- TV9 Kannada Photo gallery India-Seychelles Relations: Modi's Historic Visit, Gandhi Tribute and Temple Tour
ಸೆಶೆಲ್ಸ್ ಗಣಪತಿ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ವಿಶೇಷ ಪ್ರಾರ್ಥನೆ: ಗಾಂಧೀಜಿ ಸ್ಮಾರಕಕ್ಕೆ ನಮನ
ಪ್ರಧಾನಿ ಮೋದಿ ಅವರ ಸೆಶೆಲ್ಸ್ ಭೇಟಿ ಭಾರತ-ಸೆಶೆಲ್ಸ್ ಸಂಬಂಧದಲ್ಲಿ ಹೊಸ ಮೈಲಿಗಲ್ಲಾಗಿದೆ. ಪ್ರಧಾನಿ ಗಾಂಧೀಜಿಗೆ ನಮನ ಸಲ್ಲಿಸಿ, ಐತಿಹಾಸಿಕ ಅರುಲ್ಮಿಗು ನವಶಕ್ತಿ ವಿನಾಯಗರ್ ದೇವಸ್ಥಾನಕ್ಕೆ ಭೇಟಿ ನೀಡಿದರು. ಸೆಶೆಲ್ಸ್ನ 50ನೇ ಸ್ವಾತಂತ್ರ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಇದು ಎರಡೂ ದೇಶಗಳ ನಡುವಿನ ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ರಾಜತಾಂತ್ರಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಿದೆ.
Updated on:Jun 29, 2026 | 2:45 PM

ಭಾರತ ಮತ್ತು ಸೆಶೆಲ್ಸ್ ದೇಶಗಳ ನಡುವಿನ ಶತಮಾನಗಳ ಹಳೆಯ ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ರಾಜತಾಂತ್ರಿಕ ಬಾಂಧವ್ಯಕ್ಕೆ ಹೊಸ ಮೈಲಿಗಲ್ಲು ಸಿಕ್ಕಿದೆ. ಸೆಶೆಲ್ಸ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನೀಡಿದ್ದು, ಅವರು ಸೋಮವಾರದಂದು ಅಲ್ಲಿನ ರಾಜಧಾನಿ ವಿಕ್ಟೋರಿಯಾದಲ್ಲಿರುವ ಪೀಸ್ ಪಾರ್ಕ್ನಲ್ಲಿ ಮಹಾತ್ಮಾ ಗಾಂಧೀಜಿಯವರಿಗೆ ಶ್ರದ್ಧಾಂಜಲಿ ಗೌರವ ಸಲ್ಲಿಸಿದರು. ತದನಂತರ ಅಲ್ಲಿನ ಪ್ರಸಿದ್ಧ ಮತ್ತು ಐತಿಹಾಸಿಕ ‘ಅರುಲ್ಮಿಗು ನವಶಕ್ತಿ ವಿನಾಯಗರ್’ ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಪೀಸ್ ಪಾರ್ಕ್ನಲ್ಲಿ ಮಹಾತ್ಮಾ ಗಾಂಧೀಜಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಬಳಿಕ ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ವಿಕ್ಟೋರಿಯಾದ ಪೀಸ್ ಪಾರ್ಕ್ನಲ್ಲಿ ಮಹಾತ್ಮಾ ಗಾಂಧೀಜಿಯವರಿಗೆ ಗೌರವ ನಮನ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ

ಸೆಶೆಲ್ಸ್ನ ಪ್ರಮುಖ ಹಿಂದೂ ಧಾರ್ಮಿಕ ಕೇಂದ್ರವಾಗಿರುವ ಅರುಲ್ಮಿಗು ನವಶಕ್ತಿ ವಿನಾಯಗರ್ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿ, ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಿದರು.

ಸೆಶೆಲ್ಸ್ನಲ್ಲಿ ಈ ಭವ್ಯ ದೇಗುಲ ನಿರ್ಮಾಣಕ್ಕೆ ಶ್ರಮಿಸಿದ ಮತ್ತು ಭಾರತೀಯ ಸಂಸ್ಕೃತಿ-ಆಧ್ಯಾತ್ಮಿಕತೆಯನ್ನು ಅಲ್ಲಿ ಜನಪ್ರಿಯಗೊಳಿಸುತ್ತಿರುವ ‘ಸೆಶೆಲ್ಸ್ ಹಿಂದೂ ಕೋವಿಲ್ ಸಂಗಮ್’ ಸಂಸ್ಥೆಯ ಪ್ರಯತ್ನಗಳನ್ನು ನಾನು ಮುಕ್ತಕಂಠದಿಂದ ಶ್ಲಾಘಿಸುತ್ತೇನೆ” ಎಂದು ಪ್ರಧಾನಿ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಭಾನುವಾರ ನಡೆದ ಸೆಶೆಲ್ಸ್ ದೇಶದ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ರಾಷ್ಟ್ರೀಯ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಚಿತ್ರಗಳನ್ನು ಹಂಚಿಕೊಂಡ ಪಿಎಂ, "ಕಳೆದ 50 ವರ್ಷಗಳಲ್ಲಿ ಸೆಶೆಲ್ಸ್ ಜನರ ಅದ್ಭುತ ಪ್ರಗತಿಯ ಪಯಣಕ್ಕೆ ಈ ಆಚರಣೆ ಸಾಕ್ಷಿಯಾಗಿದೆ.

ಸೆಶೆಲ್ಸ್ನ ಅಭಿವೃದ್ಧಿಯ ಪಯಣದಲ್ಲಿ ಅತ್ಯಂತ ವಿಶ್ವಾಸಾರ್ಹ ಗೆಳೆಯ ಹಾಗೂ ಪಾಲುದಾರನಾಗಿ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲು ಭಾರತ ಹೆಮ್ಮೆಪಡುತ್ತದೆ ಎಂದು ಹೇಳಿದ್ದಾರೆ.
Published On - 2:36 pm, Mon, 29 June 26




