
ನವದೆಹಲಿ, ಜುಲೈ 20: ರಥಯಾತ್ರೆ (Puri Rath Yatra) ಪ್ರಯುಕ್ತ ಒಡಿಶಾದ ಪುರಿ ಜಗನ್ನಾಥ ದೇವಸ್ಥಾನಕ್ಕೆ (Puri Jagannath Temple) ಲಕ್ಷಾಂತರ ಭಕ್ತರು ಹರಿದುಬರುತ್ತಿದ್ದು, ವಿಶ್ವದಾದ್ಯಂತ ಕೋಟ್ಯಂತರ ಜನರು ಈ ಭವ್ಯ ಆಚರಣೆಯನ್ನು ವೀಕ್ಷಿಸುತ್ತಿದ್ದಾರೆ. ಈ ನಡುವೆ, ಸರ್ಚ್ ಇಂಜಿನ್‌ಗಳಲ್ಲಿ ಅತ್ಯಂತ ಹೆಚ್ಚು ಹುಡುಕಲಾಗುತ್ತಿರುವ ಪ್ರಶ್ನೆಯೆಂದರೆ, “ಪುರಿ ಜಗನ್ನಾಥ ದೇವಾಲಯದ ಮಹಾಪ್ರಸಾದವನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡುವುದು ಹೇಗೆ?” ಎಂಬುದಾಗಿದೆ. ಪ್ರತಿ ವರ್ಷ ಒಡಿಶಾಗೆ ಪ್ರಯಾಣಿಸದೆಯೇ ಈ ಪವಿತ್ರ ಪ್ರಸಾದವನ್ನು ಪಡೆಯಬೇಕೆಂದು ಹಂಬಲಿಸುವ ಸಾವಿರಾರು ಭಕ್ತರು ಆನ್‌ಲೈನ್ ಬುಕಿಂಗ್ ಮತ್ತು ಹೋಮ್ ಡೆಲಿವರಿ ಆಯ್ಕೆಗಳಿಗಾಗಿ ಹುಡುಕಾಡುತ್ತಿದ್ದಾರೆ.
ಆದರೆ, ಹಲವರಿಗೆ ತಿಳಿಯದ ಅಸಲಿ ಸತ್ಯ ಇಲ್ಲಿದೆ. ಜಗನ್ನಾಥ ದೇವಾಲಯದ ಮಹಾಪ್ರಸಾದಕ್ಕೆ ಯಾವುದೇ ಅಧಿಕೃತ ಆನ್‌ಲೈನ್ ಬುಕಿಂಗ್ ಅಥವಾ ಹೋಮ್ ಡೆಲಿವರಿ ಸೇವೆ ಲಭ್ಯವಿಲ್ಲ. ಇಲ್ಲಿನ ಶ್ರೀ ಜಗನ್ನಾಥ ಟೆಂಪಲ್ ಅಡ್ಮಿನಿಸ್ಟ್ರೇಷನ್ (SJTA) ಇಂತಹ ಪ್ರಯತ್ನಗಳನ್ನು ಸತತವಾಗಿ ವಿರೋಧಿಸುತ್ತಾ ಬಂದಿದ್ದು, ಪವಿತ್ರ ಪ್ರಸಾದವನ್ನು ದೇವಾಲಯದ ಸಾಂಪ್ರದಾಯಿಕ ವ್ಯವಸ್ಥೆಯ ಮೂಲಕವೇ ಪಡೆಯಬೇಕು ಎಂದು ಸ್ಪಷ್ಟಪಡಿಸಿದೆ. ಹಾಗಾಗಿ, ರಥಯಾತ್ರೆ ಸಮಯದಲ್ಲಿ ನೀವು ಯಾವುದೇ “ಮಹಾಪ್ರಸಾದ ಬುಕಿಂಗ್” ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವ ಮುನ್ನ ತಿಳಿಯಬೇಕಾದ ಮುಖ್ಯವಾದ ವಿವರಗಳು ಇಲ್ಲಿವೆ.
ಪುರಿಯ ಜಗನ್ನಾಥ ದೇವಾಲಯದಿಂದ ಆನ್‌ಲೈನ್‌ನಲ್ಲಿ ಮಹಾಪ್ರಸಾದವನ್ನು ಬುಕ್ ಮಾಡಲು ಅಥವಾ ಪಡೆಯಲು ಪ್ರಸ್ತುತ ಯಾವುದೇ ಅಧಿಕೃತ ಸೌಲಭ್ಯವಿಲ್ಲ. ಒಡಿಶಾ ಸರ್ಕಾರ ಮತ್ತು ಶ್ರೀ ಜಗನ್ನಾಥ ಟೆಂಪಲ್ ಅಡ್ಮಿನಿಸ್ಟ್ರೇಷನ್ (SJTA) ಯಾವುದೇ ಅಧಿಕೃತ ಆನ್‌ಲೈನ್ ಪ್ಲಾಟ್‌ಫಾರ್ಮ್ ಅಥವಾ ಹೋಮ್ ಡೆಲಿವರಿ ಸೇವೆಗಳ ಮೂಲಕ ಮಹಾಪ್ರಸಾದವನ್ನು ಮಾರಾಟ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ. ಭಾರತ ಮತ್ತು ವಿದೇಶಗಳ ಭಕ್ತರಿಂದ ಭಾರಿ ಬೇಡಿಕೆಯಿದ್ದರೂ, ಈ ಪವಿತ್ರ ಪ್ರಸಾದದ ಧಾರ್ಮಿಕ ಪವಿತ್ರತೆಯನ್ನು ಕಾಪಾಡುವ ದೃಷ್ಟಿಯಿಂದ ಆನ್‌ಲೈನ್ ಮಾರಾಟದ ಪ್ರಸ್ತಾಪಗಳನ್ನು ತಿರಸ್ಕರಿಸಲಾಗಿದೆ.
ಇದನ್ನೂ ಓದಿ: ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಕಾಲ್ತುಳಿತ; ಉಸಿರುಗಟ್ಟಿ ಓರ್ವ ಭಕ್ತ ಸಾವು, ಹಲವರಿಗೆ ಗಾಯ
ಇದರರ್ಥ, “ಅಧಿಕೃತ ಜಗನ್ನಾಥ ಮಹಾಪ್ರಸಾದ ಬುಕಿಂಗ್” ಅಥವಾ “ಪುರಿ ಮಹಾಪ್ರಸಾದ ಹೋಮ್ ಡೆಲಿವರಿ” ಎಂದು ಹೇಳಿಕೊಳ್ಳುವ ಯಾವುದೇ ವೆಬ್‌ಸೈಟ್‌ಗಳು ಅಥವಾ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು ಕಂಡುಬಂದಲ್ಲಿ, ಅವುಗಳಿಗೆ ದೇವಸ್ಥಾನದ ಆಡಳಿತ ಮಂಡಳಿಯ ಯಾವುದೇ ಅನುಮತಿ ಇರುವುದಿಲ್ಲ.
The only place untouched by the LPG crisis is the Mahaprasad kitchen of Shree Jagannatha Temple, Puri.
Even today, the 12th-century temple prepares Mahaprasad using traditional firewood.
Around 40,000 devotees are served daily.
A centuries-old tradition that continues to… pic.twitter.com/893ZMfjX20
— Manas Muduli (@manas_muduli) March 13, 2026
ಆನ್‌ಲೈನ್ ಡೆಲಿವರಿ ಯಾಕಿಲ್ಲ?:
ಸಾಮಾನ್ಯ ದೇವಸ್ಥಾನಗಳ ಪ್ರಸಾದಕ್ಕೆ ಹೋಲಿಸಿದರೆ ಜಗನ್ನಾಥ ದೇವಸ್ಥಾನದ ಮಹಾಪ್ರಸಾದಕ್ಕೆ ಅತ್ಯುನ್ನತ ಹಾಗೂ ವಿಶಿಷ್ಟ ಸ್ಥಾನವಿದೆ. ಈ ದೇವಸ್ಥಾನದ ಅಡುಗೆಮನೆಯಲ್ಲಿ ಎಲ್ಪಿಜಿ ಅಥವಾ ಇತರೆ ಇಂಧನ ಬಳಸದೆ ಕಟ್ಟಿಗೆ ಒಲೆಯಲ್ಲಿ ಮಣ್ಣಿ ಪಾತ್ರೆಗಳಲ್ಲಿ ಸಿದ್ಧಪಡಿಸಿದ ಆಹಾರವನ್ನು ಮೊದಲು ಭಗವಾನ್ ಜಗನ್ನಾಥ, ಬಲಭದ್ರ ಮತ್ತು ದೇವಿ ಸುಭದ್ರೆಗೆ ನೈವೇದ್ಯ ಮಾಡಿ, ನಂತರ ವಿಮಲಾ ದೇವಿಗೆ ಸಮರ್ಪಿಸಲಾಗುತ್ತದೆ. ಈ ಎಲ್ಲಾ ಆಚರಣೆಗಳ ನಂತರ ಅದನ್ನು ‘ಮಹಾಪ್ರಸಾದ’ ಎಂದು ಕರೆಯಲಾಗುತ್ತದೆ. ಈ ಕಾರಣದಿಂದಲೇ ಈ ಮಹಾಪ್ರಸಾದದ ರುಚಿ ಬೇರೆಲ್ಲೂ ಸಿಗಲಾರದು. ಇದನ್ನು ಯಾವುದೇ ಕೃತಕ ಸಂರಕ್ಷಕಗಳಿಲ್ಲದೆ (Preservatives) ತಯಾರಿಸುವುದರಿಂದ, ಇದು ಬಹಳ ಬೇಗನೆ ಹಾಳಾಗುತ್ತದೆ. ಹಾಗಾಗಿ ದೂರದ ಊರುಗಳಿಗೆ ಕೊರಿಯರ್ ಅಥವಾ ಡೆಲಿವರಿ ಮಾಡುವುದು ಅಸಾಧ್ಯ. ಅಲ್ಲದೆ, ಈ ಪ್ರಸಾದ ಪಾವಿತ್ರ್ಯತೆಯ ಸಂಕೇತವೂ ಹೌದು.
ಅಧಿಕಾರಿಗಳ ಪ್ರಕಾರ, ಮಹಾಪ್ರಸಾದವನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದರಿಂದ ಅಥವಾ ಸಾಗಿಸುವುದರಿಂದ ಅದರ ಪವಿತ್ರತೆಗೆ ಧಕ್ಕೆಯಾಗಬಹುದು. ಪ್ರಸಾದವು ದೇವಸ್ಥಾನದ ಆವರಣದಿಂದ ಹೊರಹೋದ ನಂತರ, ಅದನ್ನು ವಿತರಿಸುವಾಗ ಧಾರ್ಮಿಕ ನಿಯಮಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಖಾಸಗಿ ಕಂಪನಿಗಳು ಮತ್ತು ಫುಡ್ ಡೆಲಿವರಿ ಆಪ್‌ಗಳು ಸಲ್ಲಿಸಿದ್ದ ಪ್ರಸ್ತಾಪಗಳನ್ನು ಮಂಡಳಿಯು ತಿರಸ್ಕರಿಸಿದೆ.
ಹಾಗಾದರೆ ಭಕ್ತರಿಗೆ ಮಹಾಪ್ರಸಾದ ಎಲ್ಲಿ ಲಭ್ಯ?:
ಈ ದೇವಸ್ಥಾನದ ಅಧಿಕೃತ ಮಹಾಪ್ರಸಾದವು ಪುರಿಯ ಜಗನ್ನಾಥ ದೇವಾಲಯದ ಸಂಕೀರ್ಣದ ಒಳಗಿರುವ ನಿಗದಿತ ವಿತರಣಾ ಪ್ರದೇಶವಾದ ‘ಆನಂದ ಬಜಾರ್’ನಲ್ಲಿ ಮಾತ್ರ ಲಭ್ಯವಿರುತ್ತದೆ. ರಥಯಾತ್ರೆಯ ಸಮಯದಲ್ಲಿ ಮತ್ತು ಸಾಮಾನ್ಯ ದಿನಗಳಲ್ಲಿ ಜಗನ್ನಾಥನ ಪವಿತ್ರ ‘ಮಹಾಪ್ರಸಾದ’ವನ್ನು ಪಡೆಯಲು ಭಕ್ತರು ಪುರಿಯ ದೇವಸ್ಥಾನದ ಒಳಗೆ ಇರುವ ವಿಶ್ವದ ಅತಿ ದೊಡ್ಡ ಅಡುಗೆಮನೆ ಎನಿಸಿಕೊಂಡಿರುವ ‘ಆನಂದ ಬಜಾರ್’ಗೆ ಖುದ್ದಾಗಿ ಭೇಟಿ ನೀಡಿ ಖರೀದಿಸಬೇಕಾಗುತ್ತದೆ. ದೇವಸ್ಥಾನದ ಎಲ್ಲಾ ಆಚರಣೆಗಳು ಮುಗಿದ ನಂತರ ಪ್ರತಿದಿನ ಭಕ್ತರು ಇಲ್ಲಿ ಹೊಸದಾಗಿ ಸಿದ್ಧಪಡಿಸಿದ ಮಹಾಪ್ರಸಾದವನ್ನು ಖರೀದಿಸುತ್ತಾರೆ. ರಥಯಾತ್ರೆಯ ದಿನಗಳಲ್ಲಿ ಲಕ್ಷಾಂತರ ಯಾತ್ರಿಕರು ಆಗಮಿಸುವುದರಿಂದ ಈ ಪ್ರಸಾದಕ್ಕೆ ಬೇಡಿಕೆ ಭಾರೀ ಹೆಚ್ಚಾಗುತ್ತದೆ.
ನಕಲಿ ಮಹಾಪ್ರಸಾದ ಬುಕಿಂಗ್ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರ:
ರಥಯಾತ್ರೆಯ ಸಮಯದಲ್ಲಿ ಆನ್‌ಲೈನ್ ಸರ್ಚ್‌ಗಳು ಹೆಚ್ಚಾಗುವುದರಿಂದ, ಭಕ್ತರನ್ನು ಗುರಿಯಾಗಿಸಿಕೊಂಡು ಸೈಬರ್ ವಂಚನೆಗಳು ನಡೆಯುವ ಆತಂಕ ಹೆಚ್ಚಾಗಿದೆ. ಭಗವಾನ್ ಜಗನ್ನಾಥನ ಹೆಸರು ಬಳಸಿ ಅನಧಿಕೃತವಾಗಿ ಆನ್‌ಲೈನ್‌ನಲ್ಲಿ ಪ್ರಸಾದ ಮಾರಾಟ ಮಾಡುವ ಸಂಸ್ಥೆಗಳ ವಿರುದ್ಧ ಎಸ್‌ಜೆಟಿಎ (SJTA) ಹಲವು ಬಾರಿ ಕಾನೂನು ಆಕ್ಷೇಪಣೆಗಳನ್ನು ಎತ್ತಿದೆ.
ಜನರು ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು:
ಪ್ರಶ್ನೆ: ಜಗನ್ನಾಥ ದೇವಾಲಯದ ಮಹಾಪ್ರಸಾದವನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದೇ?
ಉತ್ತರ: ಖಂಡಿತವಾಗಿಯೂ ಇಲ್ಲ.
ಪ್ರಶ್ನೆ: ರಥಯಾತ್ರೆಯ ಪ್ರಸಾದ ಪಡೆಯುವುದು ಹೇಗೆ?
ಉತ್ತರ: ಜಗನ್ನಾಥ ದೇವಸ್ಥಾನದ ಒಳಗಿರುವ ಆನಂದ ಬಜಾರ್ನಲ್ಲಿ ಮಾತ್ರ ಪ್ರಸಾದ ಲಭ್ಯ.
ಪ್ರಶ್ನೆ: ಆನ್‌ಲೈನ್ ಮಾರಾಟಕ್ಕೆ ದೇವಸ್ಥಾನ ಮಂಡಳಿ ಅನುಮತಿ ನೀಡದಿರಲು ಕಾರಣವೇನು?
ಉತ್ತರ: ಈ ಪ್ರಸಾದವನ್ನು ಆಯಾ ದಿನಕ್ಕೆ ಬೇಕಾದಷ್ಟೇ ಮಾಡಲಾಗುತ್ತದೆ. ಇದಕ್ಕೆ ಪ್ರಿಸರ್ವೇಟಿವ್ ಹಾಕದ ಕಾರಣದಿಂದ ಕೊರಿಯರ್ ಮಾಡಿದರೆ ಅದು ತಲುವುವಷ್ಟರಲ್ಲಿ ಹಾಳಾಗುತ್ತದೆ.
ಪ್ರಶ್ನೆ: ಮಹಾಪ್ರಸಾದ ಮಾರಾಟ ಮಾಡುವ ವೆಬ್‌ಸೈಟ್‌ಗಳು ನಕಲಿಯೇ?
ಉತ್ತರ: ಹೌದು. ರಥಯಾತ್ರೆ ಪ್ರಯುಕ್ತ ನಕಲಿ ವೆಬ್‌ಸೈಟ್‌ಗಳು ಈ ಬಗ್ಗೆ ಭಕ್ತರನ್ನು ವಂಚಿಸುತ್ತಿವೆ.
ಪ್ರಶ್ನೆ: ಜಗನ್ನಾಥನ ಮಹಾಪ್ರಸಾದದ ವಿಶೇಷತೆಯೇನು?
ಉತ್ತರ: ಗ್ಯಾಸ್ ಬಳಸದೆ ಕಟ್ಟಿಗೆ ಒಲೆಯಲ್ಲಿ, ಮಣ್ಣಿನ ಮಡಕೆಗಳಲ್ಲಿ ಈ ಪ್ರಸಾದವನ್ನು ತಯಾರಿಸಲಾಗುತ್ತದೆ.
Published On - 7:16 pm, Mon, 20 July 26