
ನವದೆಹಲಿ, ಸೆಪ್ಟೆಂಬರ್ 13: ಬ್ರಿಕ್ಸ್ ಒಕ್ಕೂಟವು ಯಾವುದೇ ಪಾಶ್ಚಿಮಾತ್ಯ ದೇಶಗಳ ವಿರುದ್ಧವಾಗಿರುವ ಸಂಘಟನೆಯಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ. ನವದೆಹಲಿಯ ಭಾರತ್ ಮಂಟಪದಲ್ಲಿ ಆಯೋಜಿಸಲಾಗಿರುವ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ವಿಶ್ವ ನಾಯಕರನ್ನುದ್ದೇಶಿಸಿ ಮಾತನಾಡಿದ ಅವರು, ಜಾಗತಿಕ ವ್ಯವಸ್ಥೆಯಲ್ಲಿ ಸುಧಾರಣೆ ತರಲು 10 ಅಂಶಗಳ ಸಮಗ್ರ ಮಾರ್ಗಸೂಚಿಯನ್ನು ಪ್ರಸ್ತಾಪಿಸಿದರು. ಅಭಿವೃದ್ಧಿಶೀಲ ‘ಗ್ಲೋಬಲ್ ಸೌತ್’ ರಾಷ್ಟ್ರಗಳು ಕೇವಲ ನಿಯಮ ಪಾಲಕರಾಗದೆ, ಜಾಗತಿಕ ನಿಯಮಗಳನ್ನು ರೂಪಿಸುವ ನಾಯಕರಾಗಿ ಹೊರಹೊಮ್ಮಬೇಕು ಎಂದು ಪ್ರಧಾನಿ ಕರೆ ನೀಡಿದರು.
ಪಿರಮಿಡ್ ಆಡಳಿತ ಕೊನೆಗೊಳ್ಳಲಿ: ವಿಶ್ವದ ಅಧಿಕಾರ ಮತ್ತು ನಿರ್ಧಾರಗಳು ಕೆಲವೇ ಶ್ರೀಮಂತ ರಾಷ್ಟ್ರಗಳ ಕೈಯಲ್ಲಿ ಕೇಂದ್ರೀಕೃತವಾಗಿರುವ ‘ಸವಲತ್ತುಗಳ ಪಿರಮಿಡ್’ ಮಾದರಿಯನ್ನು ಬದಲಾಯಿಸಬೇಕು. ಪ್ರತಿಯೊಂದು ದೇಶಕ್ಕೂ ಸಮಾನ ಧ್ವನಿ ನೀಡುವ ‘ಪಾಲುದಾರಿಕೆಯ ವೇದಿಕೆ’ ನಿರ್ಮಾಣವಾಗಬೇಕು ಎಂದು ಪ್ರತಿಪಾದಿಸಿದರು.
ಯುಎನ್‌ಎಸ್‌ಸಿ ತುರ್ತು ಸುಧಾರಣೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿಸ್ತರಣೆ ಮತ್ತು ಸುಧಾರಣೆಯನ್ನು ಇನ್ನು ಮುಂದೆ ಕಾಲಹರಣ ಮಾಡಿ ಮುಂದೂಡಲು ಸಾಧ್ಯವಿಲ್ಲ. ಸ್ಪಷ್ಟ ಕಾಲಮಿತಿಯೊಳಗೆ ಫಲಿತಾಂಶ ಆಧಾರಿತ ಮಾತುಕತೆಗಳು ನಡೆಯಬೇಕು ಹಾಗೂ ಜಾಗತಿಕ ಹಣಕಾಸು ಸಂಸ್ಥೆಗಳಲ್ಲಿನ ಮತದಾನದ ಹಕ್ಕು ಇಂದಿನ ಆರ್ಥಿಕ ವಾಸ್ತವಕ್ಕೆ ತಕ್ಕಂತೆ ಇರಬೇಕು ಎಂದರು.
ಮತ್ತಷ್ಟು ಓದಿ: ಪರಿಸರ ಜಾಗೃತಿಯ ಸಂದೇಶ; ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ನಾವಿಕರಿಗೆ ತುರ್ತು ಬೆಂಬಲ ಜಾಲ: ಹಾರ್ಮುಜ್ ಜಲಸಂಧಿ ಸೇರಿದಂತೆ ಸಮುದ್ರ ಮಾರ್ಗಗಳಲ್ಲಿ ಸರಕು ಹಡಗುಗಳ ಮೇಲೆ ನಡೆಯುತ್ತಿರುವ ದಾಳಿಗಳ ಹಿನ್ನೆಲೆಯಲ್ಲಿ, ಜಾಗತಿಕ ವ್ಯಾಪಾರಕ್ಕೆ ಬೆನ್ನೆಲುಬಾಗಿರುವ ಸಮುದ್ರಯಾನಿಗರ ಸುರಕ್ಷತೆಗಾಗಿ ‘ನಾವಿಕರ ತುರ್ತು ಬೆಂಬಲ ಜಾಲ’ ಸ್ಥಾಪಿಸಲು ಪ್ರಧಾನಿ ಕರೆ ನೀಡಿದರು.
ಭವಿಷ್ಯದ ತಂತ್ರಜ್ಞಾನಕ್ಕೆ ನಿಯಮಾವಳಿ: ಕೃತಕ ಬುದ್ಧಿಮತ್ತೆ (AI), ಸೈಬರ್ ಸ್ಪೇಸ್, ಬಾಹ್ಯಾಕಾಶ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕೇವಲ ಕೆಲವೇ ದೇಶಗಳ ಪ್ರಾಬಲ್ಯ ಇರಬಾರದು, ಇವುಗಳ ಜಾಗತಿಕ ನೀತಿ-ನಿಯಮಗಳನ್ನು ರೂಪಿಸುವಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳೂ ಸಮಾನ ಪಾಲು ಹೊಂದಿರಬೇಕು ಎಂದು ಒತ್ತಿ ಹೇಳಿದರು.
Sharing opening remarks during BRICS Session on ‘Resilience, Innovation, Cooperation and Sustainability: Shaping the Future for Inclusive Global Growth.’
https://t.co/xwKGoGfBjc— Narendra Modi (@narendramodi) September 13, 2026
ಪಾಶ್ಚಿಮಾತ್ಯರ ಆತಂಕಕ್ಕೆ ಸ್ಪಷ್ಟನೆ: ಬ್ರಿಕ್ಸ್ ಒಕ್ಕೂಟವನ್ನು ಅಮೆರಿಕ ಮತ್ತು ಯುರೋಪ್ ವಿರೋಧಿ ಬಣ ಎಂದು ಬಿಂಬಿಸಲು ಯತ್ನಿಸುತ್ತಿರುವ ಪಾಶ್ಚಿಮಾತ್ಯ ಮಾಧ್ಯಮಗಳಿಗೆ ಪ್ರಧಾನಿ ಮೋದಿ ಈ ಮೂಲಕ ನೇರ ಪ್ರತ್ಯುತ್ತರ ನೀಡಿದ್ದಾರೆ. ಬ್ರಿಕ್ಸ್ ವಿರೋಧಿಸುವುದಕ್ಕಲ್ಲ, ಬದಲಾಗಿ ಎಲ್ಲರನ್ನೂ ಒಳಗೊಳ್ಳುವ ಬಹುಧ್ರುವೀಯ ಜಾಗತಿಕ ಸಮತೋಲನಕ್ಕಾಗಿ ಇದೆ ಎಂಬುದನ್ನು ಜಗತ್ತಿಗೆ ಸಾರಿದರು.
ಗ್ಲೋಬಲ್ ಸೌತ್‌ಗೆ ಭಾರತದ ಬದ್ಧತೆ: ಬಡ ಮತ್ತು ಮುಂದುವರೆಯುತ್ತಿರುವ ದೇಶಗಳ ಯುವ ರಾಜತಾಂತ್ರಿಕರಿಗೆ ಮಾತುಕತೆ ಕೌಶಲ್ಯ, ಅಂತಾರಾಷ್ಟ್ರೀಯ ಕಾನೂನು ಪರಿಣತಿ ಹಾಗೂ ನೀತಿ ರಚನೆಯಲ್ಲಿ ತರಬೇತಿ ನೀಡಲು ಭಾರತ ಸದಾ ಸಿದ್ಧವಿದೆ ಎಂದು ಘೋಷಿಸುವ ಮೂಲಕ ಭಾರತವು ‘ಗ್ಲೋಬಲ್ ಸೌತ್’ನ ಅಘೋಷಿತ ನಾಯಕನಾಗಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:57 am, Sun, 13 September 26