‘ನೀವೀಗಾಗಲೇ ಬೆತ್ತಲಾಗಿದ್ದೀರಿ, ಬಟ್ಟೆ ಬಿಚ್ಚಿದ್ಯಾಕೆ?’ – ಕಾಂಗ್ರೆಸ್​ಗೆ ಪ್ರಧಾನಿ ಮೋದಿ ತರಾಟೆ

PM Narendra Modi slams congress party's shirtless protest: ಇಂಡಿಯಾ ಎಐ ಸಮಿಟ್ ಕಾರ್ಯಕ್ರಮದಲ್ಲಿ ಕಾಂಗ್ರೆಸ್ಸಿಗರು ಅರೆಬೆತ್ತಲೆಯಾಗಿ ಪ್ರತಿಭಟಿಸಿದ ಘಟನೆಗೆ ಪ್ರಧಾನಿ ಮೋದಿ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ. ನೀವೀಗಾಗಲೇ ಬೆತ್ತಲೆಗೊಂಡಿದ್ದೀರಿ, ಮತ್ಯಾಕೆ ಬಟ್ಟೆ ಬಿಚ್ಚಲು ಹೋದಿರಿ ಎಂದು ಪ್ರಧಾನಿಗಳು ವ್ಯಂಗ್​ಯ ಮಾಡಿದ್ದಾರೆ. ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್ ಬಹಳ ನೀಚ ಮಟ್ಟಕ್ಕೆ ಇಳಿದಿದೆ ಎಂದು ಟೀಕಿಸಿದ್ದಾರೆ.

‘ನೀವೀಗಾಗಲೇ ಬೆತ್ತಲಾಗಿದ್ದೀರಿ, ಬಟ್ಟೆ ಬಿಚ್ಚಿದ್ಯಾಕೆ?’ - ಕಾಂಗ್ರೆಸ್​ಗೆ ಪ್ರಧಾನಿ ಮೋದಿ ತರಾಟೆ
ನರೇಂದ್ರ ಮೋದಿ

Updated on: Feb 22, 2026 | 4:45 PM

ನವದೆಹಲಿ, ಫೆಬ್ರುವರಿ 22: ಎಐ ಇಂಪ್ಯಾಕ್ಟ್ ಶೃಂಗಸಭೆಯ ಸಂದರ್ಭದಲ್ಲಿ ಕೆಲ ಯುವ ಕಾಂಗ್ರೆಸ್ ನಾಯಕರು ಶರ್ಟ್ ಬಿಚ್ಚಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಕಟುವಾಗಿ ಟೀಕಿಸಿದ್ದಾರೆ. ಕಾಂಗ್ರೆಸ್​ನ ಕೊಳಕು ಮತ್ತು ಬೆತ್ತಲೆ ರಾಜಕಾರಣ, ಹಾಗೂ ಆ ಪಕ್ಷ ತಾತ್ವಿಕವಾಗಿ ಅದೆಷ್ಟು ದಿವಾಳಿ ಎದ್ದಿದೆ ಎಂಬುದನ್ನು ಈ ಪ್ರತಿಭಟನೆ ಸಾಕ್ಷ್ಯವಾಗಿದೆ ಎಂದು ಪ್ರಧಾನಿಗಳು ವಿಷಾದಿಸಿದ್ದಾರೆ. ದೆಹಲಿ ಸಮೀಪದ ಮೀರತ್ ನಗರದಲ್ಲಿ ಇಂದು ನಡೆದ ಮೆಟ್ರೋ ರೈಲು ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

‘ನೀವು ಈಗಾಗಲೇ ಬೆತ್ತಲಾಗಿದ್ದೀರಿ. ಆದರೂ ಕೂಡ ಬಟ್ಟೆ ಕಳಚುವ ಅಗತ್ಯ ಏನಿತ್ತು?’ ಎಂದು ಪ್ರಶ್ನಿಸಿದ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷ ತನ್ನ ದೇಶವನ್ನೇ ಹಳಿಯುವ ಕೆಲಸದಲ್ಲಿ ಮುಳುಗಿಹೋಗಿದೆ ಎಂದಿದ್ದಾರೆ.

ಇದನ್ನೂ ಓದಿ: ಭಾರತದ ಅತಿವೇಗದ ಮೆಟ್ರೋ ಮತ್ತು ನಮೋ ಭಾರತ್ ಕಾರಿಡಾರ್ ಉದ್ಘಾಟಿಸಿದ ಪಿಎಂ ಮೋದಿ

‘ಭಾರತದ ಅತ್ಯಂತ ಹಳೆಯ ಪಕ್ಷ ತಾತ್ವಿಕವಾಗಿ ದಿವಾಳಿ ಎದ್ದಿರುವ ಸ್ಥಿತಿಗೆ ಇಳಿದಿರುವುದನ್ನು ಕಾಂಗ್ರೆಸ್ ನಾಯಕರು ತೋರಿಸಿದ್ದಾರೆ. ತನ್ನದೇ ದೇಶವನ್ನು ಹೀಗಳೆಯಲು ಕಾಂಗ್ರೆಸ್ ನಿರತವಾಗಿದೆ. ಭಾರತದ ಯಶಸ್ಸನ್ನು ಸಹಿಸಿಕೊಳ್ಳಲು ಕೆಲ ರಾಜಕೀಯ ಪಕ್ಷಗಳಿಗೆ ಆಗುತ್ತಿಲ್ಲ. ವಿಶ್ವದ ಅತಿದೊಡ್ಡ ಎಐ ಸಮಾವೇಶ ನಡೆಯುತ್ತಿದ್ದರೆ, ಕಾಂಗ್ರೆಸ್ ಹಾಗೂ ಅದರ ಪಟಾಲಂನವರು ಏನು ಮಾಡುತ್ತಿದ್ದರು? ಜಾಗತಿಕ ಕಾರ್ಯಕ್ರಮವನ್ನು ಕೊಳಕು ರಾಜಕೀಯಕ್ಕೆ ಬಳಸಿದ್ದಾರೆ’ ಎಂದು ಪ್ರಧಾನಿಗಳು ಸಿಡಿಗುಟ್ಟಿದ್ದಾರೆ.

‘ಕಾಂಗ್ರೆಸ್ ನಾಯಕರು ನನ್ನನ್ನು ಧ್ವೇಷಿಸುತ್ತಾರೆ. ನನಗೆ ಸಮಾಧಿ ಕಟ್ಟಲು ಬಯಸುತ್ತಾರೆ. ನನ್ನ ತಾಯಿಯನ್ನೂ ಅವಮಾನಿಸಲು ಹಿಂದೆ ಮುಂದೆ ನೋಡೋದಿಲ್ಲ. ಆದರೆ, ಅದು ಎಐ ಜಾಗತಿಕ ಶೃಂಗಸಭೆಯಾಗಿತ್ತೇ ವಿನಃ ಬಿಜೆಪಿ ಕಾರ್ಯಕ್ರಮವಾಗಿರಲಿಲ್ಲ. ಅಲ್ಲಿ ಯಾವ ಬಿಜೆಪಿ ನಾಯಕನೂ ಇರಲಿಲ್ಲ ಎಂಬುದು ಕಾಂಗ್ರೆಸ್​ಗೆ ತಿಳಿದಿರಬೇಕಿತ್ತು. ಅದು ರಾಷ್ಟ್ರೀಯ ಕೆಲಸವಾಗಿತ್ತು. ಆ ಮಹತ್ವದ ದಿನದ ಘನತೆಗೆ ಕಾಂಗ್ರೆಸ್ ಕುಂದು ತಂದಿತ್ತು. ಕಾಂಗ್ರೆಸ್ಸಿನ ಈ ಭ್ರಷ್ಟ ನೀತಿಯನ್ನು ಇಡೀ ದೇಶವೇ ಖಂಡಿಸುತ್ತಿದೆ’ ಎಂದು ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಎಂಟು ಮಂದಿ ಶಂಕಿತ ಉಗ್ರರ ಬಂಧನ; ಗಾರ್ಮೆಂಟ್ಸ್ ಫ್ಯಾಕ್ಟರಿ ಮತ್ತಿತರೆಡೆಯಲ್ಲಿ ಕೆಲಸ ಮಾಡುತ್ತಿದ್ದವರಿವರು

ಕೆಲ ದಿನಗಳ ಹಿಂದೆ ಭಾರತ್ ಮಂಟಪಂನಲ್ಲಿ ನಡೆಯುತ್ತಿದ್ದ ಎಐ ಶೃಂಗಸಭೆಯ ಸಂದರ್ಭದಲ್ಲಿ ಯುವ ಕಾಂಗ್ರೆಸ್ಸಿನ 10 ಮಂದಿ ನಾಯಕರು ಏಕಾಏಕಿಯಾಗಿ ತಾವು ತೊಟ್ಟಿದ್ದ ಶರ್ಟನ್ನು ಕಳಚಿ ಮೋದಿ, ಟ್ರಂಪ್ ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಘಟನೆಯನ್ನು ಕೆಲ ವಿಪಕ್ಷಗಳ ನಾಯಕರೇ ಖಂಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ