Droupadi Murmu: ಆ ದಿನ 10 ಬಾರಿ ಫೋನ್ ಮಾಡಿದರೂ ಪ್ರಧಾನಿ ಮೋದಿಗೆ ದ್ರೌಪದಿ ಮುರ್ಮು ಸಿಕ್ಕಿರಲಿಲ್ಲ!; ಕುತೂಹಲಕಾರಿ ಕತೆ ಇಲ್ಲಿದೆ
ದ್ರೌಪದಿ ಮುರ್ಮು ರಾಷ್ಟ್ರಪತಿ ಅಭ್ಯರ್ಥಿಯಾದ ನಂತರ ಒಡಿಶಾದ ಡುಂಗರ್‌ಶಾಹಿ ಎಂಬ ಆಕೆಯ ಸ್ಥಳೀಯ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಸಿಕ್ಕಿತು. ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ಆ ಗ್ರಾಮದಲ್ಲಿ ಲೈಟ್, ಫ್ಯಾನ್ ಓಡುತ್ತಿದೆ.
ನವದೆಹಲಿ: ಕಠಿಣ ಪರಿಶ್ರಮದಿಂದ ಎಂತಹ ಸಾಧನೆಯನ್ನು ಬೇಕಾದರೂ ಮಾಡಬಹುದು ಎಂಬ ಮಾತಿದೆ. ಬುಡಕಟ್ಟು ಜನಾಂಗದಲ್ಲಿ ಹುಟ್ಟಿದ ಮಹಿಳೆಯೊಬ್ಬರು ಇದೀಗ ಭಾರತದ ರಾಷ್ಟ್ರಪತಿಯಾಗಿರುವುದೇ (President of India) ಅದಕ್ಕೆ ಸಾಕ್ಷಿ. ದ್ರೌಪದಿ ಮುರ್ಮು (Droupadi Murmu) ಇಂದು ಭಾರತದ 15ನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಂದಹಾಗೆ, ಒಡಿಶಾದ ಮಯೂರ್‌ಭಂಜ್‌ನ ಕುಗ್ರಾಮದಿಂದ ರೈಸಿನಾ ಹಿಲ್ಸ್‌ವರೆಗಿನ (ರಾಷ್ಟ್ರಪತಿ ಭವನ ಇರುವ ಸ್ಥಳ) ಪ್ರಯಾಣ ಅಷ್ಟು ಸುಲಭವಾಗಿರಲಿಲ್ಲ. ವಿಚಿತ್ರವೆಂದರೆ, ಪ್ರಧಾನಿ ನರೇಂದ್ರ ಮೋದಿಯವರಿಗೂ (Narendra Modi) ದ್ರೌಪದಿ ಮುರ್ಮು ಅವರಿಗೆ ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆ ಮಾಡಿರುವ ಸುದ್ದಿ ತಿಳಿಸುವುದು ಅಷ್ಟು ಸುಲಭವಾಗಿರಲಿಲ್ಲ. ದ್ರೌಪದಿ ಮುರ್ಮು ರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿಯನ್ನು ಹೇಳಲು ಪ್ರಧಾನಿ ನರೇಂದ್ರ ಮೋದಿ ಅವರೇ ಸ್ವಲ್ಪ ಕಷ್ಟಪಡಬೇಕಾಯಿತು!
ಇಂದು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ದ್ರೌಪದಿ ಮುರ್ಮು ಅವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ರಾಷ್ಟ್ರಪತಿ ಹುದ್ದೆಗೇರಿದ ಮೊದಲ ಬುಡಕಟ್ಟು ಜನಪ್ರತಿನಿಧಿ ಸಾಂಪ್ರದಾಯಿಕ ಸಂತಾಲಿ ಸೀರೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ವೇಳೆ ಕುತೂಹಲಕಾರಿ ಸಂಗತಿಯೊಂದು ಬೆಳಕಿಗೆ ಬಂದಿದ್ದು, ರಾಷ್ಟ್ರಪತಿ ಅಭ್ಯರ್ಥಿಯ ಆಯ್ಕೆಗಾಗಿ ಆಯೋಜಿಸಲಾದ ಎನ್‌ಡಿಎ ಸಭೆಯಲ್ಲಿ ದ್ರೌಪದಿ ಮುರ್ಮು ಅವರ ಹೆಸರನ್ನು ನಿರ್ಧರಿಸಲಾಗಿತ್ತು. ಈ ವಿಷಯವನ್ನು ದ್ರೌಪದಿ ಅವರಿಗೆ ತಿಳಿಸಿ, ಅಭಿನಂದನೆ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಫೋನ್ ಮಾಡಿದ್ದರು. ಪ್ರಧಾನ ಮಂತ್ರಿಗಳ ಕಚೇರಿಯಿಂದ (PMO) ದ್ರೌಪದಿಯವರನ್ನು ಸಂಪರ್ಕಿಸುವ ಪ್ರಯತ್ನಗಳು ಪ್ರಾರಂಭವಾದವು. ದ್ರೌಪದಿ ಮುರ್ಮು ಅವರನ್ನು ಫೋನ್‌ನಲ್ಲಿ ಸಂಪರ್ಕಿಸಲು 10 ಬಾರಿ ಪ್ರಯತ್ನಿಸಿದರೂ ಸಂಪರ್ಕ ಸಾಧ್ಯವಾಗಲಿಲ್ಲ.
ಇದನ್ನೂ ಓದಿ: Droupadi Murmu: ಕೋಟ್ಯಂತರ ಮಹಿಳೆಯರ ಕನಸು, ಸಾಮರ್ಥ್ಯದ ಪ್ರತಿಬಿಂಬವಾಗಿ ನಾನು ರಾಷ್ಟ್ರಪತಿಯಾಗಿದ್ದೇನೆ; ದ್ರೌಪದಿ ಮುರ್ಮು
ಒಡಿಶಾದ ದೂರದ ಹಳ್ಳಿಗಳಲ್ಲಿನ ದುರ್ಬಲ ಫೋನ್ ನೆಟ್ವರ್ಕ್ನಿಂದಾಗಿ ದ್ರೌಪದಿ ಮುರ್ಮು ರಾಷ್ಟ್ರಪತಿ ಅಭ್ಯರ್ಥಿಯಾಗಿದ್ದಾರೆ ಎಂಬ ಮಾಹಿತಿಯನ್ನು ಪ್ರಧಾನಿ ನರೇಂದ್ರ ಮೋದಿಯವರೇ ಅವರಿಗೆ ತಿಳಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಪ್ರಧಾನಿ ಕಚೇರಿಯ ಅಧಿಕಾರಿಗಳು ದ್ರೌಪದಿ ಮುರ್ಮು ಅವರ ಗ್ರಾಮವಾದ ರಾಯರಂಗಪುರದ ಸ್ಥಳೀಯ ಬಿಜೆಪಿ ನಾಯಕ ವಿಕಾಸ್ ಚಂದ್ರ ಮಹತೋ ಅವರ ಫೋನ್ ನಂಬರ್ ಪತ್ತೆಹಚ್ಚಿದರು. ಅವರು ರಾಯರಂಗಪುರದಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ.
ಪ್ರಧಾನಮಂತ್ರಿಗಳ ಕಚೇರಿಯಿಂದ ಕರೆ ಬಂದಾಗ ವಿಕಾಸ್ ಅಂಗಡಿಯಲ್ಲಿದ್ದರು. ಫೋನ್ ಮಾಡಿದ ಅಧಿಕಾರಿಗಳು ‘ಹೇಗಾದರೂ ಮಾಡಿ ದ್ರೌಪದಿ ಮುರ್ಮು ಅವರನ್ನು ಸಂಪರ್ಕಿಸಿ. ಸ್ವಲ್ಪ ಅರ್ಜೆಂಟಾಗಿ ಈ ಕೆಲಸ ಆಗಬೇಕಿದೆ. ದ್ರೌಪದಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಬೇಕಂತೆ’ ಎಂದು ಹೇಳಿದರು. ಅದನ್ನು ಕೇಳಿ ಕೈಯಲ್ಲಿ ಫೋನ್ ಹಿಡಿದುಕೊಂಡೇ ದ್ರೌಪದಿಯವರ ಮನೆಯ ಕಡೆಗೆ ಸೈಕಲ್ ತುಳಿಯತೊಡಗಿದರು. ದಾರಿಯಲ್ಲಿ ಅವರ ಫೋನ್ ಕೂಡ 2 ಬಾರಿ ಸಂಪರ್ಕ ಕಡಿತಗೊಂಡಿತು. ಕೊನೆಗೆ ಅವರು ದ್ರೌಪದಿಯವರ ಮನೆ ತಲುಪಿದಾಗ ಪ್ರಧಾನಿ ಸಚಿವಾಲಯದಿಂದ 3ನೇ ಬಾರಿಗೆ ಕರೆ ಬಂದಿತು. ಕೊನೆಗೆ ‘ಮೇಡಂ ಮುರ್ಮು’ ಅವರ ಕೈಗೆ ಬಿಜೆಪಿ ನಾಯಕ ತಮ್ಮ ಮೊಬೈಲ್ ಕೊಟ್ಟರು. (Source)
ಇದನ್ನೂ ಓದಿ: Draupadi Murmu Swearing-in LIVE: ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಪ್ರಮಾಣವಚನ ಸ್ವೀಕಾರ
ಕೆಲವೇ ನಿಮಿಷಗಳಲ್ಲಿ ದ್ರೌಪದಿ ಮುರ್ಮು ಅವರು ಪ್ರಧಾನಿಯೊಂದಿಗೆ ಮಾತನಾಡಿದರು. ಅವರನ್ನು ಎನ್‌ಡಿಎ ಪಾಳಯದ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮಾಡುವ ಶುಭಸುದ್ದಿಯನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ದ್ರೌಪದಿ ಮುರ್ಮು ಅವರಿಗೆ ನೀಡಿದರು. ಈ ಸುದ್ದಿ ತಿಳಿದ ವಿಕಾಸ್ ಸಂತೋಷದಿಂದ ಕಣ್ಣೀರು ಹಾಕಿದರು. ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರ ಹೆಸರು ಘೋಷಣೆಯಾದ ನಂತರ ಆ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ವಿಕಾಸ್ ಅವರು ಸ್ವಲ್ಪ ಸಮಯದವರೆಗೆ ದ್ರೌಪದಿ ಮುರ್ಮು ಅವರ ಆಪ್ತ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರು. ಹೀಗಾಗಿ, ಸಹಜವಾಗಿಯೇ ಅವರಿಗೆ ಈ ಸುದ್ದಿ ಇನ್ನಷ್ಟು ಖುಷಿ ತಂದಿತ್ತು.
ದ್ರೌಪದಿ ಮುರ್ಮು ರಾಷ್ಟ್ರಪತಿ ಅಭ್ಯರ್ಥಿಯಾದ ನಂತರ ಒಡಿಶಾದ ಡುಂಗರ್‌ಶಾಹಿ ಎಂಬ ಆಕೆಯ ಸ್ಥಳೀಯ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಸಿಕ್ಕಿತು. ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ಆ ಗ್ರಾಮದಲ್ಲಿ ಲೈಟ್, ಫ್ಯಾನ್ ಓಡುತ್ತಿದೆ. ಇದೆಲ್ಲವೂ ಹಳ್ಳಿ ಹುಡುಗಿಯ ಕೃಪೆ ಎಂದು ಗ್ರಾಮಸ್ಥರು ಕೊಂಡಾಡುತ್ತಿದ್ದಾರೆ. ಈ ಘಟನೆಯ ನಂತರ ಅಧ್ಯಕ್ಷರ ಗ್ರಾಮ ರಾಯರಂಗಪುರದ ಮೊಬೈಲ್ ಸಂಪರ್ಕವೂ ಸುಧಾರಿಸುತ್ತದೆ ಎಂದು ಹಲವರು ಭಾವಿಸಿದ್ದಾರೆ. ಆದರೆ, ಬುಡಕಟ್ಟು ಸಮಾಜದ ಪ್ರತಿನಿಧಿಯೊಬ್ಬರು ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತುಕೊಳ್ಳದಿದ್ದರೆ ಒಡಿಶಾದ ಈ ಕುಗ್ರಾಮ ನಿಜವಾಗಿಯೂ ಅಭಿವೃದ್ಧಿಯ ಮುಖವನ್ನು ನೋಡುತ್ತಿತ್ತೇ? ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ.
Published On - 12:04 pm, Mon, 25 July 22