ಆರ್ಯನ್ ಖಾನ್ ಜತೆ ಸೆಲ್ಫಿ ಕ್ಲಿಕ್ಕಿಸಿದ ‘ಡಿಟೆಕ್ಟಿವ್’ ಕಿರಣ್ ಗೋಸಾವಿಗೆ ಪುಣೆ ಪೊಲೀಸರಿಂದ ಲುಕೌಟ್ ನೋಟಿಸ್
Aryan Khan ಆರ್ಯನ್ ಖಾನ್ನ್ನು (Aryan Khan) ಬಂಧಿಸಿದ ನಂತರ ಆತನೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ವೈರಲ್ ಆಗಿದ್ದ ಸ್ವಯಂ ಘೋಷಿತ ಖಾಸಗಿ ಪತ್ತೆದಾರಿ ಕಿರಣ್ ಗೋಸಾವಿ ವಿರುದ್ಧ ಪುಣೆ ನಗರ ಪೊಲೀಸರು ಲುಕೌಟ್ ಸುತ್ತೋಲೆ (LOC) ಹೊರಡಿಸಿದ್ದಾರೆ.
ಪುಣೆ: ಅಕ್ಟೋಬರ್ 2ರಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅವರ ಪುತ್ರ ಆರ್ಯನ್ ಖಾನ್ನ್ನು (Aryan Khan) ಬಂಧಿಸಿದ ನಂತರ ಆತನೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ವೈರಲ್ ಆಗಿದ್ದ ಸ್ವಯಂ ಘೋಷಿತ ಖಾಸಗಿ ಪತ್ತೆದಾರಿ ಕಿರಣ್ ಗೋಸಾವಿ ವಿರುದ್ಧ ಪುಣೆ ನಗರ ಪೊಲೀಸರು ಲುಕೌಟ್ ಸುತ್ತೋಲೆ (LOC) ಹೊರಡಿಸಿದ್ದಾರೆ. ಮುಂಬೈ ಕರಾವಳಿಯಲ್ಲಿ ಐಷಾರಾಮಿ ಹಡಗಿನಲ್ಲಿ ನಿಷೇಧಿತ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯನ್ನನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬಂಧಿಸಿತ್ತು. ಪುಣೆ ಪೊಲೀಸ್ ಆಯುಕ್ತ ಅಮಿತಾಭ್ ಗುಪ್ತಾ ಅವರು ಗೋಸಾವಿ ವಿರುದ್ಧ ನಗರ ಪೊಲೀಸರು ಲುಕೌಟ್ ಸುತ್ತೋಲೆ ಹೊರಡಿಸಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಗೋಸಾವಿ ದೇಶದಿಂದ ಪಲಾಯನವಾಗುವುದನ್ನು ತಡೆಯಲು ಸುತ್ತೋಲೆ ಹೊರಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎನ್‌ಸಿಬಿ ಆರೋಪಿಗಳನ್ನು ಬಂಧಿಸಿದಾಗ ಅವರ ಜತೆಗಿದ್ದ ಅವರು ಗೋಸಾವಿ ಮತ್ತು ಮನೀಶ್ ಭಾನುಶಾಲಿ ಬಿಜೆಪಿ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಎನ್ಸಿಪಿ ವಕ್ತಾರ ನವಾಬ್ ಮಲಿಕ್ ಆರೋಪಿಸಿದ್ದಾರೆ. ಆದಾಗ್ಯೂ ಐಷಾರಾಮಿ ಹಡಗು ದಾಳಿಯಲ್ಲಿ ಎನ್‌ಸಿಬಿ ಗೋಸಾವಿಯನ್ನು “ಸ್ವತಂತ್ರ ಸಾಕ್ಷಿ” ಎಂದು ಉಲ್ಲೇಖಿಸಿದ್ದರೂ, ಆತ 2018 ರ ಪುಣೆ ನಗರ ಪೋಲಿಸ್‌ನಲ್ಲಿ ದಾಖಲಾದ ವಂಚನೆ ಪ್ರಕರಣದಲ್ಲಿ ವಾಟೆಂಡ್ ಆರೋಪಿ ಎಂದು ತಿಳಿದುಬಂದಿದೆ.
ಕಸ್ಬಾ ಪೇಠ್ ನಿವಾಸಿಯಾದ ಚಿನ್ಮಯ್ ದೇಶಮುಖ್, ಮೇ 29, 2018 ರಂದು ಫರಾಶನ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣದ ಮೊದಲ ಮಾಹಿತಿ ವರದಿಯನ್ನು ಸಲ್ಲಿಸಿದ್ದರು. ಎಫ್ಐಆರ್ ಪ್ರಕಾರ, ಗೋಸಾವಿ ಹೋಟೆಲ್ ಮ್ಯಾನೇಜ್‌ಮೆಂಟ್ ಉದ್ಯೋಗಗಳ ಬಗ್ಗೆ ಜಾಹೀರಾತನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ಅನಿಲ್ ದೇಶಮುಖ್ ಅವರನ್ನು ಸಂಪರ್ಕಿಸಿದರು.
ಗೋಸಾವಿ ಅವರು ಮಲೇಷಿಯಾದಲ್ಲಿ ದೇಶಮುಖ್‌ಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದರು ಮತ್ತು ನಂತರ 2017 ರ ನವೆಂಬರ್ ಮತ್ತು 2018 ರ ನಡುವೆ ವಿವಿಧ ಕಾರಣಗಳನ್ನು ನೀಡಿ 3.09 ಲಕ್ಷ ರೂ.ಗಳನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸುವಂತೆ ಕೇಳಿಕೊಂಡಿದ್ದಾರೆ.
ಆದಾಗ್ಯೂ ಗೋಸಾವಿ, ದೇಶಮುಖ್ ಅವರಿಗೆ ಉದ್ಯೋಗವನ್ನು ನೀಡಲೂ ಇಲ್ಲ ಹಣವನ್ನು ಹಿಂದಿರುಗಿಸಲೂ ಇಲ್ಲ. ದೇಶಮುಖ್ ದೂರಿನ ಆಧಾರದ ಮೇಲೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 419 ಮತ್ತು 420 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ ಗಳ ಅಡಿಯಲ್ಲಿ ಪೊಲೀಸರು ಗೋಸಾವಿ ವಿರುದ್ಧ ಪ್ರಕರಣ ದಾಖಲಿಸಿದ್ದರು.
2007 ರಲ್ಲಿ ಮುಂಬೈನ ಅಂಧೇರಿ ಪೊಲೀಸ್ ಠಾಣೆಯಲ್ಲಿ ಒಂದು ಮತ್ತು 2015 ಮತ್ತು 2016 ರಲ್ಲಿ ಥಾಣೆಯ ಕಪುರ್ಬಾವಡಿ ಪೊಲೀಸ್ ಠಾಣೆಯಲ್ಲಿ ಎರಡು ಸೇರಿದಂತೆ ವಂಚನೆ ಪ್ರಕರಣಗಳಲ್ಲಿ ಗೋಸಾವಿಯನ್ನು ಆರೋಪಿ ಎಂದು ಹೆಸರಿಸಲಾಗಿದೆ.
ಇದನ್ನೂ ಓದಿ: ಆರ್ಯನ್ ಖಾನ್ ಬಂಧನದ ಹಿಂದಿನ ಅಸಲಿಯತ್ತೇ ಬೇರೆ; ಎನ್‌ಸಿಬಿ ಕಡೆಯಿಂದಲೇ ಹೊರಬಿತ್ತು ಸತ್ಯ