ಆಗಸ್ಟ್​ 30ರಂದು ಪಿಜಿ ನೀಟ್ ಪರೀಕ್ಷೆ: ನೂತನ ಸಚಿವ ಪ್ರಲ್ಹಾದ್ ಜೋಶಿ ಮುಂದಿರುವ ಹೊಸ ಸವಾಲುಗಳು

ಪ್ರಲ್ಹಾದ್ ಜೋಶಿ ಆಗಸ್ಟ್ 30ರಂದು ನಡೆಯಲಿರುವ ಪಿಜಿ ನೀಟ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸುವ ಸವಾಲನ್ನು ಎದುರಿಸುತ್ತಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದ ನಂತರ, ಮೋದಿ ಸಂಪುಟದಿಂದ ಈ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಕಡಿಮೆ ವಿದ್ಯಾರ್ಥಿಗಳಿರುವ ಪಿಜಿ ನೀಟ್ ಪರೀಕ್ಷೆಯಲ್ಲಿ ಪಾರದರ್ಶಕತೆ ತಂದು, ದೇಶಕ್ಕೆ ಮಾದರಿ ಪರೀಕ್ಷಾ ಸುಧಾರಣೆಗಳನ್ನು ಅನುಷ್ಠಾನಗೊಳಿಸುವ ನಿರೀಕ್ಷೆಯಿದೆ. ಇದು ಅವರ ನಾಯಕತ್ವಕ್ಕೆ ಹೊಸ ಪರೀಕ್ಷೆಯಾಗಿದೆ.

ಆಗಸ್ಟ್​ 30ರಂದು ಪಿಜಿ ನೀಟ್ ಪರೀಕ್ಷೆ: ನೂತನ ಸಚಿವ ಪ್ರಲ್ಹಾದ್ ಜೋಶಿ ಮುಂದಿರುವ ಹೊಸ ಸವಾಲುಗಳು
ಪ್ರಲ್ಹಾದ್ ಜೋಶಿ

Updated on: Jul 26, 2026 | 9:01 AM

ನವದೆಹಲಿ, ಜುಲೈ 26: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ವಿವಾದದ ಕಾರಣದಿಂದ ರಾಜೀನಾಮೆ ನೀಡಿ ಧರ್ಮೇಂದ್ರ ಪ್ರಧಾನ್(Dharmendra Pradhan) ನರೇಂದ್ರ ಮೋದಿ ಸಂಪುಟದಿಂದ ಹೊರನಡೆದಿದ್ದಾರೆ. ಈಗ ಕೋಟ್ಯಂತರ ಅಭ್ಯರ್ಥಿಗಳ ನಿರೀಕ್ಷೆಯ ಹೊರೆಯನ್ನು ಕನ್ನಡಿಗ ಪ್ರಲ್ಹಾದ್ ಜೋಶಿ ಹೊರಬೇಕಿದೆ. ಪ್ರಧಾನ್ ರಾಜೀನಾಮೆ ಬೆನ್ನಲ್ಲೇ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಸಂಬಂಧಿಸಿ ಹಲವು ಸುಧಾರಣಾ ಕ್ರಮಗಳು ವಿದ್ಯಾರ್ಥಿ ವಲಯದಿಂದಲೂ ಕೇಳಿಬಂದಿದೆ. ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಕೂಡಾ ಪರೀಕ್ಷಾ ಸುಧಾರಣೆಯ ಕ್ರಾಂತಿಕಾರಕ ಬದಲಾವಣೆಯ ಮುನ್ಸೂಚನೆ ನೀಡಿದ್ದಾರೆ.ಇವೆಲ್ಲಾ ನಿರೀಕ್ಷೆಯನ್ನು ಪ್ರಲ್ಹಾದ್​ ಜೋಶಿ ನಿಭಾಯಿಸಬೇಕಿದೆ.

ಪ್ರಸಕ್ತ ಮುಂಗಾರು ಅಧಿವೇಶನದಲ್ಲೇ ಪರೀಕ್ಷಾ ಅಕ್ರಮಗಳ ತಡೆ ಕಾಯ್ದೆಯ ತಿದ್ದುಪಡಿ ಮಸೂದೆ ಮಂಡನೆಯಾಗಲಿದೆ. ಇದಕ್ಕೆ ಪೂರಕವಾಗಿ, ಭವಿಷ್ಯದಲ್ಲಿ ನಡೆಯುವ ಎಲ್ಲಾ ಪರೀಕ್ಷೆಗಳ ಪ್ರಕ್ರಿಯೆಯಲ್ಲಿ ಸುಧಾರಣೆ ತರುವ ಜವಾಬ್ದಾರಿಯು ಪ್ರಲ್ಹಾದ್ ಜೋಶಿ ಮೇಲಿದೆ. ತುರ್ತಾಗಿ ಇದೇ ಆಗಸ್ಟ್ 30ರಂದು ನಡೆಯುವ ಪಿಜಿ ನೀಟ್ ಪರೀಕ್ಷೆಗೆ ದೊಡ್ಡ ತಯಾರಿ ನಡೆಸಬೇಕಿದೆ.

ಯುಜಿ ನೀಟ್​ನಲ್ಲಿ ಆದ ಎಲ್ಲಾ ಲೋಪ ದೋಷಗಳನ್ನು ಸರಿಪಡಿಸಿಕೊಂಡು ಒಂದೇ ತಿಂಗಳಲ್ಲಿ ದೇಶದ ವಿದ್ಯಾರ್ಥಿ ಸಮುದಾಯಕ್ಕೆ ಮಾದರಿ ಪ್ರಕ್ರಿಯೆಯೊಂದನ್ನು ಸಾಧಿಸಿ ತೋರಿಸಬೇಕಿದೆ. ಯುಜಿ ನೀಟ್ ಮರು ಪರೀಕ್ಷೆಯಲ್ಲಿ ಯಾವುದೇ ಸಮಸ್ಯೆಯಿಲ್ಲದೆ ನಿರ್ಗಮಿತ ಸಚಿವರು ಜವಾಬ್ದಾರಿ ನಿಭಾಯಿಸಿದ್ದರು.

ಮತ್ತಷ್ಟು ಓದಿ: ಧರ್ಮೇಂದ್ರ ಪ್ರಧಾನ್ ಖಾತೆಯನ್ನು ನುಂಗಿದ ‘ಜಿರಲೆ’, ಕೊನೆಗೂ ರಾಜೀನಾಮೆ ಸಲ್ಲಿಕೆ

ಆದರೆ ಈಗ ಶೈಕ್ಷಣಿಕ ವಲಯದಿಂದ ಬಂದಿರುವ ಸುಧಾರಣಾ ಕ್ರಮಗಳನ್ನು ಅನುಷ್ಠಾನ ಮಾಡಿಕೊಳ್ಳಲು ಸಕಾರವಾಗಿದೆ. ಯುಜಿ ನೀಟ್​ನಲ್ಲಿ 22 ಲಕ್ಷ ವಿದ್ಯಾರ್ಥಿಗಳಿದ್ದರೆ ಪಿಜಿ ನೀಟ್​​ನಲ್ಲಿ ಕೇವಲ ಎರಡೂವರೆ ಲಕ್ಷ ವಿದ್ಯಾರ್ಥಿಗಳಿರುತ್ತಾರೆ ಹೀಗಾಗಿ ಸಣ್ಣ ಅಭ್ಯರ್ಥಿಗಳ ಸಮೂಹದಲ್ಲಿ ಸಕಾರಾತ್ಮಕ ಪ್ರಯೋಗಗಳನ್ನು ಮಾಡಿ ಸೈ ಎನಿಸಿಕೊಳ್ಳಲು ಜೋಶಿಗೆ ಸಕಾಲವಾಗಿದೆ.

ಈಗಾಗಲೇ ನರೇಂದ್ರ ಮೋದಿ ಸಂಪುಟದಲ್ಲಿ ಕಳೆದ ಏಳು ವರ್ಷಗಳಿಂದ ಪ್ರಭಾವಿ ಸಚಿವರಾಗಿ ಪ್ರಲ್ಹಾದ್ ಜೋಶಿ ಕೆಲಸ ಮಾಡಿದ್ದಾರೆ. ತಮ್ಮ ವಿಶಿಷ್ಟ ಕಾರ್ಯ ವೈಖರಿಯಿಂದ ನರೇಂದ್ರ ಮೋದಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎನ್ನುವುದು ಕೂಡ ವಿಶೇಷ. ಅವರು ಆರಂಭದಲ್ಲಿ ನಿಭಾಯಿಸಿದ ಕಲ್ಲಿದ್ದಲು ಮತ್ತು ಗಣಿ ಇಲಾಖೆಯಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ತೆಗೆದುಕೊಂಡಿರುವುದು ಸಾರ್ವಜನಿಕವಾಗಿ ಪ್ರಶಂಸೆಗೆ ಕಾರಣವಾಗಿತ್ತು.

ಇದಾದ ಬಳಿಕ ಕಾನೂನು ಮತ್ತು ಸಂಸದೀಯ, ಮರುಬಳಕೆ ಇಂಧನ ಹಾಗೂ ನಾಗರಿಕ ಆಹಾರ ಸರಬರಾಜು ಇಲಾಖೆಯನ್ನು ಕಳೆದ ಎರಡು ವರ್ಷಗಳಿಂದ ನಿಭಾಯಿಸುತ್ತೊದ್ದಾರೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಇಲಾಖಾ ವಾರು ಪರಿಶೀಲನೆಯಲ್ಲಿ ಪ್ರಲ್ಹಾದ್ ಜೋಶಿಯ ಸಚಿವಾಲಯವು ಅಗ್ರಸ್ಥಾನದಲ್ಲಿವೆ ಎನ್ನುವ ವರದಿಗಳು ಬಂದಿದ್ದವು.

ಇದೇ ಕಾರಣಕ್ಕೆ ರಾಜಕೀಯ ವಲಯದಲ್ಲಿ ಪ್ರಲ್ಹಾದ್ ಜೋಶಿಯವರನ್ನು ಮೋದಿಯ ಬ್ಲೂ ಐಡ್ ಬಾಯ್ ಎಂದು ಉಲ್ಲೇಖಿಸಲಾಗುತ್ತದೆ. ಈ ಉದ್ದೇಶದಿಂದಲೇ ಸೂಕ್ಷ್ಮ ಹಾಗೂ ಕಠಿಣ ಸಂದರ್ಭದಲ್ಲಿ ವಿವಾದದಲ್ಲಿರುವ ಇಲಾಖೆಯ ಜವಾಬ್ದಾರಿಯನ್ನು ಪ್ರಲ್ಹಾದ್ ಜೋಶಿ ಹೆಗಲಿಗೆ ಪ್ರಧಾನಿ ಮೋದಿ ನೀಡಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us