ಪಂಜಾಬ್ನಲ್ಲಿ ಪ್ರಧಾನಿ ಮೋದಿ ಭದ್ರತೆ ಲೋಪ; ನಾಚಿಕೆಗೇಡಿನ ಸಂಗತಿ ಎಂದು ಇನ್ಸ್ಟಾ ಪೋಸ್ಟ್ ಹಾಕಿದ ಬಾಲಿವುಡ್ ನಟಿ ಕಂಗನಾ
ನಿನ್ನೆ ಪಂಜಾಬ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆಯಲ್ಲಿ ಲೋಪ ಆದಾಗಿನಿಂದಲೂ ಅನೇಕರು ಪಂಜಾಬ್ ಸರ್ಕಾರವನ್ನು ಕಟುವಾಗಿ ಟೀಕಿಸುತ್ತಿದ್ದಾರೆ. ಇದು ಪ್ರಧಾನಿ ಮೋದಿ ಹತ್ಯೆಗಾಗಿ ನಡೆದಿದ್ದ ಸಂಚು ಎಂದು ಬಿಜೆಪಿ ಆರೋಪಿಸಿದೆ.
ಇತ್ತೀಚೆಗೆ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿ ಇರುವ ಬಾಲಿವುಡ್ ನಟಿ ಕಂಗನಾ ರಣಾವತ್(Kangana Ranaut), ಇದೀಗ ಪಂಜಾಬ್ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ(PM Narendra Modi) ಭದ್ರತೆ ಲೋಪವಾದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿ ಮೋದಿಯವರು ಫಿರೋಜ್ಪುರಕ್ಕೆ ಹೊರಟಿದ್ದ ರಸ್ತೆ ಮಾರ್ಗದಲ್ಲಿ ರೈತರು ಪ್ರತಿಭಟನೆ ನಡೆಸಿದ ಪರಿಣಾಮ, ಅವರು ಹುಸ್ಸೇನಿವಾಲಾ ಫ್ಲೈಓವರ್ ಮೇಲೆ 20 ನಿಮಿಷ ಕಾದು ದೆಹಲಿಗೆ ವಾಪಸ್ ಆದ ಘಟನೆಯನ್ನು ತೀವ್ರವಾಗಿ ಖಂಡಿಸಿದ ಕಂಗನಾ ರಣಾವತ್ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಈ ಬಗ್ಗೆ ಪೋಸ್ಟ್ ಹಾಕಿದ್ದಾರೆ. ಪಂಜಾಬ್ನಲ್ಲಿ ಏನು ನಡೆಯಿತೋ, ಅದು ನಾಚಿಕೆಗೇಡಿನ ವಿಚಾರ ಎಂದಿದ್ದಾರೆ. ಗೌರವಾನ್ವಿತ ಪ್ರಧಾನಿಮಂತ್ರಿ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾಗಿರುತ್ತಾರೆ. 1.4 ಬಿಲಿಯನ್ ಜನರ ಧ್ವನಿ, ಪ್ರತಿನಿಧಿಯಾಗಿದ್ದಾರೆ. ಅವರ ಮೇಲೆ ಆಕ್ರಮಣವಾದರೆ, ದೇಶದ ನಾಗರಿಕರ ಮೇಲೆ ಆಕ್ರಮಣವಾದಂತೆ. ಪ್ರಜಾಭುತ್ವವನ್ನೇ ಹತ್ತಿಕ್ಕಿದಂತೆ. ಬರುಬರುತ್ತ ಪಂಜಾಬ್ ರಾಜ್ಯ ಭಯೋತ್ಪಾದಕ ಚಟುವಟಿಕೆಗಳ ತಾಣವಾಗುತ್ತಿದೆ. ಅದನ್ನು ತಡೆಯದೆ ಇದ್ದರೆ, ಇಡೀ ದೇಧ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಇನ್ಸ್ಟಾಗ್ರಾಂನಲ್ಲಿ ಬರೆದಿದ್ದಾರೆ. ಹಾಗೇ, bharatstandswithm ಎಂಬ ಹ್ಯಾಷ್ಟ್ಯಾಗ್ ಕೂಡ ನೀಡಿದ್ದಾರೆ.
ಕಂಗನಾ ರಣಾವತ್ ಪ್ರಧಾನಿ ನರೇಂದ್ರ ಮೋದಿಯವರ ಕಟ್ಟಾ ಅನುಯಾಯಿ ಎಂಬುದನ್ನು ಪದೇಪದೆ ಸಾಬೀತು ಮಾಡುತ್ತಾರೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಸಂದರ್ಭದಲ್ಲಿ ಅವರನ್ನು ಹೊಗಳಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಜಗತ್ತಿನಲ್ಲೇ ಅತ್ಯಂತ ಜನಪ್ರಿಯ ನಾಯಕರು. ದೊಡ್ಡದೊಡ್ಡ ಕನಸು ಕಾಣುವ ನಮ್ಮಂಥ ಪ್ರತಿಯೊಬ್ಬರಿಗೂ ಅವರು ಸ್ಫೂರ್ತಿ. ನಾವು ಒಬ್ಬ ಯಶಸ್ವಿ ವ್ಯಕ್ತಿಯನ್ನು ನೋಡಿದಾಗ, ಅವರ ವರ್ತಮಾನದ ಯಶಸ್ಸು, ಸಾಧನೆ, ವೈಭವಯುತ ಜೀವನವನ್ನಷ್ಟೇ ಪರಿಗಣಿಸುತ್ತೇವೆ. ಆದರೆ ಆ ಸ್ಥಾನಕ್ಕೆ ಏರಲು ಅವರೆಷ್ಟು ಶ್ರಮಪಟ್ಟರು, ಏನೆನು ತೊಡಕು ಎದುರಿಸಿದರು ಎಂಬುದನ್ನು ಯೋಚಿಸುವುದಿಲ್ಲ. ಹಾಗೇ, ಪ್ರಧಾನಿಯವರು ಇಂದು ಈ ಮಟ್ಟಕ್ಕೆ ಏರಲು ಅದೆಷ್ಟೋ ಸವಾಲುಗಳನ್ನು ಎದುರಿಸಿದ್ದಾರೆ. ಕಟುವಾದ ವಿಮರ್ಶೆಗಳನ್ನೂ ಮೆಟ್ಟಿನಿಂತಿದ್ದಾರೆ ಎಂದು ಕಂಗನಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು.
ನಿನ್ನೆ ಪಂಜಾಬ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆಯಲ್ಲಿ ಲೋಪ ಆದಾಗಿನಿಂದಲೂ ಅನೇಕರು ಪಂಜಾಬ್ ಸರ್ಕಾರವನ್ನು ಕಟುವಾಗಿ ಟೀಕಿಸುತ್ತಿದ್ದಾರೆ. ಇದು ಪ್ರಧಾನಿ ಮೋದಿ ಹತ್ಯೆಗಾಗಿ ನಡೆದಿದ್ದ ಸಂಚು ಎಂದು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್ನ ಕೆಲವು ನಾಯಕರೂ ಕೂಡ ಇದನ್ನು ಟೀಕಿಸಿದ್ದಾರೆ. ಶಿವಸೇನೆ ಸದಸ್ಯೆ ಪ್ರಿಯಾಂಕಾ ಚತುರ್ವೇದಿಯೂ ಕೂಡ, ಇದು ಬಹುದೊಡ್ಡ ಲೋಪ. ದೇಶದ ಪ್ರಧಾನಿಯ ಭದ್ರತೆಯಲ್ಲಿ ಇಂಥ ಲೋಪ ಆಗಬಾರದಿತ್ತು ಎಂದು ಹೇಳಿದ್ದಾರೆ. ಆದರೆ ಪಂಜಾಬ್ ಸಿಎಂ ಚರಣಜಿತ್ ಸಿಂಗ್ ಛನ್ನಿ, ಪ್ರಧಾನಿ ಭದ್ರತೆಯಲ್ಲಿ ಲೋಪ ಆಗಲಿಲ್ಲ ಎಂದೇ ಪ್ರತಿಪಾದಿಸಿದ್ದಾರೆ.