ಮುಂಬೈ: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಮಾಜಿ ಮುಂಬೈ ಪೊಲೀಸ್ ಮುಖ್ಯಸ್ಥ ಪರಮ್ವೀರ್ ಸಿಂಗ್ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನಾಳೆ (ಮಾರ್ಚ್ 31) ನಡೆಸುವುದಾಗಿ ಬಾಂಬೆ ಹೈಕೋರ್ಟ್ ಇಂದು ತಿಳಿಸಿದೆ. ಅನಿಲ್ ದೇಶ್ಮುಖ್, ಪೊಲೀಸ್ ಅಧಿಕಾರಿ ಸಚಿನ್ ವಾಜೆ ಬಳಿ ಪ್ರತಿ ತಿಂಗಳು ಬಾರ್ ಹಾಗೂ ರೆಸ್ಟೋರೆಂಟ್ಗಳಿಂದ ₹ 100 ಕೋಟಿ ದಂಡ ಸಂಗ್ರಹಿಸಲು ತಿಳಿಸಿದ್ದರು. ಈ ಕಾರಣಕ್ಕಾಗಿ ಅನಿಲ್ ದೇಶ್ಮುಖ್ ವಿರುದ್ಧ ಪರಮ್ವೀರ್ ಸಿಂಗ್ ಪಿಐಎಲ್ ದಾಖಲಿಸಿದ್ದರು.
ಪರಮ್ವೀರ್ ಸಿಂಗ್ ಬಾಂಬೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಾರ್ಚ್ 25ರಂದು ದಾಖಲಿಸಿದ್ದರು. ಪೊಲೀಸ್ ಇಲಾಖೆಯ ಪೊಲೀಸರ ವರ್ಗಾವಣೆ ವಿಚಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತಾಗಿಯೂ ಅವರು ತಮ್ಮ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಮುಂಬೈನ ಹಿಂದಿನ ಪೊಲೀಸ್ ಕಮಿಷನರ್ ಪರಮ್ವೀರ್ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಬಾಂಬೆ ಹೈಕೋರ್ಟ್ನಲ್ಲಿಯೇ ಅರ್ಜಿ ಹಾಕಿಕೊಳ್ಳಿ ಎಂದು ಸೂಚಿಸಿತ್ತು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪರಮ್ವೀರ್ ಸಿಂಗ್ ಬಾಂಬೆ ಹೈಕೋರ್ಟ್ಗೆ ಅರ್ಜಿ ಹಾಕಿದ್ದರು. ತಮ್ಮ ಅರ್ಜಿಯಲ್ಲಿ ಮಹಾರಾಷ್ಟ್ರದ ಹಾಲಿ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಗಂಭೀರ ಆರೋಪ ಮಾಡಿದ್ದ ಪರಮ್ವೀರ್ಸಿಂಗ್, ಗೃಹ ಸಚಿವರಾಗಿ ದೇಶ್ಮುಖ್ ಅವರು ಲಂಚ ಸ್ವೀಕರಿಸಿ ಪ್ರತಿ ತಿಂಗಳು ರೂ 100 ಕೋಟಿ ಕಪ್ಪ ತಂದು ಕೊಡಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಆಣತಿ ನೀಡಿದ್ದಾರೆ. ಇದನ್ನು ತನಿಖೆಗಾಗಿ ಕೂಡಲೇ ಸಿಬಿಐಗೆ ಒಪ್ಪಿಸಬೇಕು ಎಂದು ತಮ್ಮ ಕೇಳಿದ್ದರು.
ಸುಪ್ರೀಂಕೋರ್ಟ್ ಏನು ಹೇಳಿತು?
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಯಾವ ರಾಜ್ಯಗಳಿಗೂ ಪೊಲೀಸ್ ಸುಧಾರಣೆ ತರಲು ಇಷ್ಟ ಇಲ್ಲ. ಯಾಕೆಂದರೆ, ಒಂದೊಮ್ಮೆ ಈ ರೀತಿ ಸುಧಾರಣೆ ತಂದರೆ, ಅವರ ಕೈಲಿ ಅಧಿಕಾರ ಇರುವುದೇ ಇಲ್ಲ ಎಂದು ಹೇಳಿದರು. ಮೊದಲು ಒಳ್ಳೆ ಸಂಬಂಧ ಹೊಂದಿದ್ದವರು ಈಗ ಜಗಳಕ್ಕಿಳಿದಿದ್ದಾರೆ. ಇದರಿಂದ ಎಲ್ಲ ಹೊರಬರುತ್ತಿದೆ. ಈ ಹಂತದಲ್ಲಿ ನಾವು ಈ ಪ್ರಕರಣದ ವಿಚಾರಣೆ ಆರಂಭಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಯಾವಾಗ ನ್ಯಾಯಾಲಯ ತಾನು ಈ ಹಂತದಲ್ಲಿ ಇದನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿತೋ ಆಗ ರೋಹಟಗಿ, ತಮ್ಮ ಕೋರಿಕೆಯನ್ನು ಮುಂದಿಟ್ಟರು. ದೇಶ್ಮುಖ್ ಈಗಲೂ ಮಂತ್ರಿಯಾಗಿ ಇದ್ದಾರೆ. ಹಾಗಾಗಿ ಸಾಕ್ಷ್ಯ ನಾಶವಾಗುವ ಸಾಧ್ಯತೆ ಇದೆ. ಆದ್ದರಿಂದ ಬಾಂಬೆ ಹೈಕೋರ್ಟ್ ನಾಳೆಯೇ ಇದನ್ನು ವಿಚಾರಣೆಗೆ ತೆಗೆದುಕೊಳ್ಳಲು ನಿರ್ದೇಶನ ನೀಡಿ ಎಂದು ಕೋರಿಕೊಂಡರು. ಅದನ್ನು ಒಪ್ಪಿದ ನ್ಯಾಯಪೀಠ ನಾಳೆಯೇ ಇದನ್ನು ವಿಚಾರಣೆಗೆ ತೆಗೆದುಕೊಳ್ಳುವಂತೆ ಬಾಂಬೆ ಹೈಕೋರ್ಟ್ಗೆ ನಿರ್ದೇಶನ ನೀಡಿತ್ತು.
ಇದನ್ನೂ ಓದಿ: ಮುಂಬೈ ಪೊಲೀಸ್ ಕಮಿಷನರ್ ಹುದ್ದೆ ಕಳೆದುಕೊಂಡ ಪರಮ್ವೀರ್ ಸಿಂಗ್ ಮೈಮೇಲೆ ಎಳೆದುಕೊಂಡಿದ್ದ ವಿವಾದಗಳು ಒಂದೆರೆಡಲ್ಲ..
Published On - 10:46 pm, Tue, 30 March 21