
ನವದೆಹಲಿ/ಬೆಂಗಳೂರು, ಜುಲೈ 23: ನೀಟ್ ಬಗ್ಗೆ ಧ್ವನಿ ಎತ್ತುತ್ತಿರುವ ರಾಹುಲ್ ಗಾಂಧಿ ಕರ್ನಾಟಕದ ಕೆಪಿಎಸ್ಸಿ ಕರ್ಮಕಾಂಡ ಬಗ್ಗೆ ಏಕೆ ಧ್ವನಿ ಅಡಗಿಸಿದ್ದಾರೆ? ಇದೆಂಥ ದ್ವಿಮುಖ ನೀತಿ? ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ವಿಪಕ್ಷಗಳು ರಾಷ್ಟ್ರೀಯ ಪರೀಕ್ಷೆ ವಿಷಯದಲ್ಲಿ ರಾಜಕೀಯ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ನೀಟ್ ವಿವಾದ ಕುರಿತು ಸಂಸತ್ತಿನಲ್ಲಿ ಮುಕ್ತ ಹಾಗೂ ಸತ್ಯಾಧಾರಿತ ಚರ್ಚೆಗೆ ಕೇಂದ್ರ ಸರ್ಕಾರ ಸಿದ್ಧವಿದೆ. ಇದಕ್ಕೆ ಅಖಿಲೇಶ್ ಯಾದವ್ ಸೇರಿದಂತೆ ಹಲವು ವಿಪಕ್ಷ ನಾಯಕರೂ ಸಮ್ಮತಿಸಿದ್ದಾರೆ. ವಿಪಕ್ಷಗಳು ರಾಜಕೀಯ ಬದಿಗೊತ್ತಿ, ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಎಲ್ಲರೂ ಒಟ್ಟಾಗಿ ಚರ್ಚೆಯಲ್ಲಿ ಭಾಗವಹಿಸಬೇಕೆಂದು ಪ್ರಲ್ಹಾದ ಜೋಶಿ ಕೋರಿದ್ದಾರೆ.
ಕೇಂದ್ರದಲ್ಲಿ ಇಷ್ಟೊಂದು ರಾದ್ಧಾಂತ ಮಾಡುವ ವಿಪಕ್ಷ ನಾಯಕ ರಾಹುಲ್ ಗಾಂಧಿ, ತಮ್ಮದೇ ಆಡಳಿತವಿರುವ ಕರ್ನಾಟಕದಲ್ಲಿ ಕೆಪಿಎಸ್ಸಿ ಕರ್ಮಕಾಂಡ ಬಗ್ಗೆ ಏಕೆ ಧ್ವನಿ ಎತ್ತುತ್ತಿಲ್ಲ? ಎಂದು ಜೋಶಿ ಪ್ರಶ್ನಿಸಿದ್ದಾರೆ. ಕರ್ನಾಟಕದಲ್ಲಿ 2.7 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿಯಿವೆ. ಕೆಪಿಎಸ್‌ಸಿ ಅಧ್ಯಕ್ಷರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ. ಅಲ್ಲಿಯೂ ಪ್ರತಿಭಟನೆಗಿಳಿದ ಪರೀಕ್ಷಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ ಹಾಗಿದ್ದರೂ ರಾಹುಲ್ ಅದೇಕೆ ಮೌನ ವಹಿಸಿದ್ದಾರೆ. ಅಲ್ಲೇಕೆ ವಿದ್ಯಾರ್ಥಿಗಳ ಹೋರಾಟಕ್ಕೆ ಸಾಥ್ ಕೊಡಲಿಲ್ಲ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿರುವ ಅವರು, ಇದು ಇವರ ದ್ವಿಮುಖ ನೀತಿಯನ್ನು ಅನಾವರಣಗೊಳಿಸಿದೆ ಎಂದು ಹರಿಹಾಯ್ದಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತು?
ನೀಟ್ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾವತ್ತೂ ನೆಪ ಹೇಳಿ ಜಾರಿಕೊಂಡಿಲ್ಲ. ವ್ಯವಸ್ಥೆ ಸುಧಾರಿಸಲು ಪ್ರಥಮಾದ್ಯತೆ ನೀಡಿದೆ. ನೀಟ್ ಪ್ರಕರಣದಲ್ಲಿ ಈಗಾಗಲೇ 14 ಜನರನ್ನು ಬಂಧಿಸಲಾಗಿದೆ. ಪರೀಕ್ಷಾ ಮಾಫಿಯಾಗೆ 10 ವರ್ಷ ಜೈಲು ಮತ್ತು ಭಾರೀ ದಂಡ ವಿಧಿಸುವ ಕಟ್ಟುನಿಟ್ಟಿನ ಕಾನೂನನ್ನು ಜಾರಿಗೆ ತಂದಿದೆ ಎಂದು ಕೇಂದ್ರದ ಕ್ರಮವನ್ನು ಪ್ರಲ್ಹಾದ ಜೋಶಿ ಸಮರ್ಥಿಸಿಕೊಂಡಿದ್ದಾರೆ. ರಾಜಸ್ಥಾನದಲ್ಲಿ ಮಾತ್ರ ಗೆಹ್ಲೋಟ್ ಅವರ ಅಧಿಕಾರಾವಧಿಯಲ್ಲಿ 19 ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಪ್ರಿಯಾಂಕಾ ವಾದ್ರಾ ಅವರು ಅಂದು ಅತ್ಯುತ್ತಮ ಪ್ರಯತ್ನದ ಹೊರತಾಗಿಯೂ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಸಾಧ್ಯವಾಗಲಿಲ್ಲ ಎಂಬುದನ್ನು ಸ್ವತಃ ಒಪ್ಪಿಕೊಂಡಿದ್ದರು ಎಂಬುದನ್ನೂ ಕೇಂದ್ರ ಸಚಿವರು ನೆನಪಿಸಿದ್ದಾರೆ.
2014ರಿಂದ ನರೇಂದ್ರ ಮೋದಿ ಸರ್ಕಾರ, ಭಾರತದ ಯುವಕರು ಅರ್ಹತೆ ಆಧಾರದ ಮೇಲೆ ಮಾತ್ರ ಅವಕಾಶ ಪಡೆಯುವುದನ್ನು ಖಚಿತಪಡಿಸಿದೆ. ವೈದ್ಯಕೀಯ ಶಿಕ್ಷಣದಲ್ಲಿ ನಿರ್ವಹಣಾ ಕೋಟಾ ಸೀಟುಗಳ ವ್ಯವಸ್ಥೆ ರದ್ದುಗೊಳಿಸಿತು. ಆದರೆ, ವೈದ್ಯಕೀಯ ಸೀಟುಗಳ ಸಂಖ್ಯೆ 2014ರಲ್ಲಿ ಇದ್ದುದರ (51,000) ಮೂರು ಪಟ್ಟು ಇಂದು ಹೆಚ್ಚಾಗಿದೆ. AIIMS ಸಂಖ್ಯೆಯನ್ನು ಗಮನಾರ್ಹವಾಗಿ ವಿಸ್ತರಿಸಲಾಗಿದೆ ಎಂದು ಉದಾಹರಣೆ ಸಮೇತ ಸಚಿವರು ತಿಳಿಸಿದ್ದಾರೆ.
ಪ್ರಸ್ತುತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸಂಭವಿಸಿದೆ ಎಂದು ಗೊತ್ತಾಗುತ್ತಲೇ ಸರ್ಕಾರ ಪರೀಕ್ಷೆಯನ್ನೇ ರದ್ದುಗೊಳಿಸಿತು. ತದನಂತರ ಅತ್ಯಂತ ಪಾರದರ್ಶಕ ರೀತಿಯಲ್ಲಿ ಮರು-ನೀಟ್ ಪರೀಕ್ಷೆ ನಡೆಸಿತು ಮತ್ತು ಫಲಿತಾಂಶ ಸಹ ತಕ್ಷಣವೇ ಘೋಷಿಸಲಾಯಿತು. ದೇಶದಲ್ಲಿ ಪರೀಕ್ಷಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು, ರಚನಾತ್ಮಕ ಸಲಹೆ ಕಾರ್ಯಗತಗೊಳಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಪುನರುಚ್ಚರಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:15 pm, Thu, 23 July 26