವಿರುದ್ಧ ಮುಂದಿನ ವಾರ ವಿಪಕ್ಷಗಳಿಂದ ಅವಿಶ್ವಾಸ ನಿರ್ಣಯ ಮಂಡನೆ ಸಾಧ್ಯತೆ
Rajya Sabha Session 2021: ಮುಂದಿನ ವಾರ ಒಂದುವೇಳೆ ವಿರೋಧ ಪಕ್ಷಗಳು ರಾಜ್ಯಸಭೆಯಲ್ಲಿ ಎಂ. ವೆಂಕಯ್ಯ ನಾಯ್ಡು ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿದರೆ ಮುಂದಿನ ವಾರ ಅಧಿವೇಶನದಲ್ಲಿ ಮತ್ತೊಂದು ಗಲಾಟೆಯೇಳುವುದು ಖಚಿತ.
ನವದೆಹಲಿ: ಈ ಬಾರಿ ಲೋಕಸಭಾ ಮತ್ತು ರಾಜ್ಯಸಭಾ ಮುಂಗಾರು ಅಧಿವೇಶನ (Monsoon Session 2021) ಆರಂಭವಾದಾಗಿನಿಂದ ಪೆಗಾಸಸ್ (Pegasus), ಕೃಷಿ ಕಾಯ್ದೆ (Farm Law) ಮತ್ತಿತರ ವಿಷಯಗಳನ್ನು ಮುಂದಿಟ್ಟುಕೊಂಡು ವಿರೋಧಪಕ್ಷಗಳು ಸದನದಲ್ಲಿ ಗಲಾಟೆ ಎಬ್ಬಿಸುತ್ತಿವೆ. ಇದರಿಂದಾಗಿ 2 ವಾರಗಳಿಂದ ಇದುವರೆಗೂ ಸರಿಯಾಗಿ ಅಧಿವೇಶನವನ್ನು ನಡೆಸಲು ಸಾಧ್ಯವಾಗಿಲ್ಲ. ಇಡೀ ದೇಶದಲ್ಲಿ ಸಂಚಲನ ಮೂಡಿಸಿರುವ ಪೆಗಾಸಸ್ ಗೂಢಚಾರಿಕೆ ವಿವಾದದ ಬಗ್ಗೆ ರಾಜ್ಯಸಭೆಯಲ್ಲಿ ಚರ್ಚೆ ನಡೆಸಲು ಸೂಕ್ತ ಅವಕಾಶ ನೀಡದ ಹಿನ್ನೆಲೆಯಲ್ಲಿ ಮುಂದಿನ ವಾರ ರಾಜ್ಯಸಭೆ ಸಭಾಪತಿ ಎಂ. ವೆಂಕಯ್ಯ ನಾಯ್ಡು (Rajya Sabha Chairman Venkaiah Naidu) ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ (No Confidence Motion) ಮಂಡನೆ ಮಾಡುವ ಸಾಧ್ಯತೆಯಿದೆ.
ಭಾರತದ ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ವಿರೋಧ ಪಕ್ಷಗಳಾದ ಕಾಂಗ್ರೆಸ್, ಟಿಎಂಸಿ, ಡಿಎಂಕೆ ಮತ್ತಿತರ ಪಕ್ಷಗಳ ನಾಯಕರು ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಜುಲೈ 19ರಂದು ಆರಂಭವಾಗಿರುವ ಮುಂಗಾರು ಅಧಿವೇಶನದಲ್ಲಿ ಪೆಗಾಸಸ್ ಬೇಹುಗಾರಿಕೆ, ಕೋವಿಡ್ ಲಸಿಕೆ ಮತ್ತಿತರ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಪ್ರತಿದಿನವೂ ನೋಟಿಸ್ ನೀಡಲಾಗಿದೆ. ಆದರೆ, ಕೇಂದ್ರ ಸರ್ಕಾರ ಇದುವರೆಗೂ ಯಾವುದೇ ವಿವರಣೆಯನ್ನು ನೀಡಿಲ್ಲ ಎಂದು ವಿಪಕ್ಷ ನಾಯಕರು ಆರೋಪಿಸಿದ್ದಾರೆ.
ಈಗಾಗಲೇ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸಂಸದ ಶಂತನು ಸೇನ್ ಕಳೆದ ವಾರ ರಾಜ್ಯಸಭಾ ಅಧಿವೇಶನದ ವೇಳೆ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರ ಕೈಯಲ್ಲಿದ್ದ ಪೆಗಾಸಸ್ ವಿವಾದದ ಕುರಿತ ಹೇಳಿಕೆಯ ಪ್ರತಿಯನ್ನು ಕಸಿದುಕೊಂಡು, ಹರಿದುಹಾಕಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಅಧಿವೇಶನದಿಂದ ಅಮಾನತು ಮಾಡಲಾಗಿದೆ. ಈ ಕಾರಣದಿಂದ ವಿಪಕ್ಷಗಳಿಗೆ ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ವಿರುದ್ಧ ಅಸಮಾಧಾನ ಇನ್ನೂ ಹೆಚ್ಚಾಗಿದೆ.
ಅದೇ ರೀತಿ ಆಡಳಿತ ಪಕ್ಷದವರು ಕೂಡ ವಿರೋಧ ಪಕ್ಷದವರಿಂದಲೇ ಅಧಿವೇಶನ ಮುಂದೂಡಿಕೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ. ವಿರೋಧ ಪಕ್ಷದವರು ದಿನಕ್ಕೊಂದು ಗಲಾಟೆಯೆಬ್ಬಿಸಿ, ಪ್ರತಿಭಟನೆ ಮಾಡುವ ಮೂಲಕ ಸದನವನ್ನು ಮುನ್ನಡೆಸದಂತೆ ತಡೆಯೊಡ್ಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಮುಂದಿನ ವಾರ ಒಂದುವೇಳೆ ವಿರೋಧ ಪಕ್ಷಗಳು ರಾಜ್ಯಸಭೆಯಲ್ಲಿ ಎಂ. ವೆಂಕಯ್ಯ ನಾಯ್ಡು ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿದರೆ ಮುಂದಿನ ವಾರ ಅಧಿವೇಶನದಲ್ಲಿ ಮತ್ತೊಂದು ಗಲಾಟೆಯೇಳುವುದು ಖಚಿತ.
ಈ ವಾರ ಅಧಿವೇಶನದಲ್ಲಿ ಪೆಗಾಸಸ್, ನೂತನ ಕೃಷಿ ಕಾಯ್ದೆ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ವಿಪಕ್ಷಗಳ ಗದ್ದಲ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸಭಾಪತಿ ವೆಂಕಯ್ಯನಾಯ್ಡು ಅವರು ತೀವ್ರ ಅಸಮಾಧಾನಗೊಂಡಿದ್ದು, ನಾವು ಅಸಹಾಯಕರಾಗುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದರು. ಸಂಸತ್ತಿನ ಉಭಯ ಸದನಗಳಲ್ಲಿ ವಿರೋಧ ಪಕ್ಷಗಳ ಸದಸ್ಯರು ಪೆಗಾಸಸ್, ನೂತನ ಕೃಷಿ ಕಾಯ್ದೆಗಳು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಾರ್ವಜನಿಕರಿಗೆ ಅನುಕೂಲವಾಗುವ ಪ್ರಮುಖವಾದ ವಿಷಯಗಳ ಬಗ್ಗೆ ಚರ್ಚಿಸದಂತೆ ರಾಜ್ಯಸಭಾ ಸದಸ್ಯರನ್ನು ತಡೆಯಲಾಗಿದೆ. ದಿನದಿಂದ ದಿನಕ್ಕೆ ನಾವು ಅಸಹಾಯಕರಾಗುತ್ತಿದ್ದೇವೆ ಎಂದು ವೆಂಕಯ್ಯ ನಾಯ್ಡು ಅಸಮಾಧಾನ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: Monsoon Session 2021: ಕೇಂದ್ರ ಸಚಿವರ ಭಾಷಣದ ಪ್ರತಿಯನ್ನು ಹರಿದುಹಾಕಿದ್ದ ಟಿಎಂಸಿ ಸಂಸದ ರಾಜ್ಯಸಭೆಯಿಂದ ಅಮಾನತು
(Monsoon Session 2021: Opposition Parties Plans to Bring No Confidence Motion Against Rajya Sabha Chairman Venkaiah Naidu on Next Week)