ಸಿರಿಧಾನ್ಯ ಆಹಾರ ಉತ್ಸವದಲ್ಲಿ ಜತೆಯಾಗಿ ಕುಳಿತು ಭೋಜನ ಸವಿದ ಪ್ರಧಾನಿ ಮೋದಿ, ಮಲ್ಲಿಕಾರ್ಜುನ ಖರ್ಗೆ

ನಾವು 2023 ನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಗುರುತಿಸಲು ತಯಾರಿ ನಡೆಸುತ್ತಿರುವಾಗ, ಸಂಸತ್ತಿನಲ್ಲಿ ಸಿರಿಧಾನ್ಯ ಭಕ್ಷ್ಯಗಳನ್ನು ಬಡಿಸಿದ ರುಚಿಕರವಾದ ಭೋಜನಕೂಟದಲ್ಲಿ ಭಾಗವಹಿಸಿದ್ದೇವೆ. ಪಕ್ಷಾತೀತವಾಗಿ ಭಾಗವಹಿಸುತ್ತಿರುವುದು ಸಂತಸ ತಂದಿದೆ ಎಂದ ಮೋದಿ.

ಸಿರಿಧಾನ್ಯ ಆಹಾರ ಉತ್ಸವದಲ್ಲಿ  ಜತೆಯಾಗಿ ಕುಳಿತು ಭೋಜನ ಸವಿದ ಪ್ರಧಾನಿ ಮೋದಿ, ಮಲ್ಲಿಕಾರ್ಜುನ ಖರ್ಗೆ
ಸಿರಿಧಾನ್ಯ ಆಹಾರ ಉತ್ಸವದಲ್ಲಿ ಮೋದಿ Image Credit source: Twitter
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 20, 2022 | 7:25 PM

ಕೇಂದ್ರ ಕೃಷಿ ಸಚಿವಾಲಯ ಇಂದು ಸಂಸತ್​​ನಲ್ಲಿ ಎಲ್ಲ ಸಂಸದರಿಗೆ ಸಿರಿಧಾನ್ಯ (Millet food festival) ಭೋಜನವೇರ್ಪಡಿಸಿದ್ದು ಪ್ರಧಾನಿ ನರೇಂದ್ರ ಮೋದಿ (Narendra Modi), ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಖರ್ ಮತ್ತು ಇತರ ಸಂಸದರು ಈ ಭೋಜನಕೂಟದಲ್ಲಿ ಭಾಗಿಯಾಗಿದ್ದಾರೆ.ನಾವು 2023 ನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು (International Year of Millets) ಗುರುತಿಸಲು ತಯಾರಿ ನಡೆಸುತ್ತಿರುವಾಗ, ಸಂಸತ್ತಿನಲ್ಲಿ ಸಿರಿಧಾನ್ಯ ಭಕ್ಷ್ಯಗಳನ್ನು ಬಡಿಸಿದ ರುಚಿಕರವಾದ ಭೋಜನಕೂಟದಲ್ಲಿ ಭಾಗವಹಿಸಿದ್ದೇವೆ. ಪಕ್ಷಾತೀತವಾಗಿ ಭಾಗವಹಿಸುತ್ತಿರುವುದು ಸಂತಸ ತಂದಿದೆ ಎಂದು ಮೋದಿ ಊಟದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅದೇ ವೇಳೆ ರಾಜಸ್ಥಾನದ ಅಲ್ವಾರ್‌ನಲ್ಲಿ ಖರ್ಗೆ ಅವರು ಮಾಡಿದ ಕೆಲವು ಟೀಕೆಗಳ ಬಗ್ಗೆ ರಾಜ್ಯಸಭೆಯಲ್ಲಿ ಆಡಳಿತರೂಢ ಬಿಜೆಪಿ ಟೀಕಿಸಿದ್ದು, ಖರ್ಗೆ ಅವರು ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದಿತ್ತು. ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿತು. ತಮ್ಮ ಪಕ್ಷದ ನಾಯಕರಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಪ್ರಾಣವನ್ನು ಕಳೆದುಕೊಂಡರು ಎಂದು ಸೋಮವಾರ ರಾಜಸ್ಥಾನದ ಅಲ್ವಾರ್​​ನಲ್ಲಿ ಮಾತನಾಡಿದ ಖರ್ಗೆ ಹೇಳಿದ್ದರು. ದೇಶಕ್ಕಾಗಿ ನಿಮ್ಮ ಮನೆಯ ನಾಯಿಯಾದರೂ ಸತ್ತಿದೆಯಾ? ಆದರೂ ಬಿಜೆಪಿಯವರು ತಮ್ಮನ್ನು ತಾವು ದೇಶಭಕ್ತರು ಅಂದುಕೊಳ್ಳುತ್ತಾರೆ. ನಾವು ಏನಾದರೂ ಹೇಳಿದರೆ ನಮ್ಮನ್ನು ದೇಶದ್ರೋಹಿ ಅಂತಾರೆ ಎಂದಿದ್ದರು ಖರ್ಗೆ. ಮಂಗಳವಾರ ಸಂಸತ್ ಅಧಿವೇಶನ ಆರಂಭವಾದ ಕೂಡಲೇ ಬಿಜೆಪಿ ಖರ್ಗೆಯವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದೆ. ಅಲ್ವಾರ್​​ನಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಖರ್ಗೆ ಕ್ಷಮೆ ಕೇಳ ಕೇಳಬೇಕು ಎಂದು ಕೇಂದ್ರ ವಾಣಿಜ್ಯ ಸಚಿವ ಪೀಯುಷ್ ಗೋಯಲ್ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ಏತನ್ಮಧ್ಯೆ, ಕ್ಷಮೆ ಕೇಳಲು ನಿರಾಕರಿಸಿದ ಖರ್ಗೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲಿ ನೀವು ಕ್ಷಮೆ ಕೇಳಲು ಒತ್ತಾಯಿಸುತ್ತಿದ್ದೀರಾ ಎಂದು ಗುಡುಗಿದ್ದಾರೆ.

ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆಗೆ ಪ್ರಲ್ಹಾದ ಜೋಶಿ ತೀವ್ರ ಖಂಡನೆ -ಖರ್ಗೆಯಂತಹ ಹಿರಿಯ ನಾಯಕರಿಂದ ಇಂತಹ ಭಾಷೆ ನಿರೀಕ್ಷಿಸಿರಲಿಲ್ಲ

ಭಾರತ್ ಜೋಡೋ ಯಾತ್ರೆಯಲ್ಲಿ ಖರ್ಗೆ ಹೇಳಿದ್ದೇನು?

ಸೋಮವಾರ ರಾಜಸ್ಥಾನದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಗೆ ಸಂಬಂಧಿಸಿದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿತು. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಸೇರಿದಂತೆ ನಮ್ಮ ಹಲವು ನಾಯಕರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ನಿಮ್ಮ (ಬಿಜೆಪಿ) ಮನೆಯ ನಾಯಿಯಾದರೂ ದೇಶಕ್ಕಾಗಿ ಸತ್ತಿದೆಯೇ? ಆದರೂ ಬಿಜೆಪಿಯವರು ತಮ್ಮನ್ನು ತಾವು ದೇಶಭಕ್ತರು ಅಂದುಕೊಳ್ಳುತ್ತಾರೆ. ನಾವು ಏನಾದರೂ ಹೇಳಿದರೆ ನಮ್ಮನ್ನು ದೇಶದ್ರೋಹಿ ಅಂತಾರೆ. ಅವರು (ಬಿಜೆಪಿ ಸರ್ಕಾರ) ಹೊರಗಡೆ ಸಿಂಹದಂತೆ ಮಾತಾಡುತ್ತಾರೆ, ಆದರೆ ನೀವು ಅವರನ್ನು ನೋಡಿದರೆ ಇಲಿಯಂತೆ ವರ್ತಿಸುತ್ತಾರೆ. ಸಮಸ್ಯೆಗಳನ್ನು ಗಮನಕ್ಕೆ ತಂದು ಅದರ ಬಗ್ಗೆ ಚರ್ಚೆಯಾಗಬೇಕು ಎಂದು ನಾವು ಬಯಸುತ್ತೇವೆ. ಆದರೆ ಅವರು ಅದನ್ನು ಸಂಸತ್ತಿನಲ್ಲಿ ಚರ್ಚಿಸಲು ಸಿದ್ಧರಿಲ್ಲ ಎಂದು ಖರ್ಗೆ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ