ಪ್ರವಾದಿ ಬಗ್ಗೆ ನೂಪುರ್ ಶರ್ಮಾ ಹೇಳಿಕೆ ಬೆಂಬಲಿಸಿ ಪೋಸ್ಟ್​​ ಹಾಕಿದ್ದ ಉಮೇಶ್ ಕೊಲ್ಹೆಯನ್ನು ಕೊಂದಿದ್ದು ತಬ್ಲಿಘಿ ಜಮಾತ್ ಸದಸ್ಯರು: ಎನ್ಐಎ

Tablighi Jamaat ಪ್ರವಾದಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿ ಬಿಜೆಪಿಯಿಂದ ಅಮಾನತುಗೊಂಡಿರುವ ನಾಯಕಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಜೂನ್ 21ರಂದು ಕೊಲ್ಹೆ ಹತ್ಯೆಯಾಗಿತ್ತು.

ಪ್ರವಾದಿ ಬಗ್ಗೆ ನೂಪುರ್ ಶರ್ಮಾ ಹೇಳಿಕೆ ಬೆಂಬಲಿಸಿ ಪೋಸ್ಟ್​​ ಹಾಕಿದ್ದ ಉಮೇಶ್ ಕೊಲ್ಹೆಯನ್ನು ಕೊಂದಿದ್ದು ತಬ್ಲಿಘಿ ಜಮಾತ್ ಸದಸ್ಯರು: ಎನ್ಐಎ
ಎನ್ಐಎ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 20, 2022 | 6:33 PM

ಮುಂಬೈ: ಬಿಜೆಪಿ ನಾಯಕಿ ನೂಪುರ್ ಶರ್ಮಾ (Nupur Sharma) ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ಮಹಾರಾಷ್ಟ್ರದ ಅಮರಾವತಿಯ ಫಾರ್ಮಸಿಸ್ಟ್ ಉಮೇಶ್ ಕೊಲ್ಹೆ (Umesh Kolhe) ಅವರನ್ನು ಪ್ರವಾದಿ ಮೊಹಮ್ಮದ್‌ನ ಅವಮಾನದ ಪ್ರತೀಕಾರಕ್ಕಾಗಿ “ತಬ್ಲಿಘಿ ಜಮಾತ್‌ನ ತೀವ್ರಗಾಮಿ ಇಸ್ಲಾಮಿಸ್ಟ್‌ಗಳು” (Radicalised Tablighi Jamaat Islamists) ಹತ್ಯೆ ಮಾಡಿದ್ದಾರೆ ಎಂದು ಎನ್‌ಐಎ ನ್ಯಾಯಾಲಕ್ಕೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಹೇಳಿದೆ. ತೀವ್ರಗಾಮಿಗಳ ಗುಂಪಿನಿಂದ ನಡೆದ ಭಯೋತ್ಪಾದಕ ಕೃತ್ಯ ಎಂದು ಕರೆದಿರುವ ಎನ್ಐಎ, ಕೊಲ್ಹೆ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂಬ ಕಾರಣಕ್ಕಾಗಿ ಅವರನ್ನು ಕೊಲೆ ಮಾಡಿದೆ ಎಂದಿದ್ದಾರೆ. ಪ್ರವಾದಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿ ಬಿಜೆಪಿಯಿಂದ ಅಮಾನತುಗೊಂಡಿರುವ ನಾಯಕಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಜೂನ್ 21ರಂದು ಕೊಲ್ಹೆ ಹತ್ಯೆಯಾಗಿತ್ತು. ಈ ಕೊಲೆಯು”ಸಾರ್ವಜನಿಕ ಶಾಂತಿ ಮತ್ತು ರಾಷ್ಟ್ರೀಯ ಸಮಗ್ರತೆ ಮತ್ತು ಅಮರಾವತಿಯಲ್ಲಿ ಮಾತ್ರವಲ್ಲದೆ ಇಡೀ ರಾಷ್ಟ್ರದ ಸಾಮಾನ್ಯ ಜನರ ಸುರಕ್ಷತೆಯನ್ನು ಕದಡಿದೆ ಎಂದು ತನಿಖಾ ಸಂಸ್ಥೆ ಹೇಳಿಕೊಂಡಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ವಿಶೇಷ ನ್ಯಾಯಾಲಯಕ್ಕೆ 11 ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದು, ಅವರೆಲ್ಲರನ್ನೂ ಬಂಧಿಸಲಾಗಿದೆ. ಇವರ ವಿರುದ್ಧ ಐಪಿಸಿ ಸೆಕ್ಷನ್ 120 ಬಿ (ಅಪರಾಧದ ಪಿತೂರಿ), 302 (ಕೊಲೆ), 341 (ತಪ್ಪಾದ ಸಂಯಮ), 153 ಎ (ಹಗೆತನವನ್ನು ಉತ್ತೇಜಿಸುವುದು), 201 (ಸಾಕ್ಷ್ಯ ನಾಶ), 506 (ಅಪರಾಧದ ಬೆದರಿಕೆ) ಹಾಗೂ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯ ನಿಬಂಧನೆಗಳಡಿಯಲ್ಲಿ ಪ್ರಕರಣ ದಾಖಲಾಗಿದೆ.

ತನಿಖೆಯಿಂದ ತಿಳಿದುಬಂದಿರುವುದೇನೆಂದರೆ ತಬ್ಲಿಘಿ ಜಮಾತ್‌ನ ತೀವ್ರಗಾಮಿ ಇಸ್ಲಾಮಿಸ್ಟ್‌ಗಳು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಉಮೇಶ್ ಕೊಲ್ಹೆಯನ್ನು ಹತ್ಯೆ  ಮಾಡಿದ್ದಾರೆ. ಹಗೆತನ ಉತ್ತೇಜಿಸುವುದು, ವಿವಿಧ ಜಾತಿ ಮತ್ತು ಧರ್ಮಗಳ ನಡುವೆ ವಿಶೇಷವಾಗಿ ಭಾರತದಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವೆ ದ್ವೇಷ ಹಬ್ಬಿಸುವ ಮೂಲಕ ಸಾಮಾಜಿಕ ಸಾಮರಸ್ಯವನ್ನು ಕದಡಲು ಪ್ರಯತ್ನಿಸಿದೆ ಎದು ಎನ್ಐಎ ಹೇಳಿದೆ.

ಎನ್ಐಎ  ಆರೋಪಪಟ್ಟಿಯಲ್ಲಿ ಹೇಳಿದ್ದೇನು?

ಆರೋಪಿಗಳಿಗೆ ಕೊಲ್ಹೆ ಜತೆ ಯಾವುದೇ ಆಸ್ತಿ ವಿವಾದ ಅಥವಾ ಇನ್ಯಾವುದೇ ಜಗಳ ಇಲ್ಲದೇ ಇದ್ದರೂ, ಆರೋಪಿಗಳು ಕೊಲ್ಹೆಯನ್ನು ಕೊಲ್ಲುವುದಕ್ಕೆ ಸಂಚು ಹೂಡಿದ್ದರು ಎಂದು ತನಿಖೆ ಬಹಿರಂಗಪಡಿಸಿದೆ. ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ವಾಟ್ಸಾಪ್ ಪೋಸ್ಟ್ ಮಾಡಿದ ಕೊಲ್ಹೆ ವಿರುದ್ಧ ಸೇಡು ತೀರಿಸಿಕೊಳ್ಳಲು ಆರೋಪಿಗಳು ಭಯೋತ್ಪಾದಕ ಗುಂಪನ್ನು ರಚಿಸಿದ್ದಾರೆ ಎಂದು ಅದು ಹೇಳಿದೆ. ‘ಗುಸ್ತಖ್ ಇ ನಬಿ ಕಿ ಏಕ್ ಹಿ ಸಾಜಾ, ಸರ್ ತನ್ ಸೆ ಜುದಾ’ (ಪ್ರವಾದಿಯನ್ನು ಅವಮಾನಿಸುವವರಿಗೆ ಶಿರಚ್ಛೇದನವೊಂದೇ ಶಿಕ್ಷೆ) ಎಂಬ ಕ್ರೂರತೆಯ ಸಿದ್ಧಾಂತದಿಂದ ಭಯೋತ್ಪಾದಕ ಗ್ಯಾಂಗ್ ಹೆಚ್ಚು ಪ್ರಭಾವಿತವಾಗಿದೆ ಎಂದು ಸಂಸ್ಥೆ ಹೇಳಿದೆ.

ಎನ್ಐಎ ಕೊಲ್ಹೆಯನ್ನು “ಕಾನೂನು ಪಾಲಿಸುವ ನಾಗರಿಕ” ಎಂದು ಬಣ್ಣಿಸಿದೆ. ಕೊಲ್ಹೆಗೆ ಸಾಮಾನ್ಯವಾಗಿ ಯಾವುದೇ ಇತರ ವ್ಯಕ್ತಿಯೊಂದಿಗೆ ಮತ್ತು ನಿರ್ದಿಷ್ಟವಾಗಿ ಆರೋಪಿಗಳೊಂದಿಗೆ ಯಾವುದೇ ಜಗಳದ ಇತಿಹಾಸವಿಲ್ಲ. ಅವರು ಸ್ವತಂತ್ರ ದೇಶದಲ್ಲಿ ವಾಕ್ ಸ್ವಾತಂತ್ರ್ಯದ ಹಕ್ಕನ್ನು ಚಲಾಯಿಸಿದರು. ಶರ್ಮಾ ಅವರ ಆಪಾದಿತ ವಿವಾದಾತ್ಮಕ ಹೇಳಿಕೆಗಳಿಗೆ ತಮ್ಮ ಬೆಂಬಲವನ್ನು ಘೋಷಿಸಿದರು. ಅವರ ಮರಣದಂಡನೆಯು ಕೇವಲ ಆಪಾದಿತ ಧರ್ಮನಿಂದೆಯ ಕಾರಣಕ್ಕಾಗಿ ಅವರನ್ನು ಶಿಕ್ಷಿಸುವ ಉದ್ದೇಶದಿಂದ ನಡೆಸಿದ ಕೊಲೆಯಲ್ಲ. ಇದೊಂದು ಉಗ್ರ ಕೃತ್ಯ. ತೀವ್ರವಾದಿ ಇಸ್ಲಾಮಿಸ್ಟ್ ಗುಂಪು ಈ ಸಂತ್ರಸ್ತನ ಕೊಲೆ ಮೂಲಕ ಭಯ ಹುಟ್ಟಿಸಿ ಉದಾಹರಣೆ ನೀಡಬಯಸಿತ್ತು. ಈ ಶಾಂತಿ-ಪ್ರೀತಿಯ ಪ್ರಜಾಪ್ರಭುತ್ವ ದೇಶದ ಸಾಮಾನ್ಯ ಜನರಲ್ಲಿ ಭಾರೀ ನಡುಕವನ್ನು ಉಂಟುಮಾಡುವ ರೀತಿಯಲ್ಲಿ ಇದನ್ನು ಮಾಡಲಾಗಿದೆ ಎಂದು ಅದು ಹೇಳಿದೆ.

ಸಾರ್ವಜನಿಕ ಜಾಗದಲ್ಲಿ ಮಗನ ಎದುರೇ ತಂದೆಯನ್ನು ಹತ್ಯೆಗೈದ ಕ್ರೌರ್ಯವನ್ನು ಚಾರ್ಜ್ ಶೀಟ್ ಹೇಳಿದ್ದು, ಸರಿಯಾದ ಯೋಜನೆ ಮತ್ತು ಕೃತ್ಯವೆಸಗಿದ ನಂತರ ಮಾಡಿದ ಸಂಭ್ರಮಾಚರಣೆ ಸಮಾಜದಲ್ಲಿ ಭಯ ಹುಟ್ಟಿಸುವುದಕ್ಕಾಗಿ ಮಾಡಿದ್ದಾಗಿತ್ತು ಎಂದು ತನಿಖಾ ಸಂಸ್ಥೆ ಹೇಳಿದೆ.

ಈ ಕೊಲೆಯು ವಿವಿಧ ಸ್ಥಳಗಳಲ್ಲಿ ಗಲಭೆಗೆ ಕಾರಣವಾಯಿತು, ಜನರು ತಮ್ಮ ಉದ್ಯೋಗಗಳನ್ನು ತೊರೆಯುವಂತೆ ಭಯಭೀತರಾಗಿದ್ದರು. ಅನೇಕರು ತಲೆಮರೆಸುವಂತೆ ಮಾಡಿತು. ಅನೇಕರು ತಮ್ಮ ಜೀವ ಮತ್ತು ಭದ್ರತೆಯ ಬಗ್ಗೆ ಭಯಪಡುವಂತೆ ಮಾಡಿತು. ಇಂತಹ ಭಯೋತ್ಪಾದಕ ಕ್ರಮವು ಭಾರತದ ಸಮಗ್ರತೆ ಮತ್ತು ಅದರ ಪರಿಶ್ರಮವನ್ನು ಪ್ರಶ್ನಿಸುವಂತೆ ಮಾಡಿದೆ ಎಂದು ಅದು ಹೇಳಿದೆ.

ಎನ್‌ಐಎ ಪ್ರಕಾರ, ಬಿಜೆಪಿ ನಾಯಕಿ ನೂಪುರ್ ಶರ್ಮಾರನ್ನು ಬೆಂಬಲಿಸಿದ್ದಕ್ಕಾಗಿ ಜೂನ್ 28 ರಂದು ಉದಯಪುರ ಮೂಲದ ಟೈಲರ್ ಕನ್ಹಯ್ಯಾ ಲಾಲ್‌ನ ಶಿರಚ್ಛೇದ ಮಾಡುವ ಒಂದು ವಾರದ ಮೊದಲು ಕೊಲ್ಹೆ ಕೊಲೆ ನಡೆದಿತ್ತು. ಹತ್ಯೆಯ ನಂತರ, ವಿವಿಧ ರಾಜ್ಯಗಳಲ್ಲಿ ಹಲವಾರು ಕೋಮು ಘರ್ಷಣೆಗಳು ಭುಗಿಲೆದ್ದಿದ್ದು ಅನೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.

ಎಲ್ಲಾ ಎಫ್‌ಐಆರ್‌ಗಳಲ್ಲಿ, ಕೆಲವು ಧಾರ್ಮಿಕವಾಗಿ ಮೂಲಭೂತವಾದಿಗಳ ಅದೇ ಸಿದ್ಧಾಂತವು ಅದೇ ‘ಗುಸ್ತಾಕ್ ಇ ನಬಿ… ಘೋಷಣೆಯೊಂದಿಗೆ ಪ್ರವರ್ಧಮಾನಕ್ಕೆ ಬರುತ್ತಿದೆ. ಇದು ವಾಕ್ ಸ್ವಾತಂತ್ರ್ಯಕ್ಕಾಗಿ ಮತ್ತು ಶರ್ಮಾ ಅವರನ್ನು ಬೆಂಬಲಿಸುವ ಜನರ ಮನಸ್ಸಿನಲ್ಲಿ ಭಯವನ್ನು ಉಂಟುಮಾಡಿತು ಎಂದು ಎನ್‌ಐಎ ಹೇಳಿದೆ.

ಕೊಲ್ಹೆ ಹತ್ಯೆಗೆ ಮುನ್ನ ಸಭೆ ಸೇರಿ ಆರೋಪಿಗಳು ಸಂಚು ರೂಪಿಸಿದ್ದರು

ಎಸ್ಟೇಟ್ ಏಜೆಂಟ್ ಆಗಿದ್ದ ಆರೋಪಿಗಳಲ್ಲಿ ಒಬ್ಬನಾದ ಇರ್ಫಾನ್ ಖಾನ್ ಕೊಲ್ಹೆಯ ಕೊಲೆಯ ಹಿಂದಿನ “ಮಾಸ್ಟರ್ ಮೈಂಡ್” ಎಂದು ತನಿಖಾ ಸಂಸ್ಥೆ ಹೇಳಿದೆ.ಕೊಲ್ಹೆ ಹತ್ಯೆಗೆ ಸುಮಾರು 10 ದಿನಗಳ ಮೊದಲು, ಖಾನ್ ಮತ್ತು ಸಹ-ಆರೋಪಿ ಮುಶಿಫಿಕ್ ಅಹ್ಮದ್, ಧಾರ್ಮಿಕ ಗುಂಪಿನ ಇತರ ಸದಸ್ಯರೊಂದಿಗೆ ನೂಪುರ್ ಶರ್ಮಾ ಅವರ ವಿವಾದಾತ್ಮಕ ಹೇಳಿಕೆಗಾಗಿ ಪ್ರಕರಣವನ್ನು ದಾಖಲಿಸಲು ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದರು. ಆದರೆ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಆಕೆಯ ವಿರುದ್ಧ ಈಗಾಗಲೇ ಹಲವಾರು ದೂರುಗಳು ದಾಖಲಾಗಿರುವುದರಿಂದ ಪೊಲೀಸರು ಯಾವುದೇ ಎಫ್‌ಐಆರ್ ದಾಖಲಿಸಿಲ್ಲ.

ಆರೋಪಿಗಳು ಪೊಲೀಸರ ಪ್ರತಿಕ್ರಿಯೆಯಿಂದ ತೃಪ್ತರಾಗಲಿಲ್ಲ. ಅದಕ್ಕಾಗಿ ಅವರು ಸೇಡು ತೀರಿಸಿಕೊಳ್ಳಲು ಬಯಸಿದ್ದರು ಎಂದು ಎನ್ಐಎ ಹೇಳಿದೆ. ಇಬ್ಬರೂ ಮುಸ್ಲಿಂ ಸಮುದಾಯದ ಸದಸ್ಯರ ವಿಶೇಷ ಸಭೆಯನ್ನು ಕರೆದಿದ್ದು, ಇತರ ಆರೋಪಿಗಳು ಸಹ ಹಾಜರಿರುವ ವಿಷಯವನ್ನು ಚರ್ಚಿಸಲು ಮತ್ತು ಬಿಜೆಪಿ ನಾಯಕಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ.

ಪೊಲೀಸರು ಮತ್ತೆ ಮಧ್ಯಪ್ರವೇಶಿಸಿ, ಒಂದೇ ಅಪರಾಧಕ್ಕಾಗಿ ಅನೇಕ ಸ್ಥಳಗಳಲ್ಲಿ ಅನೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗುವುದಿಲ್ಲ ಎಂದು ಅವರಿಗೆ ವಿವರಿಸಿದರು. ಎಫ್‌ಐಆರ್‌ಗೆ ಒತ್ತಾಯಿಸದಿರಲು ಸಭೆಯಲ್ಲಿ ನಿರ್ಧರಿಸಲಾಯಿತು. ಆದರೆ ಆರೋಪಪಟ್ಟಿ ಪ್ರಕಾರ ಆರೋಪಿಗಳು ಈ ನಿರ್ಧಾರದಿಂದ ತೃಪ್ತರಾಗಲಿಲ್ಲ.

ಹತ್ಯೆಯ ಒಂದು ದಿನ ಮೊದಲು ಆರೋಪಿಗಳು ಅಮರಾವತಿಯ ಗೌಸಿಯಾ ಹಾಲ್ ನಲ್ಲಿ ಸಭೆ ಸೇರಿ ಪ್ರವಾದಿಯನ್ನು ಅವಮಾನಿಸಿದವರಿಗೆ ಶಿರಚ್ಛೇದವೇ ಶಿಕ್ಷೆ ಎಂದು ನಿರ್ಧರಿಸಿದ್ದರು. ಅದರಲ್ಲಿ ಅವರು ಅವರು ಕೊಲ್ಹೆಯ ಶಿರಚ್ಛೇದ ಮಾಡಲು ನಿರ್ಧರಿಸಿದರು. ಹೀಗಾಗಿ ಆರೋಪಿಗಳು ಸಾಮಾನ್ಯ ಉದ್ದೇಶದಿಂದ ಖಾನ್ ನೇತೃತ್ವದಲ್ಲಿ ಭಯೋತ್ಪಾದಕ ಗ್ಯಾಂಗ್ ಅನ್ನು ರಚಿಸಿ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ನಿರ್ಧರಿಸಿದರು ಎಂದು ಅದು ಹೇಳಿದೆ.

ಶರ್ಮಾ ಅವರನ್ನು ಬೆಂಬಲಿಸಿದ್ದಕ್ಕಾಗಿ “ಧಾರ್ಮಿಕವಾಗಿ ತೀವ್ರವಾದಿಗಳಿಂದ” ಬೆದರಿಕೆಗೆ ಒಳಗಾದ ಕೊಲ್ಹೆಯನ್ನು ಹೊರತುಪಡಿಸಿ ಅಮರಾವತಿಯ ಇತರ ಮೂವರು ನಿವಾಸಿಗಳನ್ನು ಆರೋಪಪಟ್ಟಿ ಹೆಸರಿಸಿದೆ. ಜೀವ ಬೆದರಿಕೆಯ ಆಧಾರದ ಮೇಲೆ ಈ ವ್ಯಕ್ತಿಗಳಿಗೆ ಸಶಸ್ತ್ರ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ ಎಂದು ಅದು ಹೇಳಿದೆ.

ಕೊಲೆ ಪ್ರಕರಣದ ತನಿಖೆಯನ್ನು ಸ್ಥಳೀಯ ಪೊಲೀಸರು ಆರಂಭದಲ್ಲಿ ನಡೆಸಿದ್ದರು. ಗೃಹ ಸಚಿವಾಲಯದ ನಿರ್ದೇಶನದಂತೆ ಜುಲೈ 2 ರಂದು ಎನ್‌ಐಎ ಪ್ರಕರಣ ದಾಖಲಿಸಿದೆ. ಚಾರ್ಜ್ ಶೀಟ್ ನಲ್ಲಿ 170ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆ ಇದೆ. ತನಿಖಾ ಸಂಸ್ಥೆ ಸಲ್ಲಿಸಿದ ದಾಖಲೆಗಳಲ್ಲಿ ಆರೋಪಿಯ ಕರೆ ಡೇಟಾ ದಾಖಲೆಗಳು ಮತ್ತು ಇತರ ಎಲೆಕ್ಟ್ರಾನಿಕ್ ಮತ್ತು ತಾಂತ್ರಿಕ ಪುರಾವೆಗಳು ಸೇರಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ