ಗಂಭೀರ್ ಗರಡಿಯಲ್ಲಿ ಕಂಡ 5 ಹೀನಾಯ ಸೋಲುಗಳು!
Gautam Gambhir: ಗೌತಮ್ ಗಂಭೀರ್ ಕೋಚಿಂಗ್ನಲ್ಲಿ ಟೀಮ್ ಇಂಡಿಯಾ ಏಕದಿನ ಹಾಗೂ ಟಿ20 ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಆದರೆ ಟೆಸ್ಟ್ ವಿಷಯಕ್ಕೆ ಬಂದರೆ ಭಾರತ ತಂಡದ ಪ್ರದರ್ಶನ ತೀರಾ ಕಳಪೆ ಮಟ್ಟದಲ್ಲಿದೆ. ಇದಕ್ಕೆ ಸಾಕ್ಷಿ ಗಂಭೀರ್ ಮುಂದಾಳತ್ವದಲ್ಲಿ ಭಾರತ ತಂಡವು ಪ್ರಮುಖ ಟೆಸ್ಟ್ ಸರಣಿಗಳನ್ನು ಹೀನಾಯವಾಗಿ ಸೋತಿರುವುದು.

ಗೌತಮ್ ಗಂಭೀರ್ ಅವರು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡ ನಂತರ, ಟೀಮ್ ಇಂಡಿಯಾ ಏರಿಳಿತದ ಹಾದಿಯನ್ನು ಸವೆಸಿದೆ. ಗಂಭೀರ್ ಗರಡಿಯಲ್ಲಿ ಭಾರತ ತಂಡವು ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ಟಿ20 ವಿಶ್ವಕಪ್‌ಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದೆಯಾದರೂ, ದ್ವಿಪಕ್ಷೀಯ ಸರಣಿಗಳಲ್ಲಿ ಅನುಭವಿಸಿದ ಕೆಲವು ಸೋಲುಗಳಿಂದ ಟೀಮ್ ಇಂಡಿಯಾ ಭಾರೀ ಮುಖಭಂಗಕ್ಕೆ ಒಳಗಾಗಿದೆ. ಈ ಪಟ್ಟಿಗೆ ಹೊಸ ಸೇರ್ಪಡೆ ಐರ್ಲೆಂಡ್ ವಿರುದ್ಧದ ಟಿ20 ಸರಣಿ ಸೋಲು. ಹೀಗೆ ಗಂಭೀರ್ ಯುಗದಲ್ಲಿ ಟೀಮ್ ಇಂಡಿಯಾ ಅನುಭವಿಸಿದ ಅತ್ಯಂತ ಹೀನಾಯ ಹಾಗೂ ಆಘಾತಕಾರಿ ಸೋಲುಗಳ ಸಂಪೂರ್ಣ ವಿವರ ಈ ಕೆಳಗಿನಂತಿದೆ…
ಐರ್ಲೆಂಡ್ ವಿರುದ್ಧ ವೈಟ್‌ವಾಶ್ (2026)
- ಐತಿಹಾಸಿಕ ಸೋಲು: ಜೂನ್ 2026 ರ ಐರ್ಲೆಂಡ್ ಪ್ರವಾಸದಲ್ಲಿ ಭಾರತ ತಂಡ 0-2 ಅಂತರದಿಂದ ಟಿ20 ಸರಣಿಯನ್ನು ಸೋತು ಭಾರೀ ಮುಖಭಂಗ ಅನುಭವಿಸಿದೆ.
- ಅಪರೂಪದ ದಾಖಲೆ: ಕ್ರಿಕೆಟ್ ಇತಿಹಾಸದಲ್ಲೇ ಭಾರತ ತಂಡ ಐರ್ಲೆಂಡ್ ವಿರುದ್ಧ ಪಂದ್ಯ ಹಾಗೂ ದ್ವಿಪಕ್ಷೀಯ ಸರಣಿ ಸೋತಿರುವುದು ಇದೇ ಮೊದಲು.
- ದಾಖಲೆ ಬ್ರೇಕ್: ಭಾರತ ತಂಡದ 16 ದ್ವಿಪಕ್ಷೀಯ ಟಿ20 ಸರಣಿಗಳ ಅಜೇಯ ಓಟಕ್ಕೆ ಐರ್ಲೆಂಡ್ ತಂಡ ಬ್ರೇಕ್ ಹಾಕಿದೆ.
ನ್ಯೂಝಿಲೆಂಡ್ ವಿರುದ್ಧ ಸರಣಿ ಸೋಲು (2024)
- ಐತಿಹಾಸಿಕ ಸೋಲು: ನ್ಯೂಝಿಲೆಂಡ್ ವಿರುದ್ಧ ತವರಿನಲ್ಲೇ ನಡೆದ ಟೆಸ್ಟ್ ಸರಣಿಯಲ್ಲಿ ಭಾರತ 0-3 ಅಂತರದಿಂದ ಕ್ಲೀನ್ ಸ್ವೀಪ್ ಮುಖಭಂಗ ಅನುಭವಿಸಿತು.
- ಅಪರೂಪದ ದಾಖಲೆ: ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ತವರಿನಲ್ಲಿ 3 ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳ ಸರಣಿಯಲ್ಲಿ ಭಾರತ ವೈಟ್‌ವಾಶ್ ಆಗಿದ್ದು ಇದೇ ಮೊದಲು.
- ದಾಖಲೆ ಬ್ರೇಕ್: ಭಾರತದಲ್ಲಿ ಕಳೆದ 12 ವರ್ಷಗಳಿಂದ ಸತತವಾಗಿ ಟೆಸ್ಟ್ ಸರಣಿ ಗೆದ್ದು ಬೀಗಿದ್ದ ಟೀಮ್ ಇಂಡಿಯಾ ಈ ದಾಖಲೆ ಈ ಸೋಲಿನೊಂದಿಗೆ ಕೊನೆಗೊಂಡಿತು.
ಶ್ರೀಲಂಕಾ ವಿರುದ್ಧ ಹೀನಾಯ ಸೋಲು (2024)
- ಐತಿಹಾಸಿಕ ಸೋಲು: ಗಂಭೀರ್ ಕೋಚ್ ಆದ ತಕ್ಷಣವೇ ಎದುರಾದ ಮೊದಲ ದೊಡ್ಡ ಆಘಾತವಿದು. ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು ಭಾರತ 0-2 ರಿಂದ ಸೋತಿತು.
- ಅಪರೂಪದ ದಾಖಲೆ: 1997ರ ನಂತರ (ಕಳೆದ 27 ವರ್ಷಗಳಲ್ಲಿ) ಶ್ರೀಲಂಕಾ ವಿರುದ್ಧ ಭಾರತ ಅನುಭವಿಸಿದ ಮೊದಲ ದ್ವಿಪಕ್ಷೀಯ ಏಕದಿನ ಸರಣಿ ಸೋಲು ಇದಾಗಿದೆ.
ಬಾರ್ಡರ್-ಗವಾಸ್ಕರ್ ಸರಣಿ ಗೋಲು (2024-25)
- ಐತಿಹಾಸಿಕ ಸೋಲು: ಆಸ್ಟ್ರೇಲಿಯಾ ಪ್ರವಾಸದಲ್ಲಿ ನಡೆದ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಭಾರತ ತಂಡ 1-3 ಅಂತರದಿಂದ ಸೋತಿತು.
- ಅಪರೂಪದ ದಾಖಲೆ: 2014ರ ನಂತರ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಸೋಲು ಕಾಣದ ಭಾರತ ತಂಡವು, ಈ ಪರಾಜಯದೊಂದಿಗೆ BGT ಟ್ರೋಫಿಯನ್ನು ಆಸ್ಟ್ರೇಲಿಯಾಕ್ಕೆ ಒಪ್ಪಿಸಬೇಕಾಯಿತು.
ಸೌತ್ ಆಫ್ರಿಕಾ ವಿರುದ್ಧ ಸರಣಿ ಸೋಲು (2025)
- ಐತಿಹಾಸಿಕ ಸೋಲು: ತವರಿನಲ್ಲೇ ನಡೆದ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಹೀನಾಯವಾಗಿ ಸೋತು 2-0 ಅಂತರದಿಂದ ಸರಣಿ ಕೈಚೆಲ್ಲಿಕೊಂಡಿತು.
- ಅಪರೂಪದ ದಾಖಲೆ: ಈ ಸರಣಿಯ 2ನೇ ಪಂದ್ಯದಲ್ಲಿ ಭಾರತ ತಂಡ 408 ರನ್‌ಗಳ ಬೃಹತ್ ಅಂತರದಿಂದ ಸೋತಿದ್ದು, ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ (ತವರಿನಲ್ಲಿ ಹಾಗೂ ವಿದೇಶದಲ್ಲಿ) ರನ್‌ಗಳ ಲೆಕ್ಕಾಚಾರದಲ್ಲಿ ಅನುಭವಿಸಿದ ಅತ್ಯಂತ ಗರಿಷ್ಠ ಮತ್ತು ಹೀನಾಯ ಸೋಲಾಗಿದೆ.
ಇದನ್ನೂ ಓದಿ: ನಿಮ್ಮಂತ ಕೋಚ್ ನಮಗೆ ಬೇಡ: ಗಂಭೀರ್ನ ಅಣಕಿಸಿದ ಐಸ್‌ಲ್ಯಾಂಡ್ ಕ್ರಿಕೆಟ್
ಇದೀಗ ಐರ್ಲೆಂಡ್ ವಿರುದ್ಧದ ಸರಣಿಯನ್ನು 2-0 ಅಂತರದಿಂದ ಸೋತು ಟೀಮ್ ಇಂಡಿಯಾ ಭಾರೀ ಮುಖಭಂಗ ಅನುಭವಿಸಿದೆ. ಈ ಆಘಾತಕಾರಿ ಸೋಲು ಗೌತಮ್ ಗಂಭೀರ್ ಅವರ ಕೋಚಿಂಗ್ ಅವಧಿಯ ಕಪ್ಪು ಚುಕ್ಕೆಯಾಗಿ ಉಳಿಯುವುದರಲ್ಲಿ ಯಾವುದೇ ಸಂಶಯವಿಲ್ಲ.




