ದೆಹಲಿಯ ಪ್ರಧಾನಮಂತ್ರಿ ಗತಿಶಕ್ತಿ ಅನುಭೂತಿ ಕೇಂದ್ರಕ್ಕೆ ಪ್ರಧಾನಿ ಮೋದಿ ದಿಢೀರ್ ಭೇಟಿ
ಪ್ರಧಾನಮಂತ್ರಿ ಗತಿಶಕ್ತಿಯ ಮೂರನೇ ವಾರ್ಷಿಕೋತ್ಸವ ಹಿನ್ನೆಲೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾರತ್ ಮಂಟಪದಲ್ಲಿರುವ ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯ ಅನುಭೂತಿ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ್ದಾರೆ. ಈ ವೇಳೆ ವಿವಿಧ ಜಿಲ್ಲೆಗಳ ಉತ್ಪನ್ನಗಳ ಆಯ್ಕೆ, ಬ್ರ್ಯಾಂಡಿಂಗ್ ಸೇರಿದಂತೆ ವಿವಿಧ ಯೋಜನೆಯ ಪ್ರಗತಿ ಕಾರ್ಯಗಳನ್ನು ಶ್ಲಾಘಿಸಿದ್ದಾರೆ.
ನವದೆಹಲಿ, ಅಕ್ಟೋಬರ್ 13: ದೇಶದ ಮೂಲಭೂತ ಸೌಕರ್ಯ ವಲಯಗಳಲ್ಲಿ ಪರಿಣಾಮಕಾರಿ ಬದಲಾವಣೆ ತರುವ ಗುರಿಯೊಂದಿಗೆ ಆರಂಭಗೊಂಡಿರುವ ಭಾರತ್ ಮಂಟಪದಲ್ಲಿರುವ ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯ ಅನುಭೂತಿ ಕೇಂದ್ರಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದಿಢೀರ್ ಭೇಟಿ ನೀಡಿದ್ದಾರೆ. ಪ್ರಧಾನಮಂತ್ರಿ ಗತಿಶಕ್ತಿಯ ಮೂರನೇ ವಾರ್ಷಿಕೋತ್ಸವ ಹಿನ್ನೆಲೆ ಮೋದಿ ಭೇಟಿ ನೀಡಿದ್ದು, ಯೋಜನೆಯ ಪ್ರಗತಿ ಕಾರ್ಯಗಳನ್ನು ಶ್ಲಾಘಿಸಿದ್ದಾರೆ.
ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯನ್ನು ವಿವಿಧ ಆರ್ಥಿಕ ವಲಯಗಳಿಗೆ ಬಹು-ಮಾದರಿ ಸಂಪರ್ಕ ಮೂಲಸೌಕರ್ಯವನ್ನು ಒದಗಿಸುವ ನಿಟ್ಟಿನಲ್ಲಿ 2021 ರ ಅಕ್ಟೋಬರ್ 13 ರಂದು ಪ್ರಾರಂಭಿಸಲಾಯಿತು. ಈ ಯೋಜನೆ ಆರ್ಥಿಕ ಬೆಳವಣಿಗೆ, ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿದ್ದು, ಇದು ರೈಲ್ವೆ, ರಸ್ತೆಗಳು, ಬಂದರುಗಳು, ಜಲಮಾರ್ಗಗಳು, ವಿಮಾನ ನಿಲ್ದಾಣಗಳು, ಸಾಮೂಹಿಕ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಮೂಲಸೌಕರ್ಯಗಳನ್ನು ಒಳಗೊಂಡಿದೆ.
ಇದನ್ನೂ ಓದಿ: ಭಾರತದ ಪಿಎಂ ಗತಿಶಕ್ತಿ ಯೋಜನೆ ಅಳವಡಿಸಿಕೊಳ್ಳಲು ಮುಂದಾದ ಶ್ರೀಲಂಕಾ, ನೇಪಾಳ
ಪ್ರಧಾನಮಂತ್ರಿ ಗತಿಶಕ್ತಿ ಯೋಜನೆ ನಿಜವಾಗಿಯೂ ಕೇಂದ್ರ ಸರ್ಕಾರದ 44 ಸಚಿವಾಲಯಗಳು ಮತ್ತು 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ 1529 ದತ್ತಾಂಶಗಳೊಂದಿಗೆ ಸಂಪೂರ್ಣ ಸರ್ಕಾರದ ವಿಧಾನವನ್ನು ಸಂಕೇತಿಸುತ್ತದೆ. ಅಷ್ಟೇ ಅಲ್ಲದೆ ಮೂಲಸೌಕರ್ಯ ಅಭಿವೃದ್ಧಿಯ ಜೊತೆಗೆ, ಸಾಮಾಜಿಕ ವಲಯವು ಮತ್ತೊಂದು ಪ್ರಮುಖ ಕೇಂದ್ರಬಿಂದುವಾಗಿದೆ.
45 ಲಕ್ಷ ಪಿವಿಟಿಜಿಗಳನ್ನು (ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳು) (11 ಲಕ್ಷ ಕುಟುಂಬಗಳು) 1,500 ಕ್ಕೂ ಹೆಚ್ಚು ಜಿಐಎಸ್ ದತ್ತಾಂಶ ಪದರಗಳಿಗೆ ಲಿಂಕ್ ಮಾಡಲಾದ ಮೊಬೈಲ್ ಅಪ್ಲಿಕೇಶನ್ ಬಳಸಿ 29,000 ವಾಸಸ್ಥಳಗಳಲ್ಲಿ ಮ್ಯಾಪ್ ಮಾಡಲಾಗಿದೆ.
ಇದನ್ನೂ ಓದಿ: ಆರ್‌ಎಸ್‌ಎಸ್‌ನ 100 ವರ್ಷಗಳ ಪಯಣಕ್ಕೆ ಪ್ರಧಾನಿ ಮೋದಿ ಅಭಿನಂದನೆ
ಪ್ರಧಾನಮಂತ್ರಿ ಗತಿಶಕ್ತಿ ಯೋಜನೆ ಅಂಗನವಾಡಿ ಕೇಂದ್ರಗಳ ಸ್ಥಾಪನೆಗೆ ಪರಿಣಾಮಕಾರಿಯಾಗಿದೆ. ಎಲ್ಲಾ ಅಂಗನವಾಡಿ ಕೇಂದ್ರಗಳ ಮೇಲೆ ಗಮನವಿಡಲಿದೆ. ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳನ್ನು ಗುರುತಿಸಲಾಗಿದೆ. ಅಂಗನವಾಡಿ ಕೇಂದ್ರಗಳ ಸ್ಥಾಪನೆ ಮಾತ್ರವಲ್ಲದೆ ಜಿಲ್ಲೆಗಳಲ್ಲಿನ ಪ್ರಮುಖ ಕೈಗಾರಿಕೆಗಳನ್ನು ಗುರುತಿಸಲು ಸಹ ಇದನ್ನು ಬಳಸಲಾಗಿದೆ.
ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯನ್ನು ಅಂತಾರಾಷ್ಟ್ರೀಯ ಮಟ್ಟದ ವೇದಿಕೆಗಳಲ್ಲಿ ಪ್ರಸ್ತುತಪಡಿಸಲಾಗಿದೆ. ಆ ಮೂಲಕ ನೇಪಾಳ, ಬಾಂಗ್ಲಾದೇಶ ಮತ್ತು ಶ್ರೀಲಂಕಾದೊಂದಿಗೆ ಕೆಲ ಒಪ್ಪಂದಗಳು ಪ್ರಗತಿಯಲ್ಲಿವೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.