ಗರ್ಭಿಣಿ ಹಿಂಸೆಕೊಟ್ಟು ಟಾಯ್ಲೆಟ್ ಕ್ಲೀನರ್ ಕುಡಿಸಿದ ಗಂಡ: ಆಸ್ಪತ್ರೆಯಲ್ಲಿ ಮಹಿಳೆ ಸಾವು
ಪತಿಯಿಂದ ಹಲ್ಲೆಗೊಳಗಾಗಿ ಒತ್ತಾಯದಿಂದ ಟಾಯ್ಲೆಟ್ ಕ್ಲೀನರ್ ಕುಡಿದಿದ್ದ ಪತ್ನಿ ಮೃತಪಟ್ಟ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಹೈದರಾಬಾದ್: ಪತಿಯಿಂದ ಹಲ್ಲೆಗೊಳಗಾಗಿ ಒತ್ತಾಯದಿಂದ ಟಾಯ್ಲೆಟ್ ಕ್ಲೀನರ್ ಕುಡಿದಿದ್ದ ಪತ್ನಿ ಮೃತಪಟ್ಟ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಟಾಯ್ಲೆಟ್ ಕ್ಲೀನರ್ ಕುಡಿದು ತೀವ್ರ ಅಸ್ವಸ್ಥರಾಗಿದ್ದ ಮಹಿಳೆಯನ್ನು ಕುಟುಂಬದ ಇತರ ಸದಸ್ಯರು ತಕ್ಷಣ ಆಸ್ಪತ್ರೆಗೆ ಕರೆದೊಯ್ದರಾದರು. ವೈದ್ಯರು ಚಿಕಿತ್ಸೆ ನೀಡಲು ಯತ್ನಿಸಿದರಾರೂ ಮಹಿಳೆಯ ಜೀವ ಉಳಿಯಲಿಲ್ಲ. ಆರೋಪಿಯನ್ನು ತರುಣ್ ಎಂದು ಗುರುತಿಸಲಾಗಿದೆ. ಈತ ಪ್ರಸ್ತುತ, ತಲೆಮರೆಸಿಕೊಂಡಿದ್ದು, ಅವನನ್ನು ಪತ್ತೆಹಚ್ಚಲೆಂದು ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ. 4 ವರ್ಷಗಳ ಹಿಂದೆ ತರುಣ್ ಮತ್ತು ಕಲ್ಯಾಣಿ ಅವರ ಮದುವೆಯಾಗಿತ್ತು. ಆದರೆ ಅವರಿಬ್ಬರ ನಡುವೆ ಆಗಾಗ ಜಗಳಗಳು ಆಗುತ್ತಲೇ ಇದ್ದವು.
ಕಲ್ಯಾಣಿ ಗರ್ಭಿಣಿಯಾದ ನಂತರ ಅಕೆಯ ಮೇಲೆ ನಡೆಯುತ್ತಿದ್ದ ದೌರ್ಜನ್ಯ ಇನ್ನಷ್ಟು ಹೆಚ್ಚಾಯಿತು. ಕಲ್ಯಾಣಿ ನೋಡಲು ಚೆನ್ನಾಗಿಲ್ಲ ಎಂದು ದೂರುತ್ತಿದ್ದ ಗಂಡ, ಇನ್ನಷ್ಟು ವರದಕ್ಷಿಣೆ ತರಬೇಕು ಎಂದು ಒತ್ತಾಯಿಸುತ್ತಿದ್ದ. ಕಳೆದ ಮಂಗಳವಾರ ಇವರಿಬ್ಬರ ನಡುವೆ ಜಗಳ ಆರಂಭವಾದಾಗ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಕಲ್ಯಾಣಿಗೆ ಒತ್ತಾಯಪೂರ್ವಕವಾಗಿ ಟಾಯ್ಲೆಟ್ ಕ್ಲೀನರ್ ಕುಡಿಸಿದ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಕಲ್ಯಾಣಿಯ ಪೋಷಕರು ಆಕೆಯನ್ನು ನಿಜಾಮಾಬಾದ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಚಿಕಿತ್ಸೆ ವೇಳೆಯಲ್ಲಿಯೇ ಕಲ್ಯಾಣಿ ಮೃತಪಟ್ಟರು.
ಪ್ರಕರಣಕ್ಕೆ ಸಂಬಂಧಿಸಿದಂತೆ ತರುಣ್ ವಿರುದ್ಧ ಕಲ್ಯಾಣಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ತರುಣ್ ವಿರುದ್ಧ ಐಪಿಸಿ 302, 304-ಬಿ ಮತ್ತು 498ರ ವಿಧಿಗಳ ಅನ್ವಯ ಪ್ರಕರಣ ದಾಖಲಾಗಿದೆ. ವರದಕ್ಷಿಣೆಗಾಗಿ ಪೀಡಿಸಿ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ತರುಣ್ ವಿರುದ್ಧ ಕಲ್ಯಾಣಿಯ ಪೋಷಕರು ದೂರಿದ್ದಾರೆ.
ಇದನ್ನೂ ಓದಿ: ತೆಲಂಗಾಣದಲ್ಲಿ ಎಲೆಕ್ಟ್ರಾನಿಕ್ ವಾಹನದ ಬ್ಯಾಟರಿ ಸ್ಫೋಟಗೊಂಡು 80 ವರ್ಷದ ವೃದ್ಧ ಸಾವು, ಮೂವರಿಗೆ ಗಾಯ