ಮುಂಬೈ ಪೊಲೀಸ್ ಕಮಿಷನರ್ ಹುದ್ದೆ ಕಳೆದುಕೊಂಡ ಪರಮ್​ವೀರ್ ಸಿಂಗ್​ ಮೈಮೇಲೆ ಎಳೆದುಕೊಂಡಿದ್ದ ವಿವಾದಗಳು ಒಂದೆರೆಡಲ್ಲ..

|

Updated on: Mar 17, 2021 | 10:39 PM

ಪರಮ್​ವೀರ್ ಸಿಂಗ್ ವ್ಯಕ್ತಿತ್ವವೇ ಅಂಥದ್ದು. ವೃತ್ತಿಯಲ್ಲಿ ಹತ್ತಾರು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರೂ ಎಂದಿಗೂ ತಮ್ಮ ಅಧೀನ ಸಿಬ್ಬಂದಿಯನ್ನು ಪರಮ್​ವೀರ್ ಸಿಂಗ್ ಬಿಟ್ಟುಕೊಡಲಿಲ್ಲ. ಇದೇ ಕಾರಣಕ್ಕೆ ಮುಂಬೈ ಪೊಲೀಸರು ಅವರ ಬಗ್ಗೆ ಕೃತಜ್ಞತೆಯಿಂದ ಮಾತನಾಡುತ್ತಾರೆ.

ಮುಂಬೈ ಪೊಲೀಸ್ ಕಮಿಷನರ್ ಹುದ್ದೆ ಕಳೆದುಕೊಂಡ ಪರಮ್​ವೀರ್ ಸಿಂಗ್​ ಮೈಮೇಲೆ ಎಳೆದುಕೊಂಡಿದ್ದ ವಿವಾದಗಳು ಒಂದೆರೆಡಲ್ಲ..
ಮುಂಬೈ ಪೊಲೀಸ್ ಕಮಿಷನರ್ ಹುದ್ದೆಯಿಂದ ಕೆಳಗಿಳಿದ ಪರಮ್​ಬೀರ್ ಸಿಂಗ್
Follow us on

ಮುಕೇಶ್ ಅಂಬಾನಿ ಮನೆ ಎದುರು ಐಷಾರಾಮಿ ಕಾರಿನಲ್ಲಿ ಜೆಲಟಿನ್ ಕಡ್ಡಿಗಳು ಪತ್ತೆಯಾದ ನಂತರ ನಡೆದ ಬೆಳವಣಿಗೆಗಳು ಒಂದೆರೆಡಲ್ಲ. ವಾಜೆ ಎಂಬ ಕೆಳಹಂತದ ಪೊಲೀಸ್ ಕೊರಳಿಗೆ ಸುತ್ತಿಕೊಂಡ ಪ್ರಕರಣ, ಇದೀಗ ಮುಂಬೈ ಪೊಲೀಸ್ ಕಮಿಷನರ್ ಹುದ್ದೆಯಲ್ಲಿದ್ದ ಪರಮ್​ವೀರ್ ಸಿಂಗ್ ಅವರ ಸ್ಥಾನವನ್ನೂ ಕಸಿದುಕೊಂಡಿದೆ. ಈ ಒಟ್ಟು ಪ್ರಕರಣದಲ್ಲಿ ಸಿಂಗ್ ಅವರ ಪಾತ್ರದ ಬಗ್ಗೆ ಇನ್ನೂ ಗೊಂದಲಗಳಿವೆ. ಆದರೆ ರಾಷ್ಟ್ರೀಯ ತನಿಖಾ ದಳ ವಾಜೆ ಪಾತ್ರದ ಬಗ್ಗೆ ಸಾಕಷ್ಟು ಸಾಕ್ಷ್ಯಗಳನ್ನು ಕಲೆಹಾಕಿದೆ. ವಾಜೆ ನೇರವಾಗಿ ಪರಮ್​ವೀರ್​ ಸಿಂಗ್​ ಅವರಿಗೆ ವರದಿ ಮಾಡಿಕೊಳ್ಳುತ್ತಿದ್ದ ವಿಚಾರ ಮತ್ತು ಪೊಲೀಸ್ ಕಮಿಷನರ್ ಕಚೇರಿ ಆವರಣದಲ್ಲಿಯೇ ಅನುಮಾನಾಸ್ಪದ ಕಾರೊಂದು ಪತ್ತೆಯಾಗಿತ್ತು ಎಂಬುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಮುಕೇಶ್ ಅಂಬಾನಿ ಮನೆಮುಂದೆ ಸ್ಫೋಟಕ ತುಂಬಿದ್ದ ಕಾರು ಪತ್ತೆಯಾಗಿದ್ದು ಮತ್ತು ಅದರ ನಂತರದ ಬೆಳವಣಿಗೆಗಳ ಬಗ್ಗೆ ಸಾಕಷ್ಟು ಮಾಹಿತಿ ಪ್ರತಿದಿನ ಪ್ರಕಟವಾಗುತ್ತಿದೆ. ಈ ಮಾಹಿತಿಯ ಜೊತೆಜೊತೆಗೆ, ಇದೇ ಪ್ರಕರಣದಿಂದಾಗಿ ಅಧಿಕಾರ ಕಳೆದುಕೊಂಡ ಪರಮ್​ವೀರ್​ ಸಿಂಗ್ ಅವರ ವಿವಾದಾತ್ಮಕ ವ್ಯಕ್ತಿತ್ವದ ಬಗ್ಗೆಯೂ ಒಮ್ಮೆ ಗಮನಿಸೋಣವೇ?

ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್​ ಜೊತೆಗೂಡಿ ರಚಿಸಿರುವ ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ ಸರ್ಕಾರದಲ್ಲಿ ಪೊಲೀಸ್ ಇಲಾಖೆಯನ್ನು ನಿರ್ವಹಿಸುವ ಗೃಹ ಸಚಿವಾಲಯವು ಎನ್​ಸಿಪಿಯ ಅನಿಲ್ ದೇಶ್​ಮುಖ್​ ಬಳಿಯಿದೆ. ಆದರೆ ಸರ್ಕಾರದ ಚುಕ್ಕಾಣಿ ಹಿಡಿದವರು ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ. ಈ ಎರಡೂ ಪಕ್ಷಗಳು ಅಥವಾ ಇಬ್ಬರೂ ವ್ಯಕ್ತಿಗಳ ನಡುವೆ ನಡೆಯುವ ಸಣ್ಣಪುಟ್ಟ ಸಂಘರ್ಷ, ಅಭಿಪ್ರಾಯಭೇದಗಳು ಪೊಲೀಸ್ ಇಲಾಖೆಯ ಕಾರ್ಯವೈಖರಿ ಮೇಲೆ ಪರಿಣಾಮ ಬೀರುತ್ತಿವೆ. ಮುಂಬೈ ಎಂಬ ದೇಶದ ವಾಣಿಜ್ಯ ರಾಜಧಾನಿಯ ಭದ್ರತೆಯ ಹೊಣೆ ಹೊತ್ತ ಪರಮ್​ವೀರ್ ಸಿಂಗ್ ಸಹ ಈ ರಾಜಕೀಯ ಸಂಘರ್ಷದಲ್ಲಿ ದಾಳವಾಗಿ ಬಳಕೆಯಾದವರು.

ವರ್ಷದ ಹಿಂದೆ ಮುಂಬೈನಲ್ಲಿ ಕೊರೊನಾ ವ್ಯಾಪಕವಾಗಿ ಹರಡಿದಾಗ ಅದನ್ನು ನಿಯಂತ್ರಿಸಲು ಗೃಹಸಚಿವರು ಒಂದು ಆದೇಶ ಹೊರಡಿಸಿದರೆ, ಮುಖ್ಯಮಂತ್ರಿ ಮತ್ತೊಂದು ಆದೇಶ ನೀಡುತ್ತಿದ್ದರು. ಯಾರ ಮಾತು ಕೇಳಬೇಕು ಎಂದು ಅಧಿಕಾರಿಗಳಿಗೆ ಗೊಂದಲವಾಗುತ್ತಿತ್ತು. ಗೃಹ ಸಚಿವರ ಸೂಚನೆ ಮೇರೆಗೆ ಮುಂಬೈ ಪೊಲೀಸ್​ ಕಮಿಷನರೇಟ್ ವ್ಯಾಪ್ತಿಯಲ್ಲಿ 10 ಡಿಸಿಪಿಗಳನ್ನು ವರ್ಗಾವಣೆ ಮಾಡಿದಾಗ ಪೊಲೀಸ್ ಕಮಿಷನರ್ ಆಗಿದ್ದ ಪರಮ್​ವೀರ್ ಸಿಂಗ್ ಮೇಲೆ ಉದ್ಧವ್ ಠಾಕ್ರೆ ಒತ್ತಡ ತಂದು ವರ್ಗಾವಣೆ ರದ್ದುಪಡಿಸಿದ್ದರು. ಔಪಚಾರಿಕವಾಗಿ ಮುಂಬೈ ನಗರಕ್ಕೆ ಪರಮ್​ಸಿಂಗ್ ಪೊಲೀಸ್ ಕಮಿಷನರ್ ಆಗಿದ್ದರೂ, ಅವರಿಗೆ ಎಷ್ಟು ಸ್ವಾತಂತ್ರ್ಯ ಇತ್ತು ಎಂಬ ಬಗ್ಗೆ ಮಹಾವಿಕಾಸ ಅಘಾಡಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಪ್ರಶ್ನೆಗಳು ಉದ್ಭವಿಸುತ್ತಲೇ ಇದ್ದವು. ರಿಪಬ್ಲಿಕ್ ಟಿವಿಯ ಟಿಆರ್​ಪಿ ಹಗರಣದ ತನಿಖೆ ವೇಳೆಯಲ್ಲಿಯೂ ಪರಮ್​ವೀರ್ ಸಿಂಗ್ ಶಿವಸೇನೆಯ ಕೈಗೊಂಬೆಯಂತೆ ವರ್ತಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಈಗ ಅವರ ಎತ್ತಂಗಡಿ ನಂತರವೂ ಇಂಥದ್ದೇ ಪ್ರಶ್ನೆಗಳು ಮತ್ತೊಂದು ರೀತಿಯಲ್ಲಿ ಮುನ್ನೆಲೆಗೆ ಬಂದಿವೆ.

ಇದನ್ನೂ ಓದಿ: ಮುಂಬೈ ಪೊಲೀಸ್​ ಆಯುಕ್ತ ಎತ್ತಂಗಡಿ.. ಮುಕೇಶ್​ ಅಂಬಾನಿಯ ಮುಟ್ಟಲು ಹೋಗಿ ಕೈಸುಟ್ಟುಕೊಂಡ ಮುಂಬೈ ಪೊಲೀಸ್!

ಪರಮವೀರ್ ಸಿಂಗ್​

ಗ್ಯಾಂಗ್​ವಾರ್​ಗೆ ಕಡಿವಾಣ ಹಾಕಿದ್ದ ಎನ್​ಕೌಂಟರ್ ಸ್ಪೆಷಲಿಸ್ಟ್
1988ರ ಬ್ಯಾಚ್​ನ ಐಪಿಎಸ್ ಅಧಿಕಾರಿ ಪರಮ್​ವೀರ್​ ಸಿಂಗ್​ಗೆ ವಿವಾದಗಳು ಹೊಸತಲ್ಲ. ಈಗಲೂ ಅಧಿಕಾರದಲ್ಲಿರುವ 1990ರ ಕಾಲದ ಮುಂಬೈನ ‘ಎನ್​ಕೌಂಟರ್ ಸ್ಪೆಷಲಿಸ್ಟ್​’ಗಳ ತಲೆಮಾರಿನ ಕೊನೆಯ ವ್ಯಕ್ತಿ ಪರಮ್​ವೀರ್ ಸಿಂಗ್. ಒಂದೊಂದು ವರ್ಷವೂ ಒಂದೊಂದು ವಿವಾದಗಳಿಂದ ಸುದ್ದಿಯಲ್ಲಿರುವುದು ಸಿಂಗ್​ ಬದುಕು ಸಾಗಿಬಂದ ಹಾದಿಯಲ್ಲಿ ಎದ್ದು ಕಾಣುವ ಅಂಶ. ಭೀಮಾ ಕೊರಗಾವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 2018ರಲ್ಲಿ ನಡೆಸಿದ್ದ ಸುದ್ದಿಗೋಷ್ಠಿ, 2019ರಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್​ಪವಾರ್​ಗೆ ನೀರಾವರಿ ಹಗರಣದಲ್ಲಿ ನೀಡಿದ ಕ್ಲೀನ್​ಚಿಟ್​, 2020ರಲ್ಲಿ ರಿಪಬ್ಲಿಕ್ ಟಿವಿ ಮುಖ್ಯಸ್ಥ ಆರ್ನಬ್ ಗೋಸ್ವಾಮಿ ಬಂಧನ ಪ್ರಕರಣಗಳಿಂದ ಪರಮ್​ವೀರ್ ಸಿಂಗ್ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು.

1990ರ ದಶಕದಲ್ಲಿ ಮುಂಬೈ ಭೂಗತಲೋಕದ ಒಡೆತನಕ್ಕಾಗಿ ಪರಸ್ಪರ ಬೀದಿಹತ್ಯೆಗೆ ಇಳಿದಿದ್ದ ಅರುಣ್ ಗಾವ್ಳಿ, ದಾವೂದ್ ಇಬ್ರಾಹಿಂ ಮತ್ತು ಛೋಟಾ ರಾಜನ್​ ಗ್ಯಾಂಗ್​ಗಳನ್ನು ಮಟ್ಟಹಾಕಲು ಮುನ್ನುಗ್ಗಿದ್ದ ಪೊಲೀಸ್ ಅಧಿಕಾರಿಗಳಲ್ಲಿ ಪರಮ್​ವೀರ್ ಸಿಂಗ್ ಸಹ ಒಬ್ಬರು. ರೌಡಿಗಳನ್ನು ಬಲಿಹಾಕಲೆಂದೇ ರೂಪಿಸಿದ್ದ ಶಾರ್ಪ್​ಶೂಟರ್​ಗಳ ಎರಡು ತಂಡಗಳನ್ನು ಸಿಂಗ್ ಮುನ್ನಡೆಸಿದ್ದರು. ಈ ತಂಡದಲ್ಲಿದ್ದ ಕೆಲವರು ಇಂದಿಗೂ ಸಿಂಗ್​ ಅವರ ಧೈರ್ಯ ಮತ್ತು ಸಂಕಷ್ಟದ ಸಮಯದಲ್ಲಿ ತಂಡದ ಸದಸ್ಯರ ಬೆನ್ನಿಗೆ ನಿಲ್ಲುತ್ತಿದ್ದ ಅವರ ಗುಣವನ್ನು ನೆನಪಿಸಿಕೊಳ್ಳುತ್ತಾರೆ.

ಕೋರ್ಟ್​ನಿಂದ ಎಚ್ಚರಿಕೆ
ಸಿಂಗ್ ಅವರಿಗೆ ವಿವಾದಗಳೂ ಹೊಸದಲ್ಲ. ಆಗಸ್ಟ್ 2018ರಲ್ಲಿ ಏಳ್ಗಾರ್ ಪರಿಷದ್ ಬಗ್ಗೆ ಸಿಂಗ್ ಸುದ್ದಿಗೋಷ್ಠಿಯೊಂದನ್ನು ನಡೆಸಿದ್ದರು. ಆ ವೇಳೆ ಅವರು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಆಗಿದ್ದರು. ಇವರ ಉಸ್ತುವಾರಿಯಲ್ಲಿಯೇ ಮಹಾರಾಷ್ಟ್ರ ಪೊಲೀಸರು ಭೀಮಾ ಕೊರೆಗಾಂವ್ ಚಳವಳಿಗಾರರು ಮತ್ತು ವಕೀಲರನ್ನು ಬಂಧಿಸಿದ್ದರು. ಈ ಬಗ್ಗೆ ರಾಷ್ಟ್ರಮಟ್ಟದಲ್ಲಿ ಪ್ರಶ್ನೆಗಳು ಉದ್ಭವವಾಗಿದ್ದವು. ವಿರೋಧ ಪಕ್ಷಗಳು ಮತ್ತು ಬುದ್ಧಿಜೀವಿಗಳು ಮಹಾರಾಷ್ಟ್ರ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಈ ಹಂತದಲ್ಲಿ ತರಾತುರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಸಿಂಗ್, ಹಲವು ಪತ್ರಗಳನ್ನು ಓದುವ ಮೂಲಕ ಚವಳಿಗಾರರಿಗೆ ಮಾವೋವಾದಿಗಳೊಂದಿಗೆ ಇದ್ದ ಸಂಬಂಧದ ಬಗ್ಗೆ ತಿಳಿಸಲು ಪ್ರಯತ್ನಿಸಿದ್ದರು. ಆದರೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಪ್ರಕರಣದ ಬಗ್ಗೆ ಹೀಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದು ಬಾಂಬೆ ಹೈಕೋರ್ಟ್​ನ ಕಣ್ಣು ಕೆಂಪಾಗುವಂತೆ ಮಾಡಿತ್ತು. ‘ನ್ಯಾಯಾಲಯದಲ್ಲಿ ವಿಚಾರಣೆ ಬಾಕಿಯಿದ್ದಾಗ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡುವುದು ನ್ಯಾಯಾಂಗ ನಿಂದನೆಯಾಗುತ್ತದೆ’ ಎಂದು ಕೋರ್ಟ್ ಎಚ್ಚರಿಸಿತ್ತು.

ಅಜಿತ್ ಪವಾರ್​ಗೆ ಕ್ಲೀನ್ ಚಿಟ್
2019ರ ಡಿಸೆಂಬರ್ ತಿಂಗಳಲ್ಲಿ ಪರಮ್​ಬಿರ್ ಸಿಂಗ್ ಮುಖ್ಯಸ್ಥರಾಗಿದ್ದ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಬಾಂಬೆ ಹೈಕೋರ್ಟ್​ಗೆ ಪ್ರಮಾಣ ಪತ್ರ ಸಲ್ಲಿಸಿ, ಬಹುಕೋಟಿ ನೀರಾವರಿ ಹಗರಣಗಳಲ್ಲಿ ಅಜಿತ್ ಪವಾರ್​ಗೆ ಕ್ಲೀನ್ ಚಿಟ್ ನೀಡಿತ್ತು. ಇದಕ್ಕೆ ಒಂದು ವರ್ಷ ಮೊದಲು, ಅಂದರೆ ನವೆಂಬರ್ 2018ರಲ್ಲಿ ಎಸಿಬಿ ಸಲ್ಲಿಸಿದ್ದ ಪ್ರಮಾಣ ಪತ್ರಕ್ಕೆ ಇದು ಉಲ್ಟಾ ಹೊಡೆದಂತೆ ಆಗಿತ್ತು. ಸಿಂಗ್ ಅವರನ್ನು ಮುಂಬೈ ಪೊಲೀಸ್ ಆಯುಕ್ತರ ಸ್ಥಾನಕ್ಕೆ ಪರಿಗಣಿಸಿದಾಗ ಎನ್​ಸಿಪಿ ಈ ಮೂಲಕ ಸಿಂಗ್​ಗೆ ಋಣ ಸಂದಾಯ ಮಾಡುತ್ತಿದೆ ಎಂದೇ ವಿಶ್ಲೇಷಿಸಲಾಗಿತ್ತು.

ಪ್ರಜ್ಞಾಸಿಂಗ್ ವಿವಾದ
2008ರಲ್ಲಿ ಸಿಂಗ್ ನೇತೃತ್ವದ ಭಯೋತ್ಪಾದನಾ ನಿಗ್ರಹ ದಳವು ಮಾಲೆಗಾಂವ್ ಸ್ಫೋಟ ಪ್ರಕರಣದ ಮುಖ್ಯ ಆರೋಪಿ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಅವರನ್ನು ಬಂಧಿಸಿತ್ತು. ವಿಚಾರಣೆ ಸಂದರ್ಭ ಪರಮ್​ವೀರ್ ಸಿಂಗ್ ಕೈಲಿ ಹಿಂಸೆ ಅನುಭವಿಸಿದೆ ಎಂದು ಪ್ರಜ್ಞಾಸಿಂಗ್ ಆರೋಪಿಸಿದ್ದರು.

ಇದನ್ನೂ ಓದಿ: ಸಚಿನ್ ವಾಜೆ ಮರುನೇಮಕಕ್ಕೆ ಹಿಂದಿನಿಂದಲೂ ಉದ್ಧವ್ ಠಾಕ್ರೆ ಒತ್ತಾಯವಿತ್ತು: ದೇವೇಂದ್ರ ಫಡ್ನವಿಸ್

ಪರಮ್​ವೀರ್ ಸಿಂಗ್

ಹಿರಿಯ ಅಧಿಕಾರಿಯೊಂದಿಗೆ ಸಂಘರ್ಷ
ನವೆಂಬರ್ 26, 2008ರಲ್ಲಿ ಮುಂಬೈ ಮೇಲೆ ಉಗ್ರರ ದಾಳಿಯಾಗಿತ್ತು. ಆಗ ಮುಂಬೈ ಪೊಲೀಸ್ ಮುಖ್ಯಸ್ಥರಾಗಿದ್ದ ಹಸನ್ ಗಫೂರ್ ಅವರೊಂದಿಗೆ ಸಿಂಗ್ ಸಂಘರ್ಷಕ್ಕಿಳಿದಿದ್ದರು. ನಂತರದ ದಿನಗಳಲ್ಲಿ ‘ದಿ ವೀಕ್’ ವಾರಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ಗಫೂರ್ ಈ ಬಗ್ಗೆ ಪ್ರಸ್ತಾಪಿಸಿದ್ದರು. ಸಂಕಷ್ಟ ಸಂದರ್ಭದಲ್ಲಿ ಅಸಹಾಕಾರದ ವರ್ತನೆ ತೋರಿದ ನಾಲ್ವರು ಅಧಿಕಾರಿಗಳ ಹೆಸರನ್ನು ಗಫೂರ್ ಬಹಿರಂಗಪಡಿಸಿದ್ದರು. ಈ ನಾಲ್ವರಲ್ಲಿ ಪರಮ್​ವೀರ್ ಸಿಂಗ್ ಅವರ ಹೆಸರೂ ಸೇರಿತ್ತು. ಈ ಹೇಳಿಕೆಯನ್ನು ಪ್ರಶ್ನಿಸಿ ಗಫೂರ್ ವಿರುದ್ಧ ಪರಮ್​ವೀರ್​ ಸಿಂಗ್ ಅವರ ತಂದೆ ಹೋಶಿಯಾರ್ ಸಿಂಗ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಗಫೂರ್ 2012ರಲ್ಲಿ ನಿಧನರಾದರು.

ಅಧೀನ ಸಿಬ್ಬಂದಿಯ ನೆಚ್ಚಿನ ಬಾಸು
ಇಷ್ಟೆಲ್ಲಾ ಹೇಳಿದ ಮೇಲೆ ಇನ್ನೊಂದು ವಿಷಯವನ್ನೂ ಹೇಳಲೇ ಬೇಕು. ಮುಂಬೈ ಮೇಲೆ ಉಗ್ರರದಾಳಿ ನಡೆದಾಗ ಉಗ್ರ ಅಜ್ಮಲ್ ಕಸಬ್​ ಹತ್ಯೆಗೈದ ಐಪಿಎಸ್ ಅಧಿಕಾರಿಗಳಾದ ಹೇಮಂತ್ ಕರ್ಕರೆ ಮತ್ತು ಅಶೋಕ್ ಕಾಮ್ಟೆ ಅವರಿದ್ದ ಕಾರಿನಲ್ಲಿಯೇ ಇದ್ದ ಹೆಡ್​ ಕಾನ್​ಸ್ಟೆಬಲ್ ಜಾಧವ್ ಒಂದೇ ಒಂದು ವಿಷಯ ನೆನಪಿಸಿಕೊಳ್ಳುತ್ತಾರೆ. ಅಂದು ವಿಧಾನಭವನದಲ್ಲಿ ನನ್ನನ್ನು ಪೊಲೀಸ್​ ವಾಹನದಿಂದ ಹೊರಗೆಳೆದು ಜೀವ ಉಳಿಸಿದವರು ಪರಮ್ ವೀರ್ ಸಿಂಗ್​. ನಾನದನ್ನು ಎಂದಿಗೂ ಮರೆಯಲಾರೆ ಎನ್ನುತ್ತಾರೆ ಅವರು.

ಪರಮ್​ವೀರ್ ಸಿಂಗ್ ವ್ಯಕ್ತಿತ್ವವೇ ಅಂಥದ್ದು. ವೃತ್ತಿಯಲ್ಲಿ ಹತ್ತಾರು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರೂ ಎಂದಿಗೂ ತಮ್ಮ ಅಧೀನ ಸಿಬ್ಬಂದಿಯನ್ನು ಪರಮ್​ವೀರ್ ಸಿಂಗ್ ಬಿಟ್ಟುಕೊಡಲಿಲ್ಲ. ಇದೇ ಕಾರಣಕ್ಕೆ ಮುಂಬೈ ಪೊಲೀಸರು ಅವರ ಬಗ್ಗೆ ಕೃತಜ್ಞತೆಯಿಂದ ಮಾತನಾಡುತ್ತಾರೆ. ಇನ್ನೂ ಎರಡು ವರ್ಷದ ಅಧಿಕಾರಾವಧಿಯಲ್ಲಿ ಪರಮ್​ವೀರ್ ಸಿಂಗ್​ ವೃತ್ತಿ ಬದುಕು ಮತ್ತಷ್ಟು ಎತ್ತರಕ್ಕೆ ಏರಲಿದೆಯೋ? ಮುಕೇಶ್ ಅಂಬಾನಿ ಮನೆ ಮುಂದಿನ ಕಾರಿನಲ್ಲಿ ಪತ್ತೆಯಾದ ಸ್ಫೋಟಗಳ ವಿವಾದ ಅವರ ವೃತ್ತಿ ಬದುಕನ್ನು ಹೊಸಕಿಹಾಕಲಿದೆಯೋ ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಬೇಕು.

ಪರಮ್​ವೀರ್ ಬಗ್ಗೆ ಇನ್ನೊಂದಿಷ್ಟು..
20ನೇ ಜೂನ್ 1962ರಲ್ಲಿ ಚಂಡೀಗಡದಲ್ಲಿ ಜನಿಸಿದ ಸಿಂಗ್ ಪಂಜಾಬ್ ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಫಿಟ್​ನೆಸ್ ಬಗ್ಗೆ ವಿಪರೀತ ಕಾಳಜಿಯಿಟ್ಟುಕೊಂಡಿರುವ ಸಿಂಗ್ ಒಂದು ಕಾಲದಲ್ಲಿ ಮಹಾರಾಷ್ಟ್ರದ ಐಪಿಎಸ್ ಕ್ರಿಕೆಟ್​ ತಂಡದ ನಾಯಕರೂ ಆಗಿದ್ದರು. 2022ರಲ್ಲಿ ನಿವೃತ್ತರಾಗಲಿರುವ ಸಿಂಗ್ 33 ವರ್ಷಗಳ ವೃತ್ತಿಜೀವನದಲ್ಲಿ ಹಲವು ಮಹತ್ವದ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಥಾಣೆ ಪೊಲೀಸ್ ಆಯುಕ್ತ ಮತ್ತು ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥರ ಹುದ್ದೆಗಳು ಅವರಿಗೆ ದೊಡ್ಡಮಟ್ಟದ ಹೆಸರು ತಂದುಕೊಟ್ಟಿದ್ದವು.

ಇದನ್ನೂ ಓದಿ: ಮುಕೇಶ್ ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಕೇಸ್: ಪೊಲೀಸ್ ಅಧಿಕಾರಿಯನ್ನೇ ಅರೆಸ್ಟ್ ಮಾಡಿದ ಎನ್‌ಐಎ

ಇದನ್ನೂ ಓದಿ: ಮುಕೇಶ್ ಅಂಬಾನಿ ಮನೆ ಮುಂದೆ ಜಿಲೆಟಿನ್ ಪತ್ತೆ ಪ್ರಕರಣ ; ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಸಸ್ಪೆಂಡ್

Published On - 10:28 pm, Wed, 17 March 21