
ನವದೆಹಲಿ, ನವೆಂಬರ್ 26: ಕಲಾಪಕ್ಕೆ ವಿಪಕ್ಷಗಳು ಅಡ್ಡಿಪಡಿಸಿದ್ದರಿಂದ ಸಂಸತ್ನ ಲೋಕಸಭೆ ಮತ್ತು ರಾಜ್ಯಸಭೆ ಮುಂಗಾರು ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಇದೀಗ ಮತ್ತೊಮ್ಮೆ ಸಂಸತ್ ವಿಶೇಷ ಅಧಿವೇಶನ ನಡೆಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದ್ದು, ಅಗತ್ಯ ಸರ್ಕಾರಿ ಕಲಾಪಗಳನ್ನು ಕೈಗೆತ್ತಿಕೊಳ್ಳುವ ಸಲುವಾಗಿ ನವೆಂಬರ್ 30ರಂದು ಲೋಕಸಭೆಯನ್ನು ಮತ್ತು ಡಿಸೆಂಬರ್ 2ರಂದು ರಾಜ್ಯಸಭೆಯನ್ನು ಪುನರಾರಂಭಿಸಲಾಗುವುದು.
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಈ ಕಲಾಪಗಳು ಸಂಸತ್ತಿನ ಮುಂಗಾರು ಅಧಿವೇಶನದ ಮುಂದುವರಿದ ಭಾಗವಾಗಿರಲಿವೆ ಮತ್ತು ನಿಗದಿತ ಕಲಾಪಗಳ ಅಗತ್ಯತೆಗೆ ಅನುಗುಣವಾಗಿ ಡಿಸೆಂಬರ್ 3ರಂದು ಮುಕ್ತಾಯಗೊಳ್ಳಬಹುದು ಎಂದು ತಿಳಿಸಿದ್ದಾರೆ. ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ವಿಧೇಯಕ ಕುರಿತ ಮಹತ್ವದ ಬೆಳವಣಿಗೆಗಳು ಹಾಗೂ ಊಹಾಪೋಹಗಳ ನಡುವೆ ಈ ನಿರ್ಧಾರ ಹೊರಬಿದ್ದಿದೆ.
ಇದನ್ನೂ ಓದಿ: ಮಹಿಳಾ ಮೀಸಲಾತಿ ಜಾರಿಗೆ ವಿಶೇಷ ಸಂಸತ್ ಅಧಿವೇಶನಕ್ಕೆ ಕೇಂದ್ರ ಸಿದ್ಧತೆ, ಮಸೂದೆ ಗೆಲ್ಲುವ ವಿಶ್ವಾಸ
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಇಂದು (ಗುರುವಾರ) ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಮಾಹಿತಿ ಹಂಚಿಕೊಂಡಿದ್ದು, ನವೆಂಬರ್ 30ರಂದು (ಸೋಮವಾರ) ಲೋಕಸಭೆ ಮತ್ತು ಡಿಸೆಂಬರ್ 2ರಂದು (ಬುಧವಾರ) ರಾಜ್ಯಸಭೆಯನ್ನು ಪುನರಾರಂಭಿಸುವಂತೆ ಕ್ರಮವಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯಸಭಾ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ಕೋರಿಕೆ ಸಲ್ಲಿಸಲಾಗಿದೆ. ಕಲಾಪಗಳ ಅಗತ್ಯತೆಗೆ ಅನುಗುಣವಾಗಿ ಉಭಯ ಸದನಗಳ ಕಲಾಪಗಳು ಡಿಸೆಂಬರ್ 3ರಂದು ಮುಕ್ತಾಯಗೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
ಈ ವರ್ಷದ ಏಪ್ರಿಲ್‌ನಲ್ಲಿ ಕ್ಷೇತ್ರ ಪುನರ್ವಿಂಗಡಣೆ ವಿಧೇಯಕವನ್ನು ಅಂಗೀಕರಿಸಲು ಸರ್ಕಾರ ನಡೆಸಿದ್ದ ಪ್ರಯತ್ನ ವಿಫಲವಾಗಿತ್ತು. ಈಗ ಮತ್ತೆ ಸಂಸತ್ತಿನ ಸಭೆ ಕರೆದಿರುವುದು ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ವಿಂಗಡಣೆಗೆ ಸಂಬಂಧಿಸಿದ ಸಾಂವಿಧಾನಿಕ ತಿದ್ದುಪಡಿ ಅಥವಾ ಶಾಸನದ ಬಗ್ಗೆ ತೀವ್ರ ಚರ್ಚೆಗೆ ಕಾರಣವಾಗಿದೆ.
ಮಹಿಳಾ ಮೀಸಲಾತಿ ಕಾಯ್ದೆಯನ್ನು (ನಾರಿ ಶಕ್ತಿ ವಂದನ್ ಅಧಿನಿಯಮ) ಜನಗಣತಿ ಮತ್ತು ಕ್ಷೇತ್ರ ಪುನರ್ವಿಂಗಡಣೆಯಿಂದ ಪ್ರತ್ಯೇಕವಾಗಿ ಇಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದ್ದು, ಪ್ರಸ್ತುತ ಇರುವ ರಾಜ್ಯವಾರು ಸ್ಥಾನಗಳ ಸಂಖ್ಯೆಯನ್ನು ಯಥಾಸ್ಥಿತಿಯಲ್ಲಿ ಉಳಿಸುವುದು, ಪ್ರಸಕ್ತ 543 ಸ್ಥಾನಗಳಲ್ಲಿ ಮಹಿಳೆಯರಿಗೆ 182 ಸ್ಥಾನಗಳನ್ನು ತಕ್ಷಣವೇ ಮೀಸಲಿಡುವುದು ಸೇರಿದಂತೆ ಹಲವು ಷರತ್ತುಗಳನ್ನು ಮುಂದಿಟ್ಟಿದೆ. ಅಲ್ಲದೆ, ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತ ಪಡೆಯಲು ಸರ್ಕಾರಕ್ಕೆ ಎನ್‌ಡಿಎ ಹೊರತಾದ ಪಕ್ಷಗಳ ಬೆಂಬಲವೂ ಬೇಕಾಗಿದ್ದು, ವಿರೋಧ ಪಕ್ಷಗಳು ಸರ್ವಪಕ್ಷ ಸಭೆಗೆ ಒತ್ತಾಯಿಸಿವೆ.
ಇದನ್ನೂ ಓದಿ: ಡಿಸೆಂಬರ್ ಮೊದಲ ವಾರದಲ್ಲಿ ಸಂಸತ್ ಚಳಿಗಾಲದ ಅಧಿವೇಶನ ಸಾಧ್ಯತೆ; ಕ್ಷೇತ್ರ ಪುನರ್‌ವಿಂಗಡಣೆ, ಮಹಿಳಾ ಮೀಸಲಾತಿ ಮಸೂದೆಗೆ ಆದ್ಯತೆ
ಮುಂಗಾರು ಅಧಿವೇಶನದ ದಾಖಲೆಯ ಅವಧಿ:
ಸಂಸತ್ತಿನ ಮುಂಗಾರು ಅಧಿವೇಶನವು ಮುಕ್ತಾಯಗೊಂಡು 105 ದಿನ ಕಳೆದಿದ್ದರೂ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸದನವನ್ನು ಔಪಚಾರಿಕವಾಗಿ ಸಮಾಪ್ತಿಗೊಳಿಸಿರಲಿಲ್ಲ. ಸದನವನ್ನು ಸಮಾಪ್ತಿಗೊಳಿಸದೆ ಇರುವುದರಿಂದ, ಹೊಸ ಅಧಿವೇಶನ ಕರೆಯಲು ಬೇಕಾಗುವ ಕನಿಷ್ಠ 14 ದಿನಗಳ ನೋಟಿಸ್ ಬದಲಿಗೆ, ಅಸ್ತಿತ್ವದಲ್ಲಿರುವ ಅಧಿವೇಶನದಲ್ಲೇ ಕನಿಷ್ಠ 2 ದಿನಗಳ ಮುಂಚಿತ ನೋಟಿಸ್ ನೀಡಿ ಸಭೆಯನ್ನು ಪುನಃ ಕರೆಯಲು ಸರ್ಕಾರಕ್ಕೆ ಸಾಧ್ಯವಾಗಿದೆ. ವಿರೋಧ ಪಕ್ಷಗಳು ಇದೇ ವಿಚಾರವನ್ನು ಮುಂದಿಟ್ಟು, ಕ್ಷೇತ್ರ ಪುನರ್ವಿಂಗಡಣೆ ವಿಧೇಯಕಕ್ಕೆ ಬಹುಮತ ಕ್ರೋಢೀಕರಿಸಲು ಸರ್ಕಾರ ಸಮಯ ತೆಗೆದುಕೊಂಡಿದೆ ಎಂದು ಆರೋಪಿಸಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:50 pm, Thu, 26 November 26