ಪ್ರತಿಭಟನೆ ವೇಳೆ ಗರ್ಭಿಣಿ ಪತ್ರಕರ್ತೆಯ ತಳ್ಳಿದ ರಾಹುಲ್ ಗಾಂಧಿ, ಆಸ್ಪತ್ರೆಗೆ ದಾಖಲು

ದೆಹಲಿಯಲ್ಲಿ ನಡೆದ 'ಇಂಡಿ' ಮೈತ್ರಿಕೂಟದ ಪ್ರತಿಭಟನೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗರ್ಭಿಣಿ ಪತ್ರಕರ್ತೆಯೊಬ್ಬರನ್ನು ತಳ್ಳಿ ಗಾಯಗೊಳಿಸಿದ್ದಾರೆಂದು ಬಿಜೆಪಿ ಆರೋಪಿಸಿದೆ. ಪತ್ರಕರ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ಭಾರೀ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದು, ಬಿಜೆಪಿ ತನಿಖೆಗೆ ಒತ್ತಾಯಿಸಿದೆ. ಕಾಂಗ್ರೆಸ್ ಇದನ್ನು ಬಿಜೆಪಿಯ ಸುಳ್ಳು ಆರೋಪ ಎಂದು ತಳ್ಳಿಹಾಕಿದೆ.

ಪ್ರತಿಭಟನೆ ವೇಳೆ ಗರ್ಭಿಣಿ ಪತ್ರಕರ್ತೆಯ ತಳ್ಳಿದ ರಾಹುಲ್ ಗಾಂಧಿ, ಆಸ್ಪತ್ರೆಗೆ ದಾಖಲು
ಪತ್ರಕರ್ತೆ
Image Credit source: Video Screenshot X Account INDIAN

Updated on: Oct 13, 2026 | 10:41 AM

ನವದೆಹಲಿ, ಅಕ್ಟೋಬರ್ 13: ಚುನಾವಣಾ ಆಯೋಗದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಮತ್ತು ಮತ ಕಳ್ಳತನ ಆರೋಪಗಳನ್ನು ಖಂಡಿಸಿ ವಿರೋಧ ಪಕ್ಷಗಳ ‘ಇಂಡಿ’ ಮೈತ್ರಿಕೂಟ ದೆಹಲಿಯಲ್ಲಿ ನಡೆಸಿದ ಸುಪ್ರೀಂ ಕೋರ್ಟ್ ಮೆರವಣಿಗೆಯ ವೇಳೆ ಮತ್ತೊಂದು ಭಾರೀ ರಾಜಕೀಯ ವಿವಾದ ಭುಗಿಲೆದ್ದಿದೆ. ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ಮೂರು ತಿಂಗಳ ಗರ್ಭಿಣಿ ಪತ್ರಕರ್ತೆಯನ್ನು ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ತಳ್ಳಿ ಕೆಟ್ಟದಾಗಿ ನಡೆಸಿಕೊಂಡಿದ್ದು, ಆಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ನಾಯಕರು ಗಂಭೀರ ಆರೋಪ ಮಾಡಿದ್ದಾರೆ.

ಈ ಆರೋಪಗಳ ಕುರಿತು ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ಪಕ್ಷದಿಂದ ತಕ್ಷಣದ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಬಿಜೆಪಿ ನಾಯಕ ರಾಜೇಶ್ ಭಾಟಿಯಾ ಮಾತನಾಡಿ, ರಾತ್ರಿ 8.30ರ ಸುಮಾರಿಗೆ ಪತ್ರಕರ್ತೆಯ ಸಹೋದರಿ ರಾಜಿಂದರ್ ನಗರದಲ್ಲಿರುವ ನನ್ನ ಕಚೇರಿಗೆ ಬಂದು ನೆರವು ಕೋರಿದರು. ತಮ್ಮ ಸಹೋದರಿ ಗರ್ಭಿಣಿಯಾಗಿದ್ದು, ಕರ್ತವ್ಯದ ವೇಳೆ ರಾಹುಲ್ ಗಾಂಧಿ ಅವರನ್ನು ತಳ್ಳಿದ್ದರಿಂದ ಗಾಯಗೊಂಡಿದ್ದು ಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿಸಿದರು ಎಂದಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಬಿಜೆಪಿ ಶಾಸಕ ಉಮಾಂಗ್ ಬಜಾಜ್, ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಮತ್ತು ರಾಜೇಶ್ ಭಾಟಿಯಾ ಆಸ್ಪತ್ರೆಗೆ ಧಾವಿಸಿ ಪತ್ರಕರ್ತೆಯ ಆರೋಗ್ಯ ವಿಚಾರಿಸಿದರು. ಪತ್ರಕರ್ತೆ ರಿಚಾ ಪರಾಶರ್ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ವೀಡಿಯೊವನ್ನು ಪ್ರದೀಪ್ ಭಂಡಾರಿ ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದು, ಮೂರು ತಿಂಗಳ ಗರ್ಭಿಣಿಯೊಬ್ಬರು ತನ್ನ ವೃತ್ತಿಪರ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆಸಿ ಕೆಳಕ್ಕೆ ಕೆಡವಲಾಗಿದೆ. ಮಹಿಳಾ ಸುರಕ್ಷತೆ ಬಗ್ಗೆ ಭಾಷಣ ಬಿಗಿಯುವ ನಾಯಕರ ಅಸಲಿ ಮುಖವಾಡ ಕಳಚಿಬಿದ್ದಿದೆ ಎಂದು ಕಿಡಿಕಾರಿದ್ದಾರೆ.

ಉಮಾಂಗ್ ಬಜಾಜ್ ಖಂಡನೆ: ಕೇವಲ ತನ್ನ ವೃತ್ತಿ ಕೆಲಸ ಮಾಡುತ್ತಿದ್ದ ಮಹಿಳಾ ಪತ್ರಕರ್ತೆಯ ಮೇಲೆ ಈ ರೀತಿ ಅಸಭ್ಯವಾಗಿ ವರ್ತಿಸುವುದು ಅತ್ಯಂತ ಖಂಡನೀಯ ಎಂದು ಬಜಾಜ್ ಆಕ್ರೋಶ ಹೊರಹಾಕಿದ್ದಾರೆ.

ಮತ್ತಷ್ಟು ಓದಿ: ಎಸ್‌ಐಆರ್ ಅಕ್ರಮ; ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ ರಾಹುಲ್ ಗಾಂಧಿ

ಬೃಹತ್ ಪ್ರತಿಭಟನೆ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ದೆಹಲಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ಘಟಾನುಘಟಿ ನಾಯಕರ ಭಾಗಿ: ಈ ಮೆರವಣಿಗೆಯಲ್ಲಿ ಪ್ರಿಯಾಂಕಾ ಗಾಂಧಿ, ತೇಜಸ್ವಿ ಯಾದವ್, ಡಿ. ರಾಜಾ ಸೇರಿದಂತೆ ಇಂಡಿಯಾ ಬ್ಲಾಕ್‌ನ ಪ್ರಮುಖ ನಾಯಕರು ಮತ್ತು ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. ಸಾವಿರಾರು ಜನರಿದ್ದ ಪ್ರತಿಭಟನಾ ಸ್ಥಳದಲ್ಲಿ ಬ್ಯಾರಿಕೇಡ್‌ಗಳು ಮತ್ತು ಜನದಟ್ಟಣೆಯ ನಡುವೆ ಭಾರಿ ನೂಕುನುಗ್ಗಲು ಉಂಟಾಗಿತ್ತು. ಮಾಧ್ಯಮ ಪ್ರತಿನಿಧಿಗಳು ಹಾಗೂ ಪೊಲೀಸರ ನಡುವೆ ತಳ್ಳಾಟ ನಡೆದ ಸನ್ನಿವೇಶದಲ್ಲಿ ಈ ಆಪಾದಿತ ಘಟನೆ ನಡೆದಿದೆ ಎನ್ನಲಾಗಿದೆ.

ಪೋಸ್ಟ್

ತನಿಖೆಗೆ ಸಿದ್ಧತೆ: ಬಿಜೆಪಿ ಮುಖಂಡರು ಈ ಘಟನೆಯನ್ನು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (NCW) ಕೊಂಡೊಯ್ಯಲು ಮತ್ತು ದೆಹಲಿ ಪೊಲೀಸರಿಗೆ ದೂರು ನೀಡಿ ಎಫ್‌ಐಆರ್ ದಾಖಲಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಪಾಳಯದ ವಾದ: ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದು, ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ಮತ ಕಳ್ಳತನದ ಅರ್ಜಿಯಿಂದ ದೇಶದ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಸೃಷ್ಟಿಸಿರುವ ಸುಳ್ಳು ಆರೋಪ ಹಾಗೂ ನಾಟಕ ಎಂದು ತಿರುಗೇಟು ನೀಡುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us