ಜೂನ್ 17ರಂದು ಫ್ರಾನ್ಸ್​ನಲ್ಲಿ ಟ್ರಂಪ್-ಮೋದಿ ನಡುವೆ ಮಹತ್ವದ ಮಾತುಕತೆ

ಮುಂದಿನ ವಾರ ನಡೆಯಲಿರುವ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಶ್ವೇತಭವನ ಇಂದು ತಿಳಿಸಿದೆ. ಪ್ರಧಾನಿ ಮೋದಿ ಫ್ರಾನ್ಸ್ ಮತ್ತು ಸ್ಲೋವಾಕಿಯಾಗೆ ಒಂದು ವಾರದ ಪ್ರವಾಸಕ್ಕೆ ತೆರಳಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಆಹ್ವಾನದ ಮೇರೆಗೆ ಜೂನ್ 15ರಿಂದ 17ರವರೆಗೆ ಫ್ರಾನ್ಸ್‌ನ ಏವಿಯನ್-ಲೆಸ್-ಬೈನ್ಸ್‌ನಲ್ಲಿ ನಡೆಯಲಿರುವ G7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.

ಜೂನ್ 17ರಂದು ಫ್ರಾನ್ಸ್​ನಲ್ಲಿ ಟ್ರಂಪ್-ಮೋದಿ ನಡುವೆ ಮಹತ್ವದ ಮಾತುಕತೆ
Pm Modi And Trump
Image Credit source: PTI

Updated on: Jun 13, 2026 | 9:12 PM

ನವದೆಹಲಿ, ಜೂನ್ 13: ಫ್ರಾನ್ಸ್‌ನಲ್ಲಿ ಮುಂದಿನ ವಾರ ನಡೆಯಲಿರುವ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi) ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೂನ್ 17ರಂದು ಮುಖಾಮುಖಿ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ವೈಟ್‌ಹೌಸ್ ಅಧಿಕೃತವಾಗಿ ಖಚಿತಪಡಿಸಿದೆ. 2024ರ ನವೆಂಬರ್‌ನಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆದ್ದ ನಂತರ, 2025ರ ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕಾಗೆ ಭೇಟಿ ನೀಡಿದ್ದರು. ಅದಾದ ಬಳಿಕ ಉಭಯ ನಾಯಕರ ನಡುವೆ ನಡೆಯುತ್ತಿರುವ ಮೊದಲ ಮುಖಾಮುಖಿ ಭೇಟಿ ಇದಾಗಿದೆ.

ಟ್ರಂಪ್ ಮತ್ತು ಮೋದಿಯವರ ಸಭೆಯು ಭಾರತ ಮತ್ತು ಅಮೆರಿಕ ನಡುವೆ ರಾಜತಾಂತ್ರಿಕವಾಗಿ ಅತ್ಯಂತ ಸೂಕ್ಷ್ಮ ಪರಿಸ್ಥಿತಿ ಇರುವ ಸಮಯದಲ್ಲಿ ನಡೆಯುತ್ತಿದೆ. ಇತ್ತೀಚೆಗೆ ಒಮಾನ್ ಕೊಲ್ಲಿಯಲ್ಲಿ ಭಾರತೀಯ ನಾವಿಕರಿದ್ದ ವಾಣಿಜ್ಯ ಹಡಗುಗಳ ಮೇಲೆ ಅಮೆರಿಕ ಪಡೆಗಳು ನಡೆಸಿದ ಸರಣಿ ದಾಳಿಗಳ ಹಿನ್ನೆಲೆಯಲ್ಲಿ ಉಭಯ ದೇಶಗಳ ಸಂಬಂಧದ ಮೇಲೆ ಒತ್ತಡ ಉಂಟಾಗಿದೆ.

ಇದನ್ನೂ ಓದಿ: ಭಾರತದ ಸಿಬ್ಬಂದಿಯಿದ್ದ ಹಡಗುಗಳ ಮೇಲೆ ದಾಳಿ; ಅಮೆರಿಕದ ರಾಯಭಾರಿಗೆ ಭಾರತ 2ನೇ ಬಾರಿ ಸಮನ್ಸ್

‘ಎಂಟಿ ಸೆಟ್ಟೆಬೆಲ್ಲೊ’ ಎಂಬ ಪಲಾವ್ ಧ್ವಜದ ತೈಲ ಟ್ಯಾಂಕರ್ ಮೇಲಿನ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ್ದರು ಮತ್ತು ಇತರ 2 ಭಾರತೀಯ ಸಿಬ್ಬಂದಿಯಿದ್ದ ಹಡಗುಗಳನ್ನೂ ಗುರಿಯಾಗಿಸಲಾಗಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ, ಕೇವಲ ಒಂದು ವಾರದಲ್ಲಿ ನವದೆಹಲಿಯ ಅಮೆರಿಕದ ಉಪ ರಾಯಭಾರಿಗೆ ಎರಡು ಬಾರಿ ಸಮನ್ಸ್ ಜಾರಿ ಮಾಡಿ ತನ್ನ ತೀವ್ರ ಪ್ರತಿಭಟನೆಯನ್ನು ದಾಖಲಿಸಿತ್ತು. ನಾಗರಿಕ ಹಡಗುಗಳ ಮೇಲಿನ ದಾಳಿಯನ್ನು ತಕ್ಷಣವೇ ನಿಲ್ಲಿಸುವಂತೆ ಆಗ್ರಹಿಸಿತ್ತು.

ಅಮೆರಿಕ ಆಡಳಿತದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಜೂನ್ 17ರ ಸಭೆಯಲ್ಲಿ ಉಭಯ ನಾಯಕರು ವ್ಯಾಪಾರ ಒಪ್ಪಂದಗಳು, ಎಚ್-1ಬಿ ವೀಸಾ ನೀತಿ, ಇಂಧನ ಸಹಕಾರ, ಪಶ್ಚಿಮ ಏಷ್ಯಾ ಸಂಘರ್ಷ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಮತ್ತೆ ವಿದೇಶಕ್ಕೆ ತೆರಳಿದ ಪ್ರಧಾನಿ ಮೋದಿ; ಫ್ರಾನ್ಸ್​, ಸ್ಲೋವಾಕಿಯಾಗೆ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಒಂದು ವಾರದ ಸುದೀರ್ಘ ವಿದೇಶಿ ಪ್ರವಾಸವನ್ನು ಆರಂಭಿಸಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಆಹ್ವಾನದ ಮೇರೆಗೆ ಜೂನ್ 15ರಿಂದ 17ರವರೆಗೆ ಫ್ರಾನ್ಸ್‌ನ ‘ಎವಿಯನ್-ಲೆಸ್-ಬೈನ್ಸ್’ನಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಮೋದಿ ಭಾಗವಹಿಸಲಿದ್ದಾರೆ. ಇದು ಜಿ7 ಶೃಂಗಸಭೆಯಲ್ಲಿ ಅವರ ಸತತ 7ನೇ ಪಾಲ್ಗೊಳ್ಳುವಿಕೆಯಾಗಿದ್ದು, ಜಾಗತಿಕವಾಗಿ ಭಾರತವು ‘ಗ್ಲೋಬಲ್ ಸೌತ್’ನ ಪ್ರಬಲ ಧ್ವನಿಯಾಗಿ ಹೊರಹೊಮ್ಮುತ್ತಿದೆ.

ಇದಾದ ನಂತರ ಪ್ರಧಾನಿ ಮೋದಿ ಅವರು ಸ್ಲೋವಾಕಿಯಾಗೆ ಭೇಟಿ ನೀಡಲಿದ್ದಾರೆ. 1993ರಲ್ಲಿ ಸ್ಲೋವಾಕಿಯಾ ಸ್ವತಂತ್ರ ರಾಷ್ಟ್ರವಾದ ನಂತರ ಭಾರತದ ಪ್ರಧಾನಿಯೊಬ್ಬರು ಅಲ್ಲಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಹೀಗಾಗಿ, ಈ ಭೇಟಿ ಬಹಳ ಮಹತ್ವ ಪಡೆದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:11 pm, Sat, 13 June 26

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us