ಮೋದಿ, ಬಿಜೆಪಿ, ಆರ್​ಎಸ್​ಎಸ್ ದೇಶದ್ರೋಹಿಗಳು ಎಂದ ರಾಹುಲ್​​ಗೆ ಜೋಶಿ ತಿರುಗೇಟು

ಪ್ರಧಾನಿ ಮೋದಿ, ಅಮಿತ್ ಶಾ, ಬಿಜೆಪಿ, ಆರ್‌ಎಸ್‌ಎಸ್‌ ದೇಶದ್ರೋಹಿಗಳಾಗಿದ್ದು, ರಾಷ್ಟ್ರದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ-ಆರ್‌ಎಸ್‌ಎಸ್ ಸಂವಿಧಾನದ ಮೇಲೆ ದಾಳಿ ಮಾಡಿದೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದು, ಇದಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಕ್ರಿಯಿಸಿದ್ದು, ಈ ಹಿಂದೆ ಕಾಂಗ್ರೆಸ್​ ಮಾಡಿದ ಎಡವಟ್ಟುಗಳನ್ನ ನೆನಪಿಸಿ ತಿರುಗೇಟು ನೀಡಿದ್ದಾರೆ.

ಮೋದಿ, ಬಿಜೆಪಿ, ಆರ್​ಎಸ್​ಎಸ್ ದೇಶದ್ರೋಹಿಗಳು ಎಂದ ರಾಹುಲ್​​ಗೆ ಜೋಶಿ ತಿರುಗೇಟು
Pralhad Joshi And Rahul Gandhi

Updated on: May 20, 2026 | 8:41 PM

ನವದೆಹಲಿ, (ಮೇ 20): ಪ್ರಧಾನಿ ನರೇಂದ್ರ ಮೋದಿ (Narendra Modi) , ಗೃಹ ಸಚಿವ ಅಮಿತ್ ಶಾ ಮತ್ತು ಆರ್‌ಎಸ್‌ಎಸ್ ಸಂಘಟನೆಯನ್ನು ರಾಹುಲ್ ಗಾಂಧಿ ಅವರು “ದೇಶದ್ರೋಹಿಗಳು” ಎಂದು ಕರೆದಿರುವುದು ಕೇವಲ ನಾಚಿಕೆಗೇಡಿನ ಸಂಗತಿಯಲ್ಲ. ಇದು ಪ್ರಾಮಾಣಿಕತೆ ಮತ್ತು ಸಮರ್ಪಣಾ ಭಾವದಿಂದ ಭಾರತ ಮಾತೆಯ ಸೇವೆ ಮಾಡುವ ಪ್ರತಿಯೊಬ್ಬ ರಾಷ್ಟ್ರವಾದಿಗೂ ಮಾಡಿದ ಅವಮಾನವಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ ಜೋಶಿ (Pralhad Joshi ) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖ್ಯಾಂಶಗಳು

  • ಪ್ರಧಾನಿ ಮೋದಿ,  ಶಾ, ಬಿಜೆಪಿ, ಆರ್‌ಎಸ್‌ಎಸ್‌ ದೇಶದ್ರೋಹಿ ಎಂದ ರಾಹುಲ್ ಗಾಂಧಿ
  • ಲೋಕಸಭಾ ವಿಪಕ್ಷ ನಾಯಕ ರಾಹುಲ್ ಹೇಳಿಕೆಗೆ ಕೇಂದ್ರ ಸಚಿವ ಜೋಶಿ ತಿರುಗೇಟು
  • ಮೋದಿ ಸರ್ಕಾರದ ಬಲಿಷ್ಠ ಆಡಳಿತದಿಂದ ರಾಹುಲ್ ಗಾಂಧಿಗೆ ಹತಾಶೆ

ರಾಹುಲ್ ಗಾಂಧಿ ಹೇಳಿಗೆ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಕ್ರಿಯಿಸಿರುವ ಜೋಶಿ, ತುರ್ತು ಪರಿಸ್ಥಿತಿಯನ್ನು ಹೇರಿ, ಪ್ರಜಾಪ್ರಭುತ್ವವನ್ನು ಹತ್ತಿಕ್ಕಿದ ಅದೇ ಕಾಂಗ್ರೆಸ್ ಪಕ್ಷದ ನಾಯಕರೊಬ್ಬರು ಈಗ ಪ್ರಜಾಪ್ರಭುತ್ವವನ್ನು ಉಳಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಮಾಧ್ಯಮಗಳನ್ನು ಬಾಯಿ ಮುಚ್ಚಿಸಿ , ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ತಳ್ಳಿ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಿದ್ದು ಇದೇ ಕಾಂಗ್ರೆಸ್. ಈಗ ಇತರರಿಗೆ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಪಾಠ ಹೇಳುತ್ತಿದೆ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ‘ಇದು ನಾಯಕತ್ವವಲ್ಲ, ನೌಟಂಕಿ’: ಇಟಲಿ ಪ್ರಧಾನಿಗೆ ಮೋದಿ ಗಿಫ್ಟ್​​ ಬಗ್ಗೆ ರಾಹುಲ್​​ ಗಾಂಧಿ ಟೀಕೆ

ದೇಶದ ಹಿತಾಸಕ್ತಿಯ ರಕ್ಷಕನಂತೆ ನಟಿಸುತ್ತಿದೆ

ಚೀನಾವನ್ನು ನಿಭಾಯಿಸಲು ವಿಫಲವಾಗಿ 1962ರ ಯುದ್ಧಕ್ಕೆ ಕಾರಣವಾದ ತಪ್ಪುಗಳಿಂದ ಹಿಡಿದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ಭಾರತಕ್ಕೆ ಸಿಗಬೇಕಿದ್ದ ಖಾಯಂ ಸ್ಥಾನದ ಆಯಕಟ್ಟಿನ ಅವಕಾಶಗಳನ್ನು ಬಿಟ್ಟುಕೊಡುವವರೆಗೆ, ಭಾರತದ ಜಾಗತಿಕ ಸ್ಥಾನಮಾನವನ್ನು ದುರ್ಬಲಗೊಳಿಸಿದ್ದು ಕಾಂಗ್ರೆಸ್. ಈಗ ದೇಶದ ಹಿತಾಸಕ್ತಿಯ ರಕ್ಷಕನಂತೆ ನಟಿಸುತ್ತಿದೆ. 2008ರಲ್ಲಿ ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ರಹಸ್ಯವಾಗಿ ಒಪ್ಪಂದಕ್ಕೆ (MoU) ಸಹಿ ಹಾಕಿ ಕಚ್ಚತೀವು ದ್ವೀಪವನ್ನು ಬಿಟ್ಟುಕೊಟ್ಟರು. ಹಾಗೇ ಭಾರತವನ್ನು ಬಲಪಡಿಸಲು ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟ ಜನರನ್ನು ದೇಶದ್ರೋಹಿ ಎಂದು ಕರೆಯುವ ಮೂಲಕ ಆಯಕಟ್ಟಿನ ಹಿತಾಸಕ್ತಿಗಳೊಂದಿಗೆ ಪದೇ ಪದೇ ರಾಜಿ ಮಾಡಿಕೊಂಡದ್ದು ಇದೇ ಕಾಂಗ್ರೆಸ್ ಎಂದು ಕಿಡಿಕಾರಿದ್ದಾರೆ.

ರಾಹುಲ್ ಗಾಂಧಿಗೆ ಹತಾಶೆ

ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಾರತವು ಹಿಂದೆಂದಿಗಿಂತಲೂ ಹೆಚ್ಚು ಬಲಿಷ್ಠ, ಸುರಕ್ಷಿತ, ಆರ್ಥಿಕವಾಗಿ ಶಕ್ತಿಯುತ ಮತ್ತು ಜಾಗತಿಕವಾಗಿ ಗೌರವಾನ್ವಿತ ದೇಶವಾಗಿ ಬೆಳೆಯುತ್ತಿರುವುದರಿಂದ ರಾಹುಲ್ ಗಾಂಧಿಗೆ ಹತಾಶೆ ಹೆಚ್ಚಾಗುತ್ತಿದೆ. ರಾಷ್ಟ್ರವಾದಿ ಶಕ್ತಿಗಳನ್ನು ದೇಶದ್ರೋಹಿಗಳು ಎಂದು ಕರೆಯುವುದರಿಂದ ಕಾಂಗ್ರೆಸ್ ತನ್ನದೇ ಆದ ದ್ರೋಹ, ಬೂಟಾಟಿಕೆ ಹಾಗೂ ಸರಣಿ ದಾಳಿಗಳ ಇತಿಹಾಸವನ್ನು ಅಳಿಸಿಹಾಕಲು ಸಾಧ್ಯವಿಲ್ಲ. ದೇಶದ ಪರವಾಗಿ ಯಾರು ನಿಂತಿದ್ದರು? ಮತ್ತು ಕೇವಲ ಒಂದು ಕುಟುಂಬಕ್ಕಾಗಿ ಯಾರು ನಿಂತಿದ್ದರು ಎಂಬುವುದು ಈ ದೇಶದ ಜನರಿಗೆ ಚೆನ್ನಾಗಿ ಗೊತ್ತಿದೆ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.

ರಾಹುಲ್ ಗಾಂಧಿ ಹೇಳಿದ್ದೇನು?

ಪ್ರಧಾನಿ ಮೋದಿ, ಅಮಿತ್ ಶಾ, ಬಿಜೆಪಿ, ಆರ್‌ಎಸ್‌ಎಸ್‌ ದೇಶದ್ರೋಹಿಗಳಾಗಿದ್ದು, ರಾಷ್ಟ್ರದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ-ಆರ್‌ಎಸ್‌ಎಸ್ ಸಂವಿಧಾನದ ಮೇಲೆ ದಾಳಿ ಮಾಡಿದೆ. ಪಂಚ ರಾಜ್ಯಗಳ ಚುನಾವಣೆ ಮೊದಲು ಇಂಧನ ಕೊರತೆ ಇಲ್ಲ ಅಂದಿದ್ರಿ. ಪೆಟ್ರೋಲ್‌, ಡೀಸೆಲ್ ದರ ಹೆಚ್ಚಳವಾಗಲ್ಲ ಅಂತಾ ಹೇಳಿದ್ರಿ. ಆದರೆ ಈಗ ದೇಶದಲ್ಲಿ ಪೆಟ್ರೋಲ್‌, ಡೀಸೆಲ್ ದರ ಹೆಚ್ಚಳವಾಗುತ್ತಿದೆ. ಅಂಬಾನಿ ರಷ್ಯಾದಿಂದ ಪೆಟ್ರೋಲ್ ಖರೀದಿಸಿ ಹೊರಗೆ ಮಾರಾಟ ಮಾಡ್ತಾರೆ. ಇದರಿಂದ ಆ ಹಣದಿಂದ ಪ್ರಧಾನಿ ನರೇಂದ್ರ ಮೋದಿಗೆ ಹಣಕಾಸು ಒದಗಿಸುತ್ತಾರೆ ಎಂದು ಹೇಳಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 8:23 pm, Wed, 20 May 26

Follow Us